ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’

ಹೊಟ್ಟೆಕಿಚ್ಚು’ ಎನ್ನುವ ‘ಮೊಟ್ಟೆಕೋಳಿ’

ಮನುಷ್ಯ ಭೂಮಿಗೆ ಬಂದಾಗಿನಿಂದ ಕೊನೆಯ ಘಳಿಗೆಯವರೆಗೆ ಬದುಕಿನ ವಿವಿಧ ಘಟ್ಟಗಳಲ್ಲಿ, ಹಲವರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡುವ, ಕೆಲವರು ಬದುಕು ಪೂರಾ ಹಾಸು ಹೊದ್ದು ಮಲಗಿರುವ ಭಾವ ಈ ಹೊಟ್ಟೆಕಿಚ್ಚು. ಮೊದಲು ನನಗೆ ಬೇಕು ಎಂಬ ಸಣ್ಣ ಸ್ವಾರ್ಥ, ನನ್ನನ್ನೇ ಗಮನಿಸಲಿ ಎಂಬ ನಿರೀಕ್ಷೆ, ನಾನೆ ಪ್ರಮುಖನಾಗಬೇಕೆಂಬ ಹಂಬಲ ಅಥವಾ ನಮಗಿಲ್ಲದ್ದು ಅವರಿಗೇಕೆ ಸಿಕ್ಕಿತೆಂಬ ಅಸಹನೆ, ಅವರು ಅದಕ್ಕೆ ಅರ್ಹರಲ್ಲ ಆದರೂ ಅವರಿಗೆ ಆ ಮನ್ನಣೆ ದಕ್ಕಬಾರದಿತ್ತು ಎಂಬ ಚಿಂತನೆ, ನನಗಿಲ್ಲದ್ದು ಅವರಿಗೇಕೆ? ಎಂಬ ಅಹಂ ಹೀಗೆ ಕಾಡುತ್ತ ಅದು ಹೆಚ್ಚಾದಾಗ ನಮ್ಮ ವ್ಯಕ್ತಿತ್ವದಲ್ಲಿ ವ್ರಣವಾಗಿ ಕಾಡುತ್ತದೆ. ಹೊಟ್ಟೆಕಿಚ್ಚು ಎನ್ನುವುದು ನಮ್ಮಲ್ಲಿ ಛಲ ಹುಟ್ಟಿಸುವ ಕಿಚ್ಚಾಗಬೇಕೇ ವಿನಃ ನಮ್ಮ ವ್ಯಕ್ತಿತ್ವವನ್ನು ಸುಡುವ ಕಿಚ್ಚಾಗಬಾರದು ಅಲ್ಲವೆ?

ಇದು ಮನುಷ್ಯನ ಸಹಜ ಗುಣ ಎಂದು ಮೇಲ್ನೋಟಕ್ಕೆ ಹೇಳಬಹುದಾದರೂ ಅಳತೆ ಮೀರಿದರೆ ಸಹ್ಯವಲ್ಲ ಹಾಗು ಆರೋಗ್ಯಕರವೂ ಅಲ್ಲ! ಇದು ಮನುಷ್ಯನ ಲೊಲುಪತನದ, ಲಂಪಟತನದ ಹಾಗು ಮತ್ತೊಬ್ಬರ ಏಳ್ಗೆ, ಯಶಸ್ಸು ಹಾಗು ಉದ್ಧಾರವನ್ನು ಸಹಿಸದ ಮಂದಿಯ ಮನಸ್ಥಿತಿಯ ಪರಮಾವಧಿಯೇ ಸರಿ!  ಇದು ಎಲ್ಲ ಕಾಲಕ್ಕೂ, ಎಲ್ಲರಲ್ಲೂ ಇರುತ್ತದೆ ಎಂದು ಹೇಳಲು ಬಾರದು, ಕೆಲವರು ಇದಕ್ಕೆ ತದ್ವಿರುಧ್ಧವಾಗಿ, ತಟಸ್ಥವಾಗಿ ತಮ್ಮ ಪಾಡಿಗೆ ತಾವು ಬದುಕುತ್ತಿರುತ್ತಾರೆ ಆದರೆ ಇವರ ಸಂಖ್ಯೆ ತುಂಬಾ ಕಡಿಮೆ. ನಾನು ಹೇಳಲು ಹೊರಟದ್ದು ‘ಹೊಟ್ಟೆಕಿಚ್ಚಿನ ಮೊಟ್ಟೆಕೋಳಿ’ ಎಂದು ಕರೆಯಿಸಿಕೊಳ್ಳುವ, ಅಥವಾ ಅವರ ಹಾವ-ಭಾವ, ಮಾತು-ನಡೆ ಕೊಂಕು ನುಡಿ-ವ್ಯಕ್ತಿತ್ವ ಹೀಗೆ ನೋಡಿದ ತಕ್ಷಣ ಎಂತಹವರಿಗೂ ಅನ್ನಿಸಿಬಿಡುತ್ತದಲ್ಲ ಹೌದು ಇವರು ಇತರರ ಏಳ್ಗೆ ಸಹಿಸುವುದಿಲ್ಲ ಎಂದು, ಅಂತಹವರ ಬಗ್ಗೆ!

ಇಂತಹ ಮನಸ್ಥಿತಿಯವರು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ ಇರುವವರು, ಇವರಿಗೆ ಯಾರು ಏನೇ ಸಾಧಿಸಿದರೂ, ಮುಂದಡಿ ಇಟ್ಟರೂ ಅನುಮಾನ ಮತ್ತು ಅಸಹನೆಯಿಂದ ನೋಡುತ್ತಿರುತ್ತಾರೆ. ಅದು ವಿದ್ಯೆ, ಉದ್ಯೋಗ, ವ್ಯಾಪಾರ, ಹಣ, ಅಂತಸ್ತು, ಸಾಮಾಜಿಕ ಸ್ಥಾನಮಾನ, ಬುದ್ಧಿಮತ್ತೆ, ಧೈರ್ಯ, ಸಾಹಸೀ ಪ್ರವೃತ್ತಿ, ಒಳ್ಳೆಯ ಗಂಡ/ ಹೆಂಡತಿ ಸಿಕ್ಕಾಗ, ಬುಧ್ಧಿವಂತ ಮಕ್ಕಳು ಹುಟ್ಟಿದಾಗ, ನಮ್ಮ ಮಕ್ಕಳು ಸಾಧಿಸದ್ದನ್ನು ಇತರರ ಮಕ್ಕಳು ಸಾಧಿಸಿದಾಗ,  ಒಟ್ಟಾರೆ ಹೇಳುವುದಾದರೆ ನಾನು ಯಾವ ಸ್ಥಿತಿಯಲ್ಲಿ ಇದ್ದೇನೋ ನನ್ನ ಓರಗೆಯವರೂ ಅದೇ ಸ್ಥಿತಿಯಲ್ಲಿ ಇರಬೇಕು ಎಂದು ಬಯಸುವವರು ಹಾಗು ತಮ್ಮ ಓರಗೆಯವರು ಒಂದು ಹೆಜ್ಜೆ ಮುಂದಿದ್ದಾರೆ ಎಂದ ತಕ್ಷಣ ಇವರು ಇರುವಲ್ಲಿಯೇ ವಿಲವಿಲ ಒದ್ದಾಡಲು ಶುರುಮಾಡುತ್ತಾರೆ, ಅಸಹನೆಯ ಕೂಪದಲ್ಲಿ ಬೀಳುತ್ತಾರೆ, ಅಂದಿನಿಂದ ಇವರ ಕಾಯಕ ಒಂದೇ ಆಗುತ್ತದೆ ಅದು ಮುನ್ನುಗ್ಗುದವರ ಸಾಧನೆಯನ್ನು ಹೀಗೆಳೆದು, ಅಪಪ್ರಚಾರ ಮಾಡಿ ಹೇಗಾದರು ಮಾಡಿ ಅವರ ಬೆಳವಣಿಗೆಯನ್ನು ಕುಂಠಿತಗೊಳಿಸಬೇಕು ಎಂಬುದಾಗುತ್ತದೆ! ಇದು ಎಲ್ಲಿಯವರೆಗೂ ಹೋಗುತ್ತದೆ ಎಂದರೆ, ನನ್ನ ಒಂದು ಕಣ್ಣು ಹೋದರೂ ಚಿಂತೆಯಿಲ್ಲ ಅವರ ಎರಡೂ ಕಣ್ಣು ಹೋಗಲಿ ಅದೇ ನನಗೆ ಸಮಾಧಾನ ಎನ್ನುವ ಕಥೆ ಕೇಳಿದ್ದೀರಲ್ಲ, ಅಂತಹ ಹಂತದವರೆಗೆ ಕೊಂಡೊಯ್ದುಬಿಡುತ್ತದೆ ಇದು ನಿಜಕ್ಕೂ ಅಪಾಯಕಾರಿ!

ತುಂಬಾ ಸಲ ಬದುಕಲ್ಲಿ ನಿದ್ದೆಕೆಟ್ಟು, ಶ್ರಮಪಟ್ಟು, ವಿಶ್ರಾಂತಿಯಿಲ್ಲದೆ ದುಡಿದು, ವಯಕ್ತಿಕ ಬದುಕನ್ನು ಬದಿಗಿಟ್ಟು ಸಾಧಿಸಲು ಹೊರಟವರಿಗೆ ಇಂತಹ ಮಂದಿ ತಣ್ಣೀರೆರೆಚುವ ಕೆಲಸ ಮಾಡಿಬಿಡುತ್ತಾರೆ. ಇವರು ಒಂದು ರೀತಿ ಹೊಂಚು ಹಾಕಿ ಸಂಚು ಮಾಡುವವರು.  ತಟಸ್ಥವಾಗಿ ತಮ್ಮ ಋಣಾತ್ಮಕ ಮಾತಿನ, ನಡವಳಿಕೆಯ ಮೂಲಕ ಸಾಧಿಸುವವರ ಗುರಿ ತಪ್ಪುವಂತೆ ಮಾಡಿಬಿಡುವ ಚಾಕಚಕ್ಯತೆ ಇವರಿಗೆ ಒಲಿದುಬಿಟ್ಟಿರುತ್ತದೆ.

ಇಂತಹವರ ವ್ಯಕ್ತಿತ್ವ ಹೇಗಿರುತ್ತದೆ ಎನ್ನುವುದನ್ನು ಚರ್ಚಿಸುವುದಾದರೆ, ಇವರು ನಾಟಕೀಯತೆ ಮೈಗೂಡಿಸಿಕೊಂಡಿರುತ್ತಾರೆ, ಮಾತು ತುಂಬಾ ನಯವಾಗಿರುತ್ತದೆ, ಅತಿ ವಿನಯವಂತಿಕೆ ತೋರ್ಪಡಿಸುತ್ತಾರೆ, ತಕ್ಷಣಕ್ಕೆ ನಿಮ್ಮ ಮಾತಿಗೆ ಸ್ಪಂದಿಸದೆ ಅಳೆದೂ ತೂಗಿ ಮಾತನಾಡುತ್ತಾರೆ, ಪ್ರತಿ ನಡೆ ನುಡಿಯಲ್ಲೂ ಕೂಡ ನಿಮ್ಮ ಸಿಂಪತಿ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಿರುತ್ತಾರೆ, ನಿಮ್ಮ ಎದುರಿಗೆ ಇತರರನ್ನು ದೂರುತ್ತಾ ನಿಮಗೆ ಖುಷಿಪಡಿಸಲು ವೃಥಾ ಪ್ರಯತ್ನಿಸುತ್ತಾರೆ, ಹಾಗು ನಿಮ್ಮ ಪ್ರತಿ ಬೆಳವಣಿಗೆಯನ್ನೂ ಕೆಟ್ಟ ಕುತೂಹಲದಿಂದ ಗಮನಿಸಿ ತಮ್ಮ ಅಭಿಪ್ರಾಯವನ್ನು ಪರೋಕ್ಷವಾಗಿ ನಿಮ್ಮ ಮೇಲೆ ಹೇರಲು ಪ್ರಯತ್ನಿಸುತ್ತಿರುತ್ತಾರೆ ಹಾಗು ನಿಮ್ಮ ಎದುರಿಗೆ ಮಾತ್ರ ನೀವು ಏನೇ ಮಾಡಿದರೂ ಸರಿ ಎಂದು ಹೊಗಳುತ್ತಾರೆ! ಅಪ್ಪಿ ತಪ್ಪಿ ನೀವೆಲ್ಲಾದರೂ ನಿಮ್ಮ ಕಾರ್ಯದಲ್ಲಿ ಎಡವಿ ಮನಸ್ಸಿಗೆ ನೋವಾದರೆ ಆ ನೋವನ್ನು ನಿಮಗೆ ಅರಿವಿಲ್ಲದಂತೆಯೇ ಇಮ್ಮಡಿಗೊಳಿಸುತ್ತಾರೆ, ಆದರೆ ವಿಪರ್ಯಾಸ ಎಂದರೆ ತುಂಬಾ ಸಲ ನಾವಿದನ್ನು ಗಮನಿಸುವ ಗೋಜಿಗೇ ಹೋಗಿರುವುದಿಲ್ಲ. ಆದರೆ ನೆನಪಿರಲಿ ಇವನ್ನೆಲ್ಲ ಮಾಡುವವರು ಹೊರಗಿನವರಲ್ಲ, ಕೇವಲ ನಿಮ್ಮ ಅಕ್ಕ ಪಕ್ಕದವರು, ಸಹೋದ್ಯೋಗಿಗಳೂ , ಅಥವಾ ನಿಮ್ಮ ಆಪ್ತವಲಯದಲ್ಲಿ ಗುರುತಿಸಿಕೊಂಡ ನೀವು ಅವರನ್ನು ಆಪ್ತರು ಎಂದು ನಂಬಿದ ಹಿತಶತ್ರುಗಳು

ಇಂತಹ ವಾಸನೆ ನಿಮ್ಮ ಮೂಗಿಗೆ ಬಡಿಯಿತೋ ತಕ್ಷಣಕ್ಕೆ ಎಚ್ಚೆತ್ತುಕೊಳ್ಳವುದು ಎಲ್ಲ ರೀತಿಯಿಂದಲೂ ಕ್ಷೇಮ, ಕಾರಣ ನೀವು ತುಂಬಾ ಆಳಕ್ಕೆ ನಂಬಿದ ಒಬ್ಬ ಗೆಳೆಯನೋ, ಗೆಳತಿಯೋ, ಬಂಧುವೋ, ಸಹೋದ್ಯೋಗಿಯೋ ಈ ಗುಂಪಿಗೆ ಸೇರಿದವರೂ ಎಂದು ಮನಗಂಡ ತಕ್ಷಣ ಮನಸ್ಸಿಗೆ ತುಂಬಾ ನೋವಾದರೂ ಖಂಡಿತ ಮತ್ತೊಬ್ಬರ ಬಳಿ ಇದನ್ನು ಚರ್ಚಿಸದೆ ಅಂತಹ ಸವತಿ ಮತ್ಸರದ ಮನಸ್ಥಿತಿಯವರ ಸಂಗದಿಂದ ಎದ್ದು ನಡೆದುಬಿಡಿ.

ಆಪ್ತವಲಯದಲ್ಲಿ ಇರುವಂತಹ ಹಿತಶತ್ರುಗಳನ್ನು ಹೊರತುಪಡಿಸಿ ಮತ್ತೂ ಒಂದು ವರ್ಗವಿದೆ, ಅವರೆಂದರೆ ನಿಮ್ಮನ್ನು ಕಣ್ಣಲ್ಲೇ ದೂರದಿಂದ ಗಮನಿಸುತ್ತಾ ನಿಮ್ಮ ಬೆಳವಣಿಗೆಯ ಬಗ್ಗೆ ಊರಿಗೆಲ್ಲ ಗಾಸಿಪ್ ಮೂಲಕ ಅನುಮಾನ ಹುಟ್ಟುಹಾಕುವವರು. ಒಬ್ಬ ವ್ಯಕ್ತಿ ಹಣ ಮಾಡಿದ್ದರೆ ಯಾರನ್ನೋ ಮೋಸ ಮಾಡಿದನೆಂದೂ, ಅಧಿಕಾರಕ್ಕೆ ಏರಿದನೆಂದರೆ ಲೋಲುಪತನಕ್ಕೆ ಸಿಕ್ಕ ಪ್ರತಿಫಲ ಎಂದೂ ಅಥವಾ ಮನೆ ಕಟ್ಟಿದರೆ ಯಾರನ್ನೋ ಮುಳುಗಿಸಿದ ದುಡ್ಡು ಎಂದು ತಮಗೆ ಇಷ್ಟ ಬಂದ ರೀತಿ ಕಥೆ ಕಟ್ಟಿ ಪ್ರಚಾರ ಮಾಡುತ್ತಿರುತ್ತಾರೆ, ಇದು ಒಂದು ರೀತಿಯ ಗೀಳು, ಅವರಿಗೆ ಕೊಡುವ ವಿಘ್ನ ಸಂತೋಷ! ಆದರೆ ನೆನಪಿರಲಿ ಪ್ರತಿ ಯಶಸ್ವಿ ವ್ಯಕ್ತಿಯ ಹಿಂದೇ ಎಷ್ಟು ಶ್ರಮ, ತ್ಯಾಗ ಅಥವಾ ತಪಸ್ಸು, ನಿದ್ದೆಗೆಟ್ಟ ರಾತ್ರಿಗಳು, ಅವನನ್ನು ಆ ಮಟ್ಟಕ್ಕೆ ಏರಿಸಿರುತ್ತದೆ ಎನ್ನುವುದು ಕೇವಲ ಎತ್ತರಕ್ಕೆ ಏರಿರುವವರಿಗೆ ಮಾತ್ರ ಅರಿವಿರುತ್ತದೆಯೇ ವಿನಃ ಇತರರಿಗಲ್ಲ!

ಇನ್ನು ನಾವು ಅರಿಯಬೇಕಾದ ಬಹಳ ಮುಖ್ಯ ವಿಚಾರ ಎಂದರೆ ಇಂತಹ ಸಂದರ್ಭದಲ್ಲಿ ನಮ್ಮ ಕಿವಿಗೆ ಇಂತಹ ವಿಚಾರ ಬಿದ್ದಾಗ ಕೇವಲ ಮುಗುಳ್ನಕ್ಕು ಮುನ್ನಡೆಯಬೇಕೇ ವಿನಃ ಅಂತಹವರಿಗೆ ಅಥವಾ ಅಂತಹ ಸುದ್ದಿ ತಲುಪಿಸಿದವರಿಗೆ ವಿವರಣೆ ಕೊಡಲು ಹೋಗಬಾರದು!  ಜಸ್ಟ್ ಇಗ್ನೋರ್ ದೆಮ್! ಕಾರಣ ನಿಮ್ಮ ಬಗ್ಗೆ ಯಾರೋ ಮಾತನಾಡುತ್ತಿದ್ದಾರೆ ಎಂದರೆ ಅದರರ್ಥ ನೀವು ಅವರಿಗಿಂತ ಒಂದು ಹೆಜ್ಜೆ ಮುಂದೆ ಇದ್ದೀರಿ ಎಂದು! ಇಂತಹ ಸಂದರ್ಭದಲ್ಲಿ ಒಂದು ಸಣ್ಣ ಮುಗುಳ್ನಗೆಯ ದೃಷ್ಟಿ ಬೀರಿ ಮುನ್ನಡೆಯುತ್ತಿರಬೇಕು.

ಬದುಕಿನ ವಿವಿಧ ಹಂತಗಳಲ್ಲಿ ಈ ರೀತಿಯ ಅನುಭವ ಪ್ರತಿಯೊಬ್ಬರಿಗೂ ಆಗಿಯೇ ಇರುತ್ತದೆ, ಕಾರಣ ನಾವು ಬದುಕುತ್ತಿರುವುದು ಸಮಾಜದ ನಡುವೆಯೆ ಅಲ್ಲವೆ?  ಬೇಡವೆಂದರೂ ಹೊಟ್ಟೆಕಿಚ್ಚಿನ ಮಂದಿ ಸಿಗುತ್ತಲೇ ಇರುತ್ತಾರೆ, ಆದರೆ ಅಂತಹವರ ಅಸಹನೆಗೆ ಕಾರಣವಾದ ನಿಮ್ಮ ಯಶಸ್ವೀ ಸಾಧನೆಯ ಹಾದಿಯನ್ನು ಬದುಕಿನ ರಹದಾರಿ ಮಾಡಿಕೊಂಡು ಮತ್ತಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಬೇಕೇ ವಿನಃ ಮತ್ತೊಬ್ಬರ ಹೊಟ್ಟೆಕಿಚ್ಚಿಗೆ ಆಹಾರವಾಗಿ ನಮ್ಮ ಸಾಧನೆ ಎಂದಿಗೂ ಕುಂಟಿತವಾಗಬಾರದು. ಏನಂತೀರಿ?

-ಸತೀಶ್ ಶೆಟ್ಟಿ ಚೇರ್ಕಾಡಿ

ಸಾಂದರ್ಭಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ