ಹೊನ್ನ ಗೌರಿಗೆ ಮಹಾ ಪೂಜೆ

ಹೊನ್ನ ಗೌರಿಗೆ ಮಹಾ ಪೂಜೆ

ಕವನ

ಭಾದ್ರಪದ ಶುಕ್ಲದ ತದಿಗೆಯಂದು

ಧರೆಗಿಳಿದು ಬಂದಿಹಳು ಸ್ವರ್ಣ ಗೌರಿಯು

ವ್ರತವನಾಚರಿಸುವ ಭಕ್ತರ ಕಾಣಲು

ಹರುಷದಲಿ ಬಂದಳು ಸ್ವರ್ಣ ಗೌರಿಯು.

 

ತಳಿರು ತೋರಣದ ಮಂಟಪದೊಳು

ನಸುನಗೆಯ ಸೊಬಗಲ್ಲಿ ಕುಳಿತಿಹಳು

ಪಂಚಫಲ,ಪೂರ್ಣಫಲ,ಗೌರಿದಾರದಿ

ಅರಿಶಿನ,ಕುಂಕುಮ, ಹೂವಿನೆದುರಿನಲ್ಲಿ.

 

ಚುಕ್ಕಿ ರಂಗೋಲಿಯಲ್ಲಿ ರಂಗು ತುಂಬಿಸಿ

ಗೆಜ್ಜೆವಸ್ತ್ರ,ಹೂವು,ಪತ್ರೆ ಅಲಂಕರಿಸಿ

ಧೂಪ,ದೀಪದಾರತಿ,ಗಾನಸುಧೆ ಹರಿಸಿ

ಪಾನಕ,ಕೋಸಂಬರಿ,ಒಬ್ಬಟ್ಟು ನೈವೇದ್ಯಕ್ಕಿರಿಸಿ 

 

ಅರಿಶಿನ ಹಚ್ಚಿದ ಬೆತ್ತದ ಮೊರದಲ್ಲಿ

ಹೂವು, ಹಣ್ಣು, ಎಲೆ ಅಡಿಕೆ, ಫಲದಲ್ಲಿ

ಅಕ್ಕಿ,ಬೆಲ್ಲ,ಧಾನ್ಯ,ಬಿಚ್ಚೋಲೆ,ಬಳೆ,ಕಣವು 

ತುಂಬಿ ನೀಡುವೆ ತಾಯಿ ನಾ ಬಾಗಿನವನ್ನು. 

 

ಸ್ವರ್ಣ ಗೌರಿ ದೇವಿ ನಿನಗೆ ನಮ್ಮ ನಮನವು

ದುರಿತಗಳನು ತರಿದು ಮಾಡು ಶಮನವು

ಭಕ್ತಿ ಭಾವದಲ್ಲಿ ಬೇಡುವೆವು ತಾಯಿ ನಿನ್ನನ್ನು

ಹಸಿರು- ಉಸಿರು ನೀಡಿ ನೀ ರಕ್ಷಿಸು ಜಗವನ್ನು.

-ವೀಣಾ ಕೃಷ್ಣಮೂರ್ತಿ, ದಾವಣಗೆರೆ

***

ನಮೋ ಶ್ರೀ ಗೌರಿ...

ಸ್ವರ್ಣ ಗೌರಿಯೆ ಶಿವನ ಸತಿಯಳೆ

ಪರಮ ಪಾವನೆ ನಮೋಸ್ತುತೆ

ಸ್ವರ್ಣ ಮುಖಿಯಳೆ ಅಮ್ಮ ಗೌರಿಯೆ

ನಿನ್ನ ಪಾದುಕೆ ನಮೋಸ್ತುತೆ ||

 

ಭಾದ್ರಪದದೊಳು ತದಿಗೆದಿನದಲಿ

ನಿನ್ನ ತವರಿಗೆ ಬರುವವಳೆ

ಅಂದು ಮಂಟಪದೊಳಗೆ ಕೂರುತ

ಅಲಂಕಾರದಿ ನಗುವವಳೆ ||

 

ವರ್ಣರಂಜಿತ ಸೀರೆ ಕುಪ್ಪಸ

ನಿನಗೆ ಧರಿಸುತ ಪೂಜಿಸುವೆ

ಬಣ್ಣ ಬಣ್ಣದ ವಿವಿಧ ಪುಷ್ಪವ

ನಿನ್ನ ಪೂಜೆಗೆ ಅರ್ಪಿಸುವೆ ||

 

ನವವಿವಾಹಿತ ದಂಪತಿಗಳಿಗೆ

ಗೌರಿ ಹಬ್ಬವು ಸಂಭ್ರಮವು

ನವನವೀನದ ಬೇಕು ಬೇಡಿಕೆ

ಫಲಿಸೆ ಹೃದಯಕೆ ಸಂತಸವು ||

 

ಷೋಡಶೋಪದಿ ಪೂಜೆ ಮಾಡುತ

ಮೊರದಿ ಬಾಗಿನ ಅರ್ಪಿಸುವೆ

ಧೂಪ ದೀಪವ ಮಂಗಳಾರುತಿ

ಬೆಳಗುವೆ ನಮಗೆ ಹರಸಮ್ಮ ||

 

-ಶ್ರೀ ಈರಪ್ಪ ಬಿಜಲಿ, ಕೊಪ್ಪಳ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

 

ಚಿತ್ರ್