ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ

ಹೊರನಾಡಿನಲ್ಲಿ ತುಳುವರು ಪುಸ್ತಕ ಬಿಡುಗಡೆ

ಯುವ ತಲೆಮಾರನ್ನು ಕನ್ನಡಪರ ಕಾರ್ಯಕ್ರಮಗಳಲ್ಲಿ  ತೊಡಗಿಸಿಕೊಳ್ಳುವಂತೆ   ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಯುವಪ್ರತಿಭೆಗಳನ್ನು  ಪ್ರೋತ್ಸಾಹಿಸಿ , ಭಾಷೆ, ಸಾಹಿತ್ಯ ಅಭಿಮಾನ ಮೂಡಿಸುವ ಕೆಲಸ  ಕನ್ನಡ ಸಂಘಟನೆಗಳಿಂದ‌ ಆಗಲಿ, ಸೂಕ್ತ ಅವಕಾಶ ಕಲ್ಪಿಸುವ ವೇದಿಕೆಯಾಗಿ, ನೂತನ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕಾರ್ಯವೆಸಗಲಿ  ಎಂದು  ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ‌ ಅಧ್ಯಕ್ಷ ಪ್ರದೀಪ‌ ಕುಮಾರ ಕಲ್ಕೂರ ಶುಭಹಾರೈಸಿದರು. ಅವರು ಕೇರಳ ರಾಜ್ಯ ಕನ್ನಡ ಚುಟುಕು ಸಾಹಿತ್ಯ ಪರಿಷತ್ತಿನ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಸಮಾರಂಭದಲ್ಲಿ ಕನ್ನಡ ಧ್ವಜ ಎತ್ತಿ ಹಿಡಿಯುವ ಮೂಲಕ ಘಟಕವನ್ನು ಉದ್ಘಾಟಿಸಿದರು. 

ಮಂಗಳೂರಿನ ಕಿನ್ನಿಗೋಳಿಯ ಯುಗ ಪುರುಷ ಸಭಾ ಭವನದಲ್ಲಿ  ಎ. 18 ರಂದು  ಯುಗ ಪುರುಷ ಕಿನ್ನಿಗೋಳಿ ಆಶ್ರಯದಲ್ಲಿ ಕೇರಳ ರಾಜ್ಯ-ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಕೇಂದ್ರ ಸಮಿತಿ ,  ಕನ್ನಡ ಭವನ  ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಚುಟುಕು ಸಾಹಿತ್ಯ ಪರಿಷತ್ತು ಸಹಭಾಗಿತ್ವದಲ್ಲಿ  ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಕನ್ನಡದ ಬಗ್ಗೆ ಸರಕಾರದ ನಿರ್ಲಕ್ಷ್ಯ: ಮುಖ್ಯ ಅತಿಥಿಯಾಗಿ  ಮಾಜಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ‌ ಅತಿಥಿಯಾಗಿ ಮಾತನಾಡಿದರು. ಸರಕಾರ ಕನ್ನಡ ಶಾಲೆಗಳನ್ನು ಕಡೆಗಣಿಸಿದೆ. ಸರಕಾರಿ ಶಾಲೆಗಳಿಗೆ  ಶಿಕ್ಷಕರನ್ನು ನೀಡುತ್ತಿಲ್ಲ. ಪರಿಣಾಮವಾಗಿ‌ ಪ್ರತಿವರ್ಷ ಸಾವಿರಾರು ಶಾಲೆಗಳು ಮುಚ್ಚುತ್ತಿವೆ ಎಂದರು. ಬರೆಯುವವರು ಹೆಚ್ಚಾಗಿದ್ದರೂ ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಪುಸ್ತಕವನ್ನು ಕೊಂಡು ಓದುವ ಪ್ರವೃತ್ತಿ ಬೆಳೆಯಬೇಕೆಂದರು.  

ಹೊರನಾಡಿನಲ್ಲಿ ತುಳುವರು ಪುಸ್ತಕ  ಬಿಡುಗಡೆ : ಮುಂಬಯಿಯ ವಿಶ್ವನಾಥ ದೊಡ್ಮನೆ ಸಂಪಾದತ್ವದ ಹೊರನಾಡಿನಲ್ಲಿ ತುಳುವರು ಪುಸ್ತಕವನ್ನು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಜಯಾನಂದ ಪೆರಾಜೆ ಬಿಡುಗಡೆ ಗೊಳಿಸಿದರು. ಡಾ.ಸುಮತಿ‌ ಪಿ. ಕಾರ್ಕಳ  ಪುಸ್ತಕದ ಬಗ್ಗೆ ಮಾತನಾಡಿ ಲೇಖಕರಾದ  ಆಗುಂಬೆ ನಟರಾಜ  ಸೇರಿದಂತೆ 39 ಲೇಖಕರು ಬರೆದಿರುವ  ತುಳುವರ ಸಂಸ್ಕೃತಿ,ಭಾಷಾ ಪ್ರೇಮ,ನಂಬಿಕೆಗಳು ಮೊದಲಾದ ಮೌಲ್ಯಯುತ ಲೇಖನಗಳು ಪುಸ್ತಕದಲ್ಲಿ  ಅಡಕವಾಗಿವೆ ಎಂದರು. 

ರಾಷ್ಟ್ರ ಕವಿ ಗೋವಿಂದ ಪೈ ಪ್ರಶಸ್ತಿ ಪ್ರದಾನ : ಡಾ.ಹರಿಕೃಷ್ಣ ಪುನರೂರು, ಪ್ರದೀಪ ಕುಮಾರ ಕಲ್ಕೂರ, ಶ್ರೀಪತಿ ಭಟ್ ಮೂಡುಬಿದ್ರೆ, ಯುಗಪುರುಷದ ಭುವನಾಭಿರಾಮ ಉಡುಪ ಇವರನ್ನು ರಾಷ್ಟ್ರಕವಿ ಗೋವಿಂದ ಪೈ ರಾಷ್ಟ್ರೀಯ ಪ್ರಶಸ್ತಿಯನ್ನು ಕನ್ನಡ ಭವನ ಸ್ಥಾಪಕರಾದ ಡಾ. ವಾಮನ ರಾವ್ ,ಸಂಧ್ಯಾರಾಣಿ ಟೀಚರ್   ಪ್ರದಾನ ಮಾಡಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ದ.ಕ. ಜಿಲ್ಲ್ಲಾಧ್ಯಕ್ಷ ಡಾ.ಕೊಳ್ಚಪ್ಪೆ ಗೋವಿಂದ ಭಟ್ ಅಧ್ಯಕ್ಷತೆ ವಹಿಸಿದ್ದರು. ಸತ್ಯವತಿ ಭಟ್ ಕೊಳಚಪ್ಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಬೆಂಗಳೂರು ಘಟಕದ ಅಧ್ಯಕ್ಷರಾಗಿ ಹಿರಿಯ ಚುಟುಕು ಕವಿ ಹಾ.ಮ.ಸತೀಶರಿಗೆ ಧ್ಜಜ ಪ್ರದಾನ ಮಾಡಿ ಜವಾಬ್ದಾರಿ ನೀಡಲಾಯಿತು. ಕಥಾಬಿಂದು ಪ್ರಕಾಶನದ ಪ್ರದೀಪ ಕುಮಾರ್ , ಪ್ರಾಂಶುಪಾಲ ರಾಜೇಶ್ ಚಂದ್ರ, ಕರ್ನಾಟಕ ಜಾನಪದ ಪರಿಷತ್ತು ಜಿಲ್ಲಾಧ್ಯಕ್ಷ  ಪಮ್ಮಿ ಕೊಡಿಯಾಲ ಬೈಲ್  ಉಪಸ್ಥಿತರಿದ್ದರು.

ಚುಟುಕು ಕವಿಗೋಷ್ಠಿ: ಹಿರಿಯ ಕವಯಿತ್ರಿ ಸತ್ಯವತಿ ಭಟ್ ಕೊಳಚಪ್ಪು ಇವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು.

ಕರ್ನಾಟಕ ರಾಜ್ಯ ಸಂಚಾಲಕ ಜಯಾನಂದ ಪೆರಾಜೆ ಸ್ವಾಗತ ಪರಿಚಯ ಮಾಡಿದರು. ರಾಜ್ಯ ಸಂಚಾಲಕಿ ಡಾ.ಶಾಂತಾ ಪುತ್ತೂರು ಪ್ರಾಸ್ತಾವಿಕ ಮಾತನಾಡಿದರು. ವಸಂತ ಕೆರೆಮನೆ, ಅನಿತಾ ಶೆಣೈ. ಇದ್ದರು.    ಚುಟುಕು ಸಾಹಿತ್ಯ  ಸ್ಪರ್ಧೆಯಲ್ಲಿ ವಿಜೇತರಾದ ಗೀತಾ ನರಿಕೊಂಬು, ನಿರ್ಮಲಾ ಸುರತ್ಕಲ್ , ಡಾ.ಸುಮತಿ ಪಿ.,ಅಬ್ದುಲ್ ಸಮದ್ ಬಾವ ಇವರನ್ನು ದ.ಕ.ಜಿಲ್ಲಾ ಚುಟುಕು ಕಾವ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ರೇಖಾ ಸುದೇಶ ರಾವ್, ಅಪೂರ್ವ ಕಾರಂತ್ ನಿರೂಪಿಸಿದರು. ಉಷಾ ಶಶಿಧರ್ ವಂದಿಸಿದರು.

ವರದಿ: ಹಾ ಮ ಸತೀಶ್, ಬೆಂಗಳೂರು