ಹೊಸ ಇತಿಹಾಸ...
ಸಾಮಾಜಿಕ ಜಾಲತಾಣಗಳ ಅಭಿವೃದ್ಧಿಯೊಂದಿಗೆ ಭಾರತದ ಬಹುತೇಕ ಜನರು ಇತಿಹಾಸಕಾರರಾಗಿ ಬದಲಾದ ಕಾಲಘಟ್ಟದಲ್ಲಿ ನಾವಿದ್ದೇವೆ. ನಾವೆಲ್ಲರೂ ಶೈಕ್ಷಣಿಕ ಅಪರಾಧಿಗಳು...
ಹಿಂದಿನ ಇತಿಹಾಸ ಮಹಾತ್ಮ ಗಾಂಧಿ ದೇಶ ಭಕ್ತ ಸತ್ಯ ಅಹಿಂಸೆಯ ಪ್ರತಿಪಾದಕ. ಇಂದಿನ ವರ್ತಮಾನದಲ್ಲಿ ಎಂ. ಕೆ. ಗಾಂಧಿ ಒಬ್ಬ ನಯವಂಚಕ. ಗೋಡ್ಸೆ ಒಬ್ಬ ನಿಜವಾದ ದೇಶಪ್ರೇಮಿ.
ಹಿಂದಿನ ಇತಿಹಾಸದಲ್ಲಿ ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಮೈಸೂರು ಹುಲಿ, ಇಂದಿನ ವರ್ತಮಾನದಲ್ಲಿ ಟಿಪ್ಪು ಒಬ್ಬ ಮತಾಂಧ - ದೇಶದ್ರೋಹಿ.
ಹಿಂದಿನ ಇತಿಹಾಸದಲ್ಲಿ ಆರ್ಯರು ಮಧ್ಯ ಏಷ್ಯಾದಿಂದ ವಲಸೆ ಬಂದವರು, ಈಗಿನ ವರ್ತಮಾನದಲ್ಲಿ ಆರ್ಯರು ಇಲ್ಲಿನ ಮೂಲ ನಿವಾಸಿಗಳು.
ಹಿಂದಿನ ಇತಿಹಾಸದಲ್ಲಿ ಕನ್ನಂಬಾಡಿ ಅಣೆಕಟ್ಟು ಕಟ್ಟಿಸಿದ್ದು ಸರ್ ಎಂ ವಿಶ್ವೇಶ್ವರಯ್ಯ, ಇಂದಿನ ವರ್ತಮಾನದಲ್ಲಿ ವಿಶ್ವೇಶ್ವರಯ್ಯ ಕೇವಲ ಇಂಜಿನಿಯರ್. ನಿಜವಾಗಿ ನಿರ್ಮಿಸಿದ್ದು ನಾಲ್ವಡಿ ಕೃಷ್ಣರಾಜ ಒಡೆಯರ್.
ಹಿಂದಿನ ಇತಿಹಾಸದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಸಂವಿಧಾನ ರಚಿಸಿ ಸಮಾನತೆ ಸ್ವಾತಂತ್ರ್ಯ ಜಾತ್ಯಾತೀತ ಮೌಲ್ಯಗಳನ್ನು ಎತ್ತಿಹಿಡಿದ ಮಾಹಾನ್ ಮಾನವತಾವಾದಿ, ಇಂದಿನ ವರ್ತಮಾನದಲ್ಲಿ ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಮೀಸಲಾತಿ ನೀಡಿ ಸಮಾಜದಲ್ಲಿ ಅಸಮಾನತೆ ಉಂಟುಮಾಡಿ ಪ್ರತಿಭಾ ಪಲಾಯನದಿಂದಾಗಿ ದೇಶದ ಅಭಿವೃದ್ಧಿ ಕುಂಠಿತವಾಗಿದೆ.
ಹಿಂದಿನ ಇತಿಹಾಸದಲ್ಲಿ ಗ್ರಹಣ ಎಂಬುದು ಸಹಜ ಸ್ವಾಭಾವಿಕ. ಸೂರ್ಯ ಚಂದ್ರ ಭೂಮಿಯ ನಡುವಿನ ನೆರಳು ಬೆಳಕಿನಾಟ ಎಂದು ಖಗೋಳಶಾಸ್ತ್ರಜ್ಞರು ಹೇಳುತ್ತಿದ್ದರು. ಇಂದಿನ ವರ್ತಮಾನದಲ್ಲಿ ಬ್ರಹ್ಮಾಂಡ, ಆನಂದ, ರವಿಶಂಕರ ಮುಂತಾದ ಮಹರ್ಷಿಗಳು ರಾಹು ಕೇತುವನ್ನು ನುಂಗುವುದೇ ಗ್ರಹಣ ಎಂದು ಹೇಳುತ್ತಾರೆ.
ಹಿಂದಿನ ಇತಿಹಾಸದಲ್ಲಿ 1-2-3-4-5-6......ಮುಂತಾದವು ಗಣಿತ ಶಾಸ್ತ್ರದ ಅಂಕಿ ಸಂಖ್ಯೆಗಳು ಮಾತ್ರ. ಇಂದಿನ ವರ್ತಮಾನದಲ್ಲಿ ಕೆಲವು ಸಂಖ್ಯೆಗಳು ಅದೃಷ್ಟ ಮತ್ತೆ ಕೆಲವು ಸಂಖ್ಯೆಗಳು ದರಿದ್ರ.
ಹಿಂದಿನ ಇತಿಹಾಸದಲ್ಲಿ ಹಿಂದೂ ಮಹಾಸಾಗರ, ಇಂದಿನ ವರ್ತಮಾನದಲ್ಲಿ ಇಂಡಿಯನ್ ಓಷನ್,
ಹಿಂದಿನ ಇತಿಹಾಸದಲ್ಲಿ ಚಾಮುಂಡೇಶ್ವರಿ ದೇವತೆ, ಮಹಿಷಾಸುರ ರಾಕ್ಷಸ, ಇಂದಿನ ವರ್ತಮಾನದಲ್ಲಿ ಚಾಮುಂಡೇಶ್ವರಿ ಕಾಲ್ಪನಿಕ, ಮಹಿಷ ಐತಿಹಾಸಿಕ ಮೂಲ ಪುರುಷ.
ಹಿಂದಿನ ಇತಿಹಾಸದಲ್ಲಿ ಸಾಮ್ರಾಟ ಅಶೋಕ ಯುದ್ಧದ ಹಿಂಸೆಯಿಂದ ಮನನೊಂದು ಬೌದ್ದ ಧರ್ಮ ಸ್ವೀಕರಿಸಿ ಶಾಂತಿ ಅಹಿಂಸೆಯನ್ನು ವಿದೇಶಗಳಿಗೂ ವಿಸ್ತರಿಸಿದ ಮಹಾಪುರುಷ, ಇಂದಿನ ವರ್ತಮಾನದಲ್ಲಿ ಅಶೋಕನ ಶಾಂತಿ ಮಂತ್ರದಿಂದಲೇ ಭಾರತದ ಸೈನ್ಯ ದುರ್ಬಲವಾಗಿ ವಿದೇಶಿಯರ ಆಕ್ರಮಣಕ್ಕೆ ದಾರಿ ಮಾಡಿಕೊಟ್ಟಿತು.
ಹಿಂದಿನ ಇತಿಹಾಸದಲ್ಲಿ ಕೆಲವು ಸ್ವಾತಂತ್ರ್ಯ ಹೋರಾಟಗಾರ ತ್ಯಾಗ ಬಲಿದಾನಗಳು ಮತ್ತು ಕುತಂತ್ರಿಗಳ ಹೆಸರುಗಳು ಇದೆ. ಇಂದಿನ ವರ್ತಮಾನದಲ್ಲಿ ಕುತಂತ್ರಿಗಳು ಸ್ವಾತಂತ್ರ್ಯ ಹೋರಾಟಗಾರರಾಗಿ ಸ್ವಾತಂತ್ರ್ಯ ಹೋರಾಟಗಾರರು ಕುತಂತ್ರಿಗಳಾಗಿದ್ದಾರೆ.
ಹೀಗೆ ಇತಿಹಾಸವನ್ನು ಹೊಸದಾಗಿ ಬರೆಯುತ್ತಾ ಹೋದರೆ ಇತಿಹಾಸ ಎಂಬುದೇ ಇರುವುದಿಲ್ಲ. ಕೇವಲ ವರ್ತಮಾನ ಮಾತ್ರ ಇರುತ್ತದೆ. ಮುಂದೆ ಮತ್ತೊಂದು ಇತಿಹಾಸ ರಚಿತವಾಗಬಹುದು. ಎತ್ತ ಸಾಗುತ್ತಿದ್ದೇವೆ ನಾವು. ಬಹುಶಃ ನಮ್ಮದೇ ಮಕ್ಕಳನ್ನು ವಂಚಿಸುತ್ತಿರುವ ಆತ್ಮ ದ್ರೋಹಿಗಳು ನಾವು. ಇತಿಹಾಸ ಹೇಗೆ ದಾಖಲಾಗುತ್ತದೆ, ಅದು ದಾಖಲು ಮಾಡುವವರು ಯಾರು, ಅದಕ್ಕೆ ಯಾವ ಮಾನದಂಡಗಳನ್ನು ಅನುಸರಿಸಲಾಗುತ್ತದೆ ಎಂಬುದರ ಪ್ರಾಥಮಿಕ ಅರಿವು ಇಲ್ಲದ ಅನೇಕರು ಯಾವುದೋ ಒಂದು ಯಾರದೋ ಒಂದು ಅಭಿಪ್ರಾಯಗಳ ಆಧಾರದ ಮೇಲೆ ಇತಿಹಾಸವನ್ನು ಅರ್ಥಮಾಡಿಕೊಂಡು ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಿದ್ದಾರೆ. ಇದು ಅತ್ಯಂತ ಅಪಾಯಕಾರಿ.
ಭಾರತದಲ್ಲಿ ಸಹ ಅತ್ಯಂತ ಪ್ರಕಾಂಡ ಇತಿಹಾಸಜ್ಞರು, ಸಂಶೋಧಕರು, ಭಾಷಾ ತಜ್ಞರು, ಮಾನವ ಶಾಸ್ತ್ರಜ್ಞರು, ಪ್ರಾಚ್ಯ ವಸ್ತು ತಜ್ಞರು, ಉತ್ಖನನ ತಜ್ಞರು, ಸಂಖ್ಯಾ ಶಾಸ್ತ್ರಜ್ಞರು, ಜಾನಪದ ವಿದ್ವಾಂಸರು ಮುಂತಾದ ಅನೇಕ ಮಹಾನ್ ವ್ಯಕ್ತಿಗಳು ಇದ್ದರು ಮತ್ತು ಇದ್ದಾರೆ. ಅವರೆಲ್ಲರೂ ಶ್ರಮ ಪಟ್ಟು ಭಾರತದ ಇತಿಹಾಸವನ್ನು ಆದಷ್ಟು ಸ್ಪಷ್ಟವಾಗಿ ದಾಖಲಿಸಿದ್ದಾರೆ.
ಈಗ ರಾಜಕೀಯ ಕಾರಣಗಳಿಗಾಗಿ, ಸೈದ್ಧಾಂತಿಕ ಗುಲಾಮಿತನದ ಕಾರಣದಿಂದಾಗಿ ಇತಿಹಾಸವನ್ನೇ ತಿರುಚುವ ಕೆಲಸ ಆಗುತ್ತಿದೆ. ದಯವಿಟ್ಟು ಇದನ್ನು ನಿಲ್ಲಿಸಿ. ಜೊತೆಗೆ ಇತಿಹಾಸವನ್ನು ಯಾರೋ ದಾರಿಹೋಕರು, ಸಾಮಾಜಿಕ ಜಾಲತಾಣಗಳ ಪಂಡಿತರು ಹೇಳುವುದಲ್ಲ. ಭಾರತ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಅಧಿಕೃತ ಗೆಜೆಟಿಯರ್ ನಲ್ಲಿ ಅದನ್ನು ದಾಖಲಿಸಲಾಗಿರುತ್ತದೆ. ಅದು ಸಂಪೂರ್ಣ ಸತ್ಯವಲ್ಲದಿರಬಹುದು. ಆದರೆ ಸದ್ಯಕ್ಕೆ ಅದೇ ಅಂತಿಮ. ಮತ್ತಷ್ಟು ಹೊಸ ದಾಖಲೆಗಳು ದೊರೆತಾಗ ಸರ್ಕಾರಗಳೇ ಅದನ್ನು ಅಧಿಕೃತವಾಗಿ ಬದಲಾವಣೆ ಮಾಡುತ್ತದೆ.ಅದನ್ನು ನಿರ್ಧಾರ ಮಾಡಲು ಇತಿಹಾಸ ತಜ್ಞರು ಇದ್ದಾರೆ.
ಯಾವುದೋ ದ್ವೇಷ ಅಸೂಯೆಯಿಂದ ಇತಿಹಾಸದ ಸುಳ್ಳು ಪ್ರಚಾರ ಒಳ್ಳೆಯದಲ್ಲ. ಭಾರತದ ಇತಿಹಾಸ ದಾಖಲಿಸುವಾಗ ಇಲ್ಲಿ ಪ್ರಜಾಪ್ರಭುತ್ವ ಇರಲಿಲ್ಲ. ರಾಜಕೀಯ ಪಕ್ಷಗಳು ಇರಲಿಲ್ಲ. ಆಗ ಸುಳ್ಳು ಹೇಳುವ ಅವಶ್ಯಕತೆ ಆಗಿನ ಇತಿಹಾಸಕಾರರಿಗೆ ಇರಲಿಲ್ಲ. ಪಠ್ಯ ಪುಸ್ತಕಗಳ ಪರಿಷ್ಕರಣೆ ಹಾದಿ ಬೀದಿಯ - ಮಾಧ್ಯಮಗಳ - ಸಾಮಾಜಿಕ ಜಾಲತಾಣಗಳ ಚರ್ಚಾ ವಿಷಯವಲ್ಲ. ಅದು ಭಾರತದ ಸಾಂಸ್ಕೃತಿಕ ಶೈಕ್ಷಣಿಕ ಸಾಮಾಜಿಕ ಆರ್ಥಿಕ ವಿದ್ವಾಂಸರ ಕರ್ತವ್ಯ ಮತ್ತು ಜವಾಬ್ದಾರಿ. ಅದು ಅತ್ಯಂತ ಸೂಕ್ಷ್ಮ ಮತ್ತು ದೂರದೃಷ್ಟಿಯ ಮಹತ್ತರ ಕೆಲಸ. ಬಲಿಷ್ಠ ಭಾರತದ ನಿರ್ಮಾಣದ ಅಡಿಗಲ್ಲು. ಅದನ್ನು ಇಷ್ಟೊಂದು ಕೆಳಮಟ್ಟಕ್ಕೆ ಇಳಿಸುತ್ತಿರುವ ನಾವುಗಳು ನಿಜಕ್ಕೂ ಒಂದು ರೀತಿಯ ಶೈಕ್ಷಣಿಕ ಅಪರಾಧಿಗಳು...
-ವಿವೇಕಾನಂದ ಹೆಚ್.ಕೆ., ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ