ಹೊಸ ಚರ್ಚೆಗೆ ವೇದಿಕೆ ತೆರೆದಿಟ್ಟ ಬಿಹಾರ ಜಾತಿಗಣತಿ

ಹೊಸ ಚರ್ಚೆಗೆ ವೇದಿಕೆ ತೆರೆದಿಟ್ಟ ಬಿಹಾರ ಜಾತಿಗಣತಿ

ವರ್ಷಾಂತ್ಯಕ್ಕೆ ನಡೆಯಲಿರುವ ಐದು ರಾಜ್ಯಗಳ ವಿಧಾನಸಭೆ ಚುನಾವಣೆ, ಮುಂದಿನ ವರ್ಷದ ಎಪ್ರಿಲ್ - ಮೇಯಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೆ ಪೂರಕವಾಗಿರುವಂತೆ ಬಿಹಾರದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಗಣತಿಯ ವರದಿಯನ್ನು ಬಿಡುಗಡೆಗೊಳಿಸಲಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗಿದೆ. ಬ್ರಿಟೀಷ್ ಆಡಳಿತದ ಭಾರತದಲ್ಲಿ ೧೯೩೧ರಲ್ಲಿ ಕೊನೆಯ ಬಾರಿಗೆ ಜಾತಿ ಆಧಾರಿತ ಸಮೀಕ್ಷೆ ನಡೆಸಲಾಗಿತ್ತು. ೧೮೮೧ರಲ್ಲಿ ಮೊದಲ ಬಾರಿಗೆ ಇಂಥ ಅಧ್ಯಯನ ಕೈಗೊಳ್ಳಲಾಗಿತ್ತು. ಇದೀಗ ದೇಶದಲ್ಲಿ ಮೊದಲ ಬಾರಿಗೆ ಬಿಹಾರ ಜಾತಿ ಗಣತಿ ನಡೆಸಿ ವರದಿ ಬಹಿರಂಗಪಡಿಸಿರುವುದು ದೇಶದಾದ್ಯಂತ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ವರದಿ ಪ್ರಕಟಕೊಳ್ಳುತ್ತಲೇ ರಾಜಕೀಯವಾಗಿ ಲಾಭ-ನಷ್ಟದ ಲೆಕ್ಕಾಚಾರಗಳು, ಆರೋಪ ಪ್ರತ್ಯಾರೋಪಗಳಿಗೆ ಸೋಪಾನವಾಗಿದೆ. ಇನ್ನು ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮತ್ತೆ ದೇಶದಾದ್ಯಂತ ಜಾತಿಗಣತಿ ನಡೆಸಬೇಕು ಎಂಬ ವಾದ ಮುಂದಿಟ್ಟಿದ್ದಾರೆ. ಈ ಸಮೀಕ್ಷೆಯನ್ನೇ ಮುಂದಿಟ್ಟುಕೊಂಡೇ ಕಾಂಗ್ರೆಸ್ ನಾಯಕರು ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಮುಂದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳಲ್ಲಿ ‘ನಾವು ಅಧಿಕಾರಕ್ಕೆ ಬಂದರೆ ಜಾತಿಗಣತಿ ನಡೆಸುತ್ತೇವೆ’ ಎಂಬ ಭರವಸೆ ನೀಡಿರುವುದು. ಈ ಸಮೀಕ್ಷೆ ಬಗ್ಗೆ ಬಿಜೆಪಿ ಅಪಸ್ವರ ಎತ್ತಿದೆ.

ಜಾತಿಗಣತಿ ಎನ್ನುವುದೇ ರಾಜಕೀಯದಲ್ಲಿ ಅತ್ಯಂತ ಸೂಕ್ಷ್ಮ ವಿಚಾರ. ಕೊಂಚ ಏರುಪೇರಾದರೂ ಅದರಿಂದ ಉಂಟಾಗುವ ರಾಜಕೀಯ ಹಾಗೂ ಸಾಮಾಜಿಕ ಬದಲಾವಣೆಗಳು ವರ್ಷಾನುಗಟ್ಟಲೆ ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ಸಮಸ್ಯೆಯನ್ನು ಉಂಟುಮಾಡಬಲ್ಲದು. ಇದರಲ್ಲಿ ಹೊರಹೊಮ್ಮುವ ಸಂಖ್ಯೆಯನ್ನು ಆಧರಿಸಿ ಮೀಸಲಾತಿ ನೀಡಬೇಕೆಂಬ ಚರ್ಚೆ ಈಗಾಗಲೇ ಆರಂಭವಾಗಿದ್ದು ಇದು ಹೊಸ ಸಮೀಕರಣಕ್ಕೆ ಕಾರಣವಾಗಬಹುದು. ಶೈಕ್ಷಣಿಕ, ರಾಜಕೀಯ ಮೀಸಲಾತಿಯಿಂದ ಹಿಡಿದು ಚುನಾವಣೆ ವೇಳೆಯ ಲೆಕ್ಕಾಚಾರಗಳವರೆಗೆ ಎಲ್ಲವೂ ಇಂಥ ಸಮೀಕ್ಷೆಯನ್ನು ಆಧರಿಸಿರುವುದರಿಂದ ಗಣತಿಯೇ ಅತ್ಯಂತ ಸೂಕ್ಷ್ಮವಾದ ಸಂಗತಿ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪಟ್ಟು ಹಿಡಿದು ಗಣತಿಯನ್ನು ಸಾಧಿಸಿದ್ದಾರೆ. ಕರ್ನಾಟಕದಲ್ಲಿ ಮೊದಲ ಬಾರಿಗೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಆರ್ಥಿಕ ಮತ್ತು ಸಾಮಾಜಿಕ ಸಮೀಕ್ಷೆ ಕೈಗೊಂಡಿದ್ದು ಅದರ ಪರಿಷ್ಕೃತ ವರದಿ ಇಷ್ಟರಲ್ಲೇ ಬಿಡುಗಡೆಯಾಗುವ ನಿರೀಕ್ಷೆ ಇದೆ. ಈ ಸಮೀಕ್ಷೆ ಸಹ ರಾಜ್ಯದ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ. ಆದರೆ ಈ ಪ್ರಕ್ರಿಯೆ ಜೇನಿನ ಗೂಡಿಗೆ ಕಲ್ಲು ಎಸೆದ ಹಾಗೆ ಎನ್ನುವುದು ಎಲ್ಲ ಪಕ್ಷಗಳಿಗೂ ತಿಳಿದಿರುವ ಕಾರಣ, ಒಂದಿಲ್ಲೊಂದು ಲೆಕ್ಕಾಚಾರಗಳು ಮೇಳೈಸುತ್ತವೆ. 

ಜಾತಿ ಎನ್ನುವುದೇ ಕತ್ತಿಯ ಅಗಲಿನ ಮೇಲೆ ನಡೆದಂತೆ, ಭಾರತದಂಥ ಜಾತ್ಯಾತೀತ ರಾಷ್ಟ್ರದಲ್ಲಿ  ಜಾತಿಯ ಮೇಲೆಯೇ ಇನ್ನೂ ರಾಜಕೀಯ ನಡೆಯುತ್ತಿರುವುದು ದುರಂತವೇ ಸರಿ. ಇಂಥ ವರದಿಗಳು ಕೇವಲ ರಾಜಕೀಯ ಲಾಭ ಪಡೆಯುವುದಕ್ಕೋ, ನಾಯಕರ ವೈಯಕ್ತಿಕ ವರ್ಚಸ್ಸು ಹೆಚ್ಚಿಸಲೋ ಅಥವಾ ನಿರ್ದಿಷ್ಟ ಸಮುದಾಯಗಳ ಪ್ರಾಬಲ್ಯವನ್ನು ಪ್ರದರ್ಶಿಸಲೋ ಬಳಕೆಯಾಗಬಾರದು ಎನ್ನುವುದು ಎಲ್ಲರ ಕಳಕಳಿ. ನಿಜವಾಗಿಯೂ ಅನ್ಯಾಯಕ್ಕೆ ತುಳಿತಕ್ಕೆ ಒಳಗಾಗಿರುವ ಸಮುದಾಯಕ್ಕೆ ಸರಕಾರಿ ಯೋಜನೆಗಳು ತಲುಪಲು ಸಹಕಾರಿಯಾಗಲಿ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೩-೧೦-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ