ಹೊಸ ಬಿಸಿಬಿಸಿ ಸುದ್ದಿಗಳು
ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶಾಂತಿಯುತವಾಗಿ ನಡೆದ ಚುನಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೇ ಇರಲಿಲ್ಲ.
ದೇಶದ ಸರ್ವತೋಮುಖ ಅಭಿವೃದ್ಧಿಯಾಗುವವರೆಗೆ ವೇತನವನ್ನೇ ಪಡೆಯುವದಿಲ್ಲ ಎಂದು ಎಲ್ಲ ಸಂಸದರು ಸಂಸತ್ತಿನಲ್ಲಿ ಪಟ್ಟು ಹಿಡಿದಿದ್ದಾರೆ. ವಿಷಯ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇದೀಗ ಯಾವ ಸಂಸದರಿಗೂ ವೇತನವೇ ಇಲ್ಲ. ತಮಗೆ ದೊರೆಯುವ ಎಲ್ಲ ಸೌಲಭ್ಯಗಳನ್ನೂ ಸಂಸದರು ನಿರಾಕರಿಸಿದ್ದಾರೆ. ಇವರ ಪಟ್ಟು ನೋಡಿ ದೇಶದ ಎಷ್ಟೋ ನಾಗರಿಕರು, ಪಕ್ಷದ ಕಾರ್ಯಕರ್ತರಿಗೆ ಹುಚ್ಚೇ ಹಿಡಿದಿದೆ.
ದೇಶದಲ್ಲಿ ಯಾವುದೇ ಕೊಲೆ, ಸುಲಿಗೆ, ಕಳ್ಳತನ, ದರೋಡೆಗಳು ನಡೆಯದೇ ಇರುವದರಿಂದ, ಪೊಲೀಸ್ ಇಲಾಖೆಯನ್ನೇ ರದ್ದುಪಡಿಸಬೇಕೆಂದು ಚಿಂತನೆ ನಡೆದಿದೆ. ಯಾವುದೇ ಕೆಲಸವಿಲ್ಲದೆ ವಿನಾಕಾರಣ ವೇತನ ಪಡೆಯುತ್ತಿರುವ ಲೋಕಾಯುಕ್ತ, ಆದಾಯ ತೆರಿಗೆ ಇಲಾಖೆಗಳನ್ನೂ ರದ್ದುಪಡಿಸಬೇಕೆಂಬ ವಿಚಾರವೂ ನಡೆದಿದೆ. ವಿದೇಶಿ ಬ್ಯಾಂಕ್ನಲ್ಲಿನ ಹಣವನ್ನೆಲ್ಲ ತಂದು ದೇಶದ ವಿದೇಶಿ ಸಾಲವನ್ನು ತೀರಿಸಲಾಗುತ್ತಿದೆ. ಇತ್ತೀಚೆಗೆ ವಿದೇಶಿ ಬ್ಯಾಂಕಿನಲ್ಲಿ ಹಣವಿರಿಸಲು ಹೋದ ಜನಪ್ರತಿನಿಧಿಯೊಬ್ಬರ ಮೇಲೆ ಪೊಲೀಸ್ರಿಗೆ ದೂರು ನೀಡಲಾಯಿತು. (ಅವರ ಕುಟುಂಬದವರಿಂದಲೇ).
೧ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಮಕ್ಕಳು ಯಾವುದೇ ಕ್ಷೇತ್ರದಲ್ಲಿ ಶಿಕ್ಷಣ ಪಡೆದರೂ ಎಲ್ಲವೂ ಉಚಿತ ಎಂಬ ನಿರ್ಣಯವನ್ನು ಕೈಗೊಳ್ಳಲಾಗಿದೆ. ಇದಕ್ಕೆ ಎಲ್ಲ ಶಿಕ್ಷಣ ಸಂಸ್ಥೆಗಳು, ಸರ್ಕಾರಗಳು ಅಂಗೀಕಾರ ನೀಡಿವೆ. ಉಚಿತ ಉನ್ನತ ಶಿಕ್ಷಣ ಒದಗಿಸಲು, ಮಂತ್ರಿ ಮಹೋದಯರು, ಶಾಸಕರು, ಸಂಘ-ಸಂಸ್ಥೆಗಳ ಅಧ್ಯಕ್ಷರು ಪೈಪೋಟಿ ನಡೆಸಿದ್ದಾರೆ. ಪ್ರತಿವರ್ಷ ನಿಯಮಿತ ಶಿಕ್ಷಣ ಸಂಸ್ಥೆಗಳಿಗೆ ಮಾತ್ರ ಅನುಮತಿ ಎಂದು ಸರ್ಕಾರ ನಿಯಮಗಳನ್ನು ರಚಿಸಿ ನಿಟ್ಟುಸಿರು ಬಿಟ್ಟಿದೆ.
ಸರ್ಕಾರಿ ಕಚೇರಿ, ಬ್ಯಾಂಕ್, ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿಯವರೆಲ್ಲ ನಗುಮೊಗದಿಂದಲೇ ಮಾತನಾಡಿಸತೊಡಗಿರುವುದಕ್ಕೆ ಸಾರ್ವಜನಿಕರು ಬೇಸರಿಸಿಕೊಂಡಿದ್ದಾರೆ. ಸಿಬ್ಬಂದಿಯವರಲ್ಲಿ ಒಬ್ಬರಾದರೂ ಆಕ್ರೋಶದಿಂದ ಸಾರ್ವಜನಿಕರನ್ನು ಬಯ್ಯಲು ಕಲಿಸಿರಿ ಎಂದು ಕೆಲವರು ಮೇಲಾಧಿಕಾರಿಗಳಿಗೆ ಮೂಕರ್ಜಿಗಳನ್ನೇ ಬರೆಯಲಾರಂಭಿಸಿದ್ದಾರೆ. ಸಾರ್ವಜನಿಕರೊಂದಿಗೆ ಕೆಟ್ಟದಾಗಿ ನಡೆದುಕೊಳ್ಳುವುದು ಹೇಗೆಂಬುದನ್ನು ತರಬೇತಿ ನೀಡಲು ಸರ್ಕಾರ ನಿರ್ಧರಿಸಿದೆ. ಆದರೆ ಸಿಬ್ಬಂದಿಯವರಾರೂ ತರಬೇತಿಗೆ ಹಾಜರಾಗದೇ ಇರುವುದು ಸರ್ಕಾರಕ್ಕೆ ಸವಾಲಾಗಿ ಪರಿಣಮಿಸಿದೆ.
ಕೈಗಾರಿಕೋದ್ಯಮಿಗಳು, ಮಾರಾಟಗಾರರು, ಸಾರ್ವಜನಿಕರ ಅನುಕೂಲಕ್ಕಾಗಿ ಧಿಡೀರನೆ ಎಲ್ಲ ವಸ್ತುಗಳ ಬೆಲೆಗಳನ್ನು ಇಳಿಸಿದ್ದುದರಿಂದ ಗ್ರಾಹಕರು ಮಾರುಕಟ್ಟೆಯಲ್ಲಿ ಪರದಾಡಬೇಕಾಗಿದೆ. ಇಷ್ಟೊಂದು ಕಡಿಮೆ ಬೆಲೆಗೆ ವಸ್ತುಗಳನ್ನು ಕೊಳ್ಳುವುದಾದರೂ ಹೇಗೆಂದು ಪ್ರತಿಭಟನೆ ನಡೆಸಿದ್ದಾರೆ. ದಿನಸಿ ಬೆಲೆ ಏರಿಸಲು ರಾಜ್ಯಾದ್ಯಂತ ಪ್ರತಿಭಟನಾ ಮೆರವಣಿಗೆಗಳನ್ನು ಏರ್ಪಡಿಸಲಾಗಿದೆ. ಪ್ರತಿಭಟನೆಗಳಿಗೆ ಸರ್ಕಾರ ಮಣಿದಿಲ್ಲ.
ಪರಿಸರವನ್ನು ಮಲಿನಗೊಳಿಸಬಾರದೆಂದು ಮಂತ್ರಿಗಳು, ಶಾಸಕರು, ಹಿರಿಯ ಅಧಿಕಾರಿಗಳು, ನಾಗರಿಕರೆಲ್ಲರೂ ಕಾಲ್ನಡಿಗೆ, ಸೈಕಲ್ಗಳನ್ನು ಬಳಸುತ್ತಿರುವದರಿಂದ ಪೆಟ್ರೋಲ್ ಬಂಕ್ಗಳು ಪೆಟ್ರೋಲ್, ಡೀಸೆಲ್ ಬೆಲೆಯನ್ನು ಸ್ಪರ್ಧಾತ್ಮಕವಗಿ ಇಳಿಸಿವೆ. ಕೆಲವೆಡೆ ೫ ಲೀಟರ್ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸಿದರೆ ೫ ಲೀಟರ್ ಉಚಿತ ಎಂಬ ಬೋರ್ಡಗಳೂ ರಾರಾಜಿಸುತ್ತಿವೆ. ಆದರೂ ವ್ಯಾಪಾರ ತುಂಬಾ ಡಲ್ಲಾಗಿದೆ ಎಂಬುದು ಬಂಕ್ ಮಾಲೀಕರ ಉವಾಚ.
ದಿನದ ೨೪ ಗಂಟೆಗಳೂ ನಿರಂತರವಾಗಿ ವಿದ್ಯುತ್, ನೀರನ್ನು ಒದಗಿಸುತ್ತಿರುವುದಕ್ಕಾಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇವುಗಳಿಗೆ ನಿಯಮಿತ ವೇಳೆಗಳನ್ನು ಮಾಡಿರಿ ಇಲ್ಲದಿದ್ದಲ್ಲಿ ವಿದ್ಯುತ್, ನೀರು ಪೋಲಾಗುತ್ತದೆ ಎಂಬುದು ನಾಗರಿಕರ ಆತಂಕಕ್ಕೆ ಕಾರಣ. ರಸ್ತೆಗಳನ್ನು ಮೇಲಿಂದ ಮೇಲೆ ಡಾಂಬರೀಕರಣಗೊಳಿಸುತ್ತಿರುವುದಕ್ಕೆ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ರಸ್ತೆಗಳಲ್ಲಿ ಹೊಂಡಗಳಿದ್ದರೆ, ನೀರು ನಿಲ್ಲುತ್ತಿದ್ದರೆ ಮಕ್ಕಳು ಆಟವಾಡಲು ಬರುತ್ತಿತ್ತು. ಇದೀಗ ರಸ್ತೆ ನೀಟಾಗಿರುವುದಕ್ಕೆ ಮಕ್ಕಳನ್ನು ಸಮಾಧಾನಗೊಳಿಸುವುದೇ ಕಷ್ಟವಾಗಿದೆ ಎಂಬುದು ಸಾರ್ವಜನಿಕರ ಅಳಲು.
ಎಲ್ಲವನ್ನೂ ಓದಿದಿರಾ?
ಎಪ್ರೀಲ್ ಫೂಲ್