ಹೊಸ ಯುಗದ ಪರಿವರ್ತಕ ಕಾರ್ಲ್ ಮಾರ್ಕ್ಸ್

ಹೊಸ ಯುಗದ ಪರಿವರ್ತಕ ಕಾರ್ಲ್ ಮಾರ್ಕ್ಸ್

"ಕಾರ್ಲ್ ಮಾರ್ಕ್ಸ್, ಚಾರ್ಲ್ಸ್ ಡಾವಿರ್ನ್ ಹಾಗೂ ಸಿಗ್ಮೆಂಡ್ ಫ್ರಾಯ್ಡ್ ಇಂಥ ಪ್ರಸ್ತಾಪಗಳನ್ನು ಮಂಡಿಸಿದ ತತ್ತ್ವಶಾಸ್ತ್ರಜ್ಞರಾಗಿದ್ದರು. ಸಮಾಜದ ರಚನೆಗೆ ಅಡಿಪಾಯವಾದ ಹಣಕಾಸು ವ್ಯವಸ್ಥೆ, ನಾವು ಬದುಕುವ ವಸ್ತುಲೋಕದ ವೈರುಧ್ಯಗಳು, ವಸ್ತು ಪ್ರಪಂಚವನ್ನು ಅರಿತುಕೊಳ್ಳಲು ಅಗತ್ಯವಾಗುವ ವಿಜ್ಞಾನಲೇಪಿತ ಐತಿಹಾಸಿಕ ದೃಷ್ಟಿಕೋನಗಳ ಕುರಿತು ಮಾರ್ಕ್ಸ್ ಚಿಂತಿಸಿದ್ದ. ಅದೇ ರೀತಿ, ಧರ್ಮಾತೀತ ನಿಸರ್ಗ ಸಿದ್ಧಾಂತದಲ್ಲಿ ಆಸಕ್ತನಾಗಿದ್ದ ಜೀವವಿಜ್ಞಾನಿ ಚಾರ್ಲ್ಸ್ ಡಾರ್ವಿನ್, ಪ್ರಕೃತಿಯಲ್ಲಿ ಸಹಜ ಆಯ್ಕೆಯ ಫಲವಾಗಿ ಕಾಲಾಂತರದಲ್ಲಿ ಜೀವಿಗಳು ಹೇಗೆ ಅರಳಿದವು? ಎಂಬ ಹೊಸ ಜೀವವಿಕಾಸ ಸಿದ್ಧಾಂತವನ್ನು ಪ್ರಸ್ತಾಪಿಸಿದ್ದ" ಎಂಬುದನ್ನು ಲೇಖಕ ಕೇಶವ ಮಳಗಿ ಅವರು, "ಇಂದು ಶೋಷಣೆಯಿಲ್ಲದ ಸಮಾಜವನು ಕನಸಿದ : ಹೊಸ ಯುಗದ ಪರಿವರ್ತಕ" ಎಂಬ ಲೇಖನವನ್ನು ಕಾರ್ಲ್ ಮಾರ್ಕ್ಸ್ ಹುಟ್ಟಿದ ದಿನ" ವಿಶೇಷವಾಗಿ ತಮ್ಮ ಬ್ಲಾಗಿನಲ್ಲಿ ಬರೆದಿದ್ದಾರೆ. ಅದನ್ನು ಸಂಗ್ರಹಿಸಿ ಇಲ್ಲಿ ನೀಡಿರುವೆ...

ಹತ್ತೊಂಬತ್ತನೆಯ ಶತಮಾನವನ್ನು ಮನುಷ್ಯರ ಲೋಕದೃಷ್ಟಿಯನ್ನು ಬದಲಾಯಿಸಿದ ಶತಮಾನವೆಂದು ಗುರುತಿಸಲಾಗುತ್ತದೆ. ಈ ಶತಮಾನದಲ್ಲಿ ಪ್ರಸ್ತಾಪಗೊಂಡ ಮೂರು ಪ್ರಮುಖ ಸೈದ್ಧಾಂತಿಕ ಪ್ರಮೇಯಗಳು ಮನುಷ್ಯರು ವಿಶ್ವವನ್ನು ನೋಡುವ, ಅರ್ಥ ಮಾಡಿಕೊಳ್ಳುವ ಬಗೆಯನ್ನು ಎಲ್ಲ ಕಾಲಕ್ಕೂ ಮಾರ್ಪಾಟುಗೊಳಿಸಿದವು. ಈ ಮೂರು ಪ್ರಸ್ತಾಪಗಳನ್ನು 'ಯುಗಪರಿವರ್ತಕ'ವೆಂದು ಕರೆಯಲಾಗುತ್ತದೆ. ವ್ಯಕ್ತಿ, ವ್ಯಕ್ತಿಗಳಿಂದ ನಿರ್ಮಿತವಾದ ಸಮಾಜ, ಸಮಾಜವನ್ನು ನಿಯಂತ್ರಿಸುವ ಆರ್ಥಿಕತೆ, ವ್ಯಕ್ತಿ ಹಾಗೂ ಸಮಾಜಗಳ ಸ್ವಾಸ್ಥ್ಯ, ಈ ಎಲ್ಲ ಕ್ರಿಯೆಗಳಲ್ಲಿ ಸಂಸ್ಕೃತಿ ವಹಿಸುವ ಪಾತ್ರ ಮತ್ತು ಮೂಲಭೂತವಾಗಿ ಸೃಷ್ಟಿ ವಿಕಾಸಗೊಂಡ ವಿಧಾನ ಯಾವುದಿರಬಹುದು? ಎಂಬ ವಿಶಾಲನೆಲೆಯ ತಾತ್ತ್ವಿಕ ಪ್ರಶ್ನೆಗಳನ್ನು ಈ ಮೂರು ಪ್ರಮೇಯಗಳು ಚರ್ಚೆಯ ಮುನ್ನೆಲೆಗೆ ತಂದಿದ್ದವು.

ಮೂರನೆಯ ಸಿದ್ಧಾಂತಿಯಾದರೂ ವ್ಯಕ್ತಿಯ ಮಾನಸಿಕ ಸ್ವಸ್ಥತೆ, ಸಮಾಜ ಮತ್ತು ಸಂಸ್ಕೃತಿಗಳೊಂದಿಗೆ ಮಿಳಿತವಾಗಿದ್ದು ಧರ್ಮದಿಂದ ಸ್ವತಂತ್ರವಾಗಿದೆ. ಮಾತ್ರವಲ್ಲ, ಮನುಷ್ಯನ ಮಾನಸಿಕ ಕಾಯಿಲೆಯ ಮೂಲವು ಸಂಸ್ಕೃತಿ ಮತ್ತು ಧರ್ಮದೊಂದಿಗೆ ಬೆರೆತಿರುವುದರಿಂದಲೇ ಇನ್ನಷ್ಟು ಜಟಿಲವಾಗಿ ಆರೈಕೆ ಸಾಧ್ಯವಾಗದಂತೆ ಮಾಡಿದೆ ಎಂಬ ವಿವಾದಾತ್ಮಕ ಅಂಶವನ್ನು ಮುಂದಿಟ್ಟ.

ಈ ಮೂರೂ ತತ್ತ್ವಶಾಸ್ತ್ರಜ್ಞರು ಚರ್ಚೆಗೆ ತಂದ ವಿಷಯಗಳನ್ನು ಸಮಾಜದ ಒಂದು ವರ್ಗ ಉತ್ಸಾಹದಿಂದ ಸ್ವಾಗತಿಸಿದರೆ, ಕಂದಾಚಾರಿಗಳು ಇವು ಧರ್ಮ ಮತ್ತು ಮನುಷ್ಯ ವಿರೋಧಿ ಎಂದು ಸಗಟಾಗಿ ತಿರಸ್ಕರಿಸಿದವು. ಅಂದಿಗೆ ಕ್ರಾಂತಿಕಾರಿಯಾಗಿದ್ದ ಈ ವಿಚಾರಗಳು ಒಂದಕ್ಕೊಂದು ಕೊಡುಕೊಳೆ ನಡೆಸಿದ್ದು ಅಪಾರ. ಅಷ್ಟೇ ಅಲ್ಲ, ಸೂಕ್ಷ್ಮವಾಗಿ ಗಮನಿಸಿದಾಗ ಒಂದಕ್ಕೊಂದು ಅಂತಃಸಂಬಂಧ ಹೊಂದಿ ಪೂರಕವಾಗಿರುವುದೂ ಗೋಚರಿಸುವುದು. ಮೂರು ಸಿದ್ಧಾಂತಗಳಲ್ಲಿ ಮೇಲ್ನೋಟಕ್ಕೆ ಸಾಮತ್ಯೆ ಹುಡುಕಿದರೆ ಎದ್ದು ಕಾಣುವ ಅಂಶ 'ಧರ್ಮ'. ಆ ಮೊದಲು ವಿಶ್ವದ ಪ್ರತಿ ಚರಾಚರಗಳಿಗೂ ಧರ್ಮವು ತನ್ನದೇ ಆದ ವ್ಯಾಖ್ಯಾನವನ್ನು ಹೊಂದಿತ್ತು. ಅಲ್ಲದೆ, ಎಲ್ಲ ಸಮಸ್ಯೆಗಳಿಗೂ ತನ್ನಲ್ಲಿಯೇ ಶಮನವಿದೆ ಎಂದು ಅರಹುತ್ತ ಬಂದಿತ್ತು. ಆದರೆ, ಈ ಮೂವರು ಮಹಾಶಯರ ಪ್ರಸ್ತಾಪಗಳು ಅಂಥ ಹೇಳಿಕೆಯೇ ಅವೈಜ್ಞಾನಿಕ. ಅಷ್ಟೇಕೆ, ಧರ್ಮ ಸಮಾಜದ ಹಿಮ್ಮುಖ ಚಲನೆಗೆ ಕಾರಣವಾಗಿದೆ ಎಂದು ಕೆಂಗಣ್ಣಿಗೆ ಗುರಿಯಾಗಬಲ್ಲ ನಿಲುವನ್ನು ಹೊಂದಿದ್ದರು. ಅದರಲ್ಲೂ ಕಾರ್ಲ್‌‌ ಮಾರ್ಕ್ಸ್‌ನನ್ನು ಅತ್ಯಂತ ಅಪಾಯಕಾರಿ ತತ್ತ್ವಜ್ಞಾನಿ ಎಂದೇ ಇತಿಹಾಸ ಬಣ್ಣಿಸುವುದು. ಅದೇನೆ ಇದ್ದರೂ, ಕೈಗಾರಿಕಾ ಕ್ರಾಂತಿಯ ಸಮಾಜದ ಹುಟ್ಟು, ಬೆಳೆದುಬಂದ ವಿಧಾನ ಮತ್ತು ಅದರ ಇಷ್ಟಾನಿಷ್ಠಗಳನ್ನು ಅರಿತುಕೊಳ್ಳಲು ಈ ಮೂರು ಸಿದ್ಧಾಂತಗಳು ಮಂಡಿಸಿದ ವಿಚಾರಗಳನ್ನು ಮನನ ಮಾಡುವುದಂತೂ ಆವಶ್ಯಕ.

ಆಧುನಿಕ ಲೋಕದಲ್ಲಿ ಮೇಲಿನ ಮೂವರಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗುವವನು, ಹೊಗಳಿಕೆ-ತೆಗಳಿಕೆ, ತಿರಸ್ಕಾರಕ್ಕೆ ಪಾತ್ರನಾಗುವವನೆಂದರೆ ಕಾರ್ಲ್ ಮಾರ್ಕ್ಸ್. ಆತನನ್ನು ವ್ಯಗ್ರವಾಗಿ ನೋಡುವ ಧರ್ಮಾಂಧರು, ಆತ ಮಂಡಿಸಿದ ಹಣಕಾಸಿನ ವಿಚಾರಗಳು ಅಪಕ್ವವೆಂದು ಮೂಗು ಮುರಿವ ಬಂಡವಾಳದಾರರು, ಬಂಡವಾಳಶಾಹಿಯೇ ಅತ್ತ್ಯುತ್ತಮ ವ್ಯವಸ್ಥೆಯೆಂದು ಪ್ರತಿಪಾದಿಸುವ ಖಾಸಗಿ ಆಸ್ತಿಯ ಪ್ರತಿಪಾದಕರಾದ 'ನವಬಂಡವಾಳಶಾಹಿ ಪ್ರಜಾಸತ್ತಾತ್ಮಕ ರಾಜಕೀಯ ಧುರೀಣ'ರು ಮತ್ತು ಅವರ ಗುಲಾಮೀ ರಾಜಕೀಯ ಪಕ್ಷಗಳು ಕೂಡ ಮಾರ್ಕ್ಸ್‌‌ನನ್ನು ಸಂಪೂರ್ಣ ಅಲ್ಲಗೆಳೆಯಲಾರವು.

ಈತ ನೀರು ಹರಿಸುತ್ತಿರುವುದು ತಮ್ಮ ಬುಡಕ್ಕೇ ಎಂದು ಅರಿಯುವ ವರ್ಗವು ಮಾರ್ಕ್ಸ್ ಅರ್ಥವಾದರೂ, ಆತನ ಸಿದ್ಧಾಂತವು ಅತ್ಯಂತ ಸಮಂಜಸ ಅನ್ನಿಸಿದರೂ ಅದನ್ನು ತಿರಸ್ಕರಿಸುವವರು. ಅದೇನೆ ಇರಲಿ, ಕಾರ್ಲ್ ಮಾರ್ಕ್ಸ್ ಸಿದ್ಧಾಂತವು ಬದಲಾದ ವಿಶ್ವದ ಹೊಸ ಸನ್ನಿವೇಶದಲ್ಲಿ, ಹೊಸ ವ್ಯಾಖ್ಯಾನಗಳೊಂದಿಗೆ, ತಿದ್ದುಪಡಿಗಳೊಂದಿಗೆ ಪ್ರಸ್ತುತವಾಗಲು ಸಾಧ್ಯ ಎಂಬ ಅಂಶವನ್ನೇ ಒತ್ತಿ ಹೇಳುತ್ತದೆಂದು ವಿಶ್ವಾದ್ಯಂತ ರಾಜಕೀಯ ಚಿಂತಕರು, ತತ್ತ್ವಶಾಸ್ತ್ರಜ್ಞರು ನಂಬುತ್ತಾರೆ.

ಕಾರ್ಲ್ ಮಾರ್ಕ್ಸ್ ಹುಟ್ಟಿದ್ದು ತತ್ತ್ವಶಾಸ್ತ್ರಗಳ ಸ್ವರ್ಗವೆಂದು ಕರೆಯಲಾಗುತ್ತಿದ್ದ ಜರ್ಮನಿಯ ಟ್ರಯರ್‌ನಲ್ಲಿ, ಮೇ ಮಾಸದ 5ನೇ ತಾರೀಖು 1818ರಲ್ಲಿ. ಕುಪಿತ ತಂದೆಯನ್ನು ಸಮಾಧಾನಪಡಿಸುವ ಉದ್ದೇಶದಿಂದ ತನ್ನ ಆಸಕ್ತಿಯ ಕಲಿಕಾ ವಿಷಯ ಬೇರೆಯಿದ್ದರೂ ಶಿಕ್ಷಣದಲ್ಲಿ ಕಾನೂನು ವ್ಯಾಸಂಗ ಮಾಡಿದವನು. ದರ್ಶನ ಶಾಸ್ತ್ರದಲ್ಲಿ ಪಿಎಚ್‌ಡಿ ಪದವಿ ಪಡೆದು ಉದ್ಯೋಗಕ್ಕಾಗಿ ಅಲೆಯುತ್ತಿದ್ದಾಗ ಕ್ರಾಂತಿಕಾರಿ ತರುಣರು ಗುಂಪಿನ ಸೆಳೆತಕ್ಕೆ ಒಳಗಾಗಿ ಪತ್ರಕರ್ತನಾಗಿ ರಾಜಕೀಯ, ಸಾಮಾಜಿಕ ವಿಷಯಗಳಲ್ಲಿ ಆಸಕ್ತಿ ತಳೆದವನು. ಮುಂದೆ ತನ್ನ ಜೀವಮಾನದ ಗೆಳೆಯ ಫ್ರೆಡರಿಕ್ ಎಂಗೆಲ್ಸ್ ಜತೆಗೂಡಿ ಅಪಾರ ಪ್ರಮಾಣದ ಕೃತಿ ರಚನೆಯಲ್ಲಿ ತೊಡಗಿಕೊಂಡವನು. ಮಾರ್ಕ್ಸ್ ಪ್ರಸ್ತಾಪಿಸಿದ ಬಂಡವಾಳ, ಬಂಡವಾಳಶಾಹಿ, ಹಣಕಾಸು, ಉಳಿತಾಯ ಮೌಲ್ಯ, ರಾಜ್ಯ ವ್ಯವಸ್ಥೆ, ವರ್ಗ ಹೋರಾಟ, ಸಮಾಜವಾದ, ಕಾರ್ಮಿಕ ವರ್ಗ ಮುಂತಾದ ನುಡಿಗಟ್ಟುಗಳಿಗೆ ಖಚಿತ ವ್ಯಾಖ್ಯಾನ ನೀಡುತ್ತ ಅವನ್ನು ಐತಿಹಾಸಿಕ ವಸ್ತುಲೋಕದ ವಿಶ್ಲೇಷಣೆಯ ವ್ಯಾಪ್ತಿಗೆ ತಂದವನು.

ಮಾರ್ಕ್ಸವಾದದಿಂದ ಕಂಡುಕೊಳ್ಳಬಹುದಾದ ಪ್ರಮುಖ ವಿಚಾರಗಳು: ಬಂಡವಾಳಶಾಹಿ ವ್ಯವಸ್ಥೆಯು ಸಮಾಜವನ್ನು ಹಣ ಉಳ್ಳವರು ಮತ್ತು ದುಡಿಯುವವರು ಎಂಬ ಎರಡು ವರ್ಗಗಳನ್ನಾಗಿ ವಿಭಾಗಿಸುತ್ತದೆ. ಇದರರ್ಥ, ಹಣವಂತರು ಉಳಿದೆಲ್ಲ ಸಂಪನ್ಮೂಲಗಳನ್ನು ನಿಯಂತ್ರಿಸುತ್ತ (ಉತ್ಪಾದನಾ ವಿಧಾನ, ಮಾರುಕಟ್ಟೆ, ಕಚ್ಚಾವಸ್ತುಗಳು, ಭೂಮಿ, ಅರಣ್ಯವನ್ನು ಒಳಗೊಂಡ ಎಲ್ಲ ಬಗೆಯ ನೈಸರ್ಗಿಕ ಸಂಪನ್ಮೂಲ) 'ಲಾಭ ಗಳಿಕೆ'ಯನ್ನೇ ತಮ್ಮ ಪರಮೋದ್ಧೇಶವನ್ನಾಗಿ ಮಾಡಿಕೊಂಡಿರುತ್ತಾರೆ. ಉಳಿದವರು ತಮ್ಮ ಶ್ರಮವನ್ನು ಹಣಕ್ಕಾಗಿ ಮಾರುವ ಸ್ವತಂತ್ರತೆಯನ್ನು ಮಾತ್ರ ಪಡೆದಿರುತ್ತಾರೆ. ಈ ನಿರಂತರ ಶೋಷಣೆ ಅಸಮಾನತೆಯನ್ನು ಸೃಷ್ಟಿಸುತ್ತದೆ. ಹಣವಂತರು ಇನ್ನಷ್ಟು ಹಣವಂತರಾಗುತ್ತ, ಇಲ್ಲದವರು ಇನ್ನಷ್ಟು ನಿರ್ಗತಿಕರಾಗುತ್ತ ಕೆಳಗೆ ಜಾರುತ್ತಿರುತ್ತಾರೆ.

ಇದಕ್ಕೆಲ್ಲ ಕಾರಣ ಐತಿಹಾಸಿಕವಾಗಿ ನಾವು ಶ್ರಮವನ್ನು ನೋಡುತ್ತಿರುವ ವಿಧಾನವೇ ಕಾರಣವಾಗಿದೆ. ವಿಧಾನದಲ್ಲಿಯೇ ಶೋಷಣೆ ಅಂತರ್ಗತವಾಗಿ ಅಡಕವಾಗಿದೆ. ‘ಮಾನವ ಶ್ರಮವೇ ಎಲ್ಲ ಬಗೆಯ ಹಣಕಾಸಿನ ಮೌಲ್ಯವನ್ನು ಸೃಷ್ಟಿಸುತ್ತಿರುವ ವಸ್ತುವಾಗಿದೆ’, ಎಂದು ಮಾರ್ಕ್ಸ್ ಮೊದಲಬಾರಿಗೆ ತೋರಿಸಿಕೊಟ್ಟ. ಬಂಡವಾಳ ಹಾಕುವವನು ತನ್ನ ಉತ್ಪನ್ನವನ್ನು ಮಾರುವುದರಿಂದ ಲಾಭವನ್ನು ಹೇಗೂ ಸಂಪಾದಿಸುತ್ತಾನೆ. ಜತೆಜತೆಗೆ, ದುಡಿಯುವವನ ಶ್ರಮಕ್ಕೆ ಸಮವಾಗಿ ದುಡಿಮೆಯ ಹಣವನ್ನು ನೀಡುವುದಿಲ್ಲ. ಕಾರ್ಮಿಕನ ಹೊಟ್ಟೆಬಟ್ಟೆಗೆ ಸಾಲುವಷ್ಟು ಮಾತ್ರ ಆತನ ಕೂಲಿ ಇರುತ್ತದೆ. ಹೀಗಾಗಿ, ಬಂಡವಾಳಗಾರನಲ್ಲಿ 'ಉಳಿತಾಯ ಮೌಲ್ಯ' ಹೆಚ್ಚುತ್ತ ಹೋಗಿ ಆತ ಇನ್ನಷ್ಟು, ಮತ್ತಷ್ಟು ಸಿರಿವಂತನಾಗುತ್ತಿರುತ್ತಾನೆ. ಈ ಮಿಗಿತಾಯ ಮೌಲ್ಯ ಸೃಷ್ಟಿಯಾಗುತ್ತಿರುವುದೇ ಕಾರ್ಮಿಕ ಹಾಕುತ್ತಿರುವ ಹೆಚ್ಚಿನ ಶ್ರಮದಿಂದ.

ಸಿರಿವಂತರು ತಮ್ಮ ಹಣ ಮತ್ತು ಅದು ಒದಗಿಸಿಕೊಡುವ ಪ್ರಭಾವದಿಂದ ಎಲ್ಲ ಬಗೆಯ ಸಾಂಸ್ಥಿಕ ರಚನೆಯನ್ನು ನಿಯಂತ್ರಿಸುತ್ತಾರೆ. ಉದಾಹರಣೆಗೆ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಥಿಕ ವ್ಯವಸ್ಥೆಗಳು ಅವರು ಹೇಳಿದಂತೆ ಕೆಲಸ ಮಾಡುತ್ತವೆ. ರಾಜಕೀಯ ಪಕ್ಷಗಳು, ಧಾರ್ಮಿಕ ಸಂಸ್ಥೆಗಳು, ಶಿಕ್ಷಣ ವ್ಯವಸ್ಥೆ, ಮಾಧ್ಯಮಗಳು, ಸಾಂಸ್ಕೃತಿಕ ಸಂಸ್ಥೆಗಳು ಹಣವಂತರ ಅಭಿರುಚಿಯನ್ನು ವಿಭಿನ್ನ ಸಮುದಾಯಗಳ ಮೇಲೆ ಏಕತ್ರವಾಗಿ ಹೇರುತ್ತಿರುತ್ತವೆ. ನ್ಯಾಯಾಂಗ ವ್ಯವಸ್ಥೆ ಕೂಡ ಇದರಿಂದ ಹೊರತಾಗಿರುವುದಿಲ್ಲ. ಅತಿ ಶ್ರೀಮಂತನೊಬ್ಬ ತಾನು ವಾಸಿಸುವ ದೇಶದ ಉಚ್ಚ ನ್ಯಾಯಾಲಯದಲ್ಲಿ ಬೆಳಗಾಗುವುದರಲ್ಲಿ ನ್ಯಾಯ ಪಡೆಯಬಲ್ಲನಾದರೆ, ನಿರ್ಗತಿಕನೂ, ಬಡವನೂ ಆದವನೊಬ್ಬ ತಾನು ವಾಸಿಸುವ ಪ್ರದೇಶದ ಅಧೀನ ನ್ಯಾಯಾಲಯದಿಂದ ತೀರ್ಪು ಪಡೆಯಲು ಜೀವಮಾನವೆಲ್ಲ ಕಾಯಬೇಕಾಗಿ ಬರಬಹುದು.

ಈ ಬಗೆಯ ಅಸಮಾನತೆ ಮತ್ತು ಶೋಷಣೆ ಬೆಳೆಯುತ್ತ ಹೋದಂತೆ ವ್ಯವಸ್ಥೆಯ ಭಾಗವೇ ಆದ ಎಲ್ಲ ಬಗೆಯ ದುಡಿಯುವ ಜನಗಳ ಗುಂಪು ವ್ಯವಸ್ಥೆಯ ಕುರಿತು ಅರಿವು ಪಡೆಯುತ್ತ, ಅಸಮಾಧಾನ ಹೊರ ಹಾಕತೊಡಗುತ್ತಾರೆ. ಅವರಲ್ಲಿ ವರ್ಗ ಪ್ರಜ್ಞೆ ಬೆಳೆಯತೊಡಗುತ್ತದೆ. ಸಮಾಜದ ಎಲ್ಲ ವರ್ಗಗಳು ಸಂಘಟಿತರಾದಾಗ ಹೊಸ ವ್ಯವಸ್ಥೆ ರೂಪುಗೊಳ್ಳುತ್ತದೆ.

ಇಂತಹ ಅರಿವು ಮೂಡಲು ಸಮಾಜವನ್ನು ಮುಕ್ತ ಮನಸ್ಸಿನಿಂದ ಅಧ್ಯಯನ ನಡೆಸಬೇಕಾಗುತ್ತದೆ. ಇದಕ್ಕೆ ನಾವು ಜೀವಿಸುವ ವಸ್ತುಲೋಕದಲ್ಲಿ ಆಗುತ್ತಿರುವ ಕ್ಷಿಪ್ರ ಮತ್ತು ಮಂದಗತಿಯ ಬದಲಾವಣೆಗಳು, ಈ ಬದಲಾವಣೆಗಳಿಗೆ ಕಾರ್ಯಕಾರಣಗಳೇನು, ಅದರ ಹಿಂದಿನ ತರ್ಕವೇನು? ಇತ್ಯಾದಿಗಳನ್ನು ಮನನ ಮಾಡಬೇಕಾಗುತ್ತದೆ. ಸಮಾಜವು ವರ್ತಮಾನದಲ್ಲಿ ಹೇಗೆ ವರ್ತಿಸುತ್ತಿದೆ; ಗತದಲ್ಲಿ ಹೇಗೆ ವರ್ತಿಸಿತ್ತು ಮತ್ತು ಭವಿಷ್ಯದಲ್ಲಿ ಅದನ್ನು ಸರಿ ಪಡಿಸಲು ಏನು ಮಾಡಬೇಕು? ಎಂಬುದನ್ನು ಅರಿತುಕೊಳ್ಳಬೇಕಾಗುತ್ತದೆ. ಆದರೆ, ತಿಳಿದುಕೊಳ್ಳುವುದರಿಂದಷ್ಟೇ ಬದಲಾವಣೆ ಸಂಭವಿಸುವುದಿಲ್ಲ. ಅದಕ್ಕಾಗಿ ಕೆಲಸ ಮಾಡುತ್ತ, ಖಚಿತ ಉಪಕ್ರಮಗಳನ್ನು ರೂಪಿಸುತ್ತ ಹೋಗಬೇಕಾಗುತ್ತದೆ. ಸಣ್ಣಪುಟ್ಟ ಕೆಲಸಗಳ ಪರಿಣಾಮವು ಶೇಖರಣೆಯಾಗುತ್ತ ಒಂದೊಮ್ಮೆ ಒತ್ತಡ ತೀವ್ರವಾದಾಗ ಸಮಾಜದಲ್ಲಿ ಗುಣಾತ್ಮಕ ಬದಲಾವಣೆ ಗೋಚರಿಸಬಲ್ಲುದು. ಇದನ್ನೇ ಮಾರ್ಕ್ಸ್‌ವಾದವು 'ಪ್ರಮಾಣದ ಮೊತ್ತ ಹೆಚ್ಚಾದಂತೆ ಹೋದಂತೆಲ್ಲ ಗುಣಾತ್ಮಕ ಫಲಿತಾಂಶ ಗೋಚರಿಸಬಲ್ಲುದು', ಎಂದು ಹೇಳುತ್ತದೆ. ಇದಕ್ಕೆ ಎರಡು ಸರಳ ಉದಾಹರಣೆ ಕೊಡಬಹುದಾದರೆ, ದ್ರವರೂಪದಲ್ಲಿರುವ ನೀರನ್ನು ಕುದಿಸುತ್ತ ಹೋದಂತೆಲ್ಲ ಅದು ಆವಿಯಾಗಿ, ಮೊದಲಿದ್ದ ಸ್ಥಿತಿಗಿಂತ ಬೇರೊಂದು ರೂಪವನ್ನು ಪಡೆಯಬಲ್ಲುದು. ಒಂದು ಸಣ್ಣ ಸ್ಥಳದಲ್ಲಿ, ಒಂದು ಸಣ್ಣ ಸಂಗತಿಗಾಗಿ ಆರಂಭವಾಗುವ ಪ್ರತಿರೋಧವು ಗ್ರಾಮಪಂಚಾಯಿತಿ, ಹೋಬಳಿ, ತಾಲೂಕು, ಜಿಲ್ಲೆ, ಕೊನೆಗೆ ರಾಜ್ಯದವರೆಗೆ ಹಬ್ಬಿ, ಅಸ್ಥಿರಗೊಂಡ ಸರ್ಕಾರ ಜನಪರವಾದ ಶಾಸನಾತ್ಮಕ ಬದಲಾವಣೆಯನ್ನು ತರಬಹುದು. ಗ್ರಾಮದಿಂದ ಆರಂಭವಾದ 'ಪ್ರಮಾಣ'ವು ರಾಜ್ಯಕ್ಕೆ ಬರುವಷ್ಟರಲ್ಲಿ ಭಾರೀ 'ಪ್ರಮಾಣ'ವಾಗಿ ಮಾರ್ಪಟ್ಟು 'ಗುಣಾತ್ಮಕ' ಬದಲಾವಣೆಗೆ ಕಾರಣವಾಗಬಲ್ಲುದು.

ಸಂಘಟನೆ, ವರ್ಗ ಸಂಘರ್ಷ ಮತ್ತು ಹಳೆಯ ವ್ಯವಸ್ಥೆಯ ಬದಲಾವಣೆ ಮಾರ್ಕ್ಸ್ ಹೇಳುವ ಅಂತಿಮ ಸೂತ್ರವಾಗಿದೆ. ಇಲ್ಲಿ ಎಲ್ಲ ಬಗೆಯ ಕಾರ್ಮಿಕರು, ಆಯಾ ಕಾಲಘಟ್ಟದಲ್ಲಿ ಹುಟ್ಟುವ ಹೊಸ ವರ್ಗಗಳು, ಕೃಷಿಕರು, ಮಹಿಳೆಯರು ಮತ್ತು ಸಮಾಜದ ಬದಲಾವಣೆ ಬಯಸುವ ಎಲ್ಲ ವರ್ಗದವರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವರು. ಹೊಸ ವ್ಯವಸ್ಥೆಯನ್ನು ಅನುಷ್ಠಾನಗೊಳಿಸುವರು. ಈ ವ್ಯವಸ್ಥೆಯನ್ನು ಕಾರ್ಮಿಕ ವರ್ಗದ ಸರ್ವಾಧಿಕಾರವೆಂದು ಕರೆಯಲಾಗುತ್ತದೆ.

ಕಾರ್ಲ್ ಮಾರ್ಕ್ಸ್ ಮತ್ತು ಏಂಗೆಲ್ಸ್ ತಮ್ಮ ತಾರುಣ್ಯದಲ್ಲಿ ಜಂಟಿಯಾಗಿ ರಚಿಸಿದ ಕಮ್ಯೂನಿಸ್ಟ್ ಪ್ರಣಾಳಿಕೆ ಅವರ ಆ ಕಾಲದ ರಾಜಕೀಯ ಆದರ್ಶ ಮತ್ತು ನಂಬಿಕೆಗಳನ್ನು ಪ್ರತಿನಿಧಿಸುವುದು. ಮಾರ್ಕ್ಸ್ ತೀರಿಕೊಂಡಿದ್ದು ತನ್ನ65ನೆಯ ವಯಸ್ಸಿನಲ್ಲಿ, ಲಂಡನ್‌ನಲ್ಲಿ.

(ಕೇಶವ ಮಳಗಿಯವರ ಬ್ಲಾಗ್ ನಿಂದ ಸಂಗ್ರಹಿತ)

ಸಂಗ್ರಹ: ಸಂತೋಷ್ ಕುಮಾರ್, ಸುರತ್ಕಲ್

ಚಿತ್ರ: ಇಂಟರ್ನೆಟ್ ತಾಣ