ಹೊಸ ವರ್ಷವೆಂದರೆ ಕ್ಯಾಲೆಂಡರ್ ಬದಲಾವಣೆ ಮಾತ್ರವೇ?

ಹೊಸ ವರ್ಷವೆಂದರೆ ಕ್ಯಾಲೆಂಡರ್ ಬದಲಾವಣೆ ಮಾತ್ರವೇ?

ಪ್ರತೀ ವರ್ಷ ಡಿಸೆಂಬರ್ ತಿಂಗಳು ಅಂತ್ಯವಾಗುವ ಸಮಯಕ್ಕೆ ಬರಲಿರುವ ಹೊಸ ವರ್ಷದ ಬಗ್ಗೆ ವಿವಿಧ ಚರ್ಚೆಗಳು ಆರಂಭವಾಗುತ್ತವೆ. ಹಿಂದೂ ಸಂಪ್ರದಾಯದ ಪ್ರಕಾರ ಯುಗಾದಿಯೇ ನಮಗೆ ಹೊಸ ವರ್ಷ. ಯುಗಾದಿಯಲ್ಲಿ ಎರಡು ಯುಗಾದಿ ಸೌರಮಾನ ಮತ್ತು ಚಂದ್ರಮಾನ. ಉತ್ತರ ಭಾರತದಲ್ಲಿ ಬಹಳಷ್ಟು ಕಡೆ ದೀಪಾವಳಿ ಹಬ್ಬವೇ ಹೊಸ ವರ್ಷದ ಆರಂಭ. ಇನ್ನೂ ಕೆಲವೆಡೆ ಇತರೆ ಕೆಲವು ಹಬ್ಬಗಳನ್ನು ವರ್ಷದ ಮೊದಲ ದಿನ ಎಂದು ಆಚರಿಸುತ್ತಾರೆ. ಹೀಗೆ ಭಾರತ ದೇಶದ ವಿವಿದೆಡೆ ವಿವಿಧ ರೀತಿಯ ಹೊಸ ವರ್ಷಗಳು. ಹಾಗಾಗಿ ವಿವಿಧತೆಯಲ್ಲಿ ಏಕತೆ ಇರುವುದು ಜನವರಿ ಒಂದರಂದು ಕ್ಯಾಲೆಂಡರ್ ಬದಲಾವಣೆಗೆ ಮಾತ್ರ ಎನ್ನುವಂತೆ ಭಾಸವಾಗುತ್ತದೆ ! 

ಏನಾದರಾಗಲಿ, ೨೦೨೩ ಕಳೆದು ೨೦೨೪ ಕ್ಯಾಲೆಂಡರ್ ವರ್ಷ ಬಂದಿದೆ. ಪ್ರತೀ ದಿನ ಹೊಸ ದಿನವೇ, ನಾವೇ ಅದಕ್ಕೆ ಹೊಸ ಹೊಸ ಹೆಸರು ನೀಡುತ್ತಾ ಬಂದಿದ್ದೇವೆ. ನಮ್ಮ ಬದುಕಿನಲ್ಲಿ ಹೊಸತನವನ್ನು ತರುವ ತೀರ್ಮಾನ ಮಾಡಿದರೆ ಅದನ್ನು ಯಾವ ದಿನದಿಂದ ಬೇಕಾದರೂ ಆಚರಣೆಗೆ ತರಬಹುದು. ಆದರೆ ಬಹುತೇಕರ ತೀರ್ಮಾನಗಳು ಜನವರಿ ೧ ರಂದೇ ಪ್ರಾರಂಭವಾಗುತ್ತದೆ. ಹೊಸ ವರ್ಷದಿಂದ ಮದ್ಯವನ್ನು ಕುಡಿಯುವುದಿಲ್ಲ, ಸಿಗರೇಟು ಸೇದುವುದನ್ನು ಕಡಿಮೆ ಮಾಡುತ್ತೇನೆ, ಬೆಳಿಗ್ಗೆ ತಪ್ಪದೇ ವಾಕಿಂಗ್ ಮಾಡುತ್ತೇನೆ, ಯೋಗ ತರಭೇತಿಗೆ ಹೋಗುತ್ತೇನೆ, ಇನ್ನು ಮಾಂಸಹಾರ ತಿನ್ನುವುದಿಲ್ಲ, ಹಳೆಯ ಪ್ರೇಯಸಿ/ಪ್ರಿಯಕರನನ್ನು ನೆನಪು ಮಾಡಿಕೊಳ್ಳುವುದಿಲ್ಲ, ಕಾರ್ ಕಲಿಯುತ್ತೇನೆ, ಹಿರಿಯರಿಗೆ ಗೌರವ ಕೊಡುತ್ತೇನೆ, ಆರೋಗ್ಯ ವಿಮೆ, ಜೀವ ವಿಮೆ ಮಾಡಿಕೊಳ್ಳುತ್ತೇನೆ, ಅಪ್ಪ ಅಮ್ಮನನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುತ್ತೇನೆ, ತಿಂಗಳಿಗೊಂದು ಪುಸ್ತಕ ಓದುತ್ತೇನೆ/ ಖರೀದಿಸುತ್ತೇನೆ, ಮಕ್ಕಳಿಗೆ ಹೊಡೆಯೋದಿಲ್ಲ, ಹೆಂಡತಿಗೆ ಚಿನ್ನ ತೆಗೆದುಕೊಡುತ್ತೇನೆ... ಹೀಗೆಲ್ಲಾ ಅದು ಮಾಡುತ್ತೇನೆ, ಇದು ಮಾಡುವುದಿಲ್ಲ ಎನ್ನುವ ನೂರೆಂಟು ನಿರ್ಧಾರಗಳನ್ನು ನಮ್ಮ ಮೇಲೆಯೇ ಹೇರಿಕೊಳ್ಳುತ್ತೇವೆ. ಆದರೆ ಅದೇ ವರ್ಷದ ಕೊನೆಯಲ್ಲಿ ಅಂದರೆ ಡಿಸೆಂಬರ್ ತಿಂಗಳಿನಲ್ಲಿ ಈ ನಿರ್ಧಾರಗಳಲ್ಲಿ ನಾವು ಯಶಸ್ವಿಯಾಗಿ ಪೂರೈಸಿದ ತೀರ್ಮಾನಗಳ ಬಗ್ಗೆ ಪರಾಮರ್ಶೆ ಮಾಡಿಕೊಳ್ಳುವುದೇ ಇಲ್ಲ. ಅಪರೂಪಕ್ಕೆ ಕೆಲವರು ಕೆಲವೊಂದು ತೀರ್ಮಾನಗಳನ್ನು ಧೃಢವಾಗಿ ಕೈಗೊಂಡು ಅದರಂತೆಯೇ ನಡೆಯುತ್ತಾರೆ. ಮತ್ತೆ ಕೆಲವರು ಹೊಸ ವರ್ಷ ಬರುವ ತನಕ ಕಾಯುವುದೇ ಇಲ್ಲ. ತಕ್ಷಣಕ್ಕೆ ತೀರ್ಮಾನ ಕೈಗೊಳ್ಳುತ್ತಾರೆ, ಮತ್ತೆ ಅದರಂತೆಯೇ ನಡೆದುಕೊಳ್ಳುತ್ತಾರೆ. 

ಕ್ಯಾಲೆಂಡರ್ ಬದಲಾವಣೆಯ ವಿಷಯ ಪ್ರಸ್ತಾಪವಾಗಿರುವ ಕಾರಣ ನಾನು ಅಪರೂಪದ ಎರಡು ಕ್ಯಾಲೆಂಡರ್ ಬಗ್ಗೆ ನಿಮಗೆ ಹೇಳ ಹೊರಟಿದ್ದೇನೆ. ಈಗಾಗಲೇ ನೂರಾರು ಬಗೆಯ ದಿನದರ್ಶಿಕೆ ಅರ್ಥಾತ್ ಕ್ಯಾಲೆಂಡರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಶತಮಾನ ಕಂಡ ಮಂಗಳೂರಿನ ಖ್ಯಾತ ಶಾರದಾ ಕ್ಯಾಲೆಂಡರ್, ಪ್ರಸಿದ್ಧ ಬೆಂಗಳೂರು ಪ್ರೆಸ್ ನ ಮಲ್ಲಿಗೆ ಕ್ಯಾಲೆಂಡರ್, ಬೆಂಗಳೂರು ಮುದ್ರಣಾಲಯ ಕ್ಯಾಲೆಂಡರ್, ಕಾಲ ನಿರ್ಣಯ, ಮಹಾಲಕ್ಷ್ಮಿ ವಾರ್ಷಿಕ ಪಂಚಾಂಗ ಮುಂತಾದ ದಿನದರ್ಶಿಗಳು ಹಲವಾರು ದಶಕಗಳಿಂದ ನಮ್ಮ ಮನೆಯ ಗೋಡೆಯನ್ನು ಅಲಂಕರಿಸುತ್ತಾ ಬಂದಿವೆ. ಬ್ಯಾಂಕ್, ಸೊಸೈಟಿ, ಸಂಘಗಳು, ಖಾಸಗಿ ಸಂಸ್ಥೆಗಳು, ವಿವಿಧ ಕಂಪೆನಿಗಳು ವಿವಿಧ ರೀತಿಯ ಕ್ಯಾಲೆಂಡರ್ ಗಳನ್ನು ಹೊಸ ವರ್ಷದ ಪ್ರಾರಂಭದಲ್ಲಿ ಉಚಿತವಾಗಿ ಗ್ರಾಹಕರಿಗೆ ನೀಡುತ್ತಾರೆ. ನಾನು ಹೇಳ ಹೊರಟಿರುವ ಎರಡು ಕ್ಯಾಲೆಂಡರ್ ಗಳೆಂದರೆ ಎರಡು ದಶಕಗಳಿಂದ ಮಾರುಕಟ್ಟೆಯಲ್ಲಿರುವ ‘ತುಳುನಾಡು ಪಂಚಾಂಗ' ಮತ್ತು ಈ ವರ್ಷ ಹೊಸದಾಗಿ ಅನ್ವೇಷಿಸಲಾಗಿರುವ ‘ಭಾರತೀಯ ಪಂಚಾಂಗ ಕ್ಯಾಲೆಂಡರ್'.

ತುಳುನಾಡು ಪಂಚಾಂಗ: ಸುಮಾರು ಎರಡು ದಶಕಗಳಿಂದ ವರ್ಣರಂಜಿತವಾಗಿ ಮುದ್ರಿತವಾಗುತ್ತಿರುವ ಕ್ಯಾಲೆಂಡರ್ ಇದು. ಅಂದಿನ ಖ್ಯಾತ ಜಾಹೀರಾತು ಸಂಸ್ಥೆ, ದಿ. ಸುಧೀರ್ ಘಾಟೆ ಅವರ ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್ ಪ್ರೈ ಲಿ. ಅವರು ಹೊರತರುತ್ತಿದ್ದ ಕ್ಯಾಲೆಂಡರ್ ಇದು. ಕರಾವಳಿ ಕರ್ನಾಟಕದ ಪ್ರಸಿದ್ಧ ದೇವಾಲಯಗಳ ದೇವರ ಚಿತ್ರಗಳನ್ನು ಹೊಂದಿರುತ್ತಿದ್ದ ಈ ಕ್ಯಾಲೆಂಡರ್ ತುಳು ಭಾಷೆಯಲ್ಲಿ ಮಾಹಿತಿಯನ್ನು ಒಳಗೊಂಡಿದ್ದ ಕಾರಣ ‘ತುಳುನಾಡು ಪಂಚಾಂಗ' ಎಂದು ಕರೆಯಲಾಗಿತ್ತು. ತುಳು ನಾಡಿನಲ್ಲಿ ಆರರಣೆಯಲ್ಲಿರುವ ಆಟಿ ಕಳಂಜ, ಕಂಬಳ ಮೊದಲಾದ ವಿವಿಧ ಕಾರ್ಯಕ್ರಮಗಳ ಬಗ್ಗೆ, ವಿವಿಧ ನೃತ್ಯಗಳ ಬಗ್ಗೆ, ಆಟಗಳ ಬಗ್ಗೆ ಮಾಹಿತಿಗಳನ್ನು ನೀಡುತ್ತಾ ಬಂದಿದ್ದಾರೆ. ಮ್ಯಾಗ್ನಂ ಇಂಟರ್ ಗ್ರಾಫಿಕ್ಸ್ ಸಂಸ್ಥೆ ಮುಚ್ಚಲ್ಪಟ್ಟಾಗ ಹುಬ್ಬಳ್ಳಿಯ ಗ್ಲೋಬಲ್ ಮೀಡಿಯಾ ಸಂಸ್ಥೆಯವರು ಈ ತುಳುನಾಡು ಪಂಚಾಂಗವನ್ನು ಮುದ್ರಿಸುವ ಹೊಣೆಹೊತ್ತುಕೊಂಡಿತ್ತಾರೆ. ಕಳೆದ ಕೆಲವು ವರ್ಷಗಳಿಂದ ಬಹಳ ಸೊಗಸಾಗಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಯ ಪ್ರಮುಖ ಯಾತ್ರಾ ಸ್ಥಳಗಳ ದೇವರುಗಳ ಚಿತ್ರಗಳನ್ನು ತಮ್ಮ ಕ್ಯಾಲೆಂಡರ್ ನಲ್ಲಿ ಮುದ್ರಿಸುತ್ತಾ ಬಂದಿದ್ದು, ಶೃದ್ಧಾಳು ಭಕ್ತರ ಆಕರ್ಷಣೆ ಮತ್ತು ಬೇಡಿಕೆಗೆ ಕಾರಣವಾಗಿದೆ.

೨೦೨೪ರ ಕ್ಯಾಲೆಂಡರ್ ಶಿವನ ಆಲಯಗಳಾದ ಶ್ರೀ ನರಹರಿ ಪರ್ವತ, ಬಂಟ್ವಾಳ ಸದಾಶಿವ ದೇವಸ್ಥಾನ, ಅದ್ಯಪಾಡಿ, ಶ್ರೀ ಆದಿನಾಥೇಶ್ವರ ದೇವಸ್ಥಾನ, ಶ್ರೀ ಪಂಚಲಿಂಗೇಶ್ವರ ದೇವಸ್ಥಾನ, ಶರವು ಶ್ರೀ ಶರಭೇಶ್ವರ ದೇವಸ್ಥಾನ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನ, ಉಡುಪಿ ಶ್ರೀ ಚಂದ್ರಮೌಳೀಶ್ವರ ದೇವಸ್ಥಾನ, ತಣ್ಣೀರುಪಂತ ರುದ್ರಗಿರಿ ಶ್ರೀ ಮೃತ್ಯುಂಜಯ ದೇವಸ್ಥಾನ, ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನ, ಶ್ರೀ ಶಿಶಿಲೇಶ್ವರ ದೇವಸ್ಥಾನಗಳ ಮೂಲ ವಿಗ್ರಹದ ನೈಜ ಅಲಂಕಾರದ ಚಿತ್ರಣವನ್ನು ಹೊಂದಿದೆ. ಈ ಕ್ಯಾಲೆಂಡರ್ ಗೆ ವಿವಿಧ ರಾಜ್ಯಗಳಿಂದ ಮತ್ತು ವಿದೇಶಗಳಿಂದಲೂ ಬೇಡಿಕೆ ಇದೆ. ಹಲವಾರು ಖಾಸಗಿ ಸಂಸ್ಥೆಗಳು ತಮ್ಮ ಪ್ರಚಾರಕ್ಕೆ ಈ ಕ್ಯಾಲೆಂಡರ್ ಅನ್ನು ಜಾಹೀರಾತಿನ ರೂಪದಲ್ಲಿ ಬಳಸಿಕೊಳ್ಳುತ್ತಾರೆ. (ಮಾಹಿತಿಗಾಗಿ : 9480411185) 

ಭಾರತೀಯ ಪಂಚಾಂಗ ಕ್ಯಾಲೆಂಡರ್: ಪ್ರತೀ ವರ್ಷ ಮಾರುಕಟ್ಟೆಗೆ ವಿವಿಧ ಬಗೆಯ ಪಂಚಾಂಗಗಳು ಬರುತ್ತವೆ. ಶ್ರೀ ಸಾಮಾನ್ಯನಿಗೆ ಪಂಚಾಂಗ ಓದುವುದು ಕಬ್ಬಿಣದ ಕಡಲೆ ಇದ್ದ ಹಾಗೆ. ಇದನ್ನು ಗಮನಿಸಿದ ಉಡುಪಿ ಜಿಲ್ಲೆಯ ನಿವಾಸಿ ಶ್ರೀ ಕೇಶವ ಮೆಹೆಂದಳೆ (ರಿಷಿ) ಎಂಬ ಇಂಜಿನಿಯರ್ ಜ್ಯೋತಿಷ್ಯ ಮತ್ತು ಸಂಸ್ಕೃತದ ಮಾಹಿತಿಗಳನ್ನು ಕಲಿತು ಇಂಗ್ಲಿಷ್ ಪದ್ಧತಿಯ ಗ್ರೆಗೊರಿಯನ್ ಕ್ಯಾಲೆಂಡರ್ ಗೆ ಪರ್ಯಾಯವಾಗಿ ‘ಭಾರತೀಯ ಪಂಚಾಂಗ ಕ್ಯಾಲೆಂಡರ್' ಅನ್ನು ಹೊರತಂದಿದ್ದಾರೆ. ಇದನ್ನು ಉಳಿದ ಕ್ಯಾಲೆಂಡರ್ ನಂತೆ ಗೋಡೆಗೇ ತೂಗು ಹಾಕಬಹುದು. ಆದರೆ ಅದರಲ್ಲಿ ಅಡಕವಾಗಿರುವ ಮಾಹಿತಿಗಳು ಮಾತ್ರ ಪಕ್ಕಾ ಪಂಚಾಂಗದಂತೇ ಇವೆ.  ಅವರೇ ಹೇಳಿಕೊಂಡಂತೆ ಇದೊಂದು ‘ಟೂ ಇನ್ ಒನ್’ ಕ್ಯಾಲೆಂಡರ್. ೨೦೨೩ರಲ್ಲೇ ಈ ಬಗ್ಗೆ ಯೋಚನೆ ಮಾಡಿ ಒಂದು ಪಂಚಾಂಗ ಕ್ಯಾಲೆಂಡರ್ ಅನ್ನು ಕೇಶವ ಮೆಹೆಂದಳೆ ಅವರು ತಯಾರು ಮಾಡಿದ್ದರಂತೆ. ಆದರೆ ಆ ಸಮಯ ಸ್ವಲ್ಪ ತಡವಾದುದರಿಂದ ಮಾರುಕಟ್ಟೆಗೆ ಹಾಕಲಾಗಿರಲಿಲ್ಲವಂತೆ. ಆದರೆ ಈ ವರ್ಷ ಸರಿಯಾಗಿ ಹೊಸ ವರ್ಷಕ್ಕೆ ಮೊದಲೇ ಕ್ಯಾಲೆಂಡರ್ ಪಂಚಾಂಗ ಮಾರುಕಟ್ಟೆಗೆ ಬರುವಂತೆ ನೋಡಿಕೊಂಡಿದ್ದಾರೆ. 

ಈ ಕ್ಯಾಲೆಂಡರ್ ತಯಾರಿಕೆಗೆ ಕಾರಣವೆಂದರೆ ಕೊರೊನಾ ಸಮಯದ ಲಾಕ್ ಡೌನ್ ಎನ್ನುತ್ತಾರೆ ಕೇಶವರು. ಏಕೆಂದರೆ ಕೆಲಸವಿಲ್ಲದೇ ಮನೆಯಲ್ಲೇ ಇದ್ದ ಸಮಯದಲ್ಲಿ ಅವರು ಸಂಸ್ಕೃತ ಕಲಿಕೆ, ಜ್ಯೋತಿಷ್ಯ ಕಲಿಕೆ ಮೊದಲಾದ ಆನ್ ಲೈನ್ ತರಗತಿಗಳಿಗೆ ಸೇರಿಕೊಳ್ಳುತ್ತಾರೆ. ಹೀಗೆ ಅವರು ಪಂಚಾಂಗದ ಬಗೆಗಿನ ಪಟ್ಟುಗಳನ್ನೆಲ್ಲಾ ಕರಗತ ಮಾಡಿಕೊಂಡು ಕ್ಯಾಲೆಂಡರ್ ನಲ್ಲಿ ಹಬ್ಬ, ಪೂಜೆ, ಏಕಾದಶಿ, ವಿಶೇಷ ದಿನಗಳು, ಗ್ರಹಣ, ಸೂರ್ಯೋದಯ-ಅಸ್ತ ಕಾಲ, ಚಂದ್ರೋದಯ ಸಮಯ, ವಿಶೇಷ ದಿನಗಳ ಬಗ್ಗೆ ಸಚಿತ್ರ ಮಾಹಿತಿ, ಆಯಾ ತಿಂಗಳ ವಿಶೇಷತೆಗಳು, ಸಂವತ್ಸರ, ತುಳು ತಿಂಗಳುಗಳ ಹೆಸರು ಇತ್ಯಾದಿಗಳ ಬಗ್ಗೆ ಮಾಹಿತಿ ಇದೆ. ಕ್ಯಾಲೆಂಡರ್ ಅನ್ನು ಬಳಸುವ ಬಗ್ಗೆ ಇವರೇ ಮಾಡಿದ ವಿಡಿಯೋ ಮುಖಾಂತರವೂ ತಿಳಿದುಕೊಳ್ಳಬಹುದು.

ಪಂಚಾಂಗ ಕ್ಯಾಲೆಂಡರ್ ಅನ್ನು ಯಾವ ಸಮಯದಿಂದ ಪ್ರಾರಂಭ ಮಾಡಬೇಕು ಎನ್ನುವ ಗೊಂದಲ ಕೇಶವ ಮೆಹೆಂದಳೆಯವರಿಗೂ ಇತ್ತಂತೆ. ಕೊನೆಗೆ ಎಲ್ಲರೂ ಸುಲಭವಾಗಿ ಬಳಸುವ ಜನವರಿ-ಡಿಸೆಂಬರ್ ಆಧಾರಿತ ಕ್ಯಾಲೆಂಡರ್ ರೀತಿ ತಯಾರಿಸಿದರೆ ಉತ್ತಮ ಎಂಬ ನಿರ್ಧಾರ ಮಾಡಿಕೊಂಡು ಆ ಪ್ರಕಾರ ‘ಭಾರತೀಯ ಪಂಚಾಂಗ ಕ್ಯಾಲೆಂಡರ್’ ತಯಾರಿಸಿದ್ದಾರೆ. ಬಹುವರ್ಣದಲ್ಲಿ ಮುದ್ರಣ ಮಾಡಿಸಿರುವ ಕಾರಣ ಪ್ರತಿಯೊಂದು ಮಾಹಿತಿಯನ್ನು ಸ್ಪಷ್ಟವಾಗಿ ಪರಿಶೀಲಿಸಬಹುದಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗೆ ಕೇಶವ ಮೆಹೆಂದಳೆ (ಮೊ: 8217644913) ಅವರನ್ನು ಸಂಪರ್ಕಿಸಬಹುದು.

(ಮಾಹಿತಿ ಕೃಪೆ: ಭಾರತೀಯ ಪಂಚಾಂಗ ಕ್ಯಾಲೆಂಡರ್ - ಶ್ರೀ ಶ್ರೀವತ್ಸ ಜೋಶಿ ಇವರ ಅಂಕಣ ಬರಹ - ಡಿಸೆಂಬರ್ ೧೦, ೨೦೨೩, ವಿಶ್ವವಾಣಿ ಪತ್ರಿಕೆ )