ಹೊಸ ವಾಚಿಗೊಂದು ಕತೆ...

ಹೊಸ ವಾಚಿಗೊಂದು ಕತೆ...

ಬರಹ

ಸಣ್ಣವನಿದ್ದಾಗಿನಿಂದ ನಮ್ಮ ಮನೇಲಿ ನಾನು "ಮಲ್ಲಿಗೆ ಬುಟ್ಟಿ". ಚಿತ್ರದುರ್ಗದಲ್ಲಿದ್ದ ಸ್ಕೂಲಿನ ಪಕ್ಕ ಅದ್ಯಾವುದೋ ಧೂಳು ಸಿಡಿಸುವ ಕ್ವಾರಿ (ಕಲ್ಲು ಕೆತ್ತುವ ಫ್ಯಾಕ್ಟರಿ) ಇದ್ದದ್ದು ಜೀವನದುದ್ದಕ್ಕೂ ಬೆನ್ನತ್ತಿದ ಬೇತಾಳವಾಗಿ ಹೋಯ್ತು. (ಚಿತ್ರದುರ್ಗವೇ ಧೂಳುಮಯ, ಇನ್ನು ಕ್ವಾರಿ ಪಕ್ಕದಲ್ಲಿರುವ ಶಾಲೆಯ ವಿದ್ಯಾರ್ಥಿಗಳ ಪೇಚಾಟ ಹೇಳಿತೀರದ್ದು. ಶಿವಮೊಗ್ಗ ರೋಡಿನಲ್ಲಿದ್ದ ಶಾಲೆಯ ಸುತ್ತಲೂ ಬರೀ ಧೂಳೋ ಧೂಳು. ರೋಡಿನ ಆಚೆಗೆ ಇದ್ದ ಹೆಚ್ಚು ಧೂಳಿಲ್ಲದ ಆಟದ ಮೈದಾನಕ್ಕೆ ಕೂಡ ಹೋಗುವಂತಿರಲಿಲ್ಲ - ಅತ್ತಿತ್ತ ನೋಡದೆ ರಸ್ತೆ ದಾಟುತ್ತೇವೆಂದು "ಕೋಟೆ ಕಡೆಯಿಂದ ಚಿರತೆ ಬರುತ್ತದೆ" ಎಂದು ಹೆದರಿಸಿಬಿಟ್ಟಿದ್ದರು. ಸುತ್ತಲೂ ಕಲ್ಲು ಬಂಡೆಗಳ ಗುಡ್ಡಗಳೂ ಹಾಗೆಯೇ ಹೆದರಿಕೆ ತರಿಸುವಂತಿತ್ತು ಕೂಡ).

ಬ್ರಾಂಕೈಟಿಸ್ ಇತ್ತೀಚೆಗೆ ಸಾಮಾನ್ಯವಾದ್ರೂ ಆಗ ಹೆಚ್ಚು ಹುಡುಗರಿಗಿರುತ್ತಿರಲಿಲ್ಲ. ಈಗಿನಂತೆ ಏರೆಸಾಲ್ ಸ್ಪ್ರೇ ಕೂಡ ಇರುತ್ತಿರಲಿಲ್ಲ. ಒಂದಷ್ಟು ಧೂಳು ನುಸುಳಿದರೂ ೧೮ "ಆssಕ್ಷೀ" ಸುರಿಸುತ್ತಿದ್ದೆ. ಹೀಗಾಗಿ ಬೇರೆ ಊರಿನ ಹೊಸ ಶಾಲೆಗೆ ಸೇರುವ ಸಮಯದೊತ್ತಿಗೆ ನಾನು ಬಹಳ 'sensitive' ಆಗಿಬಿಟ್ಟಿದ್ದೆ.

ಆ sensitivity ಇನ್ನೂ ಹೋಗಿಲ್ಲ. ಈಗಲೂ ರೂಮಿನಲ್ಲಿ ಸ್ವಲ್ಪ ಧೂಳಿದ್ದರೂ ಒಂದೆರಡು "ಆssಕ್ಷೀ" ಗ್ಯಾರಂಟಿ. ಮೆಜೆಸ್ಟಿಕ್ ಒಂದ್ಸಾರಿ ಸುತ್ತು ಹೊಡೆದು ಬಂದ್ರೂ ಸಾಕು ಬೆಳಗಾಗೆದ್ದು ೨೦ "ಆssಕ್ಷೀ" ಬರದೇ ತೀರದು! ನೆಶ್ಯ ಕೂಡ ಬೇಡವಾದಷ್ಟು ಶೀನು. ವ್ಯಾಕ್ಯೂಮ್ ಕ್ಲೀನರ್ ಹಿಡಿದು ರೂಮು ಸ್ವಚ್ಛ ಮಾಡುತ್ತಿದ್ದರೆ ನಮ್ಮ ಮನೆಯಲ್ಲಿರುವವರಿಗೆಲ್ಲ *ತಡೆಯಲಾಗದಷ್ಟು* ನಗು. "ಹೋಗಿ ಅಮೇರಿಕದಲ್ಲಿ ಇದ್ದುಬಿಡು" ಎಂಬ ಹಾಸ್ಯ ಅಪ್ಪನದ್ದು. "ಅಮೇರಿಕದಲ್ಲಿ ಹೇಗಿದ್ದೀತು? ಅಲ್ಲಿ ಧೂಳಿರಲಿಕ್ಕಿಲ್ಲವೆ? ಹಾಳಾದ್ದವರು ನನಗೆ ವೀಸ ಕೊಟ್ಟಿದ್ದಿದ್ದರೆ ನಾನೇ ಇಷ್ಟೊತ್ತಿಗೆ ನೋಡಿಬಂದಿರುತ್ತಿದ್ದೆ" ಎಂಬೆಲ್ಲ ಆಲೋಚನೆಯಿಂದ ಪ್ರಾರಂಭವಾಗಿ ಮನಸ್ಸು ಎತ್ತೆತ್ತಲೋ ತಿರುಗಾಡಿ ವಾಪಸ್ ವ್ಯಾಕ್ಯೂಮ್ ಬೇಗ ಮುಗಿಸಿ ಮುನ್ನಡೆಯುವಷ್ಟಕ್ಕೆ ಬಂದರಾಯಿತು -- ಅಂದಿನ ಆ ಸೀನು (sceneಉ ಮತ್ತು ಶೀನಿನ sceneಉ) ಮುಗಿದಂತೆ.

ಕಳೆದ ವರ್ಷ ಮೊಟ್ಟ ಮೊದಲ ಬಾರಿಗೆ ಅಪ್ಪ ಅಮ್ಮನ ಮಾತನ್ನೂ ಮೀರಿ, ನಮ್ಮ ನಾರ್ಥಿ ದೋಸ್ತುಗಳ ಮಿಮಿಕ್ರಿ ಮಾಡುತ್ತ ಎರಡೂ ಸಾವಿರಕ್ಕೂ ಹೆಚ್ಚು ಬೆಲೆ ಬಾಳೋ ಶೂ ತೆಗೆದುಕೊಂಡುಬಿಟ್ಟೆ! "ಹೋಗೋ ಅತ್ಲಾಗೆ, ಅದೇನ್ ಹುಡುಗರು ಮಾರಾಯ? ಸಾವಿರಗಟ್ಟಲೆ ಯಾರಾದ್ರೂ ಚಪ್ಪಲಿಗೆ ಹಾಕ್ತಾರೇನೋ?" ಅಂತ ಅಜ್ಜ ಅಣ್ಣನಿಗೆ ಒಮ್ಮೆ ಬಯ್ದದ್ದು ನೆನಪಾಗಿತ್ತು. ಆದರೂ ತೆಗೆದುಕೊಂಡಿದ್ದೆ.
ಕೆಲವೇ ದಿನಗಳು ಬಳಸಿದ್ದು - ಅಮ್ಮ ಹಾಸ್ಯ ಮಾಡುವಂತೆ "ಮಲ್ಲಿಗೆ ಬುಟ್ಟಿಯ ಪರಿಮಳ ಇಲ್ಲಿಯೂ ಬೀಸಿತ್ತು".
ಕಾಲೆಲ್ಲ ಅಲರ್ಜಿಯಾಗಿದ್ದನ್ನು ನೋಡಿದ ಡಾಕ್ಟರರು "ಲೆದರ್ ಶೂ ಉಪಯೋಗಿಸಲೇಬೇಡಿ, ಯಾವುದೇ ಲೆದರ್ ಮೇಡ್ ವಸ್ತುಗಳನ್ನುಪಯೋಗಿಸಬೇಡಿ - ನಿಮ್ಮ ಚರ್ಮಕ್ಕಾಗೋದಿಲ್ಲ" ಎಂಬ ಆಜ್ಞೆಯಿತ್ತುಬಿಟ್ಟರು! ಮನೆಯಲ್ಲಿ "ಫಾರಿನ್ನಿಂದ ಹೊಸ ಶೂ ತರಿಸಿಬಿಡು" ಎನ್ನೋ‌ ಹಾಸ್ಯ ಶುರುವಾಗಿಬಿಟ್ಟಿತ್ತು.

Timex expedition that I boughtಇದೇ ಜಾಡಿನಿಂದ ನನ್ನ ಹಳೇ ವಾಚು ಕೂಡ ಉಪಯೋಗಿಸದಂತಾದದ್ದು ಕಾಕತಾಳೀಯ. ಆ ವಾಚು ಇಂಜಿನೀಯರಿಂಗ್ ಓದುವಾಗ ಕೊಂಡದ್ದು - ಮೆಜೆಸ್ಟಿಕ್ ನಲ್ಲಿ ೮೦೦ ಕೊಟ್ಟು ಟೈಟನ್ ಶೋರೂಮಿನಲ್ಲಿ ಹಠ ಮಾಡಿ ಕೊಂಡ ವಾಚು ಅದುವರೆಗೂ ನನ್ನ ಜೀವನದಲ್ಲೇ costliest ವಾಚ್ ಆಗಿತ್ತು. ತಮಾಷೆಯೆಂದರೆ ಈ ಲೆದರ್ ವಾಚು ಚರ್ಮಕ್ಕೇನೂ ಹೆಚ್ಚು ತೊಂದರೆ ಕೊಟ್ಟಿದ್ದಿಲ್ಲ. ಬಹುಶಃ ಹೆಚ್ಚು ಉಪಯೋಗಿಸದೇ ಇದ್ದದ್ದಕ್ಕೇನೊ.

ಆದರೆ ಅದ್ಯಾಕೋ ಗಡಿಯಾರ ಚೆಂದವಾಗಿದೆ ಅಂತಲೋ, ವಾಚು ಹೆಚ್ಚು ಬಳಸದೇ ಇದ್ದದ್ದಕ್ಕೋ, ಹೊಸ ವಾಚು ಯಾರೂ ಕೊಡಿಸದೇ ಇದ್ದದ್ದಕ್ಕೋ ಅಥವ ಹೊಸತನ್ನು ಕೊಳ್ಳೋದಕ್ಕೆ ಸಮಯ, ದುಡ್ಡು ಅಥವಾ ಸೋಮಾರಿತನ - ಇವೆಲ್ಲವೂ ಮಹೂರ್ತ ರೂಪಿಸಿರಲಿಲ್ಲವೋ ಗೊತ್ತಿಲ್ಲ, ಒಟ್ನಲ್ಲಿ ಹೊಸ ವಾಚು ಕೊಂಡ್ಕೊಂಡಿರಲಿಲ್ಲ. ನಮ್ಮ ತಂದೆಯವರ ಕಾಲದಲ್ಲಿ ವಾಚು ಕೊಳ್ಳೋದು ಅಂದ್ರೆ ಬಹಳ ವಿಶೇಷ ಅಂತೆ. ಆಗಿನ ಕಾಲದಲ್ಲಿ "ಮದ್ವೇಗೆ ಏನು ತಂದುಕೊಡ್ಬೇಕು" ಅಂದ್ರೆ "ವಾಚು ಕೊಡಿಸ್ತೀರ?" ಅಂತ ಕೇಳೋದು ಸಾಮಾನ್ಯವಾಗಿತ್ತಂತೆ. ಒಂದು ರೀತಿ ವೈಡೂರ್ಯವಾಗಿತ್ತೇನೋ. ಈಗ ಮಾತ್ರ ಹೊಸ ವಾಚು ಕೊಳ್ಳೋದು ಅಷ್ಟೇನೂ exciting ವಿಷಯವಲ್ಲ.

ಇವತ್ತು ಎಷ್ಟೋ ದಿನಗಳಾದ ಮೇಲೆ ಬಸವನಗುಡಿ ಬಿಟ್ಟು (ಮುಂಚಿನಂತೆ) ಜಯನಗರಕ್ಕೆ ಲಗ್ಗೆ ಇಟ್ಟು ವಾಚು ಅಂಗಡಿಗಳನ್ನ ಸುತ್ತಿದೆವು. ನನಗೊಂದು ಹಾಗೂ ಹುಟ್ಟುಹಬ್ಬಕ್ಕೆ ಅಪ್ಪನಿಗೊಂದು ವಾಚು ಕೊಳ್ಳಬೇಕಿತ್ತು. ಮೊದಮೊದಲು ಸ್ವಾರಸ್ಯಕರವೆನಿಸಿದ "ವಾಚ್ ಹುಡುಕಾಟ" ಸಿಕ್ಕಾಪಟ್ಟೆ ಬೇಜಾರು ಕೆಲಸ ಅನ್ನಿಸಿಬಿಟ್ಟಿತು. ಮುಂಚೇನೆ ಚೆಂದ ಇರುತ್ತಿತ್ತು - ಅಪ್ಪನಿಗೆ ವಾಚು ಬೇಕು ಅಂತಂದ್ರೆ ಸಾಕು ಅವರಿಗಿಷ್ಟವಾದುದೊಂದನ್ನ ತಂದು "ಬೇಕಿದ್ದರೆ ಹಾಕ್ಕೊ, ಬೇಡದಿದ್ರೆ ಬಿಡು" ಎಂದು ಇಡುತ್ತಿದ್ದರು. ಆಗ ನನಗ್ಯಾವುದು ಇಷ್ಟ ಅನ್ನೋದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿರುತ್ತಿರಲಿಲ್ಲ.

ಗೋಲ, ಚೌಕ, octagon, hexagon - ಎಲ್ಲ ಆಕಾರಗಳು. ಗೋಲ್ಡ್, ಸಿಲ್ವರ್, ಗೋಲ್ಡ್ ಮತ್ತು ಸಿಲ್ವರ್ ಬೆರಕೆ, ಕಪ್ಪು ಮೆಟಲ್ - ಎಲ್ಲ ಬಣ್ಣಗಳು. ಡೇಟು ತೋರಿಸುವ ವಾಚುಗಳು, ಡೇಟ್ ನೊಂದಿಗೆ ದಿನವನ್ನೂ ನೆನಪಿಸುವ ವಾಚುಗಳು, ಕಾಂಪಾಸ್ ಸಿಕ್ಕಿಸಿದ ವಾಚುಗಳು, ಡಿಜಿಟಲ್ ಕಾಂಪಾಸ್ ಇರುವ ವಾಚುಗಳು - ಇವ್ಯಾವೂ ಇಲ್ಲದಿದ್ದರೂ ಸಾವಿರಗಟ್ಟಲೆ ಬೆಲೆಯಿರುವ ಸ್ವಿಸ್ ವಾಚುಗಳು - ಲೆದರ್ ಸ್ಟ್ರಾಪು (ನಾನು ಕೊಳ್ಳುವಂತಿರಲಿಲ್ಲ), ಸ್ಟೀಲ್ ಸ್ಟ್ರಾಪು ಕೊನೆಗೆ ಚಿತ್ರ ವಿಚಿತ್ರ ಮೆಟಲ್ ಸ್ಟ್ರಾಪುಗಳು - ತಲೆಯಲ್ಲಿ ಅನಿಸಿಕೆಗಳ ನಾಗಾಲೋಟ!

ಅಲ್ಲೊಂದು ಬೋಟಿಂಗ್ ಹೋಗುವುದಕ್ಕೆ ಹೇಳಿ ಮಾಡಿಸಿದ ವಾಚಂತೆ - ಕೇವಲ ೧೦,೦೦೦ ಚಿಲ್ರೆ. "ಬೋಟಿಂಗ್ ಹೋಗುವಾಗ ಹಾಕ್ಕೊಳ್ಳೋದಕ್ಕೆ - ಬಳಸಿ ನೋಡಿ" ಎಂದಳು ಬೆಡಗಿನ ಲೇಡಿ. ಆ ಕ್ಷಣದಲ್ಲಿ ನಾನು ಬೋಟಿಂಗ್ ಹೋದದ್ದು ಯಾವಾಗ ಎಂದು ಆಲೋಚಿಸಿದೆ. ಸಿಗಂಧೂರಿನಲ್ಲೊಮ್ಮೆ ಟ್ರಾಂಪಿನಲ್ಲಿ ಹೋದದ್ದು, ಮಾರಿಕಣಿವೆಯಲ್ಲೊಮ್ಮೆ ತೆಪ್ಪದಲ್ಲಿ ಹೋದದ್ದು, ಇನ್ನೆಲ್ಲೋ ವಾರಣಾಸಿಯಲ್ಲೊಮ್ಮೆ 'ಬೋಟ್' ಎಂದು ನಮಗೆ ತಿಳಿಸಲಾಗಿದ್ದ ಒಂದು ಪೆಟ್ಟಿಗೆ ಹತ್ತಿದ್ದು ಬಿಟ್ಟರೆ ಬೋಟಿನಲ್ಲಿ ಹೋದದ್ದಾಗಲಿ, ಮುಂದೆ ಹೋಗುವಂತಹ ಸನ್ನಿವೇಶಗಳಾಗಲಿ ಮನಸ್ಸಿಗೆ ಸುಳಿಯಲಿಲ್ಲ.

ಕೊನೆಗೊಂದು ವಾಚು - ನೈಲಾನ್ ಸ್ಟ್ರಾಪು, ಭಾರವೇ ಇಲ್ಲದ್ದು ಕಣ್ಣಿಗೆ ಬಿತ್ತು (ಚಿತ್ರ ನೋಡಿ). ಆದರೆ ಅದು ಅಪ್ಪನಿಗೆ ತಗೊಳ್ಳೋದಕ್ಕಾಗೋದಿಲ್ಲ. ಅಪ್ಪ ಅದನ್ನು ಹಾಕೋದಿಲ್ಲ! ಲೆದರ್ ಸ್ಟ್ರಾಪಿರುವ ವಾಚಿಗೆ ಮೋಕ್ಷ ಕೊಟ್ಟು ನನಗೇ ಕೊಂಡು ಅಲ್ಲೇ ಹಾಕಿಕೊಂಡು ಬಂದೆ. ಇನ್ನು ಮುಂದೆ ಸದಾಕಾಲ ವಾಚು ನನ್ನ ಕೈ ಅಲಂಕರಿಸಿಯೇ ಇರುತ್ತೆ (ಬಹುಶಃ). ಸಮಯ ಸಾಧಕನಲ್ಲದ, ಇರುವ ಸಮಯದಲ್ಲಿ ಏನೂ ಸಾಧಿಸದ, ಸಮಯ ಸರಿಯಾಗಿ ಬಳಸಿಕೊಳ್ಳಲು ಗೊತ್ತಿಲ್ಲದ ನನಗೆ ಸಮಯ ತೋರಿಸುವ ನನ್ನ ಹೊಸ ದೋಸ್ತು ನಾನು ಹೆಚ್ಚು ಸಮಯ ವ್ಯಯ ಮಾಡದಂತೆ ನೋಡಿಕೊಳ್ಳುತ್ತದೆ ಎಂದು ಆಶಿಸುತ್ತ ಈ ಕತೆ ಬರೆಯೋದಕ್ಕೆ ಸಮಯ ವ್ಯಯ ಮಾಡಿ ಇಲ್ಲಿ ಮುಗಿಸುತ್ತಿದ್ದೇನೆ. ಬೋರಾಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ! ;)