ಹೊಸ ಸರ್ಕಾರದ ಹೊಸ ಕಾರುಗಳು...

ಹೊಸ ಸರ್ಕಾರದ ಹೊಸ ಕಾರುಗಳು...

ಅಭಿನಂದನೆಗಳು ಮಾನ್ಯ ಮಂತ್ರಿಗಳಿಗೆ ಹೊಸ ಕಾರು ಬಂದಿದ್ದಕ್ಕೆ. All the best Enjoy. ಜನಸಾಮಾನ್ಯರು  ಮತ್ತು ಅಸಾಮಾನ್ಯರು? ಸರ್ಕಾರದ ಆಡಳಿತಗಾರರು ಮತ್ತು ಅಧಿಕಾರಿಗಳು ಹೊಸ ಕಾರು ಕೊಂಡಿದ್ದಾರೆ. ಹಿಂದಿನ ಸರ್ಕಾರ ಕಾರು ಕೊಳ್ಳುವ ಹಣಕಾಸಿನ ಮಿತಿಯನ್ನು ಏರಿಸಿತ್ತು. ಈ ಸರ್ಕಾರದಲ್ಲಿ ಅದು ಜಾರಿಯಾಗುತ್ತಿದೆ. ಪಾಪ ಅವರಿಗೆ ಹೊಸ ಕಾರುಗಳ ಅವಶ್ಯಕತೆ ಇದೆ. ಅದೇ ಕೇವಲ ನಾಲ್ಕೈದು ವರ್ಷಗಳ ಹಿಂದಿನ ಕಾರುಗಳಲ್ಲಿ ಅಡ್ಜಸ್ಟ್ ಮಾಡಿಕೊಂಡು ಓಡಾಡಲು ಅವರೇನು ಜನಸಾಮಾನ್ಯರೇ?

ಎಲ್ಲಾ ಅಧಿಕಾರ ಹಣ ಅಂತಸ್ತು ಹೊಂದಿರುವ ಅದೃಷ್ಟಶಾಲಿ ಸೂಪರ್ ಮ್ಯಾನ್ ಗಳವರು. ಹೌದೌದು ನಿಜ… ನಾವುಗಳು 25-30 ವರ್ಷಗಳ ಹಳೆಯ ಸೈಕಲ್, ಸ್ಕೂಟರ್, ಬೈಕ್, ಕಾರುಗಳನ್ನು ರಿಪೇರಿ ಮಾಡಿಕೊಂಡು, ಹೊಸ ಟೈರು ಟ್ಯೂಬುಗಳನ್ನು ಹಾಕಿಸಿ, ಆಗಾಗ ರಸ್ತೆ ಮಧ್ಯದಲ್ಲಿ ನಿಂತಾಗ ತಳ್ಳಿ ಕೊಂಡು ಹೋಗಿ ಹೇಗೋ ಇನ್ನೂ ಓಡಿಸುತ್ತಲೇ ಇರುತ್ತೇವೆ. ಏಕೆಂದರೆ ನಾವು ಜನಸಾಮಾನ್ಯರು.

ಕೊರೋನಾ ವೈರಸ್ ಆಘಾತದ ನಂತರ ಹಳೆಯ ಬಟ್ಟೆಗಳಿಗೆ ತೇಪೆ ಹಾಕಿಕೊಂಡು, ಕಿತ್ತು ಹೋದ ಚಪ್ಪಲಿ ಬೂಟುಗಳನ್ನು ಹೊಲಿಸಿಕೊಂಡು ಹೇಗೋ ಕಥೆ ಹಾಕುತ್ತಿದ್ದೇವೆ. ಏಕೆಂದರೆ ನಾವು ಜನಸಾಮಾನ್ಯರು. ಅದೇ ನಮ್ಮಪ್ಪ ತಾತನ ಕಾಲದ ಹಳೇ ಮನೆಗೆ ಸುಣ್ಣ ಬಣ್ಣ ಬಳಿದು, ಕಿಟಕಿ ಬಾಗಿಲುಗಳಿಗೆ ಪಾಲಿಶ್ ಮಾಡಿಸಿ ಹೇಗೋ ಬದುಕುತ್ತಿದ್ದೇವೆ. ಏಕೆಂದರೆ ನಾವು ಜನಸಾಮಾನ್ಯರು.

ಮಗಳ ಮದುವೆಗೆ ಮಾಡಿದ ಸಾಲ, ತಂದೆಯ ಖಾಯಿಲೆಗಾಗಿ ಮಾಡಿದ ಸಾಲ, ಮನೆ ಕಟ್ಟಲು‌ ಮಾಡಿದ ಸಾಲ, ವಾಹನ ಕೊಳ್ಳಲು ಮಾಡಿದ ಸಾಲ ಇನ್ನೂ ತೀರಿಸಲಾಗದೆ ಒದ್ದಾಡುತ್ತಿದ್ದೇವೆ. ಏಕೆಂದರೆ ನಾವು ಜನಸಾಮಾನ್ಯರು. ಇಡೀ ದೇಹವನ್ನು ಒಮ್ಮೆ ಪರೀಕ್ಷಿಸಿ ಕೊಳ್ಳಿ ಎಂದು ವೈದ್ಯರು ಹೇಳುತ್ತಲೇ ಇದ್ದಾರೆ. ಆದರೆ ಅಷ್ಟು ಹಣ ಹೊಂದಾಣಿಕೆ ಆಗುತ್ತಲೇ ಇಲ್ಲ. ಅದಕ್ಕಾಗಿ ಎರಡು ವರ್ಷದಿಂದ ಅದನ್ನು ಮುಂದೂಡುತ್ತಲೇ ಇದ್ದೇವೆ. ಏಕೆಂದರೆ ನಾವು ಜನಸಾಮಾನ್ಯರು. ಮನೆ ಮಂದಿಯೆಲ್ಲಾ ಒಟ್ಟಾಗಿ ಎಲ್ಲಿಗಾದರೂ ಪ್ರವಾಸ ಹೋಗಬೇಕೆಂದು ಸುಮಾರು ವರ್ಷಗಳಿಂದ ಯೋಚಿಸುತ್ತಲೇ ಇದ್ದೇವೆ. ಹಣಕಾಸಿನ ತೊಂದರೆಯಿಂದ ಇದು ಸಾಧ್ಯವಾಗುತ್ತಲೇ ಇಲ್ಲ. ಏಕೆಂದರೆ ನಾವು ಜನಸಾಮಾನ್ಯರು. ನೀವು ಮಾತ್ರ ಆಗಾಗ ಹೊಸ ಕಾರುಗಳನ್ನು ಕೊಳ್ಳುತ್ತಲೇ ಇರುತ್ತೀರಿ. ಸ್ವಲ್ಪ ಹಳೆಯದಾದರೂ ನಿಮ್ಮ ಗೌರವಕ್ಕೆ ಧಕ್ಕೆ ಬರುತ್ತದೆ. ಏಕೆಂದರೆ ನೀವು ಅದೃಷ್ಟಶಾಲಿ ಅಸಾಮಾನ್ಯರು.

ಒಳ್ಳೆಯ ಗುಣಮಟ್ಟದ‌ ಆಕರ್ಷಕ ಕಾರುಗಳೇ ನಿಮಗೆ ಬೇಕು. ಏಕೆಂದರೆ ನೀವು ಅದೃಷ್ಟಶಾಲಿ ಅಸಾಮಾನ್ಯರು. ಹಣ ನಿಮ್ಮದಲ್ಲ, ಅದು ನಮ್ಮ ಶ್ರಮದ ದುಡಿಮೆಯ ತೆರಿಗೆ. ಹಾಲಿಗೂ, ನೀರಿಗೂ ತೆರಿಗೆ ಹಾಕಿ ನಮ್ಮನ್ನು ಸುಲಿಯುವಿರಿ ನಿಮ್ಮ ಕಾರು ಕೊಳ್ಳಲು, ನಿಮ್ಮ ಬದುಕು ಹಸನಾಗಿಸಲು. ಏಕೆಂದರೆ ನೀವು ಅದೃಷ್ಟಶಾಲಿ ಅಸಾಮಾನ್ಯರು. ಹೋಗಲಿ, ಇಷ್ಟೆಲ್ಲಾ ಅನುಕೂಲ ಪಡೆದ ನೀವು ಯಾವುದೇ ಲಂಚ ಪಡೆಯದೆ, ನಿಮ್ಮ ಸಂಬಳಕ್ಕೆ ತಕ್ಕಂತ ಕೆಲಸ ಮಾಡುವಿರಾದರೆ ನಿಮಗೆ ನಮ್ಮ ಹೃದಯ ಪೂರ್ವಕ ಧನ್ಯವಾದಗಳು. ಆದರೆ ಇದು ನಿಜವಲ್ಲ ಭ್ರಮೆ. ನಿಮಗೊಂದು ನ್ಯಾಯ - ನಮಗೊಂದು ನ್ಯಾಯ. ಸಾರ್ವಜನಿಕ ಸಾರಿಗೆ ಇದೆ. ಖಾಸಗಿಯಾಗಿ ಕಾರು ಕೊಳ್ಳುವ ಶಕ್ತಿ ಇದೆ. ಆದರೂ ನಿಮಗೆ ನಮ್ಮ ತೆರಿಗೆ ಹಣದ  ಕಾರುಗಳೇ ಬೇಕು.

ಏಕೆಂದರೆ ನಾವು ಜನಸಾಮಾನ್ಯರು - ನೀವು ಅದೃಷ್ಟಶಾಲಿ ಅಸಾಮಾನ್ಯರು. ಕಷ್ಟಗಳೆಲ್ಲ ನಮಗಿರಲಿ - ಸುಖಗಳೆಲ್ಲ ನಿಮಗಿರಲಿ. ಕಾರ್ ಕಾರ್ ಕಾರ್ ಎಲ್ನೋಡಿ ಕಾರ್. ಬಣ್ಣದ ಮಾರುತಿ ಕಾರೊಂದು ಸುಯ್ಯನೆ ಹೋಯಿತು, ಕಸಗುಡಿಸುವ ಜಾಡಮಾಲಿಯೊಬ್ಬ ಬೆರಗುಗಣ್ಣಿನಿಂದ ನೋಡಿದ, ಅವನಿಗೆ ತಿಳಿಯಲಿಲ್ಲ, ಅದು ಭ್ರಷ್ಟ ಪಿಡ್ಬ್ಯುಡಿ ಇಂಜಿನಿಯರನ ಮಗನ ಕಾರೆಂದು.

ಹುಂಡ್ಯೆ ಕಂಪನಿಯ ಆಕರ್ಷಕ ಕಾರೊಂದು ಹಾಗೇ ಹೋಗುತ್ತಿತ್ತು, ಪಾತ್ರೆ ತೊಳೆಯುವ ಹೆಂಗಸು ಕುತೂಹಲದಿಂದ ನೋಡಿದಳು, ಅವಳಿಗೂ ಗೊತ್ತಾಗಲಿಲ್ಲ ಅದು ಕಾಳಸಂತೆಕೋರನ ಮಗಳ ಕಾರೆಂದು. ಟಯೋಟ ಇನ್ನೋವ ಕಾರೊಂದು ವೇಗವಾಗಿ ಸಾಗುತ್ತಿತ್ತು, ಹಾಗೇ ಕಣ್ಣರಳಿಸಿ ನೋಡಿದ ಟೀ ಅಂಗಡಿಯ ಮಾಮು ಒಬ್ಬ, ಅವನಿಗೂ ಅರಿವಾಗಲಿಲ್ಲ ಅದು ರೈತರಿಗೆ ವಂಚಿಸಿದ ರಿಯಲ್ ಎಸ್ಟೇಟ್ ಬ್ರೋಕರ್ ಒಬ್ಬನದು ಎಂದು.

ಟಾಟಾ ಕಂಪನಿಯ ದುಬಾರಿ ಕಾರೊಂದು ಮುನ್ನುಗುತ್ತಿತ್ತು, ಹಾಗೇ ಯೋಚಿಸುತ್ತಾ ನೋಡುತ್ತಿದ್ದ ಬಸ್ ಸ್ಟಾಂಡಿನ ಬಿಸಿಲಿನಲ್ಲಿ ನಿಂತ ಪ್ರಯಾಣಿಕನೊಬ್ಬ, ಅವನಿಗೂ ಅಂದಾಜಾಗಲಿಲ್ಲ ಅದು ರಾಜಕೀಯ ಪುಢಾರಿಯೊಬ್ಬನ ಹೆಂಡತಿಯ ಕಾರೆಂದು. ಮಹೀಂದ್ರಾ ಕಂಪನಿಯ ಹೊಚ್ಚ ಹೊಸ ಕಾರೊಂದು ಹಾದು ಹೋಯಿತು, ಚಪ್ಪಲಿ ಹೊಲೆಯುವ ಚಮ್ಮಾರನೊಬ್ಬ ಆಶ್ಚರ್ಯದಿಂದ ನೋಡಿದ, ಅವನಿಗೂ ಅರ್ಥವಾಗಲಿಲ್ಲ ಆದು ಕಳ್ಳಭಟ್ಟಿ ಧಣಿಯ ಕಾರೆಂದು.

BMW ಕಾರೊಂದು ಜೋರು ಸಂಗೀತದೊಂದಿಗೆ ಸಾಗಿತು, ಹಾಗೇ ಕನಸುಗಣ್ಣಿನಿಂದ ನೋಡಿದ ದಾರಿಹೋಕ ಸ್ಯೆಕಲ್ ಸವಾರನೊಬ್ಬ, ಅವನಿಗೂ ಅರಿವಾಗಲಿಲ್ಲ ಅದು ಮಂತ್ರಿಯೊಬ್ಬನ ಎರಡನೇ ಹೆಂಡತಿಯ ಕಾರೆಂದು. ಅಲ್ಲೇ ಇದ್ದ ಅರೆ ಹುಚ್ಚನೊಬ್ಬ ಕೂಗಿದ, "ಜನ ಬೆಲೆ ಕೊಡುವುದು ಕಾರಿಗೋ, ಮನುಷ್ಯರಿಗೋ," ಪಕ್ಕದಲ್ಲಿದ್ದ ಭಿಕ್ಷುಕ ಗೊಣಗಿದ. "ಕಾರು ಇದ್ದ ಮೇಲೆ ಕಾರಿಗಷ್ಟೇ ಬೆಲೆ, ಕಾರಿನ ಬೆಲೆ ಹೆಚ್ಚಾದಷ್ಟೂ ಅದರಲ್ಲಿರುವ ವ್ಯಕ್ತಿಯು ಬೆಲೆ ಹೆಚ್ಚಾಗುತ್ತದೆ, ಅದರಲ್ಲಿ ನಾನು ಕುಳಿತರೂ ಕೂಡ."

ಕೇಳಿಕೊಳ್ಳಿ ನಿಮ್ಮ ಆತ್ಮಸಾಕ್ಷಿಗೆ ನಾವು ಎತ್ತ ಸಾಗುತ್ತಿದ್ದೇವೆ ಎಂದು, ಪೂರ್ವ ಜನ್ಮದ ಕರ್ಮ ಫಲವೆಂದು ನುಣುಚಿಕೊಳ್ಳಬೇಡಿ, ವಾಸ್ತವ ನೆಲೆಯಲ್ಲಿ ಯೋಚಿಸಿ....

-ವಿವೇಕಾನಂದ ಹೆಚ್.ಕೆ., ಬೆಂಗಳೂರು

ಸಾಂಕೇತಿಕ ಚಿತ್ರ ಕೃಪೆ: ಇಂಟರ್ನೆಟ್ ತಾಣ