ಹೋಟೆಲ್ ಬಾಬಾ ಸಾಹೇಬ್ ಅಂಬೇಡ್ಕರ್…!
ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಉದ್ಘಾಟನೆ. ನೆಲ ಮೂಲ ಸಂಸ್ಕೃತಿಯ ರಾಸಾಯನಿಕ ಮುಕ್ತ ಅಪ್ಪಟ ದೇಸೀ ರುಚಿ. ಕೊರಚ, ಕೊರಮ, ದಕ್ಕಲಿಗ, ಕಲ್ಲುಕುಟಿಕ ವಡ್ಡರು, ಹೊಲೆಯ, ಮಾದಿಗ ಸಮುದಾಯದ ಬಾಣಸಿಗರಿಂದ ತಯಾರಾಗುವ ಪ್ರೀತಿಯ ಫಲಹಾರ. ಶುಚಿಗೆ - ರುಚಿಗೆ - ಬೆಲೆಗೆ - ಆತಿಥ್ಯಕ್ಕೆ ಮೊದಲ ಆಧ್ಯತೆ..
ಭಾರತದ ಎಲ್ಲಾ ರಾಜ್ಯಗಳ ಸಸ್ಯಾಹಾರ - ಮಾಂಸಹಾರ - ಸಮುದ್ರ ಆಹಾರ - ಅರಬ್ ಮತ್ತು ಪರ್ಷಿಯನ್ ಮೆನು - ಚೀನೀ ತಿನಿಸುಗಳು - ಅಮೆರಿಕನ್ ಶೈಲಿ - ಆಫ್ರಿಕನ್ ವಿಶೇಷಗಳು - ಇಸ್ರೇಲ್ ಸ್ಪೆಷಲ್ - ಆದಿವಾಸಿ ಆಕರ್ಷಣೆ - ಜೈನ್ ಪುಡ್ - ಕಾಂಟಿನೆಂಟಲ್ ಪುಡ್ - ಇರಾನಿ ಟೀ - ಬ್ರೆಜಿಲ್ ಕಾಫಿ - ಆಫ್ಘನ್ ಬಿರ್ಯಾನಿ - ಡೆಲ್ಲಿ ಫಲೂಡ - ಕರಾಚಿ ಬಿಸ್ಕೆಟ್ಸ್ - ಗುಜರಾತಿ ಡೋಕ್ಲಾ - ಇಟಲಿ ಪಿಜ್ಜಾ - ಕೆನಡಿಯನ್ ಪಾಸ್ತಾ - ರಷಿಯಾನ್ ವೊಡ್ಕಾ - ಡೆನ್ಮಾರ್ಕ್ ಚೀಸ್ - ಸ್ವಿಸ್ ಚಾಕೊಲೇಟ್ - ವಿಯೆಟ್ನಾಂ ಸೂಪ್ - ಕೊರಿಯನ್ ನೂಡಲ್ಸ್ - ಜಾಪನೀಸ್ ಸಲಾಡ್ - ಯೂರೋಪಿಯನ್ ಕೇಕ್ಸ್ - ಕ್ಯೂಬನ್ ಫ್ರೈಸ್.. ಹೀಗೆ ಸಾಲು ಸಾಲು ಆಹಾರ ಭಾರತೀಯ ಪದಾರ್ಥಗಳಲ್ಲಿ....
ಬೆಡ್ ಕಾಫಿಯಿಂದ ಬೆಳಗಿನ ಉಪಹಾರದ ನಂತರ ಊಟದ ನಡುವಿನ ಸ್ನ್ಯಾಕ್ಸ್ ಆದ ಮೇಲೆ ಮಧ್ಯಾಹ್ನದ ಊಟ ಮುಗಿದು ಸಂಜೆಯ ಫಲಹಾರ ಸೇರಿ ರಾತ್ರಿಯ ಊಟ ಜೊತೆಗೆ ಮಲಗುವ ಮುನ್ನ ಬಿಸಿ ಬಿಸಿ ಹಾಲು ಹೀಗೆ ಎಲ್ಲವೂ ಲಭ್ಯ.
ವಿಶೇಷ ಸೂಚನೆ : ಮನುಷ್ಯರಿಗೆ ಮಾತ್ರ ಪ್ರವೇಶ. ವಿಶ್ವ ಗುರುವಾಗುವ ಕನಸಿನ ಸಮಾಜದಲ್ಲಿ ಮೊದಲು ಮೊಳಕೆಯೊಡೆಯಬೇಕಾಗಿರುವುದು ಕುವೆಂಪು ಅವರ ವಿಶ್ವಮಾನವ ಪ್ರಜ್ಞೆ, ಬಸವಣ್ಣನವರ ಸಮಾನತೆಯ ಪ್ರಜ್ಞೆ, ಸ್ವಾಮಿ ವಿವೇಕಾನಂದರ ಸಾಂಸ್ಕೃತಿಕ ಪ್ರಜ್ಞೆ, ಅಕ್ಕಮಹಾದೇವಿಯವರ ಸ್ಥಿತ ಪ್ರಜ್ಞೆ, ಮಹಾತ್ಮ ಗಾಂಧಿಯವರ ನೈತಿಕ ಪ್ರಜ್ಞೆ.
" ಬ್ರಾಹ್ಮಣರ ಫಲಹಾರ ಮಂದಿರ "
" ಗೌಡರ ಮುದ್ದೆ ಹೋಟೆಲ್ "
" ವೀರಶೈವ ಖಾನಾವಳಿ "
" ಇಕ್ಬಾಲ್ ಕಬಾಬ್ ಕಾರ್ನರ್"
" ವಿಕ್ಟರ್ ವೈನ್ ಷಾಪ್ "
ಹೀಗೆ ಕೆಲವೇ ಜಾತಿ ಧರ್ಮಗಳ ಹಿಡಿತದಲ್ಲಿ ಸಮಾಜ ಇದ್ದರೆ ಜಾಗೃತಗೊಳ್ಳುವ ಇತರ ಸಮುದಾಯಗಳು ಒಂದಲ್ಲ ಒಂದು ದಿನ ಬಂಡಾಯ ಹೇಳುವುದು ನಿಶ್ಚಿತ. ಶುಚಿ ರುಚಿ ಬೆಲೆ ಆತಿಥ್ಯ ಮುಖ್ಯವಾಗಬೇಕೆ ಹೊರತು ಜಾತಿ ಮತ ಪಂಥ ಪಕ್ಷಗಳಲ್ಲ. ಎಲ್ಲಾ ವಿಧದ ಸಮುದಾಯಗಳಲ್ಲೂ ಶತಾಯುಷಿಗಳು ಇದ್ದಾರೆ ಹಾಗೆಯೇ ರೋಗಿಷ್ಠರು ಇದ್ದಾರೆ. ಯಾವುದೇ ಪ್ರದೇಶದ ಆಹಾರ ಸೇವಿಸಿದರು ಮನುಷ್ಯರ ಸರಾಸರಿ ಆಯಸ್ಸು ಸುಮಾರು 80 ರ ಆಸುಪಾಸು.
ಹೀಗಿದ್ದಾಗಲೂ ಮೇಲು ಕೀಳಿನ ಅಸಮಾನತೆ ಅತ್ಯಂತ ಅನಾಗರಿಕ ಸಮಾಜದ ಲಕ್ಷಣವಲ್ಲವೇ? ಊಟದ ರುಚಿ ಮತ್ತು ಊಟದಿಂದ ಆರೋಗ್ಯ ಜಾತಿಯ ಮೇಲೆ ಅವಲಂಬಿಸಿರುವುದಿಲ್ಲ. ಅದು ಒಂದು ನೈಸರ್ಗಿಕ ಬಳುವಳಿ.
ಅಂಬೇಡ್ಕರ್ ಅವರ ಹೆಸರಿನಲ್ಲಿ ಕೆಳ ಜಾತಿಯ ಶೋಷಿತ ಸಮುದಾಯಗಳ ಪರವಾಗಿ ಒಂದು ಹೋಟೆಲ್ ಪ್ರಾರಂಭಿಸಿ ಅದು ಯಶಸ್ವಿಯಾಗಿ ಮುನ್ನಡೆದಾಗ ಆ ಸಂದೇಶ ರಾಷ್ಟ್ರವ್ಯಾಪಿ ತಲುಪಿ ಗ್ರಾಮ ಮಟ್ಟದಲ್ಲಿ ಸಹ ಜನ ಜಾಗೃತಿ ಉಂಟಾಗಿ ಮನುಷ್ಯ ಮತ್ತು ಊಟದಲ್ಲಿ ಶುಚಿ ರುಚಿ ಬೆಲೆ ಮಾತ್ರ ಮುಖ್ಯವಾಗಿ ಆ ಮುಖಾಂತರ ಜಾತಿಯ ಅವಾಂತರಗಳು ಕಡಿಮೆಯಾದಾಗ ಭಾರತ ಒಂದು ನಿಜವಾದ ನಾಗರಿಕ ಮತ್ತು ಪ್ರಜಾಪ್ರಭುತ್ವವಾದಿ ದೇಶ ಎಂದು ಪರಿಗಣಿಸಬಹುದು.
ಜಾತಿ ವ್ಯವಸ್ಥೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗದೆ ಇಡೀ ದೇಶದ ಸಾಮಾಜಿಕ ರಾಜಕೀಯ ಮತ್ತು ಆಡಳಿತ ವ್ಯವಸ್ಥೆ ಭ್ರಷ್ಟವಾಗಲು ಮೂಲ ಕಾರಣವಾಗಿದೆ. ಅದನ್ನು ನಿರ್ಮೂಲನೆ ಮಾಡದೆ ನಾಗರಿಕ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ.ಆದ್ದರಿಂದ ಆ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಪ್ರಯತ್ನಗಳು ಸಾಗಲಿ ಎಂದು ಆಶಿಸುತ್ತಾ.........
-ವಿವೇಕಾನಂದ ಎಚ್. ಕೆ.
ಚಿತ್ರ ಕೃಪೆ: ಇಂಟರ್ನೆಟ್ ತಾಣ