ಹೋರಾಟದ ಬದುಕು

ಹೋರಾಟದ ಬದುಕು

ಈ  ಜಗತ್ತಿನಲ್ಲಿ ಒಬ್ಬೊಬ್ಬರದು  ಒಂದೊಂದು  ಥರಾ  ಕಥೆ  - ವ್ಯಥೆ .  ಅದೇ  ಜಗತ್ತಿನ  ವಿಶೇಷವೇನೋ!  ಒಂದೇ  ಥರ  ಇದ್ದರೆ  ಸ್ವಾರಸ್ಯ  ಎಲ್ಲಿ  ಇರುತ್ತಿತ್ತು ?
 
ಇಲ್ಲಿ ಉಪ್ಪಿನಂಗಡಿಯ  ಬಸ್ ಸ್ಟ್ಯಾಂಡಿನಲ್ಲಿ  ವಿಶಿಷ್ಟವಾಗಿ  ಬದುಕು  ಸಾಗಿಸುವವನೊಬ್ಬನಿದ್ದಾನೆ.  ಬಸ್ಸುಗಳು  ಬಂದಾಗೆಲ್ಲ  ಅವು  ಎಲ್ಲಿಗೆ  ಹೋಗುತ್ತವೆಯೆಂದು  ಕೂಗಿ  ಹೇಳುವುದು  ಅವನ  ಕೆಲಸ . ಮಂಗಳೂರಿಗೆ , ಸುಬ್ರಮಣ್ಯಕ್ಕೆ , ಧರ್ಮಸ್ಥಳಕ್ಕೆ  ಮುಂತಾಗಿ  ಇಡೀ  ದೀನ ಕೂಗುತ್ತಲೇ  ಇರುತ್ತಾನೆ . ಇದು  ಇಲ್ಲಿ ಬರುವ  ಜನರಿಗೆ  ಬಹಳ  ಉಪಕಾರ .  ಬಸ್ಸಿಗೆ  ಸಂಬಂಧಿಸಿ  ಅವನೊಬ್ಬ  ಓಡಾಡುವ ಮಾಹಿತಿ ಕೇಂದ್ರ . 
 
ಉದ್ದ ಕೂದಲ, ಸದಾ ಒದರುವ , ಈ ವ್ಯಕ್ತಿ  ಪ್ರಥಮ  ಬಾರಿ  ನೋಡಿದಾಗ  ಹುಚ್ಚನಂತೇ  ಕಾಣುವುದು  ಸಹಜ . ಮಕ್ಕಳು  ಇವನ  ಬಳಿ ಬರಲು  ಹೆದರುತ್ತಾರೆ .  ದೂರದಲ್ಲೇ  ಪಿಳಿಪಿಳಿ  ನೋಡುತ್ತ  ನಿಲ್ಲುತ್ತಾರೆ .  ತಾಯಂದಿರು ಅವನಿಗೆ  ಕೊಟ್ಟುಬಿಡುತ್ತೇನೆ  ಎಂದು  ಮಕ್ಕಳ  ಹೆದರಿಸುತ್ತಾರೆ . ಆದರೆ  ಹಾಗೆ  ಓಡಾಡುವುದೇ  ಅವನ  ವೃತ್ತಿಯೆಂದು  ಅವರಿಗೆ ಗೊತ್ತಿಲ್ಲ. 
 
ಅವನನ್ನು  ಒಮ್ಮೆ  ಮಾತನಾಡಿಸಬೇಕೆಂದು ಬಹಳ  ದಿನಗಳಿಂದ ಅಂದುಕೊಂಡಿದ್ದೆ .  ಅವನ  ಅಂತರಂಗದ  ವ್ಯಕ್ತಿತ್ವ  ಬೇರೆಯೇ  ಆಗಿರುತ್ತದೆಯೆಂದು  ಅನ್ನಿಸುತ್ತಿತ್ತು . ಈಚೆಗೆ  ಒಮ್ಮೆ  ಉಪ್ಪಿನಂಗಡಿಗೆ ಹೋಗಿದ್ದಾಗ ಯಾವುದು ನಿಮ್ಮ  ಊರು  ಎಂದೆ - ಪ್ರೀತಿಯಿಂದ .  ಅಂಥ  ಒಂದೇ  ಒಂದು  ಮಾತು  ಕೇಳದೇ  ಎಷ್ಟು  ದಿನವಾಗಿತ್ತೋ , ಗಳಗಳ  ಅಳುತ್ತ  ತನ್ನ  ಕೆಥೆಯನ್ನು  ಬಿಚ್ಚಿಟ್ಟ . 
 
ಅವನು  ಮೂಲತಃ  ಕೆ. ಎಸ್ . ಆ.ಟಿ .ಸಿ . ಯ ನೌಕರನಾಗಿದ್ದನಂತೆ . ೩೩ ವರ್ಷ  ಅಲ್ಲಿ  ದುಡಿದಿದ್ದು  ನಿಜ.   ಆದರೆ  "ಹಿರಿಯ ಅಧಿಕಾರಿಗಳ  ಜೊತೆ ವಾದ  ಮಾಡಿದ್ದಕ್ಕಾಗಿ  ಬಿಳಿ  ಹಾಳೆಯ ಮೇಲೆ  ಸಹಿ  ತೆಗೆದುಕೊಂಡು  ರಾಜೀನಾಮೆ  ಅಂತ  ಮಾಡಿಬಿಟ್ಟರು.  ನನಗೆ   ಅದು  ಗೊತ್ತೇ  ಇರಲಿಲ್ಲ . ಅಂದು  ನಾನು   ಕೆಲಸಕ್ಕೆ  ಹೋದಾಗ   ಫಿಟ್ಟರ ಕೆಲಸಕ್ಕೆ  ನಿನ್ನ    ರಾಜೀನಾಮೆ  ಸ್ವೀಕರಿಸಲಾಗಿದೆ  ಎಂದುಬಿಟ್ಟರು. 
 
ನನಗೆ  ಸಂಸಾರವೂ  ಇದೆ  ತಿಪಟೂರಿನಲ್ಲಿ . ಹೆಂಡತಿ , ಮಗಳು  ಮಾವನ  ಮನೆಯಲ್ಲಿದ್ದಾರೆ  - ಕೊಬ್ಬರಿ ಕಾರ್ಖಾನೆಯಲ್ಲಿ  ಕೆಲಸ.  ನಾನು  ದುಡ್ಡು  ತೆಗೆದುಕೊಂಡು  ಹೋದರೆ  ಪ್ರವೇಶ .  ಇಲ್ಲವಾದರೆ  ಇಲ್ಲ. " ನಿಜ.  ಅವನು ಹೇಳಿದ  ಕಥೆ  ನಂಬುವುದು  ಕಷ್ಟವಾಗಿತ್ತು . ಆದರೆ  ನಾನು  ನಂಬಿದರೂ , ಬಿಟ್ಟರೂ  ಅವನಿಗೇನೂ  ಲಾಭ - ಲೂಕ್ಸ್ಯಾನು ?
 
ಅದೇನೇ   ಇದ್ದರೂ  ನನಗೆ  ಖುಷಿಯಾದದ್ದು  ಸೋಲೊಪ್ಪದ  ಅವನ  ಛಲ.  ಪುತ್ತೂರಲ್ಲಿಯೂ  ಅವನು  ನಿಲ್ದಾಣದಲ್ಲಿ ಹೀಗೆ  ಕೂಗುತ್ತಾ  ಜೀವಿಸುತ್ತಿದ್ದ . ಪ್ರತಿ  ಬಸ್ಸಿನ    ಕಂಡಕ್ಟರುಗಳೂ  ತಮ್ಮ  ಬಸ್ಸಿನ ಹೆಸರು   ಕೂಗಿದ್ದಕ್ಕೆ  ಅವನಿಗೆ  ಚಿಲ್ಲರೆ  ಕೊಡುತ್ತಾರೆ . ಅದರಿಂದ  ಅವನ  ಜೀವನ  ಸಾಗುತ್ತದೆ.  ಪುತ್ತೂರಲ್ಲಿ  ಹಾಗೇ  ಜೀವಿಸುತ್ತಿದ್ದಾಗ  ಅಲ್ಲಿಯೂ  ಸ್ಪರ್ಧೆ  ಶುರುವಾಯಿತಂತೆ ! ಇನ್ನೆರಡು  ಜನ  ಹಾಗೇ  ಬದುಕಲು  ಬಂದಾಗ  ಪುತ್ತೂರು  ಬಿಟ್ಟು  ಉಪ್ಪಿನಗಂಡಿಗೆ  ಬಂದ !
 
ಅವನ  ಹೆಸರು  ಗೋವಿಂದಪ್ಪ . ಈಗ  ಉಪ್ಪಿನಂಗಡಿಯಲ್ಲಿ  ಅವನು  ಜನಜನಿತ. ರಾತ್ರಿ   ಯಾವುದಾದರೂ  ಕಟ್ಟೆಯ  ಮೇಲೆ ಮಲಗುವುದು , ಬೆಳಗಾದರೆ   ಕೂಗಲು  ಹೋಗುವುದು - ರಾತ್ರಿಯವರೆಗೆ . ತುಂಬಾ  ನಿಯಮಿತ ಜೀವನ  ಅವನದು.  
 
 
ಇಂಥ ಹೋರಾಟದ  ಬದುಕಿಗೆ  ತೊಂದರೆಯಾಗುವುದು ಮನುಷ್ಯನಿಗೆ  ಹುಷಾರಿಲ್ಲದಿದ್ದಾಗ  ಮಾತ್ರ . ಮೈ  ಗಟ್ಟಿ  ಇರುವವರೆಗೆ ಇವರ  ಜೀವನ ನಿಶ್ಚಿಂತೆಯದು . ನಿನ್ನೆಯ  ನೆನಪಿಲ್ಲ . ನಾಳೆಯ  ಕನಸಿಲ್ಲ .  ವರ್ತಮಾನದಲ್ಲೇ  ಬದುಕುವ  ಜನರಿವರು ಇವತ್ತಿಗಾದರೆ ಜಗತ್ತಿನಲ್ಲಿ  ಅತ್ಯಂತ  ಸುಖಿಗಳು .  ನಾಳೆ  ಒಂದು  ವೇಳೆ  ಹುಷಾರಿಲ್ಲದಿದ್ದರೆ , ಆಕಸ್ಮಿಕವಾಗಿ  ಕೈಕಾಲು  ಮುರಿದು ದುಡಿಯಲಾಗದಿದ್ದರೆ  ಮಾತ್ರ  ಇವರ   ಗತಿ  ಯಾರಿಗೂ  ಬೇಡ . ನಮ್ಮ  ಕಾರ್ಮಿಕರು, ಕೃಷಿ  ಕುಳಿಗಳ  ಬದುಕೂ  ಇದೇ  ಅಲ್ಲವೇ ?
 
ಆದರೆ  ಈ  ಜಗತ್ತಿನಲ್ಲಿ  ಪುಣ್ಯಮಾಡಿ  ಹುಟ್ಟಿದ  ಜನವೇ  ಬೇರೆ  ಇರುತ್ತಾರೆ.   ಅಂಥವರಿಗೆ ಹುಷಾರಿಲ್ಲದಿದ್ದರೆ  ಸರ್ಕಾರವೇ  ನೋಡಿಕೊಳ್ಳುತ್ತದೆ .  ಕೆಲವರ  ಚಿಕಿತ್ಸೆಗಾಗಿ  ಬೇಕಾದರೆ ಫಾರಿನ್ನಿಗೂ  ಕೆಳಿಸುತ್ತದೆ . ಪಬ್ಬುಗಳಲ್ಲಿ  ಕುಡಿದದ್ದಕ್ಕೆ , ಕ್ಲಬ್ಬುಗಳಲ್ಲಿ  ಕುಣಿದಿದ್ದಕ್ಕೆ  ಕೂಡ  ಕೆಲವರಿಗೆ  ಸರ್ಕಾರವೇ  ಕೊಟ್ಟರೆ , ಇನ್ನು  ಕೆಲವರಿಗೆ ಅಪ್ಪ  ಮಾಡಿಟ್ಟ  ಆಸ್ತಿ .  ಅಂಥವರಿಗೆ  ಜೀವ ಹೋದರೂ  ಅವರ  ಫ್ಯಾಮಿಲಿಗಳಿಗೆ  ಲಾಭವೇ ! ಆದರೆ  ನಮ್ಮ  ಗೋವಿಂದಪ್ಪನಂಥವರು   ಇಂದಿಗೆ  ಮಾತ್ರ  ರಾಜರು . ನಾಳೆ  ಶಕ್ತಿಗುಂದಿ  ಸೊರಗಿದಾಗ  ಮಾತ್ರ  ಯಾರಿಗೆ  ಯಾರುಂಟು  ಯರವಿನ ಸಂಸಾರ .... 
ಮತ್ತೆ  ಹೊರಟಲ್ಲಿಗೇ  ಬರುತ್ತೇನೆ.  ಜಗತ್ತು ರಂಗಾಗಿರುವುದೇ  ಇಂಥ  ತರತರದ  ಜನಗಳಿಂದ.  ಬಣ್ಣಗಳಲ್ಲಿ  ವ್ಯತ್ಯಾಸವಿದ್ದಾಗಲೇ  ಒಂದೊಂದು  ಬಣ್ಣದ ಯೋಗ್ಯತೆ - ಸಾಧ್ಯತೆ ಗೊತ್ತಾಗುವದು. ಎಲ್ಲವೂ  ಬಿಳಿಯೋ, ಕರಿಯೋ  ಆಗಿದ್ದರೆ  ಏನು  ವಿಶೇಷ  ಇತ್ತು ?
 
ಆದರೆ...  ಗೋವಿಂದಪ್ಪನಂಥವರ  ಬದುಕು ಉಳಿದವರಿಗೆ  ತಮಾಷೆಯ ಅಥವಾ  ಮರುಕಪಡುವ , ಮಕ್ಕಳ  ಬೆದರಿಸುವ ವಸ್ತುವೇನೂ  ಆಗಬೇಕಾಗಿರಲಿಲ್ಲ. ಹಾಗೆ  ಆಗಿದೆ ಎಂಬುದೇ  ವಿಷಾದನೀಯ.