ಹೋರಿ ಬೆದರಿಸುವ ಹಬ್ಬ
ಬಯಲು ಸೀಮೆ ಪ್ರದೇಶಗಳಲ್ಲಿ ದೀಪಾವಳಿ ನಂತರ ಸುಮಾರು ಎರಡು ತಿಂಗಳವರೆಗೆ ಹೆಚ್ಚಾಗಿ,ಸತತವಾಗಿ ನಡೆಯುವ ಹಬ್ಬ ಇದಾಗಿದೆ. ರೈತ ಮಳೆಗಾಲದ ನಂತರ ಮೊದಲ ಬೆಳೆಯನ್ನು ತೆಗೆದು, ಆರಾಮವಾಗಿ ಇದ್ದಂತಹ ಕಾಲದಲ್ಲಿ ಈ ಹಬ್ಬದ ಆಚರಣೆಗೆ ಚಾಲನೆ ನೀಡಲಾಗುತ್ತದೆ. ದೀಪಾವಳಿ ದಿನದಂದು ಹಟ್ಟಿ (ಕೊಟ್ಟಿಗೆ)ಗೆ ಪೂಜೆ ಮಾಡಿ ರಾಸುಗಳಿಗೆ, ಎಡೆ(ನೈವೇದ್ಯ) ಇಡಲಾಗುತ್ತದೆ. ಅಂದು ಬೇಳೆಯ ಹೋಳಿಗೆಗೆ ಹೆಚ್ಚಿನ ಪ್ರಾಶಸ್ತ್ಯ. ಅದಾದ ನಂತರ ಮನೆಯಲ್ಲಿದ್ದ ಎತ್ತುಗಳಿಗೆ, ಹಸುಗಳಿಗೆ ಹಾಗೂ ಎಮ್ಮೆಗಳು ಬೆಚ್ಚದಂತೆ ಗುಲ್ಲು (ಊದಿನಕಡ್ಡಿಯಿಂದ ಚುಚ್ಚುವುದು) ಇಡಲಾಗುತ್ತದೆ. ಸಂಜೆಯ ನಂತರ ಮನೆಯಲ್ಲಿನ ಎಲ್ಲಾ ರಾಸುಗಳನ್ನು ಗ್ರಾಮದ ಗಡಿಭಾಗದವರೆಗೆ ಕರೆದೊಯ್ದು ವಾಪಾಸ್ಸಾದ ನಂತರ ಗ್ರಾಮದ ಯಾವುದಾದಾರೂ ಒಂದು ಬೀದಿಯಲ್ಲಿ ಸಾಂಕೇತಿಕ ಹಟ್ಟಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ನಂತರದ ದಿನಗಳಲ್ಲಿ ನಡೆಯುವ ಹಟ್ಟಿ ಹಬ್ಬಕ್ಕೆ ಗ್ರಾಮಸ್ತರು "ಸ್ಪೆಷಲ್ (ಪೆಸೆಲ್) ಹಬ್ಬ" ಎಂದೇ ಕರೆಯುತ್ತಾರೆ.
ಇದಕ್ಕೆ "ಹಟ್ಟಿ ಹಬ್ಬ" ಅಥವಾ "ಹೋರಿ ಹಬ್ಬ" ಅಥವಾ ದನ "ಬೆದರಿಸುವ ಹಬ್ಬ" ಎಂದೇ ಕರೆಯಲಾಗುತ್ತದೆ. ಇಲ್ಲೂ ಕೂಡ ಕ್ರಿಕೆಟ್ ಬೆಟ್ಟಿಂಗ್ ನಂತೆ ಲಕ್ಷಾಂತರ ರೂಗಳ ಬೆಟ್ಟಿಂಗ್ ನಡೆಯುತ್ತದೆ. ತಮ್ಮ ಇಷ್ಟವಾದ ಹೋರಿಗಳಿಗೆ ತಮ್ಮ ಜಮೀನನ್ನು ಅಡವಿಟ್ಟಂತಹ ಉದಾಹರಣೆಗಳು ಇದೆ. ಏನಿದು ಹೋರಿ ಹಬ್ಬ? ಹೋರಿಯ ಕೊರಳಿಗೆ ಹಲವಾರು ಕೊಬ್ಬರಿ ಸರಗಳನ್ನು, ಬೆನ್ನಿನ ಮೇಲೆ ಲೋಟಗಳನ್ನು, ಎತ್ತಿನ ಮೈತುಂಬಾ ವಿಶೇಷ ಹೊದಿಕೆಗಳನ್ನು ಹಾಕುವ ಚೆನ್ನಾಗಿ ಅಲಂಕಾರ ಮಾಡಿ ಗ್ರಾಮಸ್ತರು ನಿಗದಿಪಡಿಸಿದ ರಸ್ತೆಯ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಎತ್ತುಗಳನ್ನು ಓಡಿಸಲಾಗುತ್ತದೆ. ಇಲ್ಲಿ ಎತ್ತಿಗೆ ಯಾರ ಕಡಿವಾಣವೂ ಇರುವುದಿಲ್ಲ. ಇದು ನೇರವಾಗಿ ಯಾರ ಕೈಗೂ ಸಿಗದೇ, ಹಾಗೇ ಹೆಚ್ಚಿನ ಬಾರಿ ಓಡಿದರೆ ಅಂತಹ ಹೋರಿಗೆ ಮೊದಲನೆ ಬಹುಮಾನ ಎಂದು ಘೋಷಿಸಲಾಗುತ್ತದೆ. ಓಡುವ ಹಾದಿ ಸುಮಾರು ಎರಡು ಫರ್ಲಾಂಗ್ ನಷ್ಟು ಇರುತ್ತದೆ. ರಸ್ತೆಯ ಮತ್ತೊಂದು ಬದಿಯಲ್ಲಿ ಹೋರಿ ಹಿಡಿಯಲೆಂದೇ ಜನರು ನಿಂತಿರುತ್ತಾರೆ. ಇಲ್ಲೊಂದು ಪಟ್ಟಿಯನ್ನು ಹಾಕಲಾಗಿರುತ್ತದೆ. ಇದಕ್ಕೆ "ಕೆಂಚ" ಎಂದು ಕರೆಯಲಾಗುತ್ತದೆ.
ಹೋರಿ ಹಿಡಿಯಲು ಹಾಗೂ ಹಬ್ಬ ನೋಡಲು ನಿಂತಂತಹ ಗ್ರಾಮಸ್ತರು. ಜನರ ಮಧ್ಯೆ ಬಿರುಸಾಗಿ ಓಡುತ್ತಿರುವ ಹೋರಿ.
ಇದನ್ನು ದಾಟಿ ಬಂದು ಹೋರಿ ಹಿಡಿದರೆ ಅದು ಸಿಂಧುವಲ್ಲ ಎಂದು ಕಮಿಟಿ ನಿರ್ಧಾರ ಮಾಡಿರುತ್ತದೆ. ಇದು ಬಯಲು ಸೀಮೆಯ ಸಾಕಷ್ಟು ಗ್ರಾಮಗಳಲ್ಲಿ ನಡೆಯುವಂತಹ ಗ್ರಾಮೀಣ ಕ್ರೀಡೆಯಾಗಿದೆ. ಗ್ರಾಮದಲ್ಲಿ ನಡೆಯುವ ಹಬ್ಬದ ದಿನದಂದು ಎಲ್ಲರ ಮನೆಗಳಲ್ಲಿ ವಿಶೇಷ ಅಡುಗೆ ಮಾಡಲಾಗಿರುತ್ತದೆ. ಹಬ್ಬ ನೋಡಲು ಬಂದಂತವರು ತಮಗೆ ಇಷ್ಟವಾದವರ ಮನೆಯಲ್ಲಿ ಊಟ ಮಾಡಬಹುದಾಗಿರುತ್ತದೆ. ಗೆದ್ದಂತಹ ಹೋರಿಗಳ ಮಾಲೀಕರಿಗೆ ಬಂಗಾರದ ಕಡಗ, ಪಾತ್ರೆ ಸೇರಿದಂತೆ ಅನೇಕ ಬಹುಮಾನ ನೀಡಲಾಗುತ್ತದೆ ಹಾಗೇ ಹೋರಿ ಹಿಡಿದಂತವರಿಗೆ ಕೂಡ ಸಾಕಷ್ಟು ಬಹುಮಾನ ಇರುತ್ತದೆ. ಇದಕ್ಕೆಂದೇ ಅನೇಕ ರೈತರು ಲಕ್ಷಾಂತರರೂಗಳನ್ನು ಖರ್ಚು ಮಾಡಿ ನಂಬರ್ ಹೋರಿಗಳನ್ನು ಖರೀದಿಸಿ ಅಕಾಡಕ್ಕೆ ಇಳಿಯುತ್ತಾರೆ.
ಊರಿನ ಗೌಡರಿಗೆ, ರೈತರಿಗೆ ಇದೊಂದು ಪ್ರತಿಷ್ಠೆಯ ಹಬ್ಬ. ಸೋತಂತಹ ಹೋರಿಗಳನ್ನು ಉಚಿತವಾಗಿ ನೀಡಿರುವಂತಹ ಅನೇಕ ಉದಾಹರಣೆಗಳಿದ್ದರೆ, ಗೆದ್ದಂತಹ ಹೋರಿಗಳು ಹೆಚ್ಚಿನ ಬೆಲೆಗೆ ಮಾರಾಟವಾಗಿದ್ದು ಇದೆ. ಹಿರೇಕೇರೂರು, ಬ್ಯಾಡಗಿ,ಹಾವೇರಿ,ಶಿವಮೊಗ್ಗ ಸೇರಿದಂತೆ ಹಲವೆಡೆ ಸಾಕಷ್ಟು ಪ್ರಸಿದ್ದಿ. ಇದನ್ನು ನೋಡಲೆಂದೇ ರಾಜ್ಯದ ಹಾಗೂ ಅಂತರಾಜ್ಯದ ನಾಗರೀಕರು ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುತ್ತಾರೆ. ಹಾಗೇ ಪ್ರತೀ ಹಬ್ಬ ನಡೆದಾಗಾಲೂ ಎತ್ತಿನ ಮೂಗುದಾಣವಿಲ್ಲದ ಓಟದಿಂದ ಕನಿಷ್ಠ ಒಂದಿಬ್ಬರಾದರೂ ಸತ್ತಿರುತ್ತಾರೆ. ಗಾಯ ಸಾಮಾನ್ಯ.
ಇದೀಗ ರಾಜಕಾರಣಿಗಳು ಕೂಡ ತಮ್ಮ ಪ್ರತಿಷ್ಠೆಗೆ ಹೋರಿಗಳನ್ನು ಅಕಾಡದಲ್ಲಿ ಬಿಡುತ್ತಿದ್ದಾರೆ. ಒಮ್ಮೆ ಈ ಹಬ್ಬಕ್ಕೆ ಬನ್ನಿ. ಅಲ್ಲಿನ ಕೂಗಾಟ ನಿಮ್ಮನ್ನು ಮತ್ತೆ ಮತ್ತೆ ಹೋರಿ ಹಬ್ಬಕ್ಕೆ ಕರೆತರುತ್ತದೆ. ಹಾಕ್ರೋ ಕೈಯ್ಯಾ, ಬಂತಲೇ ನೋಡು ಜೋಗಮ್ಮನ ಹೋರಿ, ಬಂದ ರಾಜ್ಕುಮಾರ್, ಶಿವಣ್ಣ, ರಣಧೀರ, ಆಂಬ್ಯುಲೆನ್ಸ್ ಜಾಗ ಬಿಡ್ರೋ ಇಲ್ಲಾ ಅಣ್ಣಾ ಹಾಯ್ತಾನೆ. ಅಲೆಲೆ ರವಿಚಂದ್ರನ್ ಹೇಗೆ ಬರ್ತಾನೆ ನೋಡ್ರೋ, ಈ ಹೋರಿ ಹಿಡಿದರೆ ಒಂದು ಮೊಬೈಲ್,ವಾಚು ಫ್ರೀ,ಈ ರೀತಿಯ ಪದಗಳು ಮೈಕ್ ನಲ್ಲಿ ಮರುಕಳಿಸುತ್ತಿರುತ್ತದೆ. ಇವೆಲ್ಲಾ ತಮ್ಮ ಹೋರಿಗಳಿಗೆ ರೈತರು ಇಟ್ಟಂತಹ ಹೆಸರು. ಈ ಗ್ರಾಮೀಣ ಕ್ರೀಡೆ ಜೀವಕ್ಕೆ ಅಪಾಯವಿದೆ ಎಂತಾದರೂ ಹಲವಾರು ವರ್ಷಗಳಿಂದ ರೈತರು ಇದನ್ನು ಆಚರಿಸುತ್ತಿರುವುದು ವಿಶೇಷವೇ ಸರಿ.