ಹೌದು ಕೆಟ್ಟ ಕೈ ಬರಹ ಏನಿವಾಗ?
ಈ ಕೈಬರಹ (ಹ್ಯಾಂಡ ರೈಟಿಂಗ್) ಎನ್ನುವುದಕ್ಕೂ ನನಗೂ ಆಗೇ ಬರಲಿಲ್ಲ ಕೊನೆಗೂ.ಈಗಲೂ
ಆಗ (ಐದನೇ ತರಗತಿ ) ನಮ್ಮ ಗಾಯತ್ರಿ ಟೀಚರ್ ಬೈದಿದ್ದರು " ಅಯ್ಯೋ ನೀನು ಬರೀ ಓದಿದರೆ ಸಾಲದು ಮೂದೇವಿ (ಹಾಗೆ ಬೈಯ್ಯುತ್ತಿದ್ದುದು)ದುಂಡಾಗಿ ಬರೀಬೇಕು. ಇಲ್ಲಾಂದ್ರೆ ಮುಂದೆ ವಿದ್ಯೆ ನೈವೇದ್ಯ ಆಗುತ್ತದೆ. ಆಮೇಲೆ ಸ್ಕೂಲು ಬಿಟ್ಟು ಮನೇಲಿ ಮುಸುರೆ ಪಾತ್ರ ತೊಳ್ಕೊಂದು ಇರಬೇಕಾಗುತ್ತೆ."
ಅವರದ್ದೇನೂ ತಪ್ಪಿರಲಿಲ್ಲ .ನನ್ನ ಕೈ ಬರಹ ಹಾಗೆ ಇತ್ತು (ಈಗಲೂ ಅಷ್ಟೇ). ಕೋಳಿ ಕಾಲಿನ ಹಾಗೆ ಎಂದು ಕೆಲವರು ಹೇಳುತ್ತಿದ್ದರೆ. ಒಳ್ಳೇ ಡಾಕ್ಟರ್ ಕೈ ಬರಹ ಥರಾ ಇದೆ ಎನ್ನುತ್ತಿದ್ದರು. ಓದುವುದರಲ್ಲಿ ಎತ್ತಿದ ಕೈ ಆಗಿದ್ದ ನಾನು ಕೈ ಬರಹದಲ್ಲಿ ಮಾತ್ರ ಮುರಿದ ಕೈ ಆಗಿದ್ದೆ.
ನನ್ನ ಉತ್ತರ ಪತ್ರಿಕೆ ಓದೋದಕ್ಕೆ ಆ ಬ್ರಹ್ಮಾನೇ ಬರಬೇಕು ಎಂದು ಆಡಿಕೋತಿದ್ದರು ನಮ್ಮ ಟೀಚರ್ ಹಾಗಾಗಿಯೇ ಸ್ವಾಭಾವಿಕವಾಗಿಯೇ ಮೂಲೆ ಗುಂಪು ಮಾಡಿದ್ದರು. ದಡ್ದಿ ಎಂಬ ನಾಮಾಂಕಿತ ಕೊಟ್ಟಿದ್ದರು. ಆತ್ಮ ವಿಶ್ವಾಸವೇ ಹೊರಟು ಹೋಗಿತ್ತು. ಕೈಬರಹ್ ಚೆನ್ನಾಗಿಲ್ಲ ಎಂದರೆ ಏನಕ್ಕೂ ಲಾಯಕ್ಕಿಲ್ಲ ಎಂಬಂತೆ ಆಗಿತ್ತು. ಸ್ಕೂಲಿಗೆ ಏಕಾದರೂ ಬರುತ್ತೇನೋ ಎಂದನಿಸಿತ್ತು. ಒಬ್ಬಳೇ ಕುಳಿತು ಅಳುತ್ತಿದ್ದೆ.
ಆಗಲೇ ಬಂದವರು ನಮ್ಮ ನಾಯಕ್ ಸಾರ್. ನನ್ನಲ್ಲಿದ್ದ ಪ್ರತಿಭೆಯನ್ನ ಗುರುತಿಸಿ ಆತ್ಮ ವಿಶ್ವಾಸ ತುಂಬಿದರು. ಕೈಬರಹ ಚೆನ್ನಾಗಿಲ್ಲವೆಂದರೇನು ನೀನು ಎಲ್ಲಕ್ಕೂ ಉತ್ತರಿಸಬಲ್ಲೆ ಎಂದು ಪ್ರೋತ್ಸಾಹಿಸಿದರು. ಅಷ್ಟೆಲ್ಲಾ ಆದರೂ ನನ್ನ ಕೈ ಬರಹ ಮಾತ್ರ ಸುಧಾರಿಸಲಿಲ್ಲ. ಆದರೂ ಏಳನೇ ತರಗತಿಯಲ್ಲಿ ಮೊದಲ ದರ್ಜೆ ಜೊತೆಗೆ ಶಾಲೆಯಲ್ಲಿಯೇ ಮೊದಲ ಸ್ಥಾನ ಪಡೆದೆ
ನಂತರ ಬಂದಿಳಿದಿದ್ದು ಸರಕಾರಿ ಶಾಲೆಗೆ. ಅಲ್ಲಿ ನನ್ನ ಕೈ ಬರಹಕ್ಕಿಂತ ನನ್ನ ,ಪ್ರತಿಭೆಗೆ ಪ್ರೋತ್ಸಾಹ ಹೆಚ್ಚು ಸಿಕ್ಕಿತು. ಕೌಟುಂಬಿಕ ಕಾರಣದಿಂದ ಒಂದಿಡೀ ವರ್ಷ ಸ್ಕೂಲಿಗೆ ಹೋಗಲಾಗಲಿಲ್ಲ ಆದರೂ ನಮ್ಮ ಸುಲೋಚನ ಮಿಸ್ ನನಗೆ ಪೂರ್ತಿ ಹಾಜಾರಾತಿ ಕೊಟ್ಟಿದುದು ಅದಕ್ಕೆ ಸಾಕ್ಷಿಯಾಗಿತ್ತು.
ಆಗಲೂ ಆಗೊಮ್ಮೆ ಈಗೊಮ್ಮೆ ನನ್ನ ಕೈ ಬರಹದ ಕುರಿತು ವ್ಯಂಗ್ಯ ವಿಡಂಬನೆ ನಡೆಯುತ್ತಿತ್ತು. ಕೆಟ್ಟ ಕೈ ಬರಹಕ್ಕೆ ಉದಾಹರಣೆ ನನ್ನದೇ ಆಗಿತ್ತು. ಯಾವುದಾದರೂ ಅಸಾಧ್ಯ ಕೆಲಸದ ಉದಾಹರಣೆ ಬೇಕೆಂದಾಗಲೆಲ್ಲ ರೂಪಾ ಹ್ಯಾಂಡ್ ರೈಟಿಂಗ್ ಇಂಪ್ರೂವ್ ಮಾಡಿಕೊಂಡ ಹಾಗೆ ಎನ್ನುವ ಮಟ್ಟಿಗೆ ನನ್ನ ಕೈ ಬರಹ ಫೇಮಸ್ ಆಗಿತ್ತು. ಆದರೂ ಅದು ನನ್ನನ್ನ ಅಂತಹ ಡಿಪ್ರೆಶನ್‌ಗೆ ನೂಕಲಿಲ್ಲ.
ಆದರೆ ಕೆಟ್ಟ ಕೈಬರಹದ ಪರಿಣಾಮ ಮಾತ್ರ ನಾನು ಪಬ್ಲಿಕ್ ಪರೀಕ್ಷೆಯಲ್ಲಿ ಅನುಭವಿಸಿದೆ.
ನಾನು ನಿರೀಕ್ಷಿಸಿದಕ್ಕಿಂತ ಕಡಿಮೆ ಅಂಕಗಳು ಬಂದವು. ಸ್ಕೂಲಿಗೆ ಪ್ರಥಮಳು ಆದರೂ rank ಬರಬೇಕೆಂಬಕನಸು ಈಡೇರಲಿಲ್ಲ.
ನಂತರವೂ ಈ ಕೈಬರಹದ ಮಹಾತ್ಮೆ ಅಲ್ಲಲ್ಲಿ ಗೊತ್ತಾಗುತ್ತಿತ್ತು. ನನ್ನ ಹಣೇಬರಹದಲ್ಲಿ ಕೈ ಬರಹ ಎನ್ನುವುದು ಇಷ್ಟೆ ಎಂದಾಗಿತ್ತೇನೋ ಎಂದಂದು ಕೊಂಡು ಸುಮ್ಮನಿದ್ದೆ.
ಆದರೆ ದೇವರ ಕೃಪೆಯೋ ಏನೋ ಬರೆದು ಮಾಡುವ ಕೆಲಸಕ್ಕೆ ಮಹತ್ವ ಕಡಿಮೆಯಾಗಿತ್ತು . ಗಣಕದ ಬಳಕೆ ಹೆಚ್ಚಾಗುತ್ತಿತ್ತು.
ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ಸಮಯ . ಕ್ಲಾಸ್ ತೆಗೆದುಕೊಳ್ಳುವಾಗ ನಾನು ಬೋರ್ಡ್ ಮೇಲೆ ಬರೆದದ್ದನ್ನು ನೋಡಿ ಅಣಕಿಸಿದ್ದ ಹುಡುಗರು ನಂತರದ ಪಾಠದ ಶೈಲಿಯನ್ನು ನೋಡಿ ಸುಮ್ಮನಾಗಿದ್ದರು.
ನನ್ನ ಸಹೋದ್ಯೋಗಿಯೊಬ್ಬ ನೀನು ಒಂದು ತಿಂಗಳಲ್ಲಿ ಕೈಬರಹ ಸುಧಾರಿಸಿಕೊಂಡರೆ ನಿನಗೆ ಸಾವಿರ ರೂ ಕೊಡುತ್ತೇನೆ ಎಂದು ಚಾಲೆಂಜ್ ಮಾಡಿದ್ದ. ನಾನು ಸಾವಿರ ರೂ ಗೆಲ್ಲಲಿಲ್ಲ ಎಂಬುದು ಬೇರೆ ಮಾತು.
ಈಗಲೂ ಕೈ ಬರಹ ಹಾಗೆ ಇದೆ ಇನ್ನೂ ಕೆಟ್ಟದಾಗುತ್ತಿದೆ ಏಕೆಂದರೆ ಬರೆಯುವ ಕೈ ತನ್ನ ಅಭ್ಯಾಸವನ್ನು ಕಳೆದುಕೊಂಡಿದೆ.
ಕೈ ಬರಹ ಚೆನ್ನಾಗಿಲ್ಲವೆಂದು ನಾನು ನನ್ನ ವೃತ್ತಿ ಜೀವನದಲ್ಲಿ ಯಾವತ್ತೂ ವಿಫಲತೆ ಅನುಭವಿಸಲಿಲ್ಲ.
ಹಾಗಾಗಿಯೇ ಈಗ ಯಾರಾದರೂ (ನನ್ನ ಆತ್ಮೀಯರು) ನಿನ್ನ ಕೈ ಬರಹ ಚೆನ್ನಾಗಿಲ್ಲ ಎಂದರೆ ಅದಕ್ಕೆ ಏನೀವಾಗ ಎಂದು ಕೇಳುತ್ತೇನೆ . ಅವರು ಸುಮ್ಮನಾಗುತ್ತಾರೆ.ಕೈ ಬರಹ ನನ್ನ ಹಣೆಯ ಬರಹ ನಿರ್ಧರಿಸಲಿಲ್ಲ
ಕೈ ಬರಹದಿಂದ ಹಣೆಬರಹವನ್ನು ಓದಬಹುದು ಎಂದು ಯಾವುದೋ ಜಾಹೀರಾತನ್ನ ನೋಡಿ ಇದೆಲ್ಲ ನೆನಪಾಯ್ತು.
ಎಲ್ಲರಿಗೂ ಸಂಕ್ರಾಂತಿಯ ಶುಭಾಶಯಗಳು
(some changes i have made with salimat as harsha said thank you harsha)