೧೭೫ ವರ್ಷದ ಸಂಭ್ರಮ ಅವ್ರ್ ಅನುಭವಿಸ್ಲಿ, ನಮಿಗ್ ಕಲಿಯೋದ್ ಭಾಳ ಇದೆ

೧೭೫ ವರ್ಷದ ಸಂಭ್ರಮ ಅವ್ರ್ ಅನುಭವಿಸ್ಲಿ, ನಮಿಗ್ ಕಲಿಯೋದ್ ಭಾಳ ಇದೆ

 

ಭಾರತದ ಅತಿ ಹೆಚ್ಚು ಪ್ರಸಾರದಲ್ಲಿರುವ ವಿಶ್ವದಲ್ಲೇ ಹೆಚ್ಚು ಪ್ರಸಾರದಲ್ಲಿರುವ ಇಂಗ್ಲೀಷ್ ದಿನಪತ್ರಿಕೆ, ’ಟೈಮ್ಸ್ ಆಫ್ ಇಂಡಿಯ’ ೧೭೫ ವರ್ಷ ಆಚರಿಸುತ್ತಿದೆ. ನಮಗೆ ಇದೊಂದು ಹೆಮ್ಮೆಯ ವಿಷಯ ಎಂದು, ಪತ್ರಿಕೆಯ ಮಾಲೀಕರು, ಸಂಪಾದಕರು, ದಾಖಲಿಸಿರೋದನ್ನ್ ಯೋಚಿಸಿದರೆ, ಯಾರು ಹೆಮ್ಮೆ ಪಡಬೇಕು ನಾವೇ ಅಥವಾ ಬ್ರಿಟಿಷ್ ಜನರೇ ? ಎಂದು ಒಮ್ಮೆ ನಮ್ಮನ್ನೇ ಪ್ರಶ್ನೆ ಕೇಳಿಕೊಳ್ಳುವುದು ಮೇಲು, ಅಂತನ್ಸತ್ತೆ. ಒಟ್ಟಿನಲ್ಲಿ 'ಅತಿಥಿದೇವೋಭವ 'ಇತ್ಯಾದಿಗಳನ್ನು ಸರಿಯಾಗಿ, ನಮ್ಮ ತಲೆಯಮೇಲೆ ನಾವೇ ಚಪ್ಪಡಿ ಹಾಕಿಕೊಳ್ಳದೆ ಅರ್ಥಮಾಡಿಕೊಳ್ಳುವ ಕಾಲ ಬಂದಿದೆ, ಎನ್ನುವುದು ನನ್ನ ಅನಿಸಿಕೆ. ಇದನ್ನು ಬೇರೆ ತರಹ ಅರ್ಥೈಸುವ ಜನರಿಗೆ ಕಡಿಮೆಯಿಲ್ಲ ! ಇದಕ್ಕಿಂತಾ ಹೆಚ್ಚಿನದೇನನ್ನೂ ನಾವು ಮಾಡಲಾರೆವು. ಸಧ್ಯ ಇರೋದನ್ನ್ ನಿಭಾಯಿಸಲು ಕಲಿಯೋಣ !

ಭಾರತದೇಶವನ್ನು ತಮ್ಮದಾಗಿಸಿಕೊಂಡು ಸುಮಾರು ೨೦೦ ವರ್ಷಗಳ ರಾಜ್ಯಾಡಳಿತದಲ್ಲಿ ನಮಗಾಗಿ ಸಹಾಯಮಾಡಿದ ಹಲವು ಮಿಂಚಿದ ಕ್ಷಣಗಳೂ ಇವೆ. ಕೊನೆಗೆ ನಮಗನ್ನಿಸುವುದು ನಾವುಕೊಟ್ಟೆವು, ಆರು ತೆಗೆದುಕೊಂಡರು; ಇದರಲ್ಲಿ ಅವರ ತಪ್ಪೇನು. ಭಾರತ ಸುಲಭವಾಗಿ ಕೈಗೆ ಸಿಕ್ಕಾಗ ಬ್ರಿಟಿಷ್ ರಾಜಕೀಯ ಧುರೀಣರು ಪಟ್ಟ ಸಂತಸ ದಾಖಲಿಸಲು ಯೋಗ್ಯವಾಗಿದೆ. ಅಲ್ಲಿ-ಇಲ್ಲಿ ಪೋಕರಿಯಾಗಿ ಆಟವಾಡಿಕೊಂಡು ದಿನಗಳೆಯುತ್ತಿದ್ದ 'ರಾಬರ್ಟ್ ಕ್ಲೈವ್' ಎಂಬ ವ್ಯಕ್ತಿ ಕಲ್ಕತ್ತಾದಲ್ಲಿ ಕೂತಿದ್ದಾಗ, ಅವನ ಕೈಗೆ ಬಿದ್ದ ಕ್ರಿಕೆಟ್ ಚೆಂಡಿನಂತೆ ಭಾರತ ಬಿದ್ದಾಗ, ಅದನ್ನು ಕ್ಯಾಚ್ ಹಿಡಿದದ್ದು, ಮುಂದೆ ನಮ್ಮ ಜನರನ್ನು ಆಟವಾಡಿಸಿದ್ದು ; ಎಲ್ಲಾ ಒಂದು ಕೆಟ್ಟ ಕನಸಿನಂತೆ ಎಂದು ಅನ್ನಿಸಿದರೂ, ಅವರಿಗಾಗಿ ಅವರ ವ್ಯಾಪಾರ ಮುಂದೋಡಿಸಲು ಆಯೋಜಿಸಿಕೊಂಡ ಹಲವಾರು (ಜನಹಿತ ?) ಅವರ ಸಾಮ್ರಾಜ್ಯ ಹಿತ ಕಾರ್ಯಗಳು ನಮಗೂ ಅನುಕೂಲವಾಗಿ, ಇನ್ನು ನೂರು ವರ್ಷ ಸಾಧಿಸಬೇಕಾಗಿದ್ದ ಕೆಲಸಗಳು ದಿಢೀರನೆ ನಮ್ಮ ಕೈಗೂಡಿದ್ದೂ, ನಮ್ಮ ಅದೃಷ್ಟವೇ ಸರಿ. ಹಾಗೆ ನೋಡಿದರೆ ವಿಶ್ವದಾದ್ಯಂತ ಬ್ರಿಟಿಷ್ ಸರಕಾರ ತನ್ನ ವ್ಯಪ್ತಿಯನ್ನು ಇಟ್ಟುಕೊಳ್ಳಲು ಅವರ ನಂಬಿಕಸ್ತ ರಾಷ್ಟ್ರಪ್ರೇಮಿ ಸೈನಿಕರು, ಅಧಿಕಾರಿಗಳು,ನಾಗರೀಕರು,ಇತ್ಯಾದಿ ಜನರನ್ನು ನೋಡಿ ನಾವು ಕಲಿಯಬೇಕಾದದ್ದು ಬೆಟ್ಟದಷ್ಟಿದೆ.

ಅಂದು ಅವರಿಂದಲೇ ಶುರುವಾದ 'ಟೈಮ್ಸ್ ಆಫ್ ಇಂಡಿಯ ದಿನಪತ್ರಿಕೆ', ಮತ್ತೆ ಅವರೇ ತಮಗಾಗಿ ಮಾಡಿಕೊಂಡ ರೈಲು ಸೌಕರ್ಯ. ಬ್ರಿಟನ್ ನಿಂದ ನೇರವಾಗಿ ಹಡಗಿನಲ್ಲಿ ಬಂದು ಇಲ್ಲವೇ ಅವರ ಯಂತ್ರೋಪಕರಣಗಳನ್ನು ತಂದು, ನಮ್ಮ ಬೊಂಬಾಯಿನ ಡಾಕ್ ನಲ್ಲಿ ಇಳಿಸಿಕೊಂಡು, ಪಕ್ಕದಲ್ಲಿ ಕಾಯುತ್ತಾ ನಿಂತಿರುವ ರೈಲ್ವೆ ವ್ಯಾಗನ್ ನಲ್ಲಿ ಕುಳಿತು, ಸಾಮಾನನ್ನು ಒಳಗೆ ಇಟ್ಟು, ಬೊಂಬಾಯಿನ ಕೊನೆಯವರೆಗೂ, ತದನಂತರ ಭಾರತದಾದ್ಯಂತ , ಪ್ರಯಾಣಿಸುವ ಯೋಜನೆ ನೆನೆಸಿಕೊಂಡರೆ ಎಂಥವರೂ ಸ್ಥಬ್ದರಾಗಬೇಕು; ಇದಲ್ಲವೇ ಬ್ರಿಟಿಷ್ ಚಾಣಾಕ್ಷತನ ?! ನಮಗೂ ಈಗ ಇದರ ಸೌಲಭ್ಯ ಒದಗಿದೆ. ಅದನ್ನು ಸಕ್ಷಮವಾಗಿ ಇಟ್ಟುಕೊಳ್ಳಲೂ ಅಗದಷ್ಟು ಹೀನಸ್ಥಿತಿಯಲ್ಲಿ ನಾವಿರುವುದು ದುರದೃಷ್ಟಕರ ! ಇನ್ನಾದರೂ ಕಲಿಯೋಣ ! ಬೇಂದ್ರೆಯವರ ಕುಣಿಯೋಣ ಬಾರ ಎನ್ನುವ ಸಾಲುಗಳನ್ನು ಬದಲಿಸಿ ಹೀಗೆ ಹೇಳಬಹುದು : 'ಕಲ್ಯೋಣ ಬಾರ ಹೊಸದನ್ನ' 'ನಮ್ಗ್ಯಾಕೆಲ್ಲಾ ಹೋಗ್ಲಿ ಬಿಡಿಸಾರ್', 'ಯಾಕ್ಬೇಕಪ್ಪ' 'ಇವೆಲ್ಲಾ ಬಿಟ್ಬಿಡಿಸಾರ್' ಎನ್ನೋ 'ಗೋಳ್ಗರೆರಾಗ ತೊರೆದು', ಕಲ್ಯೋಣ ಬಾ,

 

ಭಾರತದ  ಪ್ರಪ್ರಥಮ  ಸಾರ್ವಜನಿಕ ರೈಲು ಯಾತಾ-ಯಾತ, ಬೊಂಬಾಯಿನ ವಿಕ್ಟೋರಿಯ ಟರ್ಮಿನಸ್ಸಿನಿಂದ ೧೬,  ಎಪ್ರಿಲ್, ೧೮೫೩ ರಲ್ಲಿ  ಥಾನಾವರೆಗೆ (ಆಗ ಟನ್ನಎಂದು ಪತ್ರಿಕೆ ಯಲ್ಲಿ ದಾಖಲಾಗಿತ್ತು) ಆರಂಭವಾಯಿತು. ಸುಮಾರು   ೫೭ ನಿಮಿಷಗಳಲ್ಲಿ  ೨೧ ಮೈಲಿಗಳ ದೂರವನ್ನು  ಸಾಹಿಬ್, ಸಿಂಧ್, ಸುಲ್ತಾನ್ ಎಂಬ ೩ ರೈಲ್ವೆ ಇಂಜಿನ್ ಗಳು,  ೨ ೦ ಬೋಗಿಗಳನ್ನು ತಮ್ಮ ಬೆನ್ನಿಗೆ ಕಟ್ಟಿಕೊಂಡು ರಭಸದಿಂದ ಎಳೆದುಕೊಂಡು ದಡಗುಟ್ಟುತ್ಟಾ ಓಡಿ, ಒಂದು ಹೊಸ ದಾಖಲೆಯನ್ನೇ ಸೃಷ್ಟಿಸಿದವು.  ರೈಲು ಸೀಟಿ ಉದಿಗಾಗ ರೈಲು ದಾರಿಯುದ್ದಕ್ಕೂ ಇಕ್ಕೆಲಗಳಲ್ಲಿ ನೆರೆದಿದ್ದ  ಜನರ ಹರ್ಷೋದ್ಗಾರಗಳಿಂದ 'ಕೈ ಆಡಿಸುತ್ತಾ ಅಭಿನಂದಿಸುವ ದೃಶ್ಯ ಮರೆಯಲಾರದ ಅನುಭವವೆಂದು, ಅಂದಿನ ಪತ್ರಿಕೆ ವರದಿಮಾಡಿತು. ಅಂದು  ನಗರದ ಸಂಭ್ರಮ ವರ್ಣಿಸಲಸದಳವಾಗಿತ್ತು. ಬ್ರಿಟಿಷ್ ಸಾಮ್ರಾಜ್ಯದ ಇತಿಹಾಸದಲ್ಲಿ ಅಲ್ಲದಿದ್ದರೂ ಬ್ರಿಟಿಷ್ ಆಡಳಿತದ  ಭಾರತದ ಚರಿತ್ರೆಯ  ಪುಟಗಳಲ್ಲಿ  ಅದೊಂದು ಅವಿಸ್ಮರಣೀಯ ದಿನವಾಗಿ ಪರಿಣಮಿಸಿತು. ದಿನಪತ್ರಿಕೆಗಳಲ್ಲಿ ಜಾಹಿರಾತುಗಳ ಬಗ್ಗೆ  ಹಲವಾರು ವರದಿಗಳಿದ್ದವು.

 

" ಸಾರ್ವಜನಿಕರಿಗೆ ತಿಳಿಯಪಡಿಸುವುದೇನೆಂದರೆ, ಈ ಸೋಮವಾರ ಮತ್ತು ಮುಂದೆ ತಿಳಿಸುವವರೆಗೂ ದಿನವೂ ನಿಗದಿಯಾದಂತೆ, ವೇಳಾಪಟ್ಟಿಯಲ್ಲಿ ನಮೂದಿಸಿರುವಂತೆ ರೈಲು ಪ್ರಯಾಣದ ವೇಳೆ, ಮತ್ತು ಇತರೆ ವಿವರಗಳು ಅನ್ವಯಗಾಗುತ್ತವೆ. ಥಾಣೆ, ಮಾಹೀಮ್  ವರೆಗಿನ ಹೋಗಿಬರುವ  'ಪ್ರಥಮ ದರ್ಜೆ ಪ್ರಯಾಣ'ದ ದರವನ್ನೂ ಕೊಡಲಾಗಿದೆ.ಮುಂತಾದ ವಿವರಗಳು."

 

೧೮೩೨ ರ ಹೊತ್ತಿಗೇ ಬೊಂಬಾಯಿ ಮತ್ತು ಅಕ್ಕಪಕ್ಕದ ಇಲಾಖೆಗಳಲ್ಲಿ ಹಳಿಗಳನ್ನು ಹಾಕುವ ಕೆಲಸ ಭರದಿಂದ ಸಾಗಿತ್ತು. 'ಮದ್ರಾಸ್ ಪ್ರೆಸಿಡೆನ್ಸಿ'ಯಲ್ಲಿ 'ರೈಲು ಯಾನ' ಪ್ರಯೋಗರೀತಿಯಲ್ಲಿ ಆಗಲೇ ಶುರುವಾಗಿತ್ತು. ೧೮೪೪ ರಲ್ಲಿ 'ಅಂದಿನ ಭಾರತದ ಗವರ್ನರ್ ಜನರಲ್, ಹಾರ್ಡಿಂಜ್'  ಖಾಸಗಿಯಾಗಿ ಯಾರಾದರು ಮುಂದೆ ಬಂದು, ರೈಲು ಯಾನವನ್ನು ಶುರು ಮಾಡಬಹುದೆಂದು ಘೊಶಿಸಿದರು. ಪಾರ್ಸಿ ಉದ್ಯಮಿ, 'ಸರ್ ಜಮ್ಷೆಡ್ ಜಿ ಜೀಜಿ ಭಾಯ್',  ಮತ್ತು 'ನಾನಾ ಶಂಕರ್ ಶೇಟ್'  ರ ಜಂಟಿ ಸ್ವಾಮಿತ್ವದಲ್ಲಿ ಸ್ಥಾಪಿಸಲ್ಪಟ್ಟ 'ಇಂಡಿಯನ್ ರೈಲ್ವೆ ಅಸೋಸಿಯೇಶನ್' ನ ಪ್ರಯತ್ನದಿಂದಾಗಿ ಮೊದಲ ರೈಲು ಯಾನ ಸಂಭವವಾಯಿತು. 'ಇಂಡಿಯನ್ ರೈಲ್ವೆ ಅಸೋಸಿಯೇಶನ್', ಕಾಲಾನುಕ್ರಮದಲ್ಲಿ 'ದ ಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ' ಯ ಜೊತೆಯಲ್ಲಿ ವಿಲೀನಹೊಂದಿತು. ೧೦ ಜನರ ರೈಲ್ವೆ ಬೋರ್ಡ್ ನಲ್ಲಿ 'ಜೀಜಿಭಾಯಿ' ಮತ್ತು 'ಶಂಕರ ಸೇಟ್' ಭಾರತೀಯ ಡೈರೆಕ್ಟರ್ಸ್ ಆಗಿ, ಕೆಲಸಮಾಡಿದರು.

 

'ದಿ ಸ್ಪೆಕ್ಟಕಲ್  ಆಫ್ ವಂಡರ್ಸ್ ಮ್ಯಾನಿಫೋಲ್ದ್,' ('The spectacle of wonders manifold') ಎಂಬ ಶೀರ್ಷಿಕೆಯಲ್ಲಿ 

೩ ಸಾಲಿನ ಒಂದು ಪದ್ಯದಲ್ಲಿ ಸುಂದರವಾಗಿ ಬಾಂಬೆಯ ನಾಗರಿಕರಿಗೆ ರೈಲ್ವೆ ಪ್ರಯಾಣದ ಸೌಲಭ್ಯ ಪ್ರಾಪ್ತವಾದ ಬಗ್ಗೆ ಸವಿಸ್ತಾರವಾಗಿ ವಿವರಿಸಲಾಗಿತ್ತು. ರೈಲ್ವೆ ಪ್ರಯಾಣ ಶುರುವಾದ ದಿನ, 'ಸಾರ್ವಜನಿಕ ರಜವನ್ನಾಗಿ ಘೊಶಿಸಲಾಯಿತು'. 'ಬಾಂಬೆ ಟೈಮ್ಸ್' ನಲ್ಲಿ ಪ್ರಕಟಿಸಿದ, 'ರೈಟ್ ಅನರಬಲ್ ಗವರ್ನರ್', ರವರ ಆದೇಶದಂತೆ, ೧೬, ಶನಿವಾರ, ಬೊಂಬಾಯಿನ ಕಚೇರಿಗಳಿಗೆ ರಜ ಕೊಡಲಾಗಿದೆ. ಮತ್ತು ಹತ್ತಿರದ ಉಪನಗರಗಳ ಕಚೇರಿಗಳಿಗೂ ರಜೆ ಕೊಡಗಿತ್ತು. ಆ ದಿನ ಭಾರತದ ಮೊಟ್ಟ ಮೊದಲ ಲೋಕೊಮೊಟೀವ್ ನಿಂದ ಚಾಲಿತ ರೈಲು ಸಂಚಾರ, ನಾಗರಿಕರಿಗಾಗಿ ಶುರುವಾದ್ದರಿಂದ ಆ ಶುಭ ಕಾರ್ಯವನ್ನುಗ್ರೇಟ್ ಇಂಡಿಯನ್ ಪೆನಿನ್ಸುಲಾ ರೈಲ್ವೆ ಕಂಪೆನಿಯ ವತಿಯಿಂದ ಉದ್ಘಾಟನೆಮಾಡಲಾಯಿತು.



* ಇದಕ್ಕೆ ಮೊದಲು,

ಭಾರತದಲ್ಲಿ ಮೊದಲ ರೈಲು, ಡಿಸೆಂಬರ್, ೨೨, ೧೮೫೧ ರಲ್ಲಿ, ರೂರ್ಕಿಯಲ್ಲಿ ಕಟ್ಟುತ್ತಿದ್ದ 'ನೀರುಕಾಲುವೆ'ಗೆ ಸಾಮಾನುಗಳನ್ನು ಕೊಂಡೊಯ್ಯಲು ನಿರ್ಮಿಸಿದ  ಸೇತುವೆಗಳ ಮೇಲೆ ಚಲಿಸುತ್ತಿದ್ದ ರೈಲಿನದಾಗಿತ್ತು.

 

* ನಂತರ ಸಾರ್ವಜನಿಕರಿಗೆ ಮುಡುಪಾಗಿಟ್ಟ

ರೈಲು, ಬಾಂಬೆಯದು

 

 

* ಪತ್ರಿಕೆಯ ವಿವರಗಳು :

೧೮೩೮-೧೮೬೦ 'ಬಾಂಬೆ ಟೈಮ್ಸ್ ಅಂಡ್ ಜರ್ನಲ್ 

 

ಆಫ್ ಕಾಮರ್ಸ್' ಎಂದಿತ್ತು. 

೧೮೬೦-೬೧ ರ ನಡುವೆ, 'ಬಾಂಬೆ ಟೈಮ್ಸ್ ಅಂಡ್ ಸ್ಟಾಂಡರ್ಡ್'

ಜುಲೈ,೧೮೬೧ ರಲ್ಲಿ 'ಟೈಮ್ಸ್ ಆಫ್ ಇಂಡಿಯ' ಎಂಬ  ಹೆಸರನ್ನು ಇಡಲಾಯಿತು

 

Comments

Submitted by venkatesh Thu, 04/25/2013 - 18:55

'ಟೈಮ್ಸ್ ಆಫ್ ಇಂಡಿಯಾ ಮುಂಬೈ ದಿನ ಪತ್ರಿಕೆ', ಈಗಾಗಲೇ 175 ವರ್ಷ ಯಶಸ್ವಿಯಾಗಿ ಮುಗಿಸಿದೆ. ಪತ್ರಿಕೆ ಈಗ ದೇಶದಾದ್ಯಂತ ಪಸರಿಸಿದೆ. ವಿಶ್ವದಲ್ಲೇ ಇಂಗ್ಲೀಷ್ ಭಾಷೆಯ ಅತ್ಯಂತ ಹೆಚ್ಚು ಪ್ರಸಾರದ ಪತ್ರಿಕೆ, ಎಂದು ಹೆಸರು ಮಾಡಿದೆ. ಮುಂದುವರೆಸಿ. ಜಯವಾಗಲಿ !
Submitted by makara Thu, 04/25/2013 - 22:49

ವೆಂಕಟೇಶ್ ಸರ್, ನೀವು ಹೇಳಿದಂತೆ, ಅವರು ಕಟ್ಟಿ ಬಿಟ್ಟು ಹೋದದ್ದನ್ನೂ ಸಹ ನಾವೂ ಸರಿಯಾಗಿ ಉಳಿಸಿಕೊಂಡು ಹೋಗಲಾಗುತ್ತಿಲ್ಲ ಎನ್ನುವುದೇನೋ ಖೇದದ ಸಂಗತಿ. ಆದರೆ ಅವರು ಬಿಟ್ಟು ಹೋದ ಇಂಗ್ಲೀಷನ್ನು ಮಾತ್ರ ಅವರಿಗಿಂತ ಚೆನ್ನಾಗಿ ಉಳಿಸಿ, ಬೆಳೆಸಿ ಪೋಷಿಸಿಕೊಂಡು ಬರುತ್ತಿದ್ದೇವೆ ಅಷ್ಟೇ ಏಕೆ ಅದನ್ನು ತಲೇ ಮೇಲೆ ಹೊತ್ತು ಮೆರೆಸುತ್ತಿದ್ದೇವೆ :((
Submitted by venkatesh Fri, 04/26/2013 - 06:31

In reply to by makara

ನಿಮ್ಮ ಮಾತು ಸತ್ಯ. ಒಂದು ಮಾತು ನಿಜ. ನಾವು ಅಮೆರಿಕ, ಕೆನಡಾ ಸುತ್ತಿದೆವು. ಒಂದು ವೇಳೆ ಅದೇ ನಮ್ಮ ತಲೆಯಮೇಲೆ ಕೂರಿಸಿಕೊಂಡು ಮೆರೆಸುತ್ತಿರುವ ಇಂಗ್ಲೀಷ್ ಭಾಷೆ ಇಲ್ಲದಿದ್ದಿದ್ದರೆ ನಮಗೇನಾಗುತ್ತಿತ್ತೋ ಗೊತ್ತಿಲ್ಲ. ಮತ್ತೆ ಕೆನಡಾದಲ್ಲಿ ವಸ್ತು ಸಂಗ್ರಹಾಲಯವನ್ನು ನೋಡಿ ಹೊರಗೆ ಬಂದು ಲಾಬಿಯಲ್ಲಿ ಕೂತಿದ್ದಾಗ, ಒಬ್ಬ ಫ್ರೆಂಚ್ ನಾಗರಿಕನ ಜೊತೆ ಮಾತುಕತೆ ನಡೆಯಿತು. ಆತ, ಕೆನಡಾದ ಪೊಲೀಸ್ ಖಾತೆಯಲ್ಲಿ ದುಡಿದು ನಿವೃತ್ತನಾಗಿದ್ದ. 'ಅಬ್ಬಾ ಫ್ರೆಂಚ್ ಭಾಷೇನಲ್ಲಿ ಮಾತಾಡಿದ್ರೆ ನನಗೆ ನೌಕರಿ ಸಿಗ್ಟಿತ್ತಾ , ರಾಮ ರಾಮ 'ಎಂದು ನಮ್ಮೊಡನೆ ಪೇಚಾಡಿಕೊಂಡ ! ಬಹುಶಃ ಬ್ರಿಟಿಷ್ ಜನ ಮತ್ತು ಅವರ ಭಾಷೆಯನ್ನು ಭಾರತೀಯರು ದ್ವೇಷಿಸುತ್ತಾರೆ. ಅದಕ್ಕೆ ನಮ್ಮ ಫ್ರೆಂಚ್ ಬಗ್ಗೆ ಕನಿಕರ ಇರಬಹುದು ಎಂದು ಅಂದು ಕೊಂಡಿದ್ದ . ಆದರೆ, 'ಸದ್ಯ ಇಲ್ಲಿ ಇಂಗ್ಲೀಷ್ ಭಾಷೆಯ ಬೋರ್ಡ್ ಗಳಿವೆಯಲ್ಲ 'ಎಂದು ನನ್ನ ಹೆಂಡತಿ ಹೇಳುತ್ತಾ ನಮ್ಮ ಪಕ್ಕದಲ್ಲಿ ಬಂದು ಕುಳಿತಾಗ, ಆತನಿಗೆ ಭಾಷಾಜ್ಞಾನ ಹೆಚ್ಚಿದ್ದು ನಮ್ಮ ಗಮನಕ್ಕೆ ಬಂತು ! ಈ ಉದಾಹರಣೆ ನಮ್ಮ ಮಾತಿಗೆ ಉತ್ತರವೇ ?
Submitted by venkatesh Fri, 04/26/2013 - 08:20

In reply to by venkatesh

ವೆಂಕಟೇಶ್ ರವರೆ, ಸ್ವಲ್ಪ ಮುಂದೆ ಹೇಳಲು ಅನುಮತಿ ದೊರೆಯುತ್ತೆ ಎಂದು ಭಾವಿಸುತ್ತೇನೆ. ನಾನು ಹಿರಿಯ ಅಲ್ಲವೇ ಸಹಜವಾಗಿ ಕೆಲವು ಅನುಕೂಲಗಳು ನನ್ನ ನರೆತ ತಲೆಗೆ ಒದಾಗಲೇ ಬೇಕು ! ಈ 'ಸ್ಪರ್ಧಾಮಾಯ ವಿಶ್ವದಲ್ಲಿ'(?), ಬಾಳಲು ಕೇವಲ 64 ವಿದ್ಯೆಗಳು ಸಾಲವೇನೋ ಅನ್ನಿಸುತ್ತಿದೆ. ಹಾಗಾಗಿ ಇಂಗ್ಲೀಷ್ ಕಲಿತ ಜಾಣ/ಜಾಣೆಯರು, ಎಲ್ಲಿ ಬೇಕಾದರೂ ಹೇಗೋ ಜೀವನ ಮಾಡಿ ಬದುಕಬಹುದು. ಎನ್ನುವುದನ್ನು ಎಲ್ಲರೂ ಒಪ್ಪಲೆ ಬೇಕು. ನಮಗೆ ಬೇಕಾದ ಹಲವಾರು ಪರಿಣತೆಗಳಲ್ಲಿ, ಇಂಗ್ಲೀಷ್ ಅಗ್ರಸ್ಥಾನದಲ್ಲಿದೆ ಅನ್ನೋದನ್ನ ಯಾಕೆ ಮರೆಮಾಚಬೇಕು. ನಿಜ ನಿಜಾನೇ ಅಲ್ವೇ ! ಸಾಧ್ಯವಾದ್ರೆ, ಫ್ರೆಂಚ್, ಜಾರ್ಮನ್, ರಷ್ಯನ್, ಸ್ಪಾನಿಷ್ ಕಲಿಬಹುದು. ಸಂಸ್ಕೃತ ಕಲಿಯದೆ ನಮ್ಮಂತಹವರು ಬದುಕಿಲ್ಲವೇ ? ಆದರೆ ಅದನ್ನು ಕಲಿಯಲೆ ಬೇಕು, ಇದು ನನ್ನ ನ್ಯೂನತೆಗಳಲ್ಲೊಂದು ಎಂದು ನಾನು ಭಾವಿಸುತ್ತೇನೆ. ಒಟ್ಟಿನಲ್ಲಿ ಇಂಗ್ಲೀಷ್ ಬಗ್ಗೆ ಹೆಚ್ಚು ಪ್ರೇಮ, ಇತ್ಯಾದಿ ಮಾತುಗಳನ್ನು ಕೈಬಿಡುವುದು ಲೇಸು. ನಮ್ಮ ಯೋಚನೆಯಲ್ಲಿ ಹೊಸದು ಬರಬೇಕು. ಉದಾ : ಒಬ್ಬ ಮಲೆಯಾಳಿ, ಅಥವಾ ತಮಿಳನು, ಹಿಂದಿಯನ್ನು ಕಲಿಯಲು ಇಷ್ಟಪಡುತ್ತಿರಲಿಲ್ಲ. ಇದು ಮೊಡಳಿತ್ತು. ಈಗಲ್ಲ. ಅವನಿಗೆ ಈಗ ಹಿಂದಿ ಕಲಿಯದೆ ಆದ ಅನಾಹುತ ತಿಳಿದಿದೆ. ನಮ್ಮ ಜನ ಪ್ರಪಂಚದಾದ್ಯಂತ ಕೆಲಸಕ್ಕೆ ಅಳೆಯಬೇಕಾದ ಪ್ರಮೇಯ ಬಂದಿರುವುದರಿಂದ, ಅದನ್ನು ಮಾಡದೆ ವಿಧಿಯಿಲ್ಲ. ಹಾಗಂದ ಮಾತ್ರಕ್ಕೆ ಕನ್ನಡವನ್ನು ನಿರಾಕರಿಸು ಎನ್ನುವ ಅರ್ಥವಲ್ಲ. ಕನ್ನಡದವರು ಮೊದಲು ಕನ್ನಡದಲ್ಲಿ ಮಾತಾಡಲು ಕಲಿಯಬೇಕು. ಅನುಕೂಲಕ್ಕೆ ತಕ್ಕಂತೆ ಬತ್ತಳಿಕೆಯಿಂದ ಬಾಣಗಳನ್ನು ಒಂದೊಂದಾಗಿ ತೆಗೆದು ಪ್ರಯೋಗಿಸಬೇಕು. ಒಮ್ಮೊಮ್ಮೆ ಕನ್ನಡ ಕೆಲಸಕ್ಕೆ ಕೆಲವು ವೇಳೆ ಬರಬಹುದು !