೩೩% ಮೀಸಲಿಂದ ಸ್ಥಳೀಯ ಚುನಾವಣೆಗೆ ಹಾದಿ ಸುಗಮ

೩೩% ಮೀಸಲಿಂದ ಸ್ಥಳೀಯ ಚುನಾವಣೆಗೆ ಹಾದಿ ಸುಗಮ

ನಗರ ಹಾಗೂ ಗ್ರಾಮೀಣ ಸ್ಥಳೀಯ ಸ್ಥಂಸ್ಥೆಗಳಲ್ಲಿನ ಶೇ. ೩೩ರಷ್ಟು ಹುದ್ದೆಗಳನ್ನು ಹಿಂದುಳಿದ ವರ್ಗ (ಒಬಿಸಿ)ಗಳಿಗೆ ಮೀಸಲಿಡುವ ಸಂಬಂಧ ನ್ಯಾ। ಕೆ. ಭಕ್ತವತ್ಸಲ ನೇತೃತ್ವದ ದ್ವಿಸದಸ್ಯ ಆಯೋಗ ಮಾಡಿದ್ದ ಶಿಫಾರಸುಗಳನ್ನು ರಾಜ್ಯ ಸರ್ಕಾರ ಭಾಗಶಃ ಒಪ್ಪಿಕೊಳ್ಳುವುದರೊಂದಿಗೆ, ಪೌರ ಸಂಸ್ಥೆಗಳ ಚುನಾವಣೆಗೆ ಹಾದಿ ಸುಗಮವಾದಂತಾಗಿದೆ. ಈ ಆಯೋಗದ ಐದು ಶಿಫಾರಸುಗಳ ಪೈಕಿ ಮೂರು ಶಿಫಾರಸನ್ನು ಸರ್ಕಾರ ಒಪ್ಪಿಕೊಂಡಿದೆ. ಈ ಬೆಳವಣಿಗೆಯಿಂದಾಗಿ, ಈವರೆಗೆ ಒಬಿಸಿ ವರ್ಗಗಳು ಅನುಭವಿಸಿಕೊಂಡು ಬಂದಿದ್ದ ಮೀಸಲಾತಿಯು ಕೈತಪ್ಪುವ ಭೀತಿಯು ದೂರವಾಗಿದೆ. ಹಾಗೆಯೇ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ನಡೆಸಲು ಇದ್ದ ಅಡ್ಡಿಗಳಲ್ಲಿ ಪ್ರಮುಖವಾದ ತೊಡಕೊಂದು ನಿವಾರಣೆಯಾದಂತಾಗಿದೆ. ಹೀಗಾಗಿ ಹಲವು ತಿಂಗಳಿಂದ ನೆನೆಗುದಿಗೆ ಬಿದ್ದಿರುವ ಬಿಬಿಎಂಪಿ, ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಚುನಾವಣೆ ಪ್ರಕ್ರಿಯೆಗಳಿಗೆ ಚಾಲನೆ ನೀಡಲು ಸಚಿವ ಸಂಪುಟ ಸಭೆಯ ನಿರ್ಧಾರ ಸಹಕಾರಿಯಾಗುವುದಂತೂ ನಿಶ್ಚಿತ ಎಂಬುದರಲ್ಲಿ ಎರಡು ಮಾತಿಲ್ಲ. ಹೀಗಾಗಿ ಆ ಸಂಸ್ಥೆಗಳ ವ್ಯಾಪ್ತಿಯ ಜನರು ತಮ್ಮ ಪ್ರತಿನಿಧಿಗಳನ್ನು ಆರಿಸಿಕೊಳ್ಳುವುದಕ್ಕೆ ಅನುಕೂಲವಾಗಲಿದೆ.

ಶಿಕ್ಷಣ ಹಾಗೂ ಉದ್ಯೋಗದಲ್ಲಿ ಒಬಿಸಿ ಮೀಸಲು ಇದೆ. ಆದರೆ ಚುನಾವಣೆಗಳಲ್ಲಿ ಒಬಿಸಿ ಮೀಸಲಾತಿ ನೀಡಲು ಹಿಂದುಳಿದಿರುವಿಕೆಯನ್ನು ಪುಷ್ಟೀಕರಿಸುವ ಅಂಕಿ-ಅಂಶ ಇರಬೇಕು ಎಂದು ೨೦೧೦ರಲ್ಲೇ ಸುಪ್ರೀಂಕೋರ್ಟ್ ಹೇಳಿತ್ತು. ಈ ನಡುವೆ ಮಹಾರಾಷ್ತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಒಬಿಸಿ ಮೀಸಲು ನೀಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ಕುರಿತು ೨೦೨೧ರ ಮಾರ್ಚ್ ನಲ್ಲಿ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, “ಟ್ರಿಪಲ್ ಟೆಸ್ಟ್" ಎಂದೂ ಕರೆಯಲಾಗುವ ೩ ಸ್ತರದ ಪರೀಕ್ಷೆಯನ್ನು ಸೂಚಿಸಿತ್ತು. ಒಬಿಸಿ ಮೀಸಲಾತಿ ನೀಡುವ ಸರ್ಕಾರಗಳು ಇದನ್ನು ಪಾಲಿಸಬೇಕು ಎಂದು ತಾಕೀತು ಮಾಡಿತ್ತು. ಮೀಸಲಾತಿ ನೀಡುವ ಮುನ್ನ ಒಬಿಸಿಗಳ ಹಿಂದುಳಿದಿರುವಿಕೆ ಅರಿಯಲು ಆಯೋಗ ರಚಿಸಬೇಕು, ಆ ಆಯೋಗ ದತ್ತಾಂಶಗಳನ್ನು ಸಂಗ್ರಹಿಸಿ ಮೀಸಲಾತಿಯ ಪ್ರಮಾಣ ನಿರ್ಧರಿಸಬೇಕು. ಒಬಿಸಿ ಮೀಸಲಾತಿ ನೀಡುವಾಗ ಒಟ್ಟಾರೆ ಮೀಸಲು ಪ್ರಮಾಣ ಶೇ.೫೦ರ ಗಡಿ ದಾಟಬಾರದು ಎಂಬುದು ಟ್ರಿಪಲ್ ಟೆಸ್ಟ್ ನ ಸಾರ. ಈ ತೀರ್ಪಿನ ಬಳಿಕ ಹಲವು ರಾಜ್ಯಗಳ ಸ್ಥಳೀಯ ಚುನಾವಣೆಗಳಲ್ಲಿ ಒಬಿಸಿ ಮೀಸಲಿನ ಸಹಿತ ಚುನಾವಣೆ ನಡೆಸುವುದಕ್ಕೆ ತೊಡಕಾಯಿತು. ಮೀಸಲಾತಿ ಕಲ್ಪಿಸದೆ ಚುನಾವಣೆ ನಡೆಸಬಹುದಾಗಿತ್ತಾದರೂ ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಆ ಆಯ್ಕೆಯನ್ನು ಬಳಸಿಕೊಳ್ಳಲಿಲ್ಲ. ಹೀಗಾಗಿ ಸ್ಥಳೀಯ ಚುನಾವಣೆಗೆ ಗ್ರಹಣ ಹಿಡಿದಿತ್ತು. ಅದು ಈಗ ಮುಕ್ತಿ ಪಡೆದಿದೆ. ಸರ್ಕಾರ ತ್ವರಿತವಾಗಿ ಚುನಾವಣೆ ನಡೆಸಬೇಕಿದೆ.

ಕೃಪೆ: ಕನ್ನಡಪ್ರಭ, ಸಂಪಾದಕೀಯ, ದಿ: ೦೭-೧೦-೨೦೨೩

ಚಿತ್ರ ಕೃಪೆ: ಅಂತರ್ಜಾಲ ತಾಣ