೫೦-೭೦ ರ ದಶಕದ ಮುಂಬಯಿನ ಹೆಸರಾಂತ ಯೋಗಾಚಾರ್ಯ, ಶ್ರೀ. ಸಿ.ಎಂ ಭಟ್ !

೫೦-೭೦ ರ ದಶಕದ ಮುಂಬಯಿನ ಹೆಸರಾಂತ ಯೋಗಾಚಾರ್ಯ, ಶ್ರೀ. ಸಿ.ಎಂ ಭಟ್ !

ಮುಂಬಯಿನ ಯೋಗ ಶಿಕ್ಷಕರಲ್ಲಿ (೫೦ ರ ದಶಕದಿಂದ, ೭೦ ರ ದಶಕದವರೆಗೆ) ಸತತವಾಗಿ ದುಡಿದ  ಸಿ.ಎಂ.ಮಹಾದೇವ ಭಟ್ಟರದು ಒಂದು ಮಹತ್ವದ ಸ್ಥಾನವಾಗಿದೆ. ಮೈಸೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಶಿಕ್ಷಣಗಳಿಸಿ, ಅಲ್ಲೇ ಯೋಗವನ್ನೂ,ಸಂಸ್ಕೃತವನ್ನೂ  ಬೋಧಿಸಿದವರಲ್ಲಿ ಶ್ರೀ. ಚಿತ್ರದುರ್ಗ ಮಹಾದೇವ ಭಟ್ಟರೂ ಒಬ್ಬರು. ಅವರ ಇನ್ನಿಬ್ಬರು ಸಹಪಾಠಿಗಳು, ಶ್ರೀ. ಪಟ್ಟಾಭಿ ಜೋಯಿಸ್, ಮತ್ತು, ಶ್ರೀ. ಬಿ.ಕೆ. ಎಸ್ ಆಯ್ಯಂಗಾರ್ ಈ ಮೂರೂ ಯೋಗಾಚಾರ್ಯರೂ ಯೋಗಪ್ರಶಿಕ್ಷಣವನ್ನು ಶ್ರೀ. ಕೃಷ್ಣಮಾಚಾರ್ಯರಿಂದ ಪಡೆದರು. ಮುಂದೆ ತಮ್ಮ ಜೀವನ ನಿರ್ವಹಣೆಗೆ ಸಿ.ಎಂ ಭಟ್ ಮುಂಬಯಿಗೆ ಹೋದರು. ಬಿ. ಕೆ. ಎಸ್. ಆಯ್ಯಂಗಾರ್ ಪುಣೆಗೆ ಹೋಗಿ, ಯೋಗ ಶಾಲೆಯನು ತೆರೆದರು. ಪಟ್ಟಾಭಿ ಜೋಯಿಸ್ ಮೈಸೂರಿನ ತಮ್ಮ ಲಕ್ಷ್ಮೀಪುರಂ ಮನೆಯಲ್ಲಿ ಯೋಗ ಶಿಕ್ಷಣ ಶಾಲೆಯನ್ನು ತೆರೆದು ಯೋಗ ಪ್ರಸಾರ ಕಾರ್ಯವನ್ನು ಮುಂದುವರೆಸಿದರು. ಈ ಮೂವರಿಗೂ ಗುರುಗಳಾಗಿದ್ದ ಕೃಷ್ಣಮಾಚಾರ್ಯರು ಮದ್ರಾಸಿಗೆ ಹೋಗಿ ಅಲ್ಲಿ ಯೋಗಶಾಲೆಯನ್ನು ಸ್ಥಾಪಿಸಿದರು. ಅವರ ಮಕ್ಕಳು ಮೊಮ್ಮಕ್ಕಳು ಆ ಕಾರ್ಯವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. 
 
ಈ ವರ್ಷ ನಾನು ಜೂನ್ ತಿಂಗಳಿನಲ್ಲಿ (೨೭-೦೬-೨೦೧೭) ಬೆಂಗಳೂರಿಗೆ ಭೆಟ್ಟಿಕೊಟ್ಟಾಗ ದಿವಂಗತ ಯೋಗಾಚಾರ್ಯಶ್ರೀ. ಸಿ.ಎಂ ಮಹಾದೇವ ಭಟ್ಟರ ಧರ್ಮ ಪತ್ನಿ, ಶ್ರೀಮತಿ ರಂಗಮ್ಮ ಭಟ್ ಹಾಗು ಶ್ರೀಮತಿ. ವಾರಿಜ ಭಾನು ಭಟ್ಟರನ್ನು ಅವರ ಬನ್ನೇರುಘಟ್ಟದ ಸ್ವಂತ ಬಂಗಲೆಯಲ್ಲಿ ಭೆಟ್ಟಿಮಾಡಿದೆ. ಯೋಗಶಿಕ್ಷಣವನ್ನು ಉತ್ತರ ಭಾರತದಲ್ಲಿ ಮತ್ತು ಭಾರತದಾದ್ಯಂತ ಹೆಚ್ಚು ಜನಪ್ರಿಯಮಾಡುವ ಅಭಿಯಾನದ ರೂವಾರಿಗಳಾಗಿದ್ದ ನಮ್ಮ ಪ್ರೀತಿಯ ಕೃಷ್ಣರಾಜ ಒಡೆಯರು, ನಂತರ ಜಯಚಾಮರಾಜೇಂದ್ರ ಒಡೆಯರು ವಂದನಾರ್ಹರು. ಮೈಸೂರಿನ ಮಹಾರಾಜರಿಬ್ಬರ ಕನಸುಗಳನ್ನು ನನಸು ಮಾಡುವ ದಿಕ್ಕಿನಲ್ಲಿ ಸದಾ ಶ್ರಮಿಸಿದ ಈ ಯೋಗಾಚಾರ್ಯರುಗಳ  ಕೊಡುಗೆ ಅತ್ಯಮೂಲ್ಯವೆಂದು ಪರಿಗಣಿಸಬಹುದು. ಮುರುಜನರ ದಾರಿಗಳು ವಿಭಿನ್ನವಾದಾಗ್ಯೂ ಮೂಲ ತತ್ವಗಳೂ ಹಾಗೂ ಪಾರಿಣಾಮಗಳೂ ಒಂದೇ ಆಗಿವೆ. 
 
ಎಚ್. ಆರ್. ಎಲ್ : (ನಾನು)
ನಾನು ಕನ್ನಡ  ಇಂಟರ್ನೆಟ್ ನಲ್ಲಿ  ಫೇಸ್ಬುಕ್ ಮೊದಲಾದ ತಾಣಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದೇನೆ ಸಂಪಾದಕನಾಗೂ ಕೆಲಸಮಾಡಿದ್ದೇನೆ  ಕನ್ನಡದ ಪ್ರತಿಭೆಗಳನ್ನು ಇಂಟರ್ನೆಟ್ ನಲ್ಲಿ ಬೆಳಕಿಗೆ ತರುವ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ನಾನು ಮುಂಬಯಿನಲ್ಲಿರುವುದರಿಂದ  ಯೋಗಾಚಾರ್ಯ ಸಿ. ಮಹಾದೇವ ಭಟ್ಟರನ್ನು ಭೆಟ್ಟಿಮಾಡುವ  ಅವಕಾಶ ಒದಗಿ ಬಂದಿತ್ತು. ಅವರ 'ಯೋಗ ಥಿರಪಿ'ಯ ನೆರವಿನಿಂದ ಹಲವಾರು ರೋಗಿಗಳ ದೈಹಿಕ ಬೇನೆಗಳು ನಿವಾರಣೆಯಾಗಿವೆ. ಗುಣಗೊಂಡ ಹಲವಾರು ವ್ಯಕ್ತಿಗಳನ್ನೂ ನೋಡಿದ್ದೇನೆ ಯೋಗವಿದ್ಯೆಯ ಹಲವಾರು ವಿಸ್ಮಯಗಳನ್ನುಭಟ್ಟರ ಬಾಯಿನಿಂದ ಕೇಳಿದ್ದೇನೆ. 
 
ಯೋಗ, ಸಂಸ್ಕೃತ ಭಾಷೆಯ ಪ್ರಚಾರವನ್ನು ಕೇವಲ  ಹಣಸಂಪಾದನೆಗಾಗಿಯೇ ಮಾಡದೆ ಸಾಮಾನ್ಯ ಜನರ ಆರೋಗ್ಯ ವರ್ಧನೆಗಾಗಿ  ಪ್ರಸಾರಮಾಡಿದ ಮಹಾನ್ ಯೋಗಾಚಾರ್ಯರು  ಸಿ. ಎಂ. ಮಹಾದೇವ ಭಟ್ಟರು.  ಮೈಸೂರು ಮಹಾರಾಜರ ಕನಸನ್ನು ಚಾಚೂ ತಪ್ಪದೆ ಅನುಸರಿಸುತ್ತಾಬಂದವರು ಅವರು !  ೧೯೩೭-೩೮ ರಲ್ಲೇ ಮೈಸೂರಿನಿಂದಲೇ ಗುರುಗಳು ಹಾಗು ಇವರೂ ಉತ್ತರ ಇಂಡಿಯಾದಲ್ಲೆಲ್ಲ ಟೂರ್ ಮಾಡಿ ಬಂದ್ರು. ಮುಂಬಯಿಗೂ ಹೋಗಿದ್ರು  ಮಹಾರಾಜರು ಭಟ್ಟರ ಕಾರ್ಯವನ್ನು ಮೆಚ್ಚಿ 'ಶರೀರ ನಾಡಿ ಆಧಾರ ಶಕ್ತಿಮಾನ್ " ಎಂದೂ,  "ವೇದ ಬ್ರಹ್ಮ", ಎಂಬ ಪ್ರತಿಷ್ಠಿತ ಬಿರುದುಗಳನ್ನೂ ದಯಪಾಲಿಸಿದರು. 
 
ಬೆಂಗಳೂರಿಗೆ ಹೋದಾಗ ಅವರ ಪತ್ನಿ ಶ್ರೀಮತಿ ರಂಗಮ್ಮ ಭಟ್ ರವರನ್ನು ಮಾತಾಡಿಸಿ ಅವರ ಆಶೀರ್ವಾದವನ್ನು ಪಡೆಯುವ ಆಶೆಯಿತ್ತು. ಆ ಆಶೆ ನೆರವೇರಿತು. ಅದಲ್ಲದೆ, ರಂಗಮ್ಮನವರ ಸೊಸೆ, ಮಹದೇವಭಟ್ಟರ ಆಪ್ತ ಶಿಷ್ಯೆ, ವಾರಿಜಾ ಭಟ್ ರವರನ್ನು ಕಂಡು ಮಾಹಿತಿ ಸಂಗ್ರಹಿಸುವ ಪ್ರಬಲವಾದ ಆಶೆ ಕೈಗೂಡಿತು.  ವಾರಿಜಾಭಟ್ ರವರ ಪತಿ, ಭಾನುದೇವ ಭಟ್ (ನಿವೃತ್ತ) ವೃತ್ತಿಯಲ್ಲಿ ದೊಡ್ಡ ಅಲೋಪೆತಿಕ್ ವೈದ್ಯರು. ಲಂಡನ್ ನ ರಾಯಲ್ ಫ್ಯಾಮಿಲಿಗೆ  ಚಿಕಿತ್ಸೆ ಮಾಡುವ ಆಪ್ತ ವೈದ್ಯರ ತಂಡದಲ್ಲಿ ಪ್ರಮುಖರು. ವಾರಿಜಾ ಭಟ್ ಮತ್ತು ಭಾನುದೇವ ಭಟ್ ಸುಮಾರು ೩೭ ವರ್ಷ ಲಂಡನ್ ನಲ್ಲಿ ತಮ್ಮ ವೃತ್ತಿಜೀವನದ ಬಹುಮುಖ್ಯ ಸಮಯವನ್ನು ಕಳೆದರು. ಆಗ ವಾರಿಜಾರವರು ಅಲ್ಲಿನ ಹಲವಾರು ಯೋಗಶಿಕ್ಷಣಾರ್ಥಿಗಳಿಗೆ ಬೋಧಿಸಿ ಪ್ರಮಾಣಪತ್ರಗಳನ್ನೂ ಕೊಟ್ಟಿರುತ್ತಾರೆ. ಇಗೋ ನಮ್ಮ ವಿಚಾರವಿನಿಮಯದ ಆಯ್ದ ಭಾಗಗಳು ಇಲ್ಲಿವೆ. ಓದಿ ಆನಂದಿಸಿ
 
ನಾನು : 
ಆಮ್ಮ ನೀವು ಮಹಾದೇವ ಭಟ್ಟರನ್ನು ಯಾವಾಗ ನೋಡಿದ್ದು  ?
 
ರಂಗಮ್ಮನವರು :
 
ನಾನು  ಮದುವೆಯ ದಿನದಂದೇ ನೋಡಿದ್ದು. ಆಗಿನಕಾಲದಲ್ಲಿ ಮದುವೆಗೆ ಮೋದಲೇ ಹುಡ್ಗ ಹುಡ್ಗಿ ಮಾತಾಡೋದು ಒಂದು ದೊಡ್ಡ ಅಪರಾಧವಾಗಿತ್ತು. ನಮ್ಮತಂದೆ ಶ್ಯಾನುಭೋಗ ಗೋಪಾಲಯ್ಯನವರು. ತೋಟತುಡ್ಗೇ ಇದ್ದೋರು. ನಮ್ಮ ಮನೇರು ಚಿತ್ರದುರ್ಗಯೋರು. ಇವ್ರ ತ್ಂದೆ ರಂಗಾಜೋಯಿಸರು ಅಂತಾ ಆಗ ಊರಿನಲ್ಲೆಲ್ಲಾ ಹೆಸರಾದವರು. ಸಂಸ್ಕೃತ ಬರ್ತಿತ್ತು. ಪೌರೋ ಹಿತ್ಯಾ ಮಾಡ್ಸೋರು. ಚಿತ್ರದುರ್ಗದ ಕೋಟೆ ಹತ್ರಾನೇ ಅವರ ಮನೆ. ನಮ್ಮ ಮಾವನೂರಿಗೆ ಮೊದ್ಲ್ನೇ ಮಗ, ಶ್ರೀನಿವಾಸ ಜೋಯಿಸ್, ಇವರಾದ್ಮೇಲೆ ನನ್ನ ಯಜಮಾನ್ರು, ಆಮೇಲೆ ಪುರುಷೋತ್ತಮ್ ಜೋಯಿಸ್ರು, ಒಬ್ಬ ತಂಗಿ ಶಂಕರಮ್ಮಾ ಅಂತ. 
 
ನಾನು :ನಿಮ್ಮ ಮದ್ವೆ ಆಗಿದ್ದು ಯಾವ ವರ್ಷದಲ್ಲಿ ?
 
೧೯೩೫ ರಲ್ಲಿ ಇರ್ಬೇಕೇನೋಪ್ಪ, ಆಗ ನನಗೆ  ೧೫ ತುಂಬಿ ೧೬ ಕ್ಕೆ ಬಿದ್ದಿತ್ತು. ಇವ್ರು ಆಗ್ಲೇ ಮೈಸೂರಲ್ಲಿದ್ರು. ೧೨ ನೇ ವರ್ಷಕ್ಕೆ ಸಂಸ್ಕೃತ ಕಲಿಯೋದಕ್ಕೆ ನಮ್ಮ ಮಾವನೋರು ಮಗನ್ನ ಮೈಸೂರಿನ ಸಂಸ್ಕೃತ ಪಾಠಶಾಲೆಗೆ ಕಳಿಸಿದ್ರಂತೆ ! ಅಲ್ಲಿ ಓದೋವಾಗ ದಕ್ಷಿಣ ಕಾಶಿಯಿಂದ ಕೃಷ್ಣಮಾಚಾರ್ರು (೧೮-೧೧-೧೮೮೮-೨೮-೦೨-೧೯೮೯-೧೦೦)
ಅನ್ನೋ ಗುರುಗಳು ಅರಮನೆಗೆ ಬಂದ್ರಂತೆ. ಅವ್ರಿಗೆ ಯೋಗದಬಗ್ಗೆ ಒಳ್ಳೆ ಜ್ಞಾನ, ಹಾಗೂ ತರಬೇತಿ ಇತ್ತು. ಮಹಾರಾಜರು ಯೋಗ ಹೇಳ್ಕೊಡಕ್ಕೆ ಅವರ್ನ ಸಂಸ್ಕೃತ ಶಾಲೆಯಲ್ಲೇ ನೇಮಸಿದ್ರಂತೆ. ಆಗ ಅವ್ರಿಗೆ ಮೊಟ್ಟಮೊದಲ ಶಿಷ್ಯರಾಗಿ ನಮ್ಮನೆಯ ಆರಿಸ್ಕೊಂಡರಂತೆ. ಆಮೇಲೆ ಪಟ್ಟಾಭಿ ಜೋಯಿಸ್ ಅಂತ ಒಬ್ರು, ಅವರ ಜೊತೆನಲ್ಲೇ ಬಿ.ಕೆ.ಎಸ ಅಯ್ಯಂಗಾರ್ ಅಂತ ಇನ್ನೊಬ್ಬ ಶಿಷ್ಯರು (೧೪-೧೨-೧೯೧೮-೨೦-೦೮-೨೦೧೪-೯೬) ಸೇರ್ಕೊಂಡ್ರಂತೆ.
ಕೃಷ್ಣಮಾಚಾರ್ರು, ೩ ಜನಕ್ಕೂ ಯೋಗ ಕಲಿಸ್ತಿದ್ರಂತೆ. 
 
ಅಷ್ಟೊತ್ತಿಗೆ ನಮ್ಮ ಮದುವೆ ಆಗಿತ್ತು. ಒಂದು ವರ್ಷ ನನ್ ತವರ್ಮನೆ ಹೊಳಲ್ಕೆರೆನಲ್ಲೇ ಸಂಸಾರ ಮಾಡಿದ್ವಿ. ಆಮೇಲೆ ೧೨ ವರ್ಷ ಮೈಸೂರಿನಲ್ಲೇ ವಾಸವಾಗಿದ್ವಿ. ಅದ್ರಲ್ಲಿ ೬ ವರ್ಷ ಕೃಷ್ಣಮಾಚಾರ್ ಹತ್ರ ಶಿಷ್ಯತ್ವ ಇತ್ತು. ನಮ್ಮೋರು,
೧. ಸಂಸ್ಕೃತ ಪಾಠಶಾಲೆ, ೨. ಅರಸು ಸ್ಕೂಲು, ಮತ್ತೆ ಸಂಸ್ಕೃತ ಪಾಠಶಾಲೆ, ಮತ್ತು ೪. ಮೈಸೂರು ವಿಶ್ವ ವಿದ್ಯಾಲಯದ ಕಾಲೇಜು ಇಲ್ಲೆಲ್ಲಾ ಪಾಠ ಹೇಳ್ಕೊಡ್ತಿದ್ರು. 
ಹೀಗೆ ನಡೀತಿದ್ದಾಗ ಯಾರೋ ಹೊಸಬ  ಆಫಿಸರು ಅಧಿಕಾರಕ್ಕೆ ಬಂದ್ನಪ್ಪಾ. ಅವ್ನಿಗೆ ಎನನಿಸ್ತೋ ಕಾಣೆ. ಯೋಗ ಇವೆಲ್ಲ ಬ್ರಾಹ್ಮಣರಿಗೆ ಮಾತ್ರ ಸೇರಿದ್ದು; ಅದೆಲ್ಲಾ  ಬೇರೆಯೊರ್ಗೆ ಏನು ಉಪಯೋಗಕ್ಕೆ ಬರಲ್ಲ ಅಂತ ಶುರುಮಾಡಿ, ಇವರಿಗೆ ಕಿರುಕುಳ ಕೊಡೋಕ್ಕೆ ಶುರುಮಾಡಿಬಿಟ್ಟರಂತೆ.  ಪಾಠಶಾಲೆನೂ ನಿಲ್ಲಿಸೋ ವಿಚಾರಾನಾ  ಘೋಷಿಸೇ ಬಿಟ್ಟರಂತೆ.  ನಮ್ಮನೆಯೋರು ಹಾಗೂ ಮಿಕ್ಕೋರು ಹಾಗೇನಿಲ್ಲ ಯೋಗ , ಭಗವದ್ಗೀತೆ ಇವೆಲ್ಲ ಎಲ್ಲರು ಕಲೀಬೋದು ಏನು ಅಪಚಾರವಲ್ಲ ಅಂತ ಎಷ್ಟ್ ಹೇಳಿದ್ರು ಒಪ್ಲಿಲ್ಲ.
 
ನಾನು:  ನಮ್ಮ ಮಹಾರಾಜರು ಇದು ತಪ್ಪು ಅಂತ ಅವ್ನಿಗೆ ಬುದ್ಧಿ ಹೇಳ್ ಲಿಲ್ವಾ  ?
 
ರಂಗಮ್ಮ ;
ಹೇಳಿದ್ರಪ್ಪ; ಅವರಮಾತು ನಡೀಲಿಲ್ಲ. ಅಧಿಕಾರವೆಲ್ಲಾ  ಪರಂಗಿಯೋರ್ ಹತ್ರಾನೇ ಇತ್ತಲ್ಲ !
 
ಕೊನೆಗೆ ೧೯೪೬ ನೇ ಇಸ್ವಿನಲ್ಲಿ ಸಂಸ್ಕೃತ ಪಾಠಶಾಲೆ, ಯೋಗ ತರಗತಿಗಳು ನಿಲ್ಲಿಸ್ಬಿಟ್ರು. 
ಆಗ ಮೈಸೂರಿನ ರಾಮಕೃಷ್ಣ ಮಿಷನ್ ನ ಹಿರಿಯ ಸ್ವಾಮಿಗಳು ಶಾಂಭವಾನಂದಸ್ವಾಮಿಗಳು  "ಯಾಕಯ್ಯ ಒದ್ದಾಡ್ತಿ, ಹೊರ್ಟ್ ಹೋಗು  ಬೊಂಬಾಯ್ಗೆ, ಯೋಚನೆ ಮಾಡಬೇಡ. ಬೊಂಬಾಯ್ನಲ್ಲಿ ಯೋಗಕ್ಕೆ ಬಹಳ ಬೇಡಿಕೆಯಿದೆ. ನಂಗೂ ಗೊತ್ತಿರೋರು ಅಲ್ಲಿದಾರೆ. ಹೇದ್ರ್ ಬೇಡ ಹೋಗು. ನಿಮ್ಮ ಪರಿವಾರದ ಬಗ್ಗೆ ಚಿಂತಿಸಬೇಡಿ. ಅಂತ ಭರವಸೆ ಕೊಟ್ರು.  ರಾಮಕೃಷ್ಣಾಶ್ರಮದಲ್ಲಿ ನನಿಗೆ ಮಕ್ಕಳಿಗೆ,  ಎಲ್ಲಾ ಏರ್ಪಾಡ್ ಮಾಡ್ಕೊಟ್ರು. ಏನೂ ತೊಂದ್ರೆ  ಆಗ್ಲಿಲ್ಲ.
ಮೊದ್ಲು ಇವರೊಬ್ರೇ ಬೊಂಬಾಯಿಗೆ ಹೋದ್ರು.  ಪರಿಚಯವಿಲ್ಲದ  ಊರು. ೧೯೩೮ ರಲ್ಲಿ ಹೋಗಿದ್ದಾಗ ಸ್ವಲ್ಪ ಜನರ ಪರಿಚಯ ಆಗಿತ್ತು. ಸ್ವಲ್ಪ ಜನ ಇವರ ಹೆಸರು ಕೇಳಿದ್ರು. ಮೊದಲು ಕನ್ನಡದೋರು ಒಬ್ರು ತಮ್ಮ ಮನೇಲೆ ಇರಕ್ಕೆ ಅನುಕೂಲ  ಮಾಡ್ಕೊಟ್ರು. ಪಾಪ ಊಟ, ತಿಂಡಿಗೂ ದುಡ್ ತೊಗೊಳ್ತಿರ್ಲಿಲ್ಲ. ಒಂದು ವರ್ಷ ಹೀಗೆ ಕಾಲ ತಳ್ಳಿದ್ರಂತೆ. ರಾಮಕೃಷ್ಣಾಶ್ರಮದ ಶಾಂಭವಾನಂದ ಸ್ವಾಮಿಗಳ ಸಹಾಯದಿಂದ ಕೆಲವಾರು ಹಣವಂತ ಸೇಠ್ ಗಳ ಪರಿಚಯ ಆಯ್ತು. ಅವ್ರ್ ಮನೆಗಳಿಗೆ ಹೋಗಿ ಯೋಗ ಹೇಳ್ಕೊಡ್ಬೇಕಾಗಿತ್ತು. ಬಾಂಬೆ ಜನರಿಗೆ ಯೋಗ ಹೆಸರು ಗೊತ್ತಿತ್ತೇ ವಿನಃ ಅದನ್ನು ಸರಿಯಾಗಿ ತಿಳ್ಕೊಳ್ಳೋ ಆಸಕ್ತಿ ಭಾಳ  ಇತ್ತು. ಒಳ್ಳೆ ಗುರುಗಳು ಸಿಕ್ಕದೆ, ಅವರು ಭಟ್ಟರು ಬಂದ್ ಕೂಡ್ಲೇ  ಅವ್ರ ಹತ್ರ ಯೋಗ ಮಾಡೋದನ್ನ ಸರಿಯಾಗಿ ತಿಳ್ಕೊಳ್ಳೋಕೆ ಪ್ರಯತ್ನ ಮಾಡಿದರು 
 
ನಾನು ಮಕ್ಕಳು ಅಷ್ಟುಹೊತ್ತಿಗೆ ಬೊಂಬಾಯಿಗೆ ಬಂದು  ಹಲವಾರುಕಡೆ  ಬಾಡಿಗೆ ಮನೆಯಲ್ಲಿ ಇದ್ದೆವು. ಜೆ.ಸಿ.ಪಟೇಲ್ ಒಂದು ಮನೆ ಬಾಡಿಗೆ ಕೊಡಿಸ್ದರು. ಒಂದ್ ರೂಮು,ಬಾತ್ ರೂಮ್  'ಕೋಲ್ಡ್ ಸ್ಟೋರೇಜ್ ಆಫಿಸ್ ಹತ್ರ'. ಮನೆ ಹೊರಗೆ ಒಳ್ಗೆ ಹೋಗ್ಬೇಕಾದ್ರೆ ಆಫಿಸಿನ ಮೂಲಕವೇ ಹೋಗ್ಬೇಕಾಗಿತ್ತು. ಎಲ್ಲಾ ಗಂಡಸರೇನೇ. ನಾನು ತಲೆಮೇಲೆ  ಸೆರಗು ಹೊದ್ ಕೊಂಡು ಓಡಾಡ್ತಿದ್ದೆ.
 
ನಾನು ಭಟ್ರಿಗೆ ನೀವೊಬ್ಬರೇ ಇರ್ರಿ, ಈಗ ನಾನ್ ಊರಿಗೆ ಹೋಗ್ತೀನಿ,  ಮನೆಸಿಕ್ಕಮೇಲೆ ಬರ್ತೀನಿ   ಅಂತ ಹೇಳ್ದೆ. ಕಾವಾಸ್ಜಿ ಜಹಾಂಗೀರ್ ಗೆ ಈ ವಿಷ್ಯ ಹೇಗೋ ಗೊತ್ತಾಗಿ  ಬೇರೆ ಮನೆ ಬಾಡಿಗೆಗೆ ಗೊತ್ತುಮಾಡಿದ್ರು. ಅದು ವಾಲ್ಕೆಶ್ವರ್ ರ  ನಲ್ಲಿತ್ತು. ಆಮೇಲೆ  ಹ್ಯುಸ್ ರೋಡ್ ನಲ್ಲಿ ೩ ವರ್ಷ ವಾಸ್ತವ್ಯ ಮಾಡಿದ್ವಿ. ಜುಹೂ ಕೆಮ್ಸ್ ಕಾರ್ನರ್, ರಲ್ಲೂ  ಸಹಿತ. 
 
ನಮಗೆ ಸಹಾಯಮಾಡಿದ ಯೋಗ ವಿದ್ಯಾರ್ಥಿಗಳಲ್ಲಿ ಜೆ.ಸಿ.ಪಟೇಲ್, ಪೆಟಿಟ್ಸ್, ಬಿರ್ಲಾ, ಟಾಟಾ, ಮಫತ್ಲಾಲ್, ಮೊದಲಾದವರನ್ನು ಮರೆಯಲು ಸಾಧ್ಯವಿಲ್ಲ. ಯುರೋಪಿಯನ್ ಸ್ಟೂದೆಂಟ್ ಒಬ್ರು ನೇಪಿಯನ್ಶಿ ರೋಡ ನಲ್ಲಿ ಮನೆ ಬಾಡಿಗೆ ಹಿಡಿಸಿಕೊಟ್ರು. ರಾಜಾಸ್ತಾನ್ ನಿಂದ ಒಬ್ಬ ಸ್ವಾಮಿಗಳು ಬಂದಿದ್ರು. ಅವ್ರಿಗೆ ಇವರಮೇಲೆ ಬಹಳ ಗೌರವ. ಅವ್ರ್ ಒಬ್ಬ ಉದ್ಯೋಗ ಪತಿ  ರುಂಗ್ಟಾ ಅನ್ನೋರ್ನ್ ಪರಿಚಯ ಮಮಾಡ್ಕೊಟ್ರು. ಅವರು ಕೊಡಿಸಿದ ರುಂಗ್ಟಾ ಹೌಸ್ ನಲ್ಲೆ ನಾವು ೧೯೮೫ ರ ವರ್ಗು ಇದ್ವಿ. ಇಲ್ಯುಸ್ಟ್ರೇಟೆಡ್ ವೀಕ್ಲಿನಲ್ಲಿ  ಇವರ ಯೋಗ ಶಿಕ್ಷಣದ ಬಗ್ಗೆ ಬರ್ದು ಭಾರಿ ಪ್ರಚಾರ ಮಾಡಿದ್ರು. ಇನ್ನು ೪-೫ ಇಂಗ್ಲಿಷ್ ಪತ್ರಿಕೆನಲ್ಲೂ ಲೇಖನ ಬಂದಿತ್ತಂತೆ ! ಪಂಡಿತ ತಾರಾನಾಥ್ ಅನ್ನೋ ಗುರುಗಳು ಭಾಳಾ ಸಹಾಯಮಾಡಿದ್ರು. ಎಲ್ಲರಿಗೂ ಇವರ್ನ ಕಂಡರೆ ಗೌರವ.
 
ನಾನು : ಯೋಗ ಹೇಳ್ಕೊಡೋದ್ರಿಂದಲೇ ನಿಮಗೆ ಜೀವನಕ್ಕೆ ಸಾಕಾಗುವಷ್ಟು ಹಣ ಸಿಕ್ತಿತ್ತಾ ?
 
ರಂಗಮ್ಮ : ಅಯ್ಯೋ ಏನ್ ಹೇಳ್ತಿಯಪ್ಪ ! ಅದೆಷ್ಟ್ ಜನಕ್ಕೆ ಹೇಳ್ಕೋಡ್ ತ್ತಿದ್ರು ಅನ್ನೋದಕ್ಕೆ ಲೆಕ್ಕಾನೆ ಇಲ್ಲಪ್ಪ. ಗವರ್ನರ್ ಗಳು, ಮಿನಿಸ್ಟರ್ ಗಳು, ಶಿಕ್ಷಕರು, ಆಫಿಸರ್ ಗಳು, ಮತ್ತೆ, ಬಿರ್ಲಾ, ಟಾಟಾ, ಮಫತ್ಲಾಲ್, ದಾಲ್ಮಿಯಾ,ಪಾರ್ಸಿಗಳು, ಗುಜರಾತಿಗಳು,ಚಿತ್ರ ನಟರು, ಸಂಗೀತಗಾರರು,ಆಮೇಲೆ ವಿದೇಶಿ ಜನ, ಕಾದಿದ್ದು ಮನೆಗಳಿಗೆ ಇವರ್ನ ಕರ್ಕೋಮ್ಕ್ ಹೋಗೋರು. ರಜಾನೆ ಇಲ್ಲ ಪಾಪ ಇವರಿಗೆ. 
 
ಕೆ ಪಟ್ಟಾಭಿ ಜೋಯಿಸ್  (26-07-1915-18-05-2009, 93) 
ಅವರ ಹೆಂಡತಿ ಸಾವಿತ್ರಮ್ಮ, ಮಕ್ಕಳು, ಸರಸ್ವತಿ, ಮಂಜು, ರಮೇಶ್, ಎಲ್ಲಾ ಪರಿಚಯ. ನಾವೆಲ್ಲಾ ಒಟ್ಟಾಗಿ ಯೋಗಶಿಬಿರಗಳನ್ನು ನಡೆಸುತ್ತಿದ್ದೆವು. ಬಿ.ಕೆಎಸ್ ಅಯ್ಯಂಗಾರ್ ಕೃಷ್ಣಮಾಚಾರ್ ರ ಭಾವ ಮೈದುನ. ಅವರು ಪುಣೆಗೆ ಹೋಗಿ ಅಲ್ಲಿ ಯೋಗ ಶಾಲೆಯನ್ನು ಸ್ಥಾಪಿಸಿ ಪ್ರಸಿದ್ಧರಾದರು. ಪಟ್ಟಾಭಿ ಜೋಯಿಸರು ಮೈಸೂರಿನ ಲಕ್ಸ್ಮಿ ಪುರಂ ನಲ್ಲಿದ್ದ ತಮ್ಮ ಮನೆಯನ್ನೇ ವಿಸ್ತರಿಸಿ  ವಿದ್ಯಾರ್ಥಿಗಳಿಗೆ ಯೋಗ ಹೇಳಿಕೊಡುತ್ತಿದ್ದರು. ಆಮೇಲೆ ವಿದೇಶಿ ವಿದ್ಯಾರ್ಥಿಗಳು ಬರಕ್ಕೆ  ಆರಂಭಿಸಿದರು. 
 
ನಾನು :  ಮಹದೇವ ಭಟ್ಟರು ಯೋಗ ಶಾಲೆಯೊಂದನ್ನು ಯಾಕೆ ತೆರೆಯಲಿಲ್ಲ ?
 
ರಂಗಮ್ಮನವರು :ಯಾವ ಪ್ರಚಾರಕ್ಕೂ ಸೊಪ್ಪುಹಾಕದ ನಮ್ಮವರು ತಮ್ಮ ಯೋಗಶಿಕ್ಷಣವನ್ನೇ ಬಹಳ ಶ್ರದ್ಧೆಇಂದ ತಮ್ಮ ಶಿಷ್ಯರಿಗೆ ಉಪದೇಶಿಸುತ್ತಿದ್ದರು. ನಾನು ನನ್ನ ಸೊಸೆ ವಾರಿಜಾ ಸಹಿತ ಅವರ ಬಳಿಯೇ ಯೋಗವನ್ನು ಕಲಿತೆವು. ಮುಂಬಯಿಯ ಲಾರ್ಸೆನ್ ಟ್ಯೂಬ್ರೋ ಕಂಪೆನಿಯ ಮಾಲೀಕರಲ್ಲೊಬ್ಬನಾಗಿದ್ದ 'ಲಾರ್ಸೆನ್,' ಭಟ್ಟರ 'ಯೋಗ ಶಿಕ್ಷಣ ಪದ್ಧತಿ'ಯನ್ನು ಬಹಳವಾಗಿ ಮೆಚ್ಚಿಕೊಂಡಿದ್ದ. ಅವನು ಹುಡುಗನಾಗಿದ್ದಾಗಿನಿಂದ ಸಾಯೋವರೆಗೂ ಭಟ್ಟರು ಅವನಿಗೆ ಯೋಗ ಹೇಳಿಕೊಡುತ್ತಿದ್ದರು.  'ಲೇಡಿ ಜೆಹಾಂಗಿರ್' ಪಾರ್ಸಿ ಮಹಿಳೆ,  ಸಹಿತ ಅವರ ಶಿಷ್ಯರಲ್ಲೊಬ್ಬರು. ಬೊಂಬಾಯಿ ನಲ್ಲಿದ್ದಷ್ಟ್ ದಿನ ತುಂಬಾ ಸಿಚೆನ್ನಾಗಿತ್ತಪ್ಪ. ಎಲ್ಲಿ ಹೋದ್ರು ನಮಗೆ ಮುಂದಿನ ಬೆಂಚ್ ನಲ್ಲೇ ಕೂಡಿಸ್ಟಿದ್ರು. ಎಲ್ ಹೋದ್ರೂ ಗೌರವ ! ತುಂಬಾ ಚೆನ್ನಾಗಿತ್ತು.  
 
ನಾನು : ನಿಮಗೆ ಎಷ್ಟು ಮಕ್ಕಳು ?
 
ನಮ್ಮ ಮಕ್ಕಳು :
೧. ಶಾರದಮ್ಮ, ಡಾ. ಶರ್ಮಾರನ್ನು ಮದುವೆಯಾದರು. 
೨. ಕಾತ್ಯಾಯಿನಿ,
೩. ಭಾನು ದೇವಭಟ್, ಸೌ.ವಾರಿಜಾರವರನ್ನು ಮದುವೆಯಾದರು. 
೪. ಶಶಿಧರ ಭಟ್, ಈಗ ಅವನಿಲ್ಲ. ಕಾರ್ ಅಪಘಾತದಲ್ಲಿ ತೀರಿಹೋದ.
 
ನಾನು : ನೀವು ಬೆಂಗಳೂರಿಗೆ ಯಾವಾಗ ಹೋದ್ರಿ ? 
 
ರಂಗಮ್ಮ :
 
೧೯೮೫ ರಲ್ಲಿ ನಾವು ಮುಂಬಯಿನ ನೇಪಿಯನ್ಸಿ ರೋಡ್ ನಲ್ಲಿದ್ದ ನಮ್ಮ ರುಂಗ್ಟಾ ಹೌಸ್ ನ ಫ್ಲಾಟ್ ನ್ನು ಮಾರಿ, ಬೆಂಗಳೂರಿನಲ್ಲಿ ಜಯನಗರದ  ೯ ನೇ ಬ್ಲಾಕ್ ನಲ್ಲಿ ಮನೆಯನ್ನು ಕೊಂಡೆವು. ಅಲ್ಲೂ ಸಂಘ ಸಂಸ್ಥೆಗಳು ಕಾಲೇಜ್, ಶಾಲೆಗಳಲ್ಲಿ ಯೋಗಶಿಕ್ಷಣ ಶಿಬಿರಗಳನ್ನು ನಡೆಸ್ತಿದ್ವಿ. ಆಗ ನಾನೂ, ವಾರಿಜಾನೂ ಭಟ್ಟರ ಜೊತೆ ಯೋಗ ಹೇಳ್ಕೊಡ್ತಿದ್ವಿ.ನಮ್ಮವರು ೧೯೮೮ ರಲ್ಲಿ ಸ್ವಲ್ಪ ದಿನಗಳ ಅನಾರೋಗ್ಯದಿಂದ ನರಳಿ ನಿಧನರಾದರು. 
ಮೊದಲಿನಿಂದಲೂ ನಮ್ಮವರಿಗೆ 'ಯೋಗಕೇಂದ್ರ' ತೆರೆಯುವ ಇಚ್ಛೆ ಇರಲಿಲ್ಲ. ಮೊದಲೇ ಅಪಾಯಿಂಟ್ಮೆಂಟ್ ಪ್ರಕಾರ ಯೋಗವನ್ನು ಕಲಿಸುವ ಪ್ರಕ್ರಿಯೆ ಅವರಿಗೆ ಇಷ್ಟವಾಗಿತ್ತು. ಮನೆಗಳಿಗೆ ಭೇಟಿಕೊಟ್ಟು ಒಟ್ಟು ಪರಿವಾರದವರಿಗೆ ಬೋಧಿಸುವ ಕಾರ್ಯ ಅವರಿಗೆ ಮುದಕೊಡುತ್ತಿತ್ತು. 
ಪಟ್ಟಾಭಿಯವರ ಮೊಮ್ಮೊಗ ಶರತ್, ಈಗ ಮುಂಬಯಿನಗರದ ಅಂಧೇರಿಯಲ್ಲಿ  ಯೋಗಶಾಲೆಯನ್ನು ನಡೆಸುತ್ತಿದ್ದಾನೆ. 
 
ನಾನು : ನಿಮ್ಮನ್ನ ಬಿಟ್ರೆ ನಿಮ್ಮನೇಲಿ  ಬೇರೆ ಯಾರಿಗೆ ಯೋಗದಲ್ಲಿ ಆಸಕ್ತಿ ಇದೆ ?
 
ರಂಗಮ್ಮ :
 
ನಮ್ಮನೇಲಿ ನನ್ನನ್ನು ಬಿಟ್ರೆ ನನ್ನ ಮಗ ಶಶಿಧರನಿಗೆ ವಿಶೇಷ ಆಸಕ್ತಿ ಐತ್ತಪ್ಪ. ಪಾಪ  ಕಾರ್ ಅಪಘಾತದಲ್ಲಿ ಹೋಗ್ಬಿಟ್ಟ.  ಆಮೇಲೆ ನನ್ನ ಸೊಸೆ ವಾರಿಜಾ ಭಟ್ ಗೆ ಯೋಗದಲ್ಲಿ ತುಂಬಾ ಆಸಕ್ತಿಯಿದೆ. 
ವಾರಿಜಾಗೆ ಅವರ ಮಾವ ೧೨ ವರ್ಷ ಚೆನ್ನಾಗೇ ತರಪೇಟಿಕೊಟ್ರಪ್ಪ. ನಾನೂ, ಮನೆಗೆ ಬಂದೋರ್ಗೆ ಯೋಗ ಹೇಳ್ಕೋಡ್ತ್ತಿದ್ದೆ. ನನಗೂ ಎಲ್ಲಾ ತಿಳ್ದಿತ್ತು. ಇಂಗ್ಲೀಷ್  ನಲ್ಲಿ ಉತ್ತರ ಕೊಡ್ತಿದ್ದೆ, ವಿವರಣೆ ಕೊಡ್ತಿದ್ದೆ.ಈಗ ವಯಸ್ಸಾಯ್ತು ನೆನಪಿನ ಶಕ್ತಿ ಕಡಿಮೆ ಆಗ್ತಿದೆ ನಡಿಯಕ್ಕೂ ಆಗಲ್ಲ. ಆದ್ರೂ 'ಪ್ರಾಣಾಯಾಮ','ಯೋಗ', ದಿನವೂ ತಪ್ಪದೆ ಮಾಡ್ತಿನಪ್ಪ. ನೀನ್ ಬಂದಿದ್ದು ಒಳ್ಳೆದಾಯ್ತು. ನಿಮಗೆಲ್ಲಾ ಒಳ್ಳೇದಾಗ್ಲಿ. 
 
ನಾನು :  ನಮಸ್ಕಾರ  ಬರ್ತೀನಿ   
 
-ಎಚ್. ಆರ್. ಎಲ್ 
ಘಾಟ್ಕೋಪರ್,
ಮುಂಬಯಿ- ೮೪
ಮೊ : ೯೦೦೪೩೫೬೮೧೯
ಮೊ : ೯೮೬೭೬೦೬೮೧೯
e-mail.ID: hrl.venkatesh AT gmail.com