‘ಅಬಚೂರಿನ ಪೋಸ್ಟಾಫೀಸು’ ಕಟ್ಟಿದ ‘ಎನ್ನೆಲ್' ರ ಮರೆತ ಚಿತ್ರರಂಗ !



ಇವರು ನಿರ್ದೇಶಿಸಿದ ಕನ್ನಡ ಚಿತ್ರಗಳಿಗೆ ಹಲವಾರು ಪ್ರಶಸ್ತಿಗಳು ಬಂದಿವೆ. ಹಲವಾರು ಮಂದಿ ನಟ-ನಟಿಯರನ್ನು, ತಂತ್ರಜ್ಞರನ್ನು ಚಿತ್ರರಂಗದಲ್ಲಿ ಬೆಳೆಸಿದ ಕೀರ್ತಿ ಇವರದ್ದು. ಇವರು ನಿರ್ದೇಶಿಸಿದ ಮೊದಲ ಕಿರು ಚಿತ್ರ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಅದ್ದೂರಿ ಪ್ರದರ್ಶನ ಕಂಡಿತು. ಆದರೆ ಇಂದು ಕನ್ನಡ ಚಿತ್ರರಂಗ ಇವರನ್ನು ಮರೆತೇ ಬಿಟ್ಟಿದೆ ಅನಿಸುತ್ತಿದೆ. ಇವರು ಬೇರೆ ಯಾರೂ ಅಲ್ಲ, ನಾಂದಿ, ಅಬಚೂರಿನ ಪೋಸ್ಟಾಫೀಸು, ಬೆಟ್ಟದ ಹೂವು ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ ‘ಎನ್ನೆಲ್' ಎಂದೇ ಖ್ಯಾತರಾಗಿದ್ದ ಎನ್. ಲಕ್ಷ್ಮೀನಾರಾಯಣ.
ಎನ್. ಲಕ್ಷ್ಮೀನಾರಾಯಣರನ್ನು ಈಗಿನ ತಲೆಮಾರು ಮರೆತೇ ಬಿಟ್ಟಿದೆ. ಆದರೆ ಅವರು ಕಟ್ಟಿದ ಚಿತ್ರರಂಗದ ಅದ್ಭುತ ಸೌಧ ಇನ್ನೂ ಅಲುಗಾಡದಂತೆ ನಿಂತಿದೆ. ಅವರು ಮೊದಲು ನಿರ್ದೇಶನ ಮಾಡಿದ್ದು “Bliss” ಎನ್ನುವ ಮೂಕಿ ಆಂಗ್ಲ ಕಿರು ಚಿತ್ರಕ್ಕೆ. ಇದು ಬ್ರಿಟೀಷ್ ಫಿಲಂ ಇನ್ಸ್ಟಿಟ್ಯೂಟ್ ನೆರವಿನಿಂದ ತಯಾರಿಸಲಾದ ಮೊದಲ ಕಿರು ಚಿತ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಜೊತೆಗೆ ೧೯೬೨ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ಜರುಗಿದ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಜನ ಮೆಚ್ಚುಗೆ ಪಡೆಯಿತು. ಇಲ್ಲಿಂದ ಪ್ರಾರಂಭವಾದ ಎನ್ನೆಲ್ ಅವರ ಚಲನ ಚಿತ್ರರಂಗದ ಪ್ರಯಾಣ ಬಹು ವರ್ಷಗಳ ಕಾಲ ಮುಂದುವರೆಯಿತು.
ಎನ್ನೆಲ್ ಅವರು ನಿರ್ದೇಶನ ಮಾಡಿದ ಪೂರ್ಣ ಪ್ರಮಾಣದ ಚಿತ್ರ ‘ನಾಂದಿ'. ಈ ಚಿತ್ರವು ಕಿವುಡ ಮತ್ತು ಮೂಗರ ಸಮಸ್ಯೆಯನ್ನು ಆಧರಿಸಿತ್ತು. ಈ ಚಿತ್ರವು ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಜನ ಮೆಚ್ಚುಗೆಯನ್ನು ಪಡೆದಿತ್ತು. ಆದರೆ ಈ ನಾಂದಿ ಚಿತ್ರವು ಎನ್ನೆಲ್ ಅವರಿಗೆ ಎಷ್ಟು ಖ್ಯಾತಿಯನ್ನು ತಂದಿತೋ ಅಷ್ಟೇ ವಾದ ವಿವಾದಗಳನ್ನೂ ಸೃಷ್ಟಿಸಿತು. ಇದಕ್ಕೆ ಕಾರಣವೆಂದರೆ ರಾಷ್ಟ್ರ ಚಲನ ಚಿತ್ರ ಪ್ರಶಸ್ತಿ ಆಯ್ಕೆ ಸಮಿತಿ. ಮದರಾಸಿನ ಚಿತ್ರಪ್ರೇಮಿಗಳ ಸಂಘದವರು ನಾಂದಿ ಚಲನ ಚಿತ್ರವನ್ನು ಆ ವರ್ಷದ ಅತ್ಯುತ್ತಮ ಚಲನ ಚಿತ್ರವೆಂದು ಆಯ್ಕೆ ಮಾಡಿದ್ದರು. ಆದರೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಯವರು ಇದು ಆ ಅತ್ಯುತ್ತಮ ಚಿತ್ರವೆಂಬ ಪ್ರಶಸ್ತಿಗೆ ಅರ್ಹವಲ್ಲ ಎಂದು ಕಾರಣ ನೀಡಿ ಅದನ್ನು ದೂರಕ್ಕೆ ಸರಿಸಿದ್ದರು. ಈ ವಿಷಯ ಅಲ್ಲಿಗೇ ಕೊನೆಗೊಳ್ಳುತ್ತಿತ್ತೇನೋ ಆದರೆ ಆಶ್ಚರ್ಯಕರವಾದ ರೀತಿಯಲ್ಲಿ ಕನ್ನಡದ ಪ್ರೇಕ್ಷಕರು ಇದರ ಕುರಿತಾಗಿ ಜನಾಂದೋಲನಕ್ಕೆ ಮುಂದಾದರು. ಇದೊಂದು ಕನ್ನಡ ಚಿತ್ರರಂಗದ ಮಟ್ಟಿಗೆ ಆಶ್ಚರ್ಯಕರ ಸಂಗತಿ. ಏಕೆಂದರೆ ಅದಕ್ಕೂ ಮುಂಚೆ ಈ ರೀತಿಯ ಘಟನೆ ನಡೆದಿರಲಿಲ್ಲ. ಈ ಜನರ ಆಕ್ರೋಶದ ಚಳುವಳಿಯು ದೊಡ್ಡದಾದ ಜನಾಂದೋಲಕ್ಕೆ ನಾಂದಿ ಹಾಡಿತು. ಅಂದಿನ ಕಾಲದಲ್ಲಿ ಈ ಜನಾಂದೋಲನವನ್ನು ಕಂಡ ಹಿರಿಯರೊಬ್ಬರು ‘ಕನ್ನಡ ಚಿತ್ರಪ್ರೇಮಿಗಳು ಇಂಥಾ ಒಗ್ಗಟ್ಟನ್ನು ಪ್ರದರ್ಶಿಸಿದ್ದು ಐತಿಹಾಸಿಕವೇ ಸರಿ. ಹಿಂದೆಂದೂ ಈ ರೀತಿ ನಡೆದಿರಲಿಲ್ಲ' ಎಂದಿರುವುದು ಈ ಚಳುವಳಿಯ ಹೆಗ್ಗಳಿಕೆ.
ಆ ಪ್ರಾದೇಶಿಕ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯರಾದ ಬಿ ಎನ್ ರೆಡ್ಡಿ ಮತ್ತು ತೆಲುಗಿನ ನಿರ್ದೇಶಕ ಪಿ ಪುಲ್ಲಯ್ಯ ಅವರ ಪ್ರಕಾರ ‘ನಾಂದಿ' ಒಂದು ಕಳಪೆ ಚಿತ್ರ. ಈ ವಿಷಯ ತಿಳಿದಾಗ ನಾಂದಿ ಚಿತ್ರದ ನಿರ್ಮಾಪಕರಾದ ವಾದಿರಾಜ್-ಜವಾಹರ್ ಸೋದರರು ಸಿಟ್ಟಿನಿಂದ ಕೆರಳಿ ಕೆಂಡವಾದರು. ಅವರಂತೂ ದೊಡ್ಡ ಮಟ್ಟದ ಪ್ರತಿಭಟನೆಗೆ ತಯಾರಾದರು. ಇವರಿಗೆ ಅಖಿಲ ಕರ್ನಾಟಕ ಚಿತ್ರಪ್ರೇಮಿಗಳ ಸಂಘದವರು ಬೆಂಬಲ ನೀಡಿದರು. ಅವರೆಲ್ಲಾ ಸೇರಿ ಅಂದಿನ ಕೇಂದ್ರ ಸರಕಾರದ ವಾರ್ತಾ ಮಂತ್ರಿಯಾಗಿದ್ದ ಇಂದಿರಾಗಾಂಧಿಯವರಿಗೆ ಟೆಲಿಗ್ರಾಂ ಸಂದೇಶವನ್ನು ಕಳುಹಿಸುವ ಮೂಲಕ ಪ್ರತಿಭಟಿಸಿದರು. ಈ ಪ್ರತಿಭಟನೆ ವಿಕೋಪಕ್ಕೆ ಹೋಗುವ ಲಕ್ಷಣವನ್ನು ಕಂಡ ಆಯ್ಕೆ ಸಮಿತಿಯವರು ಮತ್ತೊಮ್ಮೆ ಸಭೆ ನಡೆಸಿ ಮರು ಆಯ್ಕೆ ಮಾಡುವ ನಾಟಕ ಮಾಡಿ ‘ಚಂದವಳ್ಳಿಯ ತೋಟ' ಎನ್ನುವ ಕನ್ನಡ ಚಿತ್ರಕ್ಕೆ ಅತ್ಯುತ್ತಮ ಚಿತ್ರವೆಂದು ಪ್ರಶಸ್ತಿ ಘೋಷಣೆ ಮಾಡಿದರು. ಇದೊಂದು ಕಣ್ಣೊರೆಸುವ ತಂತ್ರವಾಗಿತ್ತು. ಕೊನೆಗೂ ‘ನಾಂದಿ’ ಚಿತ್ರಕ್ಕೆ ಅತ್ಯುತ್ತಮ ಚಿತ್ರ ಪ್ರಶಸ್ತಿ ದೊರೆಯಲೇ ಇಲ್ಲ. ವಾದಿರಾಜ್ -ಜವಾಹರ್ ಅವರ ‘ನವ ಜೀವನ' ಮತ್ತು ‘ಮನೆ ಅಳಿಯ' ಎಂಬ ರೀಮೇಕ್ ಚಿತ್ರಕ್ಕೆ ಮೆಚ್ಚುಗೆಯ ಪ್ರಶಸ್ತಿಯನ್ನು ನೀಡುವ ಮೂಲಕ ಅವರ ಸಿಟ್ಟನ್ನು ಶಮನ ಮಾಡುವ ಪ್ರಯತ್ನ ಮಾಡಿದರು. ಆದರೆ ಇಲ್ಲಿ ಪ್ರಮುಖವಾಗಿ ಕಾಣುವ ಸಂಗತಿ ಜನರಿಂದ ಮೆಚ್ಚುಗೆ ಪಡೆದ ಕಲಾತ್ಮಕ ಚಿತ್ರವೊಂದನ್ನು ಉತ್ತಮ ಚಿತ್ರವೆಂದು ಪ್ರಶಸ್ತಿ ನೀಡದ ಆಯ್ಕೆ ಸಮಿತಿಯ ವಿರುದ್ಧ ರೂಪುಗೊಂಡ ಜನಾಂದೋಲನ. ಅಂತಹ ಒಂದು ಸಾರ್ವತ್ರಿಕ ಚಳುವಳಿ ಚಿತ್ರರಂಗದ ಇತಿಹಾಸದಲ್ಲಿ ಮತ್ತೆಂದೂ ನಡೆಯಲಿಲ್ಲ ಎಂಬುದು ಉಲ್ಲೇಖನೀಯ.
ನಾಂದಿ ಚಿತ್ರದ ಬಳಿಕ ಲಕ್ಷ್ಮೀನಾರಾಯಣರು ಮುಕ್ತಿ, ಉಯ್ಯಾಲೆ, ಅಬಚೂರಿನ ಪೋಸ್ಟಾಫೀಸು, ಬೆಟ್ಟದ ಹೂವು ಮೊದಲಾದ ಅತ್ಯದ್ಭುತ ಚಿತ್ರಗಳನ್ನು ನಿರ್ದೇಶಿಸಿದರು. ‘ಉಯ್ಯಾಲೆ’ ಚಿತ್ರವು ಫ್ರಾಂಕ್ ಫರ್ಟ್ ನಲ್ಲಿನ ಏಷ್ಯನ್ ಚಿತ್ರೋತ್ಸವ ಹಾಗೂ ರಷ್ಯಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡಿತು. ‘ಮುಕ್ತಿ’ ಚಿತ್ರವು ವೆನಿಸ್ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತು. ನಾಲ್ಕನೇ ಚಿತ್ರ ಪೂರ್ಣಚಂದ್ರ ತೇಜಸ್ವಿಯವರ ಕಾದಂಬರಿ ಆಧಾರಿತ ‘ಅಬಚೂರಿನ ಪೋಸ್ಟಾಫೀಸು' ಚಿತ್ರಕ್ಕೆ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳು ದೊರಕಿದವು. ‘ಬೆಟ್ಟದ ಹೂವು' ಚಿತ್ರಕ್ಕೆ ರಾಷ್ಟ್ರಪತಿಗಳ ರಜತ ಪದಕ ದೊರೆಯಿತು. ಆ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ಪುನೀತ್ ರಾಜಕುಮಾರ್ ಅವರಿಗೆ ‘ಅತ್ಯುತ್ತಮ ಬಾಲನಟ' ಎಂಬ ರಾಷ್ಟ್ರೀಯ ಪ್ರಶಸ್ತಿ ದೊರೆಯಿತು. ಈ ಚಿತ್ರವು ರಷ್ಯಾ, ಫ್ರಾನ್ಸ್, ಮಾರಿಶಿಯಸ್, ಬಲ್ಗೇರಿಯಾ ಮುಂತಾದ ದೇಶಗಳಲ್ಲಿ ಪ್ರದರ್ಶಿತಗೊಂಡಿತು. ನಮ್ಮ ಮೊದಲ ನಾಲ್ಕೈದು ಚಿತ್ರಗಳಿಗೇ ಇಷ್ಟೊಂದು ಪ್ರಶಸ್ತಿಗಳನ್ನು ಬಾಚಿಕೊಂಡ ಎನ್ ಲಕ್ಷ್ಮೀನಾರಾಯಣ ಅವರನ್ನು ಈಗ ಕನ್ನಡ ಚಿತ್ರರಂಗ ಮರೆತೇ ಬಿಟ್ಟಿದೆ ಎಂದು ನೋವಿನಿಂದ ಹೇಳುತ್ತಾರೆ ಅವರ ಪತ್ನಿ ಜಯಶ್ರೀ ನಾರಾಯಣ ಇವರು. ಎನ್ ಲಕ್ಷ್ಮೀನಾರಾಯಣರವರು ಫೆಬ್ರವರಿ ೧೬, ೧೯೯೧ರಲ್ಲಿ ನಿಧನರಾದರು.
ಎನ್ನೆಲ್ ಅವರ ನಿಧನದ ಬಳೀಕ ಸಿನೆಮಾ ಪತ್ರಕರ್ತರಾದ ಗಣೇಶ್ ಕಾಸರಗೋಡು ಜೊತೆ ಒಮ್ಮೆ ಮಾತನಾಡುತ್ತಾ ಅವರು ತಮ್ಮ ಪತಿಯ ಬಗ್ಗೆ ಹೀಗೆ ಹೇಳುತ್ತಾರೆ...
“ನನ್ನ ಪತಿ ಬದುಕಿರುವಾಗ ಒಂದೇ ಒಂದು ದಿನ ಯಾರ ಬಳಿಯೂ ಕೈಚಾಚಲಿಲ್ಲ. ಬದುಕಿನಲ್ಲಿ ಎಷ್ಟೋ ಕಷ್ಟಗಳು ಬಂದವು. ಆದರೆ ಅವರದ್ದು ಸ್ವಾಭಿಮಾನದ ಬದುಕು. ಉಪವಾಸ ಬೇಕಾದರೆ ಇರ್ತೇನೆ ಆದರೆ ಬೇರೆಯವರ ಎದುರು ಕೈಚಾಚಲಾರೆ ಎನ್ನುವುದು ಅವರ ಗುಣವಾಗಿತ್ತು. ಅಂತಹ ವ್ಯಕ್ತಿ ನನ್ನ ಗಂಡ ಎನ್ನಲು ನನಗೆ ಹೆಮ್ಮೆ ಇದೆ. ನನ್ನ ಯಜಮಾನರು ಚಲನ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿದವರು. ಆದರೆ ಅವರ ಬಳಿಕ ನನಗೆ ಜೀವನ ಸಾಗಿಸಲು ಒಂದು ಪಿಂಚಣಿಯೂ ಸಿಗಲಿಲ್ಲ. ಅವರು ಬದುಕಿರುವಾಗ ಇದ್ದ ಸೈಟ್ ಒಂದನ್ನು ಮಗಳ ಮದುವೆಗಾಗಿ ಮಾರಿಬಿಟ್ಟರು. ಅದನ್ನಾದರೂ ನಿನಗೆ ಉಳಿಸಬೇಕಿತ್ತು ಎಂದು ಸಾಯುವ ಕೊನೇ ದಿನಗಳಲ್ಲಿ ನನ್ನಲ್ಲಿ ಹೇಳಿಕೊಳ್ಳುತ್ತಿದ್ದರು. ಅವರ ಬಗ್ಗೆ ನನಗೆ ಇಂದಿಗೂ ಯಾವುದೇ ಬೇಸರ ಇಲ್ಲ. ಅವರ ಸ್ವಾಭಿಮಾನದ ಬದುಕನ್ನೇ ನಾನು ಮುಂದುವರೆಸಿಕೊಂಡು ಹೋಗುತ್ತಿದ್ದೇನೆ.” ಇದು ‘ಎನ್ನೆಲ್' ಅವರ ಪತ್ನಿ ಜಯಶ್ರೀಯವರ ಸ್ಪಷ್ಟವಾದ ನುಡಿ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ