‘ಅವಳ ಹೆಜ್ಜೆ’

‘ಅವಳ ಹೆಜ್ಜೆ’

ಕವನ

ಕ್ಷಣ ಕ್ಷಣಗಳು
ಕಾಲ ಚಕ್ರದ ತಳ ಸೇರುತ್ತಿದ್ದರೂ
ಅವಳು ಮಾತ್ರ
ತನ್ನದೇ ಗೂಡು ಕಟ್ಟಿಕೊಂಡು
ಬದುಕನ್ನ ರೂಪಿಸಲು ಶ್ರಮಿಸುತ್ತಿದ್ದಾಳೆ

ತನ್ನ ಸೆರಗಿನಂಚಿನಲ್ಲಿ
ಅವಿತ ಮನದ ಭಾವನೆಗಳನ್ನು
ಕಣ್ಣು ಹನಿಗಳಲ್ಲಿ ಅದ್ದಿ
ತಿಕ್ಕಿ ತೀಡಿದ ಎಳೆಯನ್ನು
ಸೂಜಿಗೆ ಪೋಣಿಸಿ
ಕಸೂತಿ ಮಾಡುತ್ತಾ
ಒಂದಕ್ಕೊಂದು ಹೊಸ
ನೆಲೆಯನ್ನು ಶೋಧಿಸುತ್ತಿದ್ದಾಳೆ

ಬೆಳಕು, ಕತ್ತಲೆ ಮಧ್ಯೆ ಕುಳಿತು
ಅದೆಷ್ಟೋ ,ಅವಳ ಹೋರಾಟದ
ಹೆಜ್ಜೆಗುರುತುಗಳ ಮೇಲೆ
ಕೆಂಧೂಳಿ ಬಣ್ಣ ತುಂಬಿದ್ದರೂ
ಮತ್ತೆ ಮತ್ತೆ
ಹೊಸ ಹೆಜ್ಜೆಯ ಗುರುತುಗಳು
ಮೂಡುತ್ತಲೇ ಇವೆ
ಅವಳು , ಮನ ಕಲಕುವವರ ಎದೆಗೆ
ಕಿಚ್ಚು ಹಚ್ಚಲು
ಅವಳ ಕಾಲ್ಗೆಜ್ಜೆ ನಾದ
ಸಪ್ತಸಾಗರದಾಚೆ ಧ್ವನಿಸುವ ಹಾಗಿದೆ .
ಈಗ ,
ಅಂತರಾತ್ಮದಲ್ಲಿ ಬಚ್ಚಿಟ್ಟುಕೊಳ್ಳದ
ಅವಳು ತನ್ನವರ ಮೇಲಾಗುವ
ದೌರ್ಜನ್ಯವನ್ನು ಹತ್ತಿಕ್ಕಲು
ಹೊಸ ಸಂವೇದನೆಗಳನ್ನು
ಹುಡುಕುತ್ತಿದ್ದಾಳೆ ಪ್ರತಿಭಟಿಸಲು