‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!

‘ಇರುವೆ’ (ನೀ ಎಲ್ಲೆಲ್ಲೂ ಇರುವೆ)ಗಳು ಅಂತರ್ಜಲ ಮಟ್ಟ ಹೆಚ್ಚಿಸುವ ‘ಬ್ಯಾಂಕರ್’ಗಳು!

ಬರಹ

ಶಿಸ್ತಿನಿಂದ ಸಾಲುಗಟ್ಟಿ ಇರುವೆಗಳು ‘ಪಿಕ್ ನಿಕ್’ ಹೊರಡುವ ರೀತಿ ವರ್ಣನೀಯ. ಸದಾ ಚಟುವಟಿಕೆಯಿಂದ ಇರುವ ಇರುವೆಗಳ ಕ್ರಿಯಾಶೀಲ ಗುಣ ಅನುಕರಣೀಯ. ಇರುವೆಗಳ ಶಿಸ್ತು, ಸಂಯಮ, ಸಂಯೋಜನಾ ಶಕ್ತಿ ಹೀಗೆ ನಾವು ಬದುಕಿನ ಸಾಕಷ್ಟು ಒಳ್ಳೆಯ ಪಾಠಗಳನ್ನು ಎಲ್ಲೆಲ್ಲೂ ‘ಇರುವೆ’ಗಳಿಂದ ಕಲಿಯಬಹುದು.

ವಿಜ್ನಾನಿಗಳ ಪ್ರಕಾರ ಭೂಮಿಯ ಮೇಲೆ ಅಂದಾಜು ೨೦ ಸಾವಿರ ವಿವಿಧ ಪ್ರಕಾರದ ಇರುವೆಗಳಿವೆ. ಪ್ರಾಣಿಗಳ/ ಕೀಟಗಳ ವರ್ಗೀಕರಣ ಶಾಸ್ತ್ರಜ್ನರ ಪ್ರಕಾರ ಸದ್ಯಕ್ಕೆ ೧೦ ಸಾವಿರ ಜಾತಿಯ ಇರುವೆಗಳು ಭೂಮಿಯ ಮೇಲಿವೆ. ಇರುವೆಗಳು ವಾತಾವರಣದಲ್ಲಿರುವ ಒಟ್ಟು ಜೀವಿಗಳ ೧/೩ ದಷ್ಟು ಸಂಖ್ಯೆಯಲ್ಲಿವೆ.

ಇರುವೆಗಳು ಸೃಜನಶೀಲತೆಯಿಂದ ಬದುಕುವಲ್ಲಿ ಅಶ್ಚರ್ಯ ಹುಟ್ಟಿಸುವಷ್ಟು ವೈಚಿತ್ರ್ಯಗಳಿವೆ. ೧ ಮಿಲಿ ಮೀಟರ್ ಗಾತ್ರದಿಂದ ೧.೫ ಇಂಚುಗಳಷ್ಟು ಉದ್ದವಿರುವ ಇರುವೆಗಳು ಪರಿಸರದಲ್ಲಿ ಕಾಣಸಿಗುತ್ತವೆ. ಇರುವೆಗಳು ಸಾಮಾನ್ಯವಾಗಿ ಬಣ್ಣದಲ್ಲಿ ವಿಭಿನ್ನವಾಗಿವೆ. ಹಳದಿ, ಕೆಂಪು ಹಾಗು ಕಪ್ಪು ಬಣ್ಣದ ಇರುವೆಗಳು ಕೆಲ ಪ್ರಮುಖ ಬಣ್ಣದವು. ಈ ಎಲ್ಲ ಬಣ್ಣಗಳ ‘ಛಾಯಾ ಬಣ್ಣದ’ ಇರುವೆಗಳದ್ದು ಮತತ್ತಿನ್ನಷ್ಟು ವಿಶೇಷವಾದ ಲೋಕವಿದೆ.

ಕ್ಯಾಲಿಫೋರ್ನಿಯಾದ ಡೆನಿಸ್ ವಿಶ್ವವಿದ್ಯಾಲಯದ ಕೀಟ ವಿಜ್ನಾನಿ ಫಿಲಿಪ್ ವಾರ್ಡ್ ಹೇಳುವಂತೆ ಜಗತ್ತಿನ ಎಲ್ಲ ಮಾನವರ ಭಾಷೆಗಳಲ್ಲಿ ಇರುವೆಗೆ ನಿರ್ದಿಷ್ಟವಾದ ಪದಗಳಿವೆ. ಆ ಪದಗಳಿಂದಲೇ ಅವುಗಳನ್ನು ಅನಾಯಾಸವಾಗಿ ಗುರುತಿಸಲಾಗುತ್ತದೆ. ಇತ್ತೀಚೆಗೆ ಕರೆಂಟ್ ಬಯಾಲಾಜಿ ಪತ್ರಿಕೆ ಪ್ರಕಟಿಸಿರುವ ಲೇಖನದಲ್ಲಿ ಇರುವೆಗೆ ಜಾಗತಿಕ ಮಟ್ಟದ ಸ್ಥಾನಮಾನವಿದೆ. ಆದರೆ ಉಳಿದ ೨/೩ ದಷ್ಟು ಕೀಟಗಳಿಗೆ ಈ ಭಾಗ್ಯವಿಲ್ಲ ಎನ್ನುತ್ತಾರೆ!

ಇರುವೆಗಳ ನಡಾವಳಿ: ಭೂಮಿಯ ಮೇಲೆ ತಮ್ಮ ಉದರಂಭರಣಕ್ಕಾಗಿ ಕಾರ್ಬೋಹೈಡ್ರೇಟ್ ಗಳಿಂದ ತುಂಬಿರುವ ಹೂವು ಬಿಡುವ ಸಸ್ಯಗಳನ್ನು ಅವಲಂಬಿಸಿವೆ. ಆಹಾರವಾಗಿ ಬಳಸುವ ಗಿಡದ ಬುಡದಲ್ಲಿಯೇ ತಮ್ಮ ಸೈನ್ಯ ಹರಡುತ್ತವೆ. ಅಲ್ಲಿಯೇ ಮನೆ ನಿರ್ಮಿಸುತ್ತವೆ. ಮೇಲಿಂದ ಇಳಿಸಿ ತಂದ ಆಹಾರವನ್ನು ಗೂಡುಗಳಲ್ಲಿ ಸಂಗ್ರಹಿಸಿಟ್ಟು ಬೇರೆ ಜಾತಿಯ ಇರುವೆಗಳಿಂದ ರಕ್ಷಿಸಿಕೊಳ್ಳುತ್ತವೆ. ಅಕ್ಷರಶ: ಕೋಟೆಯಂತೆ ಅವುಗಳ ವ್ಯವಸ್ಥೆ! ೬ ತಿಂಗಳುಗಳಗಟ್ಟಲೇ ಬರಗಾಲ ಬಿದ್ದರೂ ಬದುಕುವಷ್ಟು ಆಹಾರವನ್ನು ಅವು ಗೂಡುಗಳಲ್ಲಿ ಸಂಗ್ರಹಿಸಿಡುತ್ತವೆ.

ಹನಿಪಾಟ್ ಇರುವೆ ತನ್ನ ದೇಹವನ್ನೇ ಆಹಾರ ಸಂಗ್ರಹಿಸಿಡುವ ಉಗ್ರಾಣವಾಗಿ ಬಳಸುತ್ತದೆ. ಮಿಲಿಟರಿ ಇರುವೆ ವಿದ್ಯುತ್ ತರಂಗಗಳನ್ನು ಹೊರಡಿಸಿ ಶಾಕ್ ನೀಡಿ ವೈರಿಯನ್ನು ಹೆದರಿಸಬಲ್ಲವು. ಟ್ರ್ಯಾಪ್-ಜಾ-ಆಂಟ್ ಇರುವೆ ತನ್ನ ಬಲವಾದ ದವಡೆಯಿಂದ ವಿಶಿಷ್ಟ ಶಬ್ದ ಹೊರಡಿಸಿ ವೈರಿ ಕೀಟವನ್ನು ಹೆದರಿಸಬಲ್ಲವು. ಕಾಲಾಳು ಇರುವೆ ಉಪಾಯದಿಂದ ಪಕ್ಕದ ಇರುವೆಗಳ ಗೂಡಿಗೆ ದಾಳಿ ಇಟ್ಟು ಮರಿಗಳನ್ನು ಲಪಟಾಯಿಸುವಲ್ಲಿ ಚತುರ ಎಂದು ದಾಖಲಿಸಲಾಗಿದೆ.

ಹೆಣ್ಣಿರುವೆಗಳೇ ಬ್ಯುಸಿ ಬೀ: ಇರುವೆಗಳ ಕುಟುಂಬ ನಿರ್ವಹಣಾ ಪದ್ಧತಿ ವಿಶಿಷ್ಟವಾದದ್ದು. ಕಾಲಾನಂತರದಲ್ಲಿ ಇರುವೆಗಳು ತಮ್ಮ ಪಾಲಿಗೆ ಬಂದ ಕೆಲಸದಲ್ಲಿ ಪ್ರಭುತ್ವ ಸಾಧಿಸುತ್ತವೆ. ರಾಣಿಯಾಗಿ, ತೋಟಗಾರನಾಗಿ, ಸೈನಿಕನಾಗಿ, ಆಹಾರ ಸಂಗ್ರಾಹಕನಾಗಿ, ಸಂಘಟಿತ ಜೀವನ ಹಾಗು ಹೋರಾಟವನ್ನು ಇರುವೆಗಳು ನಡೆಸುತ್ತವೆ. ಗೂಡು, ಗೂಡಿನಲ್ಲಿರುವ ತತ್ತಿಗಳು, ಮರಿಗಳು ಹಾಗು ಆಹಾರ ಸಂಗ್ರಹಣೆಯ ಜವಾಬ್ದಾರಿ ಕಿರಿಯ ವಯಸ್ಸಿನ ಇರುವೆಗಳಿಗೆ ಮೀಸಲು. ಗೂಡು ರಕ್ಷಿಸುವ, ಆಹಾರ ಸ್ಥಳಕ್ಕೆ ತೆರಳಿ ಹೆಕ್ಕಿಕೊಂಡು ಬರುವ ಜವಾಬ್ದಾರಿ ಹಿರಿಯ ವಯಸ್ಸಿನ ಇರುವೆಗಳಿಗೆ. ಇರುವೆಗಳಲ್ಲಿರುವ ಸಾಕಷ್ಟು ಪ್ರಭೇಧಗಳಲ್ಲಿ ಮುಖ್ಯವಾಗಿ ಹೈಮನೊಪ್ಟೇರಾ ಇರುವೆಗಳ ಸಮುದಾಯದಲ್ಲಿ ಹೆಣ್ಣು ಇರುವೆಗಳೇ ಕೆಲಸ ಮಾಡುತ್ತವೆ. ಗಂಡು ಇರುವೆಗಳು ತಮ್ಮ ವಂಶ ಬೆಳೆಸುವಲ್ಲಿ ವ್ಯಸ್ತವಾಗಿರುತ್ತವೆ!

ಅರಿಝೋನಾ ವಿಶ್ವವಿದ್ಯಾಲಯದಲ್ಲಿ ಕೀಟಶಾಸ್ತ್ರ ಪ್ರಾಧ್ಯಾಪಕರಾಗಿರುವ ಅಲೆಕ್ಸ್ ವೈಲ್ಡ್ ಹೇಳುವಂತೆ- "ಗಂಡು ಇರುವೆಗಳು ತುಸು ಹಾರಬಲ್ಲ ವೀರ್ಯ ಕ್ಷಿಪಣಿಗಳು. ಎಲ್ಲ ಇರುವೆಗಳು ಸಮುದಾಯ, ಸಮಾಜ ಜೀವಿಗಳೇ. ಆದರೆ ಕೆಲ ಇರುವೆಗಳು ಸಂಕೀರ್ಣವಾದ ಕಾಲೋನಿ ರೂಪಿಸಿಕೊಳ್ಳುತ್ತವೆ. ಕೆಲವು ಪ್ರಬೇಧದ ಇರುವೆಗಳು ಇನ್ನೂ ಆದಿಮಾನವರಂತೆ ಬೆಳೆಯುವ ಹಂತದಲ್ಲಿವೆ. ಕೆಲ ಇರುವೆಗಳು ಗುಂಪು ಕಟ್ಟಿಕೊಂಡು ಬೇಟೆಗೆ ತೆರಳಿದರೆ, ಕೆಲವು ಒಂಟಿ ಸಲಗದಂತೆ ಏಕಾಂಗಿಯಾಗಿ ತೆರಳುತ್ತವೆ.

ಇರುವೆಗಳ ವಾಸಸ್ಥಾನ: ಇರುವೆಗಳ ವಿಶೇಷವಾದ ಮನೆಯಲ್ಲಿ ಆಹಾರ ಸಂಗ್ರಹಣೆಗೆ ಸ್ಟಾಕ್ ರೂಂ, ಮರಿಗಳ ಪಾಲನೆ, ಪೋಷಣೆಗೆ ಪ್ರತ್ಯೇಕ ಹಾಲ್, ತತ್ತಿಗಳ ಸಂರಕ್ಷಣೆಗೆ ಸುರಕ್ಷಿತ ಕೊಠಡಿ ಸ್ಟ್ರಾಂಗ್ ರೂಂ, ಹಾಗು ರಾಣಿ ಇರುವೆಗೆ ಅಂತ:ಪುರ ಶಯನಗೃಹಕ್ಕೆ ಪ್ರತ್ಯೇಕ ವ್ಯವಸ್ಥೆ ಇದೆ. ಗಾಳಿ, ಮಳೆ, ಬಿಸಿಲು ತಾಗದಂತೆ ಎಚ್ಚರದಿಂದ ಇಂಜಿನೀಯರ್ ಇರುವೆಗಳು ಕಾಲೋನಿ ಸದೃಶ ಮನೆಗಳನ್ನು ವಿನ್ಯಾಸಗೊಳಿಸುತ್ತವೆ.

ಮಳೆ ಸುರಿದರೆ ಗೂಡಿನ ಪಕ್ಕದಲ್ಲಿ ಗುಡ್ಡೆ ಹಾಕಿರುವ ಸೂಸು ಮಣ್ಣು ಕೋಟೆಯ ದಿಡ್ಡಿ ಬಾಗಿಲಾಗಿ ಪರಿವರ್ತನೆಗೊಳ್ಳುತ್ತದೆ. ನೀರು ಕಾಲೋನಿಯ ಒಳಗೆ ಹರಿದು ಬರದಂತೆ ತಡೆಯುತ್ತದೆ. ಆದರೆ ಜೋರಾಗಿ ಮಳೆ ಸುರಿದರೆ ಮನೆಯೊಳಗಿನ ಯಾವ ಕೊಠಡಿಗೂ ನುಗ್ಗದೇ ನೇರವಾಗಿ ಮಣ್ಣಿನ ಆಳಕ್ಕೆ ಇಳಿದು ಹೋಗುವ ವ್ಯವಸ್ಥೆ ಇದೆ. ಚಿಕ್ಕ ಇರುವೆಗಳನ್ನು ತಿಂದು ಬದುಕುವ ಕೆಲ ದೊಡ್ಡ ಇರುವೆಗಳು, ಇಲಿಗಳು, ಇರುವೆ ಭಕ್ಷಕಗಳು ಸಹ ನಲವನ್ನು ಕೊರದು, ಹಡ್ಡಿ ದಾರಿ ಸುಗಮ ಗೊಳಿಸುವುದರಿಂದ ಭೂಮಿಯ ಆಳಕ್ಕೆ ಹಾಗು ಗಿಡಗಳ ಬೇರುಗಳಿಗೆ ವಾತಾವರಣದ ಸಾರಜನಕ, ನೀರು, ಗಾಳಿ ಹಾಗು ಸೂರ್ಯನ ಬೆಳಕು ಲಭಿಸುವಂತೆ ಮಾಡುವಲ್ಲಿ ಇರುವೆಗಳ ‘ತ್ಯಾಗ’ ಬಹಳ ದೊಡ್ಡದು.

ಗೂಡಿನ ಒಳಗೆ ಬಿಸಿಲಿನ ಝಳ ಹರಡದಂತೆ ವಾತಾನುಕೂಲ ವ್ಯವಸ್ಥೆ ಇರುವ ಗೂಡಿನ ಒಳಗಡೆ ನಿರ್ಮಿತಿ ಇದೆ. ಮೇಲುಗಡೆ ಭೂಮಿ ಕಾಯ್ದು ಕೆಂಡವಾದರು ಮರಿಗಳಿಗೆ, ತತ್ತಿಗಳಿಗೆ ಹಾಗು ಸ್ವತ: ತಮಗೆ ಉಷ್ಣತೆಯಿಂದ ಯಾವ ತೊಂದರೆ ಆಗದಂತೆ ತಂಪು ಕಾಪಾಡಿಕೊಳ್ಳಬಲ್ಲ ಮನೆ ಕಟ್ಟುವ ತಂತ್ರ ಇರುವೆಗಳು ಸಿದ್ಧಿಸಿಕೊಂಡಿವೆ.

ಇರುವೆಗಳು ದಾರಿ ಹೇಗೆ ಗುರುತಿಸುತ್ತವೆ?: ಬ್ರಿಟನ್ನಿನ ಸಸೆಕ್ಸ್ ವಿಶ್ವವಿದ್ಯಾಲಯದ ಸಂಶೋಧಕರಾಗಿರುವ ಮಿತ್ರ ರಾಬ್ ಹ್ಯಾರಿಸ್ ಅಭಿಪ್ರಾಯ ಪಡುವಂತೆ, ಕೇವಲ ಟನ್ ಗಟ್ಟಲೇ ಮಾಹಿತಿಯನ್ನು ಕ್ರೋಢೀಕರಿಸಿದರೆ ಉಪಯೋಗವಿಲ್ಲ. ಅವಶ್ಯಕತೆ ಬಿದ್ದಾಗ, ಬೇಕಾಗಿರುವ ಮಾಹಿತಿಯನ್ನು ಕೂಡಲೇ ಪಡೆದುಕೊಂಡು ಉಪಯೋಗಿಸಿಕೊಳ್ಳಬಲ್ಲ ತಂತ್ರ ನಮ್ಮಲ್ಲಿರಬೇಕು.

ಈ ಮಾತಿನ ತಥ್ಯ ಇರುವೆಗಳಿಗೆ ಸಿದ್ಧಿಸಿದೆ. ಇರುವೆಗಳಂಥ ಜೀವಿಗಳು ತಮ್ಮ ಮನೆಗಳಿಂದ ಆಹಾರ ದೊರಕುವ ಸ್ಥಳಗಳಿಗೆ ಸಾಕಷ್ಟುಬಾರಿ ಸಂಚರಿಸಿ ಪುಟ್ಟ ಪಾದದ ಗುರುತು ಮೂಡಿಸುತ್ತವೆ. ಆದರೆ ಆಹಾರ ಮತ್ತು ಗೂಡಿನ ಮಧ್ಯದ ವಾಪಸ್ಸಾತಿ ದಾರಿಗೆ ಅಡ್ಡಲಾಗಿ ಏನಾದರೂ ಬಂದರೆ ದಾರಿ ತಪ್ಪುವ ಸಾಧ್ಯತೆಗಳಿವೆ. ಗೂಡಿನಿಂದ ಹೊರಟ ದಾರಿಯಲ್ಲಿಯೇ ಕೆಲವು ಇರುವೆಗಳು ಮರಳಿದರೆ ಇನ್ನು ಕೆಲ ಇರುವೆಗಳು ವಾಪಸ್ಸಾತಿಗೆ ಬೇರೆ ದಾರಿಯನ್ನೇ ಆಶ್ರಯಿಸುತ್ತವೆ.

ಇತ್ತೀಚೆಗೆ ಒಂದು ಪ್ರಯೋಗ ಕೈಗೊಳ್ಳಲಾಯಿತು. ಆ ಪ್ರಯೋಗದ ಫಲಿತಾಂಶದಂತೆ ಇರುವೆಗಳಿಗೆ ದಾರಿ ಗುರುತಿಸಲು ದಿಕ್ಕು-ದೆಸೆಗಳ ಅವಶ್ಯಕತೆ ಇಲ್ಲ. ಪ್ರಯೋಗದಲ್ಲಿ ಹಸಿದ ಇರುವೆಗಳು ಸಕ್ಕರೆಯತ್ತ ಹಾಗು ಸಕ್ಕರೆಯ ತುಣುಕು ಕಚ್ಚಿದ ಇರುವೆಗಳು ಮರಳಿ ಗೂಡಿನತ್ತ ಸಾಗಿ ಅಚ್ಚರಿ ಮೂಡಿಸಿದವು. ಇರುವೆಗಳಿಗೆ ಅವುಗಳದ್ದೇ ಆದ ವಿಶಿಷ್ಟ ಭಾಷೆ ಇದೆ. ಒಟ್ಟಾರೆ ‘ಪಿಕ್ ನಿಕ್’ ಗೆ ಸೈನ್ಯವೇ ಹೊರಟಂತೆ ಹೊರಡುವಲ್ಲಿ ಅವುಗಳ ಅದ್ಭುತ ಸಂವಹನ ಹಾಗು ಸಂಯೋಜನಾ ಶಕ್ತಿ ಎದ್ದು ಕಾಣುತ್ತದೆ.