‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

‘ಕಪಿಲ್ ಡೆವಿಲ್ಸ್’ ೧೯೮೩ರ ವಿಶ್ವಕಪ್ ವಿಜೇತರಾದದ್ದು ಹೇಗೆ ಗೊತ್ತಾ?

೧೯೮೩ರ ಕ್ರಿಕೆಟ್ ವಿಶ್ವಕಪ್ ಗಾಗಿ ಇಂಗ್ಲೆಂಡ್ ಗೆ ವಿಮಾನ ಹತ್ತುವ ಸಮಯದಲ್ಲಿ ಭಾರತೀಯ ಕ್ರಿಕೆಟ್ ತಂಡದ ಸದಸ್ಯರು ವಿದೇಶಕ್ಕೆ ಪಿಕ್ ನಿಕ್ ಹೋಗೋದು, ಚೆನ್ನಾಗಿ ತಿನ್ನೋದು, ತಿರುಗಾಡೋದು,ಮಜಾ ಮಾಡಿ ಭಾರತಕ್ಕೆ ಬರೋದು ಎಂದು ಕೊಂಡೇ ಹೋಗಿದ್ದರು. ಯಾಕೆಂದರೆ ಹಿಂದೆ ನಡೆದ ೨ ವಿಶ್ವಕಪ್ ಗಳಲ್ಲಿ ಭಾರತದ ಸಾಧನೆ ಸೊನ್ನೆ.  ಆದರೆ ಮೂರನೇ ವಿಶ್ವಕಪ್ ನಲ್ಲಿ ನಡೆದದ್ದೇ ಬೇರೆ. ಯಾವ ತಂಡಗಳು ಅತ್ಯಂತ ದುರ್ಬಲ ಎಂದು ಎಣಿಸಿದ್ದರೋ ಅವುಗಳು ಬಲಿಷ್ಟ ತಂಡಗಳ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದವು. ನಾವು ಮೊದಲಿಗೆ ೧೯೮೩ರ ವಿಶ್ವಕಪ್ ಮತ್ತು ಅದರಲ್ಲಿ ಆಟವಾಡಿದ ತಂಡಗಳ ಬಗ್ಗೆ ಗಮನಿಸುವ.

೧೯೮೩ರ ವಿಶ್ವಕಪ್ ನ್ನು ‘ಪ್ರುಡೆನ್ಸಿಯಲ್ ಕಪ್-೧೯೮೩’ ಎಂದು ಕರೆಯುತ್ತಾರೆ. ಇಂಗ್ಲೆಂಡ್ ನಲ್ಲಿ ಹಗಲು ದೀರ್ಘವಾಗಿರುವುದರಿಂದ ೬೦ ಓವರ್ ಗಳ ಪಂದ್ಯಾಟವು ನಡೆಯಿತು. ಆಟಗಾರರು ಬಿಳಿ ಬಣ್ಣದ ಉಡುಪುಗಳು ಹಾಗೂ ಕೆಂಪು ಬಾಲ್ ಅನ್ನು ಬಳಸಿ ಕೊಳ್ಳಲಾಯಿತು. ಭಾಗವಹಿಸಿದ ತಂಡಗಳೆಂದರೆ ಅತಿಥೇಯ ಇಂಗ್ಲೆಂಡ್, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ಭಾರತ, ಶ್ರೀಲಂಕಾ, ಪಾಕಿಸ್ತಾನ, ಜಿಂಬಾಬ್ವೆ ಹಾಗೂ ನ್ಯೂಜಿಲ್ಯಾಂಡ್. ೧೯೭೫ ಹಾಗೂ ೧೯೭೯ರಲ್ಲಿ ನಡೆದ ಎರಡೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಕೇವಲ ಒಂದು ಪಂದ್ಯವನ್ನು ಗೆದ್ದ ಭಾರತ ಹಾಗೂ ಹೊಸದಾಗಿ ವಿಶ್ವಕಪ್ ಆಡುತ್ತಿದ್ದ ಜಿಂಬಾಬ್ವೆ ದುರ್ಬಲ ತಂಡಗಳು ಎಂದು ಭಾವಿಸಿದ್ದರು. ಆದರೆ ೧೯೮೩ರ ಪಂದ್ಯಾವಳಿಗಳಲ್ಲಿ ಆದದ್ದೇ ಬೇರೆ. ಲೀಗ್ ಪಂದ್ಯಾವಳಿಗಳಲ್ಲಿ ಭಾರತ ಬಲಿಷ್ಟ ವೆಸ್ಟ್ ಇಂಡೀಸ್ ತಂಡವನ್ನು ಹಾಗೂ ಜಿಂಬಾಬ್ವೆ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ತಾವೂ ಕ್ರಿಕೆಟ್ ಪಂಡಿತರ ಲೆಕ್ಕಾಚಾರಗಳನ್ನು ಬುಡಮೇಲು ಮಾಡುವ ಸಾಮರ್ಥ್ಯ ಹೊಂದಿದ್ದೇವೆ ಎಂದು ಮನವರಿಕೆ ಮಾಡಿಕೊಟ್ಟವು. ಜಿಂಬಾಬ್ವೆಯಂತೂ ಒಂದು ಪಂದ್ಯದಲ್ಲಿ ಭಾರತವನ್ನು ಸೋಲಿಸಲು ತಯಾರಾಗಿತ್ತು. ಆದರೆ ಭಾರತ ನಾಯಕರಾಗಿದ್ದ ಕಪಿಲ್ ದೇವ್ ತಮ್ಮ ನಾಯಕನಂತೆ ಆಟವಾಡಿ ಭಾರತವನ್ನು ಸೆಮಿಫೈನಲ್ ತಲುಪಿಸಿದರು. 

ಆ ಪಂದ್ಯದಲ್ಲಿ ಭಾರತ ೧೭ ರನ್ನಿಗೆ ತನ್ನ ೫ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗ ಮೈದಾನಕ್ಕೆ ಇಳಿದ ಕಪಿಲ್ ದೇವ್. ಸುಂಟರಗಾಳಿಯಂತೆ ಬ್ಯಾಟ್ ಬೀಸಿದ ಅವರು ಅಜೇಯ ೧೭೫ ರನ್ ಹೊಡೆದರು. ಅದೂ ಕೇವಲ ೧೩೮ ಬಾಲ್ ನಲ್ಲಿ. ಆಗೆಲ್ಲಾ ಟೆಸ್ಟ್ ಆಡುತ್ತಿದ್ದುದರಿಂದ ಆಡಿದ ಚೆಂಡಿಗಿಂತಲೂ ಅಧಿಕ ರನ್ ಹೊಡೆಯುತ್ತಿದ್ದವರ ಸಂಖ್ಯೆ ಕಡಿಮೆ. ಅಂದಿನ ಆಟ ಕಪಿಲ್ ದೇವ್ ಅವರಿಗೆ ಶ್ರೇಷ್ಟ ಆಲ್ ರೌಂಡರ್ ಕೀರ್ತಿಯನ್ನು ಒದಗಿಸಿಕೊಟ್ಟಿತು. ಕಪಿಲ್ ಅವರ ನೆರವಿನಿಂದ ಭಾರತ ೮ ವಿಕೆಟಿಗೆ ೨೬೬ ರನ್ ಗಳಿಸಿತು.ಇದಕ್ಕೆ ಉತ್ತರ ನೀಡಿದ ಜಿಂಬಾಬ್ವೆಗೆ ೨೩೫ ರನ್ ಗಳಿಸಲಷ್ಟೇ ಸಾಧ್ಯವಾಯಿತು. ಈ ಪಂದ್ಯಾಟದ ಸಮಯದಲ್ಲಿ ನೇರ ಪ್ರಸಾರದ ಹೊಣೆ ಹೊತ್ತಿದ್ದ ಸಂಸ್ಥೆಯವರ ಮುಷ್ಕರ ಇದ್ದುದರಿಂದ ನಾವೆಲ್ಲಾ ಈ ಪಂದ್ಯದ ರೋಚಕ ಕ್ಷಣಗಳನ್ನು ನೋಡಲು ಆಗುತ್ತಿಲ್ಲ. ಅಂದು ಕೇವಲ ರೇಡಿಯೋದಲ್ಲಿ ವೀಕ್ಷಕ ವಿವರಣೆ ಮಾತ್ರ ಇತ್ತು. ಅಂದಿನ ಕ್ರೀಡಾಭಿಮಾನಿಗಳು ಇದರಿಂದಲೇ ತೃಪ್ತರಾಗಬೇಕಾಯಿತು. ಸೆಮಿಫೈನಲ್ ನಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಭಾರತ ಅಂತೂ ವಿಶ್ವಕಪ್ ಫೈನಲ್ ತಲುಪಿತು. 

ವಿಶ್ವಕಪ್ ಫೈನಲ್ ನಲ್ಲಿ ಎದುರಾದ ತಂಡ ಬೇರೆ ಯಾವುದೂ ಅಲ್ಲ ಹಿಂದಿನ ಎರಡೂ ವಿಶ್ವಕಪ್ ಗಳನ್ನು ಗೆದ್ದು ಬೀಗುತ್ತಿದ್ದ ಕ್ಲೈವ್ ಲಾಯ್ಡ್ ಎಂಬ ಕ್ರಿಕೆಟ್ ದೈತ್ಯನ ಸಾರಥ್ಯದ ವೆಸ್ಟ್ ಇಂಡೀಸ್ ತಂಡ. ಫೈನಲ್ ತಲುಪಿದ್ದೇ ಭಾರತ ತಂಡದ ಸಾಧನೆಯಾದೀತು ಎಂದು ಎಲ್ಲರೂ ಎಣಿಸಿದ್ದರು. ಆದರೆ ಅಂತಿಮ ಪಂದ್ಯದಲ್ಲಿ ಆದದ್ದೇ ಬೇರೆ. ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೇವಲ ೧೮೩ ರನ್ ಗಳಿಸಲಷ್ಟೇ ಸಫಲವಾಯಿತು. ಶ್ರೀಕಾಂತ್ ೩೮ ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾರೂ ಉತ್ತಮ ಪ್ರದರ್ಶನ ನೀಡಲಿಲ್ಲ. ವೆಸ್ಟ್ ಇಂಡೀಸ್ ತಂಡ ಬ್ಯಾಟಿಂಗ್ ಆರಂಭಿಸಿದಾಗ ಯಾರಿಗೂ ಭಾರತ ಗೆಲ್ಲಬಲ್ಲುದು ಎಂಬ ನಿರೀಕ್ಷೆಯೇ ಇರಲಿಲ್ಲ. ಮೊದಲ ವಿಕೆಟ್ ಬೇಗ ಬಿದ್ದರೂ ವಿವಿಯನ್ ರಿಚರ್ಡ್ಸ್ ಮಾತ್ರ ಬ್ಯಾಟ್ ಬೀಸುತ್ತಲೇ ಇದ್ದರು. ಆದರೆ ಅವರು ಮದನ್ ಲಾಲ್ ಅವರ ಬೌಲಿಂಗ್ ಬಲೆಗೆ ಬಿದ್ದರು. ಅವರು ಹೊಡೆದ ಚೆಂಡನ್ನು ಅದ್ಭುತವಾಗಿ ಓಡಿ ಕಪಿಲ್ ದೇವ್ ತಮ್ಮ ಬೊಗಸೆಯಲ್ಲಿ ಹಿಡಿದೇ ಬಿಟ್ಟರು. ಇದು ‘ಕ್ಯಾಚ್ ಆಫ್ ದಿ ಮ್ಯಾಚ್’ ಆಗಿತ್ತು. ನಂತರ ಮೊಹಿಂದರ್ ಅಮರನಾಥ್ ಎಂಬ ಮಾಂತ್ರಿಕ ತಮ್ಮ ನಿಧಾನ ಗತಿಯ ಬೌಲಿಂಗ್ ಶೈಲಿಯಲ್ಲಿ ಮ್ಯಾಜಿಕ್ ಮಾಡಿ ೩ ವಿಕೆಟ್ ಗಳನ್ನು ಪಡೆದು ವೆಸ್ಟ್ ಇಂಡೀಸ್ ತಂಡಕ್ಕೆ ಸೋಲಿನ ರುಚಿ ತೋರಿಸಿಯೇ ಬಿಟ್ಟರು. ವೆಸ್ಟ್ ಇಂಡೀಸ್ ತಂಡ ೧೪೦ ರನ್ ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡಿತು. ಮೊಹಿಂದರ್ ಅಮರನಾಥ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು. ಆದರೆ ಇಡೀ ಪಂದ್ಯಾವಳಿಗಳಲ್ಲಿ ತಂಡಕ್ಕೆ ಶಕ್ತಿಯಾಗಿ ನಿಂತದ್ದು ತಂಡದ ನಾಯಕ ಕಪಿಲ್ ದೇವ್. ಕಪಿಲ್ ಡೆವಿಲ್ಸ್ ಅಚ್ಚರಿಯ ರೀತಿಯಲ್ಲಿ ಪ್ರುಡೆನ್ಶಿಯಲ್ ಕಪ್ ೧೯೮೩ ವಿಜೇತರಾದರು. ಇಡೀ ಭಾರತ ಸಂಭ್ರಮ ಪಟ್ಟಿತು. ಫೈನಲ್ ಪಂದ್ಯದ ಮುಖ್ಯಾಂಶಗಳು ಈಗಲೂ ಜಾಲತಾಣಗಳಲ್ಲಿ ನೋಡಲು ಸಿಗುತ್ತದೆ. ಇಂದು ಜೂನ್ ೨೫. ಈ ದಿನದಂದೇ ೧೯೮೩ರ ವಿಶ್ವಕಪ್ ಫೈನಲ್ ನಡೆದಿತ್ತು. ಈ ಪಂದ್ಯದ ರೋಚಕತೆಯನ್ನು ಮತ್ತೊಮ್ಮೆ ಜಾಲತಾಣಗಳಲ್ಲಿ ನೋಡಲು ಮರೆಯದಿರಿ. ಈ ವಿಶ್ವಕಪ್ ನಲ್ಲಿ ಆಡಿದ ಭಾರತ ತಂಡದಲ್ಲಿ ಎಲ್ಲರೂ ಬಲಗೈ ದಾಂಡಿಗರೇ ಆಗಿದ್ದುದು ವಿಶೇಷ. ಸುನೀಲ್ ವಲ್ಸನ್ ಎಂಬ ಆಟಗಾರ ತಂಡದ ಸದಸ್ಯರಾಗಿದ್ದೂ ಒಂದೇ ಒಂದು ಪಂದ್ಯವಾಡಲು ಸಿಗದೇ ಅವಕಾಶ ವಂಚಿತರಾದರು.

ಈ ವಿಜಯಕ್ಕೆ ೩೭ ವರ್ಷದ ಸಂಭ್ರಮದಲ್ಲಿ ಅಂದು ತಂಡದ ನಾಯಕರಾಗಿದ್ದ ಕಪಿಲ್ ತಮ್ಮ ಗೆಲುವಿನ ಕಾರಣಗಳನ್ನು ನೆನಪುಮಾಡಿಕೊಳ್ಳುವುದು ಹೀಗೆ..' ನಾವು ಅಂದು ವಿಶ್ವ ಕಪ್ ಆಡುವಾಗ ನಮ್ಮ ಮೇಲೆ ಯಾವುದೇ ಒತ್ತಡ, ನಿರೀಕ್ಷೆಗಳು ಇರಲಿಲ್ಲ. ನಮ್ಮ ತಂಡದಲ್ಲಿ ಬಹುತೇಕ ಆಟಗಾರರು ಆಲ್ ರೌಂಡರ್ ಆಗಿದ್ದುದು ನಮ್ಮ ಪ್ಲಸ್ ಪಾಯಿಂಟ್ ಆಗಿತ್ತು. ಸಾಧನೆಯ ಹಾದಿ ಯಾವಾಗಲೂ ಕಷ್ಟಕರವಾಗಿಯೇ ಇರುತ್ತದೆ. ಆ ಕಷ್ಟಕರ ಸಮಯವನ್ನು ಮೆಟ್ಟಿ ನಿಂತವನೇ ಗೆಲ್ಲುತ್ತಾನೆ. ಇದೊಂದು ನಮ್ಮ ಪಾಲಿಗೆ ಅನಿರೀಕ್ಷಿತ ಜಯವಾಗಿತ್ತು. ಆದರೆ ಈ ಜಯ ನಮ್ಮ ಮುಂದಿನ ಪಯಣವನ್ನು ಜವಾಬ್ದಾರಿಯುತ ಹಾದಿಗೆ ಹೊರಳಿಸಿದೆ'. ಇದು ಕಪಿಲ್ ದೇವ್ ಅವರ ಮನದಾಳದ ಮಾತುಗಳು. ನಮ್ಮ ಜೀವನದಲ್ಲೂ ಈ ಮಾತುಗಳು ಅನ್ವಯವಾಗುತ್ತವೆ ಅಲ್ಲವೇ? ಸ್ವಾರಸ್ಯಕರ ಸಂಗತಿಯೆಂದರೆ ಫೈನಲ್ ಪಂದ್ಯದ ಮುನ್ನಾ ದಿನ (ಜೂನ್ ೨೪) ವೇ ಬಿಸಿಸಿಐ ಅಧಿಕಾರಿಗಳು ಭಾರತ ತಂಡದ ಆಟಗಾರರಿಗೆ ೨೫,೦೦೦ ರೂ ಬೋನಸ್ ಪ್ರಕಟಿಸಿದ್ದರು. ಬಿಸಿಸಿಐ ಪಾಲಿಗೆ ಫೈನಲ್ ತಲುಪಿದ್ದೇ ಅಮೋಘ ಸಾಹಸವಾಗಿ ಕಂಡಿತೋ ಏನೋ?

 ಬಾಲಿವುಡ್ ನಲ್ಲಿ ಈ ವಿಶ್ವಕಪ್ ಬಗ್ಗೆ ಒಂದು ಚಲನಚಿತ್ರ ತಯಾರಾಗುತ್ತಿದೆ. ಕೊರೋನಾ ಸಮಯವಾದುದರಿಂದ ಚಿತ್ರ ಮಂದಿರಗಳಿಗೆ ಬರಲು ಕೊಂಚ ಸಮಯ ತಗುಲಬಹುದು. ಸಹನೆಯಿಂದ ಕಾದು ಬಂದಾಗ ಖಂಡಿತಾ ಹೋಗಿ ನೋಡಿರಿ. ೮೩ಎಂಬ ಹೆಸರಿನ ಈ ಚಿತ್ರದಲ್ಲಿ ಕಪಿಲ್ ದೇವ್ ಪಾತ್ರವನ್ನು ರಣವೀರ್ ಸಿಂಗ್ ಮಾಡುತ್ತಿದ್ದಾರೆ. ನಾಯಕಿಯಾಗಿ ದೀಪಿಕಾ ಪಡುಕೋಣೆ ನಟಿಸಲಿದ್ದಾರೆ.

ಗೆಲುವಿನ ನಿರೀಕ್ಷೆಯಿಲ್ಲದೇ ಸುಮ್ಮನೇ ಆಟವಾಡಿ, ಮಜಾ ಮಾಡಲು ಹೋದ ಭಾರತ ತಂಡ ೧೯೮೩ರ ವಿಶ್ವ ಕಪ್ ಜಯಿಸಿದ್ದು ಈಗ ಇತಿಹಾಸ. ನಂತರದ ದಿನಗಳಲ್ಲಿ ಕಪಿಲ್ ದೇವ್ ಅವರ ತಂಡವನ್ನು ಎಲ್ಲರೂ ‘ಕಪಿಲ್ ಡೆವಿಲ್ಸ್’ ಎಂದೇ ಕರೆಯಲು ಪ್ರಾರಂಭಿಸಿದರು.

ಚಿತ್ರ ಕೃಪೆ: ಅಂತರ್ಜಾಲ