‘ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ...'
ಯಾರಿಗೆ ಯಾವಾಗ ಏನು ಎಷ್ಟು ಕೊಡಬೇಕೆಂಬುದನ್ನು ಆ ಭಗವಂತನೇ ಬಲ್ಲ. ನಮ್ಮದಲ್ಲದ್ದನ್ನು ಹಠದಿಂದ ದಕ್ಕಿಸಿಕೊಂಡರೆ ಅದು ನಿರಂತರ ನಮ್ಮ ಬಳಿ ನಿಲ್ಲುವುದಿಲ್ಲ. ನೀವು ಮಾಡಿದ ಸಂಪಾದನೆ, ಒಳ್ಳೆಯ ಕೆಲಸ ಮಾತ್ರ ನಿಮಗೆ ದಕ್ಕುವುದೇ ಹೊರತು ಬೇರೆಯವರ ಸಂಪತ್ತಿನಿಂದ ನಿಜದ ಸುಖ; ಆತ್ಮ ತೃಪ್ತಿ ದೊರೆಯುವುದೇ...?
ಹೂವಿನಿಂದ ಕಿತ್ತು ತಂದ ಮಕರಂದದಿಂದ ಮಾಡಿದ ಜೇನು... ಜೇನುಹುಳಗಳಿಗೇ ದಕ್ಕುವುದಿಲ್ಲ ಎಂದಾದರೆ ಪರರ ಬಳಿ ಕಿತ್ತು ಮಾಡಿದ ಸಂಪತ್ತು ಉಳಿಯುವುದಾ? ‘ಕಿತ್ತು ತಂದದ್ದು ಹೊತ್ತು ಮುಳುಗುವವರೆಗೆ’
ದೊಡ್ಡ ಬಂಗಲೆ ಕಟ್ಟಿ, ಅಂಗಳದಲ್ಲಿ ಐಶಾರಾಮಿ ಕಾರುಗಳ ನಿಲ್ಲಿಸಿ, A.C ರೂಮಲ್ಲಿ ಮಲಗುವವರೆಲ್ಲಾ ರಾತ್ರಿ ನೆಮ್ಮದಿಯಲ್ಲಿ ನಿದ್ರಿಸುತ್ತಾರೆಂಬುದು ನಮ್ಮ ಕಲ್ಪನೆ. ಅವರಿಗಿಂತಲೂ ಹೆಚ್ಚು ಸುಖ ನೆಮ್ಮದಿಯ ನಿದ್ರೆ ಮಾಡುವವರು ಸಂತೆಯ ಗದ್ದಲದಲ್ಲೂ ಕಾಣ ಸಿಗುತ್ತಾರೆ. ಕೇವಲ ಹಣದಿಂದ ಸುಖ ನೆಮ್ಮದಿ ಸಿಗುವುದೆಂಬುದು ನಮ್ಮಲ್ಲಿರುವ ಕೆಟ್ಟ ಚಿಂತನೆ. ನಮ್ಮೆಲ್ಲ ನೋವಿಗೂ ಮೂಲ ನಮ್ಮ ವಿಪರೀತ ಆಲೋಚನೆಗಳ ಅಬ್ಬರ.
ಹಾಗಿದ್ದರೆ ನೆಮ್ಮದಿ ಸುಖ ಎನ್ನುವುದು ಶ್ರೀಮಂತಿಕೆ-ಬಡತನದ ಫಲವೇ? ಇದ್ಯಾವುದೂ ಅಲ್ಲ, ಬದುಕನ್ನು ನಾವು ನೋಡುವ ದೃಷ್ಟಿ, ನಮ್ಮ ಜೀವನ ಮೌಲ್ಯ, ನಮ್ಮ ಮನೋಶಕ್ತಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಬದುಕನ್ನು ನಾವು ಯಾವ ರೀತಿ ಅನುಭವಿಸುತ್ತೇವೆ ಎನ್ನುವುದರ ಮೇಲೆ ನೆಮ್ಮದಿ ನಿಂತಿದೆ. ನಮ್ಮಲ್ಲಿ ಎಷ್ಟು ಶ್ರೀಮಂತಿಕೆ ಇದೆ, ಎಷ್ಟೊಂದು ಸಂಭ್ರಮವಿದೆ ಎನ್ನುವುದಕ್ಕಿಂತಲೂ ನಾವು ಬದುಕನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಜೀವನದ ನೆಮ್ಮದಿಯ ಮಾನದಂಡವಾಗುತ್ತದೆ.
ಶ್ರೀಮಂತಿಕೆ ಸುಖವನ್ನು ನೀಡಬಹುದು, ಆದರೆ, ನೆಮ್ಮದಿಯನ್ನಲ್ಲ. ಬೇಕಾದಷ್ಟು ದುಡ್ಡು, ಐಷಾರಾಮ ನಮ್ಮನ್ನು ಎತ್ತೆತ್ತಲೋ ಕೊಂಡೊಯ್ಯಬಹುದು. ಎಲ್ಲರೂ ಎಲ್ಲ ಸಾಧನೆಗಳನ್ನೂ ಮಾಡಲಾಗುವುದಿಲ್ಲ. ನಮ್ಮ ಮಿತಿಯಲ್ಲಿ ನಾವು ಬದುಕಲು ಕಲಿತಾಗ ಮಾತ್ರವೇ ಮನುಷ್ಯ ನೆಮ್ಮದಿಯನ್ನು ಕಾಣಲು ಸಾಧ್ಯ. ಅದಿಲ್ಲದಿದ್ದರೆ ಇಡೀ ಜೀವನ ಅಸಂತೋಷ, ಅಸಹನೆ, ಆಕ್ರೋಶಗಳ ಗೂಡಾಗಿ ಪರಿವರ್ತನೆಯಾಗುತ್ತದೆ. ನಾವೇನಾಗಿದ್ದೇವೋ ಅದು ಮಾತ್ರವೇ ನಾವು ವಿನಾ ಬೇರೆಯವರು ಆಗಿರುವುದೆಲ್ಲ ನಾವಾಗಲು ಸಾಧ್ಯವಿಲ್ಲ ಎಂಬುದು ಜೀವನದ ಅತಿದೊಡ್ಡ ಸತ್ಯ. ಪಕ್ಕದ್ಮನೆಯವರ ಹೊಸ ಕಾರು, ವಾಶಿಂಗ್ ಮೆಶಿನ್ ನೋಡಿ ನಮ್ಮ ನೆಮ್ಮದಿ ಹಾಳಾಗುತ್ತದೆಯೆಂದರೆ ನಾವಿನ್ನೂ ಬದುಕಲೇ ಇಲ್ಲ ಎಂದರ್ಥ.
ನಾವು ಬೇರೆಯವರ ಬದುಕನ್ನು ನೋಡಿಕೊಂಡು ನಮ್ಮ ಬದುಕನ್ನು ನಿರ್ಧರಿಸಿದಾಗ ಪ್ರತಿ ಹಂತದಲ್ಲೂ ನೋವು ಅನುಭವಿಸಲೇ ಬೇಕು. ಯಾಕೆಂದರೆ, ನಮ್ಮ ದೃಷ್ಟಿ ಯಾವತ್ತೂ ಮೇಲೆಯೇ ಇರುತ್ತದೆ. ಯಾವಾಗ ನಾವು ‘ನನ್ನ ಬದುಕು ನನ್ನದು’ ಎಂಬ ತೀರ್ಮಾನಕ್ಕೆ ಬರುತ್ತೇವೋ ಆಗ ಈ ಮಾನಸಿಕ ಕಿರಿಕಿರಿಗಳು ಇರುವುದಿಲ್ಲ. ಭಾವನಾತ್ಮಕ ಭಾರಗಳಾಗಲೀ, ಆತಂಕಗಳಾಗಲಿ, ನಿರೀಕ್ಷೆಗಳಾಗಲಿ ಇರುವುದಿಲ್ಲ. ನಮ್ಮ ಬದುಕು ಹೇಗಿರಬೇಕು ಎನ್ನುವುದು ನಮ್ಮ ತೀರ್ಮಾನವಾಗಿರಬೇಕೇ ಹೊರತು, ಇನ್ನೊಬ್ಬರ ಬದುಕಿನಂತೆ ನನ್ನ ಬದುಕು ಆಗಬೇಕೆಂದಾಗ ಮಾನಸಿಕ ಅಸ್ವಸ್ಥತೆ ಬರುವುದು. ಬಡತನ-ಸಿರಿತನಗಳು ನಮ್ಮ ನೆಮ್ಮದಿಯ ಬದುಕಿನ ಮಾನದಂಡಗಳಲ್ಲ. ಬದುಕನ್ನು ಸ್ವೀಕರಿಸುವ ರೀತಿಯಿಂದ ನೆಮ್ಮದಿ ಇಲ್ಲವೇ ಸಮಸ್ಯೆಗಳ ಬದುಕು ನಿರ್ಧಾರವಾಗುತ್ತದೆ. ಜೀವನ ಲವಲವಿಕೆಯಿಂದ ಕೂಡಿರಬೇಕೆಂದರೆ ಯಾವುದೋ ವ್ಯಕ್ತಿಗಳ ಹಿಂದೆ ಬೀಳುವ ಬದಲು ಯೋಗ್ಯ ಗುರಿಯೊಂದರ ಹಿಂದೆ ಸತತವಾಗಿ ತೊಡಗಿಕೊಂಡು ಸಾಗಬೇಕು!
ಪ್ರಪಂಚವೆಂದರೆ ಒಂದು ಕ್ಷಣ ಸುಖ, ಒಂದು ಕ್ಷಣ ದುಃಖ. ಎಂಥ ದೊಡ್ಡ ವ್ಯಕ್ತಿಯೇ ಇರಲಿ ಆತ ದೇಹ ಬಿಟ್ಟಾಗ ಒಂದೆರಡು ದಿನ ದುಃಖಿಸುತ್ತಾರೆ, ಮತ್ತೊಂದು ದಿನ ದೇಹ ಬಿಟ್ಟವನ ಸ್ಮರಣೆಗೋಸ್ಕರ ಆತನ ಪುಣ್ಯತಿಥಿಯನ್ನು ಮಾಡಿ ಎಲ್ಲರೂ ಸಿಹಿತಿಂಡಿ ಮಾಡಿ ತಿನ್ನುತ್ತಾರೆ. ಮೊದಲಿನ ದುಃಖ ಈಗ ಮರೆಯಾಗಿಬಿಡುತ್ತದೆ. ಹೀಗೆ ನಮ್ಮ ಜೀವನ ಜೋಕಾಲಿಯು ಸುಖದಿಂದ- ದುಃಖದತ್ತ, ದುಃಖದಿಂದ-ಸುಖದತ್ತ ತೂಗುತ್ತಿರುತ್ತದೆ. ಒಟ್ಟಿನಲ್ಲಿ ನಶ್ವರವಾದ, ನಾಶವಂತವಾದ ಈ ಪ್ರಪಂಚದಲ್ಲಿ ಭಯ, ಉದ್ವೇಗ ಚಿಂತೆ, ಒತ್ತಡ ಎಲ್ಲವೂ ಇವೆ. ಆದರೆ ಮನಸ್ಸಿಗೆ ನಿಜದ ಪ್ರೀತಿ ಭರವಸೆ ಕಾಳಜಿ, ಭದ್ರತೆಯ ಭಾವ ಇದೆಲ್ಲ ಭಾವನಾತ್ಮಕ ಶಕ್ತಿ ತುಂಬಿಸುತ್ತವೆ." ನಮ್ಮನ್ನು ನಿಜವಾಗಿ ಪ್ರೀತಿಸುವವರನ್ನು ಸಂಪಾದಿಸುವುದು ಇಲ್ಲಿ ಅತಿ ಅಗತ್ಯ.
(ವಾಟ್ಸಾಪ್ ನಿಂದ ಸಂಗ್ರಹ)