‘ಟೂಲ್ ಕಿಟ್' ಎಂದರೇನು ಗೊತ್ತಾ?

‘ಟೂಲ್ ಕಿಟ್' ಎಂದರೇನು ಗೊತ್ತಾ?

ಪ್ರಸ್ತುತ ಪ್ರಚಲಿತದಲ್ಲಿರುವ ದೊಡ್ಡ ಸಂಗತಿ ಎಂದರೆ ‘ಟೂಲ್ ಕಿಟ್'. ಏನಿದು ಟೂಲ್ ಕಿಟ್? ಮೊದಲು ಇದು ಇತ್ತಾ? ಇತ್ತೀಚೆಗೆ ಚಾಲ್ತಿಗೆ ಬಂತಾ? ಎಂಬ ಬಗ್ಗೆ ಎಲ್ಲಾ ನಿಮಗೆ ಗೊಂದಲ ಹಾಗೂ ಪ್ರಶ್ನೆಗಳು ಇರಬಹುದಲ್ವೇ? ನಾನಿಲ್ಲಿ ಟೂಲ್ ಕಿಟ್ ಬಗ್ಗೆ ಮಾತ್ರ ಮಾಹಿತಿ ಹಂಚಿಕೊಳ್ಳಲಿರುವೆ. ಅದನ್ನು ಬಳಸಿಕೊಂಡು ಆದ ಪ್ರಮಾದಗಳ ಬಗ್ಗೆ ಅಲ್ಲ. ಓದುಗರೂ ಸಾಮಾಜಿಕ ಜಾಲತಾಣವಾದ ಫೇಸ್ಬುಕ್, ಟ್ವೀಟರ್, ಇನ್ಸ್ಟಗ್ರಾಂ, ವಾಟ್ಸಾಪ್ ಮೊದಲಾದುವುಗಳನ್ನು ಬಳಸುವಾಗ ಬಹಳ ಎಚ್ಚರ ಅಗತ್ಯ. ಯಾರಿಂದಲೋ ಹಂಚಿ ಬಂದ ಪೋಸ್ಟ್ ಒಂದನ್ನು ನೀವು ಹಂಚಲು ಹೋಗಿ ವಿವಾದವನ್ನು ಮೈಮೇಲೆ ಹಾಕಿಕೊಳ್ಳಬೇಡಿ. ನಿಮ್ಮ ಎಚ್ಚರದಲ್ಲಿ ನೀವು ಇರಿ. 

ಕಳೆದೊಂದು ದಶಕದಿಂದಲೂ ಈ ಟೂಲ್ ಕಿಟ್ ಬಳಕೆಯಲ್ಲಿದೆ. ೨೦೧೧ರಲ್ಲಿ ವಾಲ್ ಸ್ಟ್ರೀಟ್ ಪ್ರತಿಭಟನೆ, ೨೦೧೯ರಲ್ಲಿ ಹಾಂಗ್ ಕಾಂಗ್ ನಲ್ಲಿ ನಡೆದ ಪ್ರತಿಭಟನೆಗಳಲ್ಲೆಲ್ಲಾ ಇಂಥಹ ಟೂಲ್ ಕಿಟ್ ಬಳಸಲಾಗಿತ್ತು. ಹಾಗಾದರೆ ಟೂಲ್ ಕಿಟ್ ಎಂದರೆ ಏನು? ಸರಳವಾಗಿ ಹೇಳಬೇಕಾದರೆ ಒಂದು ಚಳುವಳಿ ಅಥವಾ ಹೋರಾಟ ನಡೆಸುತ್ತಿರುವವರಿಗೆ ಮಾರ್ಗದರ್ಶಿ ಸೂತ್ರ ಇದ್ದ ಹಾಗೆ. ಯಾವಾಗ ಮತ್ತು ಎಲ್ಲಿ ಪ್ರತಿಭಟನೆ ಮಾಡಬೇಕು? ಹೇಗೆ ಮಾಡಬೇಕು? ಎಂದು ಮೊದಲೇ ರೂಪುರೇಷೆಯನ್ನು ತಿಳಿಸುವ ಒಂದು ಕೈಪಿಡಿಯ ರೀತಿಯಲ್ಲಿ ಟೂಲ್ ಕಿಟ್ ಕೆಲಸ ಮಾಡುತ್ತದೆ. ಈಗ ಸಾಮಾಜಿಕ ಜಾಲತಾಣಗಳು ಅಧಿಕ ಪ್ರಬಲವಾಗಿಯೂ ಪ್ರಚಲಿತವಾಗಿಯೂ ಇರುವುದರಿಂದ ಹೆಚ್ಚು ಜನರಿಗೆ ತಿಳಿಯುತ್ತಿದೆ. 

ಟೂಲ್ ಕಿಟ್ ಪ್ರತಿಭಟನಾಗಾರರು ಏನು ಮಾಡಬೇಕು? ಎನ್ನುವಲ್ಲಿ ಒಂದು ರೀತಿಯ ಗೈಡ್ ತರಹ ಕೆಲಸ ಮಾಡುತ್ತದೆ. ಉದಾಹರಣೆಗೆ ಹಾಂಗ್ ಕಾಂಗ್ ಪ್ರತಿಭಟನೆಯನ್ನು ನಾವು ಗಣನೆಗೆ ತೆಗೆದುಕೊಂಡರೆ ಆ ಸಂದರ್ಭದಲ್ಲಿ ಮುಖವಾಡ, ಶಿರಸ್ತ್ರಾಣ ಬಳಸಿ ಎಂದು ಇಂಥ ಟೂಲ್ ಕಿಟ್ ನಲ್ಲಿ ಸೂಚಿಸಲಾಗಿತ್ತು. ಭಾರತದಲ್ಲೂ ಸಿಎಎ ವಿರುದ್ಧ ಪ್ರತಿಭಟನೆಯ ಸಮಯದಲ್ಲಿ ಟ್ವಿಟರ್ ಜಾಲತಾಣವನ್ನು ಸಮರ್ಪಕವಾಗಿ ಬಳಸಿರಿ ಎಂದು ಟೂಲ್ ಕಿಟ್ ಸಲಹೆ ನೀಡಿತ್ತು. 

ಟೂಲ್ ಕಿಟ್ ಅನ್ನು ಕೇವಲ ಪ್ರತಿಭಟನಾಕಾರರು ಮಾತ್ರವಲ್ಲ ಪತ್ರಕರ್ತರು, ಶಿಕ್ಷಕರು, ಶಿಕ್ಷಣ ತಜ್ಞರು ಹಾಗೂ ಉದ್ಯಮಿಗಳು ತಮ್ಮ ಮಾಹಿತಿಗಾಗಿ ಇದನ್ನು ಬಳಸುತ್ತಾರೆ. ಯೋಜನೆಗಳ ತುರ್ತು ಜಾರಿಗೆ ಇದರ ಬಳಕೆ ಉತ್ತಮ ಎನ್ನುವುದು ಬಳಕೆದಾರರ ಅನಿಸಿಕೆ. 

ಮೊದಲಾದರೆ ನಮಗೆ ಮಾಹಿತಿ ಹಂಚಲು ಕರಪತ್ರ ಅಥವಾ ಭಾಷಣಗಳ ಸಹಾಯ ಪಡೆದುಕೊಳ್ಳಬೇಕಾಗಿತ್ತು. ಆದರೆ ಇಂದು ಆಧುನಿಕ ಟೂಲ್ ಕಿಟ್ ಬಳಸಿ ಮಾಹಿತಿ ಹಂಚಿಕೊಳ್ಳಬಹುದಾಗಿದೆ. ಭಾಷಣ ಅಥವಾ ಕರಪತ್ರಕ್ಕಿಂತ ವೇಗ ಹಾಗೂ ಪ್ರಭಾವ ಟೂಲ್ ಕಿಟ್ ನಲ್ಲಿ ಅಧಿಕ ಎಂಬುವುದು ಎಲ್ಲರ ಅಭಿಪ್ರಾಯ. ಇದರಿಂದ ಪ್ರತಿಭಟನಾಕಾರರಲ್ಲಿ ಏಕತೆ ಸಾಧ್ಯ. ಈಗೀಗ ಪ್ರಮುಖ ಸಂಘಟನೆಗಳು ಹಾಗೂ ಸರಕಾರೇತರ ಸಂಸ್ಥೆಗಳೂ ಇದನ್ನು ಯಥೇಚ್ಚವಾಗಿ ಬಳಕೆ ಮಾಡುತ್ತಿವೆಯಂತೆ.

ಟೂಲ್ ಕಿಟ್ ನ ಪ್ರಮುಖ ಉದ್ದೇಶ ಚದುರಿಹೋದ ಪ್ರತಿಭಟನಾಕಾರರನ್ನು ಸಂಘಟಿಸುವುದು ಹಾಗೂ ಆನ್ ಲೈನ್ ಮೂಲಕ ಅವರಿಗೆ ಸಲಹೆ ಸೂಚನೆಗಳನ್ನು ನೀಡುವುದಾಗಿದೆ. ಉದಾಹರಣೆಗೆ ಈಗ ಪ್ರತಿಭಟನೆ ನಡೆಯುವ ಸಂದರ್ಭದಲ್ಲಿ ಲಾಠಿ ಚಾರ್ಚ್ ಆಗಿ ಬಹಳ ಜನರು ಗಾಯಾಳುಗಳಾದರೆ ಅವರಿಗೆ ವೈದ್ಯಕೀಯ ಸೌಲಭ್ಯ ತುರ್ತಾಗಿ ಒದಗಿಸುವುದಕ್ಕೆ ಟೂಲ್ ಕಿಟ್ ಬಳಸಬಹುದು. ಪ್ರತಿಭಟನೆ, ಗಲಾಟೆ ಆಗುತ್ತಿರುವ ಸ್ಥಳಗಳಿಂದ ದೂರ ಇರಲು ತಿಳಿಸಲೂ ಈ ಟೂಲ್ ಕಿಟ್ ಸಹಕಾರಿ. 

ನಾವು ಯಾವುದೇ ವಿಷಯ ಅಥವಾ ವಸ್ತುವನ್ನು ಸರಿಯಾಗಿ ಬಳಸಿದರೆ ಅದು ಉಪಯುಕ್ತ ಇಲ್ಲವಾದರೆ ಅದು ತಪ್ಪಾಗಿ ಬಳಕೆಯಾಗಿ ಹಲವಾರು ತೊಂದರೆಗಳಿಗೆ ಕಾರಣವಾಗುತ್ತದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಘಟನೆಗಳೇ ಇದಕ್ಕೆ ಸಾಕ್ಷಿ. ರೈತ ಹೋರಾಟದ ಸಂದರ್ಭದಲ್ಲಿ ವಿದೇಶೀ ಸೆಲೆಬ್ರಿಟಿಗಳು ಈ ಟೂಲ್ ಕಿಟ್ ಬಳಸಿ ಪ್ರಚೋದನಾಕಾರಿ ಸಂದೇಶ ಹಂಚಿಕೊಂಡದ್ದು ನಿಮಗೆ ನೆನಪಿರಬಹುದು. ಪ್ರತಿಭಟನೆ ಮಾಡುವ ಸಂದರ್ಭದಲ್ಲಿ ಹಾಗೆ ಮಾಡಬೇಕು, ಹೀಗೆ ಮಾಡಬೇಕು ಎಂಬುವುದನ್ನು ಟೂಲ್ ಕಿಟ್ ಬಳಸಿ ಅವರು ಮಾಹಿತಿ ಹಂಚುತ್ತಿದ್ದರು.

ನಾವು ಗಮನಿಸಬೇಕಾದ ಸಂಗತಿ ಎಂದರೆ ಯಾವುದೇ ಪ್ರತಿಭಟನೆ, ಮುಷ್ಕರದ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಹಳ ಜಾಗರೂಕತೆಯಿಂದ ಬಳಸ ಬೇಕು. ನಿಮ್ಮ ಒಂದು ಪೋಸ್ಟ್ ಅಥವಾ ಪ್ರತಿಕ್ರಿಯೆ ಊರನ್ನೇ ಹೊತ್ತಿಸಿಬಿಡಬಹುದು. ಇದು ರಾಕೆಟ್ ಯುಗ. ನೈಜ ಮಾಹಿತಿಗಿಂತ ಸುಳ್ಳು ಮಾಹಿತಿಗಳು ವೇಗವಾಗಿ ಪ್ರಸಾರವಾಗುತ್ತವೆ. ಆದುದರಿಂದ ನಿಮಗೆ ಬಂದ ಮಾಹಿತಿಯನ್ನು ಹಂಚುವ ಮೊದಲು ದಯಮಾಡಿ ಅದರ ಸತ್ಯಾಸತ್ಯತೆಯನ್ನು ಪರೀಕ್ಷಿಸಿ. ಇಲ್ಲವಾದಲ್ಲಿ ಪೋಲೀಸ್, ಬಂಧನ, ಜೈಲು ಶಿಕ್ಷೆ, ಮಾನಸಿಕ ಹಿಂಸೆ ಎಲ್ಲವನ್ನೂ ಅನುಭವಿಸಬೇಕಾಗಿ ಬರಬಹುದು. ಆದುದರಿಂದ ಎಚ್ಚರದಿಂದ ಇದ್ದು ನಿಮ್ಮವರನ್ನೂ ಎಚ್ಚರದಲ್ಲಿಡಿ. ಈ ಟೂಲ್ ಕಿಟ್ ವಿಷಯ ಕೇವಲ ಮಾಹಿತಿಗಾಗಿ ಮಾತ್ರ.

(ವಿವಿಧ ಮೂಲಗಳಿಂದ ಸಂಗ್ರಹಿತ)

ಚಿತ್ರ ಕೃಪೆ : ಅಂತರ್ಜಾಲ ತಾಣ