‘ಪಾನಿಪೂರಿ ದಿನ’ಕ್ಕೆ ಗೂಗಲ್ ಗೌರವ!

‘ಪಾನಿಪೂರಿ ದಿನ’ಕ್ಕೆ ಗೂಗಲ್ ಗೌರವ!

ಇಂದಿನ ಯುವ ಜನಾಂಗಕ್ಕೆ ಕ್ರೇಜ್ ಹುಟ್ಟಿಸಿದ ಚಾಟ್ ತಿಂಡಿಗಳಲ್ಲಿ ಪಾನಿಪೂರಿಗೆ ಅಗ್ರಸ್ಥಾನ. ಗೋಲ್ ಗಪ್ಪಾ, ಪುಚ್ಕಾ, ಪಾನಿಪೂರಿ ಮೊದಲಾದ ಹೆಸರಿನಲ್ಲಿ ಕರೆಯಿಸಿಕೊಳ್ಳುವ ಈ ತಿಂಡಿಯನ್ನು ತಿನ್ನಲು ಹಾತೊರೆಯುವವರು ಬಹಳಷ್ಟು ಜನ. ಪಾನಿಪೂರಿ ಮಾರುವವನ ಹತ್ತಿರ ಸಕ್ಕರೆಗೆ ಇರುವೆ ಮೆತ್ತಿದಂತೆ ಯುವ ಜನತೆ ಗುಂಪುಗೂಡಿ ಇದನ್ನು ಮನಸಾರೆ ಸವಿಯುತ್ತಾರೆ. ಇದು ಭಾರತದ ಅತ್ಯಂತ ಜನಪ್ರಿಯ ಬೀದಿ ಬದಿಯ ತಿಂಡಿ (ಸ್ಟ್ರೀಟ್ ಫುಡ್) ಎಂದು ಹೆಸರುವಾಸಿಯಾಗಿದೆ. ಕಳೆದ ಜುಲೈ ೧೨ರಂದು ಈ ಪಾನಿಪೂರಿಗೆ ಗೂಗಲ್ ಸರ್ಚ್ ಇಂಜಿನ್ ತನ್ನ ದೈನಂದಿನ ಪುಟದಲ್ಲಿ ಡೂಡಲ್ ರಚಿಸಿ, ಅದನ್ನು ಬಳಸಿ ಅದರಲ್ಲಿ ಗೇಮ್ ಆಡುವಂತೆ ಮಾಡಿದೆ. ಈ ಮೂಲಕ ಬೀದಿಬದಿ ತಿಂಡಿಯೊಂದಕ್ಕೆ ಗೂಗಲ್ ನ ಡೂಡಲ್ ಗೌರವ ಲಭಿಸಿದೆ.

ಪುರಾಣ ಕಥೆಗಳ ಪ್ರಕಾರ ಪಾನಿಪೂರಿಯನ್ನು ಮಹಾಭಾರತದ ಸಮಯದಲ್ಲಿ ದ್ರೌಪದಿ ಮೊತ್ತಮೊದಲು ಕಂಡು ಹಿಡಿದಳು ಎನ್ನುವುದು ಪ್ರತೀತಿ. ದ್ರೌಪದಿ ಪಂಚ ಪಾಂಡವರನ್ನು ಮದುವೆಯಾಗಿ ಮನೆಗೆ ಬಂದ ಸಂದರ್ಭದಲ್ಲಿ ಅವರ ವನವಾಸ ನಡೆಯುತ್ತಿತ್ತು. ಆ ಸಮಯದಲ್ಲಿ ಕಾಡಿನಲ್ಲಿ ತಿಂಡಿ ತಿನಸು ತಯಾರಿಕೆಗೆ ಬೇಕಾದ ಎಲ್ಲಾ ವಸ್ತುಗಳು ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ಒಂದು ದಿನ ಏನು ತಿಂಡಿ ಮಾಡುವುದು ಎಂಬ ಯೋಚನೆಯಲ್ಲಿದ್ದ ದ್ರೌಪದಿಗೆ ಆಕೆಯ ಅತ್ತೆ ಕುಂತಿ ತಾನು ಸಂಗ್ರಹಿಸಿಟ್ಟಿದ್ದ ಆಲೂಗಡ್ಡೆ, ಗೋಧಿ ಮೊದಲಾದ ವಸ್ತುಗಳನ್ನು ನೀಡಿ ಒಂದು ತಿಂಡಿ ತಯಾರಿಸಲು ಹೇಳುತ್ತಾಳೆ. ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ ದ್ರೌಪದಿ ಆ ವಸ್ತುಗಳನ್ನೆಲ್ಲಾ ಬಳಸಿ ಸ್ವಾದಿಷ್ಟಕರವಾದ ತಿಂಡಿಯೊಂದನ್ನು ತಯಾರಿಸುತ್ತಾಳೆ. ಇದೇ ಇಂದಿನ ‘ಪಾನಿಪೂರಿ’ ಎಂದು ಹೇಳುತ್ತಾರೆ.

ಈಗಿನ ಯುವ ಜನಾಂಗಕ್ಕೆ ಅದರಲ್ಲೂ ವಿದ್ಯಾರ್ಥಿಗಳಿಗೆ ಹೊರಗಡೆಯ ತಿಂಡಿಯನ್ನು ತಿನ್ನಲು ಬಲು ಆಸೆ. ಸಾಂಪ್ರದಾಯಿಕ ತಿಂಡಿಗಳಾದ ಉಪ್ಪಿಟ್ಟು, ದೋಸೆ, ಇಡ್ಲಿಗಳಿಂದ ಅವರು ದೂರ. ಹೋಟೇಲ್ ಗೆ ಹೋದರೆ ಅಲ್ಲಿನ ತಿಂಡಿಗಳ ದರ ಇವರ ಪಾಕೆಟ್ ಮನಿ ಸಾಕಾಗೋಲ್ಲ. ಅದಕ್ಕೆ ಅವರಿಗೆ ಬೀದಿಬದಿ ತಿಂಡಿಯೇ ಉತ್ತಮವೆನಿಸುತ್ತದೆ. ಅಲ್ಲಿ ಸುಲಭವಾಗಿ ಸಿಗುವುದು ಪಾನಿಪೂರಿ, ಸೇವ್ ಪೂರಿ, ಮಸಾಲ ಪೂರಿ, ಭೇಲ್ ಪೂರಿ ಮೊದಲಾದ ತಿಂಡಿಗಳು. ಈ ಎಲ್ಲಾ ತಿಂಡಿಗಳಿಗೆ ಮುಖ್ಯ ವಸ್ತು ಪುಟ್ಟದಾದ ಉಬ್ಬಿರುವ ಪೂರಿ. ಆ ಪೂರಿಯನ್ನು ಒಂದು ಕಡೆ ಒಡೆದು ಅದರಲ್ಲಿ ಬಟಾಟೆ, ಹೆಸರು ಕಾಳು ಮೊದಲಾದ ಸಾಮಗ್ರಿಗಳನ್ನು ಬಳಸಿ ತಯಾರಿಸಲಾದ ಮಿಶ್ರಣವನ್ನು ತುಂಬಿಸಿ, ಅದನ್ನು ಕಾಳುಮೆಣಸು, ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು, ಹಸಿ ಮೆಣಸಿನ ಕಾಯಿ, ಬೆಲ್ಲ, ನಿಂಬೆ ರಸ ಮೊದಲಾದ ವಸ್ತುಗಳನ್ನು ಬಳಸಿ ತಯಾರಿಸಲಾಗುವ ‘ಪಾನಿ' ಎಂಬ ದ್ರಾವಣದಲ್ಲಿ ಮುಳುಗಿಸಿ ತಿನ್ನಲು ನೀಡುತ್ತಾರೆ. ಅದನ್ನು ಚಪ್ಪರಿಸಿ ತಿನ್ನುವುದನ್ನು ನೋಡುವುದೇ ಒಂದು ಮಜಾ. ಕೆಲವರು ತಮ್ಮ ತಮ್ಮ ಮನೆಯಲ್ಲಿ ಪಾನಿಪೂರಿಯನ್ನು ತಯಾರಿಸುತ್ತಾರೆ. ಮನೆಯಲ್ಲಿ ತಯಾರಿಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಹಿತಕರ.

ಒಂದು ವರದಿಯ ಪ್ರಕಾರ ದೇಶದಲ್ಲಿ ಪಾನಿಪೂರಿಯ ವಾರ್ಷಿಕ ವಹಿವಾಟು ಆರು ಸಾವಿರ ಕೋಟಿ ಇದೆಯಂತೆ. ಇದು ಪ್ರತೀ ವರ್ಷ ಶೇ. ೨೦ ರಿಂದ ೨೫ರ ತನಕ ಏರಿಕೆಯನ್ನು ಕಾಣುತ್ತಲೇ ಇದೆಯಂತೆ. ಪಾನಿಪೂರಿ ಮಾರುವ ಬೀದಿಬದಿ ವ್ಯಾಪಾರಿಯೊಬ್ಬನ ವರಮಾನ ದಿನಕ್ಕೆ ಕನಿಷ್ಟ ೮೦೦ ರಿಂದ ೧೦೦೦ ರೂ. ತನಕ ಇದೆ. ವ್ಯಕ್ತಿಯೊಬ್ಬ ಗಂಟೆಗೆ ನಾಲ್ಕು ಸಾವಿರ ಪಾನಿಪೂರಿ ತಯಾರಿಸಬಹುದಾಗಿದ್ದು, ದಿನದಲ್ಲಿ ಎಂಟು ಗಂಟೆ ಕೆಲಸ ಮಾಡಿದ್ದಲ್ಲಿ ೬ ರಿಂದ ೭ ಸಾವಿರ ಆದಾಯವನ್ನು ಗಳಿಸಬಹುದು. 

ಈಗೆಲ್ಲಾ ಪಾನಿಪೂರಿಯಲ್ಲಿ ಬಹುವಿಧಗಳು ಬಂದಿವೆ. ಜನರು ಯಾವಾಗಲೂ ಚೇಂಜ್ ಕೇಳುತ್ತಾರೆ. ಈ ಕಾರಣದಿಂದ ಮಧ್ಯಪ್ರದೇಶದ ಇಂದೋರ್ ನಗರದ ಇಂದೋರಿ ಝೈಕಾ ಎಂಬ ಹೋಟೇಲ್ ಜುಲೈ ೧೨, ೨೦೧೫ ರಂದು ತನ್ನ ಗ್ರಾಹಕರಿಗಾಗಿ ೫೧ ಬಗೆಯ ಪಾನಿಪೂರಿಯನ್ನು ತಯಾರಿಸಿತ್ತು. ಇದೊಂದು ವಿಶ್ವದಾಖಲೆಯಾಗಿದೆ. ಈ ಕಾರಣದಿಂದಾಗಿ ಪ್ರತೀ ವರ್ಷ ಜುಲೈ ೧೨ ನ್ನು ‘ಪಾನಿಪೂರಿ ದಿನ' ಎಂದು ಆಚರಣೆ ಮಾಡಲಾಗುತ್ತಿದೆ. ದಿನ ಯಾವುದೇ ಆಗಿದ್ದರೂ ಪಾನಿಪೂರಿಯ ಆಚರಣೆ ದಿನಂಪ್ರತಿ ದೇಶದಾದ್ಯಂತ ನಡೆಯುತ್ತಲೇ ಇರುತ್ತದೆ ! ೨೦೧೫ರ ಪಾನಿಪೂರಿ ದಿನದ ಸಂಭ್ರಮವನ್ನು ಗೂಗಲ್ ೮ ವರ್ಷಗಳ ನಂತರ ಡೂಡಲ್ ರಚಿಸಿ ನೆನಪಿಸಿಕೊಟ್ಟಿದೆ. ಹೀಗೆ ಭಾರತದ ಬೀದಿಬದಿಯ ತಿಂಡಿಯೊಂದಕ್ಕೆ ಗೂಗಲ್ ಗೌರವ ನೀಡಿದಂತಾಗಿದೆ.

ಚಿತ್ರ ಕೃಪೆ: ಅಂತರ್ಜಾಲ ತಾಣ