‘ಬಿಡುಗಡೆಯ ಹಾಡುಗಳು' (ಭಾಗ ೨) - ಮುದವೀಡು ಕೃಷ್ಣರಾಯರು
ನಟ, ರಂಗಭೂಮಿ ಕಲಾವಿದ, ಪತ್ರಿಕೋದ್ಯಮಿ ಮುದವೀಡು ಕೃಷ್ಣರಾಯ ಅವರು ಹುಟ್ಟಿದ್ದು (ಜನನ : ಜುಲೈ ೨೪, ೧೮೭೪) ಬಾಗಲಕೋಟೆಯಲ್ಲಿ. ’ಕರ್ನಾಟಕ ವೃತ್ತ’ ಧನಂಜಯ ಪತ್ರಿಕೆಗಳ ಮೂಲಕ ಜಾಗೃತಿಯುಂಟು ಮಾಡಿದರು. ಕನ್ನಡ ಆಂದೋಲನವನ್ನು ಎಳೆವಯಸ್ಸಿನಲ್ಲೇ ಪ್ರಾರಂಭಿಸಿದ ಮುದವೀಡು ಕೃಷ್ಣರಾಯರು ಮರಾಠಿ ಪ್ರಾಬಲ್ಯವಿದ್ದ ಕರ್ನಾಟಕದ ಪ್ರದೇಶಗಳಲ್ಲಿ ತಮ್ಮ ಬರಹ, ಭಾಷಣಗಳ ಮೂಲಕ ಜಾಗೃತಿ ಮೂಡಿಸಿ ತರುಣರಲ್ಲಿ ಚೈತನ್ಯ ತುಂಬಿದರು. ಕನ್ನಡ ಪ್ರದೇಶಗಳ ಏಕೀಕರಣಕ್ಕಾಗಿ ಅಹರ್ನಿಶಿ ದುಡಿದರು.
ರಂಗಭೂಮಿಯಲ್ಲೂ ಆಸಕ್ತಿ ಹೊಂದಿದ್ದ ಕೃಷ್ಣರಾಯರು ೧೯೦೭ರಲ್ಲಿ ‘ಭಾರತ ಕಲೋತ್ತೇಜಕ ನಾಟಕ ಮಂಡಲಿ’ಯನ್ನು ಸ್ಥಾಪನೆ ಮಾಡಿದರು. ‘ಪ್ರೇಮಭಂಗ’ ಎಂಬ ನಾಟಕವನ್ನು ಬರೆದು ರಂಗಕ್ಕೆ ಅಳವಡಿಸಿ ಹಲವಾರು ಪ್ರದರ್ಶನಗಳನ್ನು ನಡೆಸಿದರು. ಇದಲ್ಲದೆ ನಾಟ್ಯ ವಿಲಾಸಿಯಾಗಿ ಅನೇಕ ನಾಟಕಗಳಲ್ಲಿ ಹಾಗೂ . ಚಿರಂಜೀವಿ ಎಂಬ ವಾಕ್ಚಿತ್ರದಲ್ಲಿ, ಚಿತ್ರಗುಪ್ತ ಭೂಮಿಕೆಯಲ್ಲಿ ಪಾತ್ರಧಾರಿಯಾಗಿದ್ದರು.
ಒಳ್ಳೆಯ ಬರಹಗಾರರಾಗಿದ್ದ ಕೃಷ್ಣರಾಯರು ‘ಚಿತ್ತೂರು ಮುತ್ತಿಗೆ’ ಎಂಬ ಪ್ರಸಿದ್ಧ ಕಾದಂಬರಿಯನ್ನು ಪ್ರಕಟಿಸಿದರು. ವಿಕ್ರಮ ಶಶಿಕಲಾ, ಸುಭದ್ರಾ, ರಾಮರಾಜವಿಯೋಗ ಮುಂತಾದ ನಾಟಕಗಳನ್ನ ಮರಾಠಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಕವಿಗಳೂ ಆಗಿದ್ದ ಮುದವೀಡು ಕೃಷ್ಣರಾಯರು ಮುದ್ದುಮೋಹನ ಅಂಕಿತನಾಮದಿಂದ ಹಲವಾರು ಕವನಗಳನ್ನು ರಚಿಸಿದ್ದಾರೆ. ಇವರು ಸೆಪ್ಟೆಂಬರ್ ೭, ೧೯೪೭ರಲ್ಲಿ ನಿಧನ ಹೊಂದಿದರು.
ಬಿಡುಗಡೆಯ ಹಾಡು ಕೃತಿಯಲ್ಲಿ ಪ್ರಕಟವಾದ ಮುದವೀಡು ಕೃಷ್ಣರಾಯರ ಕವನ ‘ಮರೆತೆ ಏತಕಯ್ಯಾ’ ಎನ್ನುವ ಕವನವನ್ನು ೧೯೨೦ರಲ್ಲಿ ಬರೆದಿದ್ದು ಅದು ‘ಬೆಳಗಾವಿ ಜಿಲ್ಲೆಯ ಸ್ವಾತಂತ್ರ್ಯ ಸಮರ' ಕೃತಿಯಲ್ಲಿ ಮುದ್ರಿತವಾಗಿದೆ.
ಮರೆತೆ ಏತಕಯ್ಯಾ
ಮರೆತೆ ಏತಕಯ್ಯಾ ನಿನ್ನ ಮಾತೃಭೂಮಿಯ ॥ಪಲ್ಲವಿ॥
ನಿರುತ ನಿನ್ನ ಹೊರೆಯ ಹೊತ್ತು ಪೊರೆವ ತಾಯಿಯ
ಮರೆತೆ ಏತಕಯ್ಯಾ ॥ಅನುಪಲ್ಲವಿ॥
ಒಂಬತ್ತು ತಿಂಗಳು ತನ್ನೊಳಿಂಬುಗೊಟ್ಟವಳು ತಾಯಿ ।
ತೊಂಬತ್ತು ವರುಷವಾದರೂ ಪೊರೆವ ಕುಂಭಿನಿ ತಾಯಲ್ಲೋ ॥
ಮಾತೃಭೂಮಿಯಾ ॥೧॥
ನಡೆನುಡಿ ಬರುವ ತನಕ ಒಡಲಿಗನ್ನ ಕೊಡುವಳು ತಾಯಿ ।
ಕಡೆತನಕ ನಿನ್ನೊಡಲಿಗೆ ಅನ್ನ ಕೊಡುವಳು ತಾಯಲ್ಲೊ ॥
ಮಾತೃಭೂಮಿಯಾ ॥೨॥
ಗೇಣು ಭೂಮಿಗಾಗಿ ಎನ್ನ ಪ್ರಾಣ ಹೋಗಲಿ ಎಂದೆನ್ನುವಿ ।
ಕಾಣದೇನೂ ನಾಡೇ ಪರರಾಧೀನವಾಗಿರುವುದು ಮನುಜಾ ॥
ಮಾತೃಭೂಮಿಯಾ ॥೩॥
(‘ಬಿಡುಗಡೆಯ ಹಾಡುಗಳು' ಕೃತಿಯಿಂದ ಸಂಗ್ರಹಿತ)