‘ಬಿಡುಗಡೆಯ ಹಾಡುಗಳು' (ಭಾಗ ೪) - ಸ.ಪ.ಗಾಂವಕರ

‘ಬಿಡುಗಡೆಯ ಹಾಡುಗಳು' (ಭಾಗ ೪) - ಸ.ಪ.ಗಾಂವಕರ

ಉತ್ತರ ಕನ್ನಡ ಜಿಲ್ಲೆ ಹೆಮ್ಮೆಯಿಂದ ಸ್ಮರಿಸಿಕೊಳ್ಳಬಹುದಾದ ವ್ಯಕ್ತಿ ಸಣ್ಣಪ್ಪ ಪರಮೇಶ್ವರ ಗಾಂವಕರ (ಸ.ಪ.ಗಾಂವಕರ). ಅವರು ಕವಿಯೂ ಹೌದು, ರಾಜಕಾರಣಿಯೂ ಹೌದು. ಆದರೆ ಇಂದಿನ ರಾಜಕಾರಣಿಗಳಿಗೆ ಅವರನ್ನು ಹೋಲಿಸುವಂತಿಲ್ಲ.   

ಕುಮಟಾ ಅಂಕೋಲಾ ನಡುವಿನ ತೊರ್ಕೆ ಗ್ರಾಮದಲ್ಲಿ ೧೮೮೫ರ ಜನವರಿ ೧೧ರಂದು ಜನಿಸಿದ ಗಾಂವಕರರು ತಮ್ಮ ೪೦ನೇ ವಯಸ್ಸಿನಲ್ಲಿ ಸಾಂಗಲಿ ವಿಲ್ಲಿಂಗ್ಡನ್ ಕಾಲೇಜಿನಲ್ಲಿ ಪದವಿ ಪಡೆದು, ಹುಬ್ಬಳ್ಳಿ ಮುನಸಿಪಾಲಿಟಿಯ ಅಧಿಕಾರಿಯಾಗಿ ಸ್ಕೂಲ್ ಬೋರ್ಡ್‌ ಆಡಳಿತಾಧಿಕಾರಿಯಾಗಿ ಕೆಲ ಕಾಲ ಕೆಲಸ ಮಾಡಿ ನಂತರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಪಾಲ್ಗೊಂಡು ಜೈಲಿಗೆ ಹೋಗಿ ಬಂದು ಆ ಮೇಲೆ ಸ್ವರಾಜ್ ಪಕ್ಷ ಸೇರಿ ರಾಜಕೀಯಕ್ಕೂ ಕಾಲಿಟ್ಟ ಅವರು ೧೯೫೨ರಲ್ಲಿ ಚುನಾವಣೆಗೆ ನಿಂತು ಆರಿಸಿ ಬಂದರು. ಅವರನ್ನು ಮುಂಬಯಿ ಸರಕಾರದ ಮುಖ್ಯಮಂತ್ರಿ ಬಿ. ಜಿ. ಖೇರ್ ಅವರು ಡೆಪ್ಯುಟಿ ಮಿನಿಸ್ಟರ್ ಆಗಿ ಸೇರಿಸಿಕೊಂಡರು.   

ಮೂಲತಃ ಕವಿ ಹೃದಯಿಗಳಾಗಿದ್ದ ಸಪ ಅವರು ರವೀಂದ್ರನಾಥ ಟಾಗೋರರ ಗೀತಾಂಜಲಿಯನ್ನು ೧೯೬೨ರಲ್ಲಿ  ಕನ್ನಡಕ್ಕೆ ಅನುವಾದಿಸಿದರು. ಅವರ ಇತರ ಕೃತಿಗಳು ಮುಗಿಲು, ರೈತರ ಗೋಳು, ಪ್ರಕೃತಿ ಪ್ರೀತಿ, ಪ್ರೇರಣೆ ಶೋಧನೆ  ಕವನ ಸಂಕಲನಗಳು, ನಾಡಕಲೆ ಪುಸ್ತಕ ಇತ್ಯಾದಿ.   

೧೯೩೬ರಲ್ಲಿ ಗೋಕರ್ಣದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಂಘಟನೆಯಲ್ಲಿ ಅವರದು ಪ್ರಮುಖ ಪಾತ್ರವಿತ್ತು. ಅಂಕೋಲದಲ್ಲಿ ಗಾಂಧೀ ನಿವಾಸ, ಅರವಿಂದಾಶ್ರಮ ವಸತಿ ನಿಲಯ, ಶೆಟಗೇರಿ ಸತ್ಯಾಗ್ರಹ ಸ್ಮಾರಕ ಹೈಸ್ಕೂಲುಗಳ ಸ್ಥಾಪನೆಗೆ ಅವರೆ ಕಾರಣರೆನಿಸಿದರು. ೧೯೭೨ರಲ್ಲಿ ಅವರು ನಿಧನ ಹೊಂದಿದರು.   

‘ಬಿಡುಗಡೆಯ ಹಾಡುಗಳು' ಕೃತಿಯಲ್ಲಿ ಇವರ ಒಂದು ಕವನ ಪ್ರಕಟವಾಗಿದೆ. ಅದನ್ನು ಆರಿಸಿ ನೀಡಲಾಗಿದೆ.

ನನ್ನ ನಾಡು ಚೆನ್ನ ನಾಡು

ನನ್ನ ನಾಡ ಚಿನ್ನ ನಾಡ ಬನ್ನಬಡುತ ಪೊರೆಯುವಾ ।

ನನ್ನಿಯಿಂದ ತಾಯಿನಾಡ ಹೊನ್ನ ಸಿರಿಯ ಬೆಳಗುವ ॥

 

ನಾಡ ಬವರ ಬವಣೆಯಲ್ಲಿ ಜೀವವನ್ನು ನೀಡುವ ।

ಹೇಡಿತನವ ಹೊಡೆದುಹಾಕಿ ರೂಢಿಯಲ್ಲಿ ಮೆರೆಯುವ ॥

 

ನಾಡನುಡಿಯ ಮಾಡನಡೆಯ ನಾಡಿನಲ್ಲಿ ನಡಿಸುವ ।

ಕಾಡುತಿರುವ ಕಾಡುಜನರ ಕೋಡುತಾನೆ ಉಡಿಯುವ ॥

 

ನಾಡಮೇಲ್ಮೆ ನೋಡಿಯೊಡಲು ಪೊಡವಿಯೊಡೆಯ ನಡೆಯಲು ।

ಬೇಡಿಕೊಂಡು ಪೊಡವಿಗಿಳಿದು ಬಡವರಿಂಗೆ ಬಡಿಸಲಿ ॥

 

ಚತುರತನದೆ ಜಾತಿಮತವ ರೀತಿ ನೀತಿಗಿಳಿಸುವ ।

ಜಾತಿಮತಕೆ ಸೋತುಬಿದ್ದ ಮಾತೆಯನ್ನು ಎತ್ತುವ ॥

 

ಜಾತಿ ಬೆಳೆಸಿ ಆತುಕೊಂಡು ಘಾತಿಸಿಪ್ಪ ಜನರನು ।

ಭೀತಿ ಬಿಡಿಸಿ ಹೂತುಬಿಟ್ಟು ಸಾತಿಶಯದೆ ಮೆರೆಯುವ ॥

 

ನನ್ನ ಮಾತು ನಿನ್ನ ಮಾತು ಹೊನ್ನಮಾತದೆನ್ನದೆ ।

ಉನ್ನತಾಗ್ರಸಭೆಯ ಮಾತ ಮನ್ನಿಸೆಲ್ಲ ನಡೆಯುವ ॥

 

ಕಾವನನ್ನು ಕಾಂಬ ಬಗೆಯ ಕಾಣಿ ಬೇರೆ ತರದಲಿ ।

ನಾಡಸೇವೆಗಾಗಿ ತನುವ ನೀಡೆ ದೇವ ಕಾಂಬನು ॥

 

ದೇವರಿಂದ ಬಂದ ನಾವು ದೇವರಾಗಿ ಮೆರೆಯುವ ।

ಜೀವಕಂಜಿ ಹೆದರಿ ಹೆದರಿ ಸಾವ ಜನರ ತೊರೆಯುವ ॥

 

ನಾಡಧರ್ಮ ರೂಢಿಯಲ್ಲಿ ನಾಡ ತಾನೆ ನುಡಿಸುವ ।

ನಾಡದೇವಿ ಬೀಡಿನಲ್ಲಿ ಕೂಡಿಯಾಡಿ ಮೆರೆಯುವ ॥

(‘ನಾಡಹಾಡುಗಳು', ಮುದ್ರಿತ: ಮಿಂಚಿನಬಳ್ಳಿ)