‘ಮನುಷ್ಯ ಜನ್ಮ ದೊಡ್ಡದು' ಎಂಬುದನ್ನು ಅರಿತಿರುವಿರಾ?

‘ಮನುಷ್ಯ ಜನ್ಮ ದೊಡ್ಡದು' ಎಂಬುದನ್ನು ಅರಿತಿರುವಿರಾ?

ಈ ಮೇಲಿನ ಮಾತನ್ನು ನಾವು ನಮ್ಮ ಬದುಕಿನ ಪ್ರತೀ ಹಂತಗಳಲ್ಲೂ ಕೇಳುತ್ತಲೇ ಇರುತ್ತೇವೆ. ಸಣ್ಣವರಿರುವಾಗ ಅಪ್ಪ, ಅಮ್ಮ, ಅಜ್ಜ, ಅಜ್ಜಿಯವರ ಬಾಯಿಯಲ್ಲಿ ಕೇಳಿದ್ದು ನಂತರ ಶಾಲೆಯ ದಿನಗಳಲ್ಲಿ ಗುರುಗಳ ಬಾಯಲ್ಲಿ ಕೇಳುತ್ತೇವೆ. ‘ಮನುಷ್ಯ ಜನ್ಮ ದೊಡ್ದದು ಮಗಾ, ಇರುವಷ್ಟು ದಿನ ಅಸಹಾಯಕರಿಗೆ, ದೀನ ದಲಿತರಿಗೆ ಸಹಾಯ ಮಾಡಬೇಕು' ಎನ್ನುವ ಮಾತು ನಮ್ಮ ಹಿರಿ ತಲೆಗಳದ್ದು. ಅವರದ್ದು ಅನುಭವದ ಮಾತು. ನಾವಿಂದು ಯಾರಿಗಾದರೂ ಮಾಡಿದ ಸಹಾಯ ಮುಂದೆ ಭವಿಷ್ಯದಲ್ಲಿ ನಮ್ಮ ಮಕ್ಕಳಿಗೋ ಅಥವಾ ಕುಟುಂಬದವರಿಗೋ ಖಂಡಿತವಾಗಿಯೂ ಉಪಯೋಗವಾಗುತ್ತದೆ. ಯಾರೋ ತೋಡಿದ ಬಾವಿ, ಯಾರೋ ನೆಟ್ಟ ಮರ ಇನ್ಯಾರಿಗೋ ಉಪಕಾರಿಯಾಗುತ್ತದೆ. ಇದೇ ರೀತಿ ನೀವು ಮಾಡಿದ ಕಾರ್ಯಗಳು ಮುಂದಿನ ದಿನಗಳಲ್ಲಿ ಯಾರಿಗೋ ಸಹಾಯಕ್ಕೆ ಬರುತ್ತವೆ. ಇದನ್ನು ಮನುಷ್ಯ ಮಾತ್ರ ಮಾಡಲು ಸಾಧ್ಯ. ಅದಕ್ಕೆ ಎಲ್ಲರೂ ಹೇಳುವುದು ‘ಮಾನವ ಜನ್ಮ ದೊಡ್ಡದು’ ಎಂದು 

ನದಿಯೆಲ್ಲೇ ಹುಟ್ಟಲಿ ಕೊನೆಗೆ ಸೇರುವುದು ಸಾಗರವನ್ನೇ. ಮನುಷ್ಯನೆಷ್ಟೇ ದೊಡ್ಡವನಾಗಿರಲಿ ಕೊನೆಗೆ ಸೇರುವುದು ಮಸಣವನ್ನೇ..!!

ಜಾತಸ್ಯ ಹಿ ಧ್ರುವೋ ಮೃತ್ಯುಃ.ಹುಟ್ಟಿದ ಕೂಡಲೇ ಸಾವು ನಿಶ್ಚಯ. ಮೃತ್ಯು ಯಾರನ್ನು ಕೇಳಿ, ಅಂಗಲಾಚಿ ಬರುವುದಿಲ್ಲ. ಸಾವಿರದ ಮನೆಯ ಸಾಸಿವೆಯೇ ಇಲ್ಲ. ಆದರೂ ಎಂತಹ ಮೂಢರು ನಾವು. ಸಾವನ್ನೇ ಮರೆತು, ಪ್ರಪಂಚದ ವೈಭೋಗದಲ್ಲಿ ಮನುಷ್ಯ ಜನ್ಮದ ಉದ್ದೇಶವನ್ನೇ ಮರೆತು ಜೀವಿಸುತ್ತಿದ್ದೇವೆ..!!

ಪುನರ್ಜನ್ಮವನ್ನು ನಂಬುವವರು ನಾವು. ಹಾಗಾಗಿ ಎಲ್ಲ ಜನ್ಮಗಳಲ್ಲೂ ಮನುಷ್ಯ ಜನ್ಮವೇ ಶ್ರೇಷ್ಟ. ”ಜಂತೂನಾಂ ನರಜನ್ಮ ದುರ್ಲಭಮ್”. ಈ ಮನುಷ್ಯ ಜನ್ಮ ಬಹಳ ಸುಲಭವಾಗಿ ಸಿಕ್ಕಿದ್ದಲ್ಲ ಸ್ವಾಮೀ. ಹಲವಾರು ಜನ್ಮಗಳ ಪುಣ್ಯದ ಫಲ. ಭಗವಂತ ಮನುಷ್ಯನಿಗಷ್ಟೇ ವಿಶೇಷವಾದ ಜ್ಞಾನವನ್ನು ಕೊಟ್ಟ. ಜಗತ್ತಿನ ಸಕಲ ಚರಾಚರಗಳನ್ನು ನಿರ್ವಹಿಸುವ ದೊಡ್ಡ ಜವಾಬ್ದಾರಿ ಕೊಟ್ಟ. ಆದರೆ ಆ ಜವಾಬ್ದಾರಿಯನ್ನು ನಾವು ಸರಿಯಾಗಿ ನಿರ್ವಹಿಸುತ್ತಿದ್ದೇವಾ..? ಪ್ರಾಣಿಗಳೂ ಕಚ್ಚಾಡುತ್ತವೆ. ಹಾಗೇ ನಾವೂ ಕಚ್ಚಾಡುತ್ತಿದ್ದೇವೆ. ಅಂದ ಮೇಲೆ ಮನುಷ್ಯನಿಗೂ, ಪ್ರಾಣಿಗಳಿಗೂ ಏನು ವ್ಯತ್ಯಾಸ..?

ಹಾಗಾದರೆ, ಮನುಷ್ಯಜನ್ಮದ ಉದ್ದೇಶ..? ಸುಖೋಪಭೋಗವೇ...? ಕೇವಲ ಅದಕ್ಕಾಗಿಯೇ ಇಲ್ಲಿಗೆ ಬಂದಿದ್ದೇವೆಯೇ..? ತಿಂದುಂಡು ಮಜಾ ಮಾಡಿ, ಯಾರಿಗೂ ಕೊಡದೇ ಶೇಖರಿಸಿ ಕೊನೆಗೆ ಬರಿಗೈಯ್ಯಲ್ಲಿ ನಡೆಯುವುದೇ..?

ಖಂಡಿತಾ ಅಲ್ಲ..

ಮನುಷ್ಯಜನ್ಮ ಸಾರ್ಥಕ್ಯವನ್ನು ಪಡೆಯಬೇಕು. ಅದಕ್ಕೇನು ಮಾಡಬೇಕು..? ಅದಕ್ಕೊಂದೇ ಪರಿಹಾರ ಆಧ್ಯಾತ್ಮ. ಆಧ್ಯಾತ್ಮವೆಂದರೆ ಅತ್ಮಕ್ಕೆ ಅಧೀನನಾಗಿರುವುದು. ಆಧ್ಯಾತ್ಮವೆಂಬುದು ಪುಸ್ತಕದ ಬದನೆಕಾಯಿ ಎಂಬುದು ಹಲವರ ವಾದ. “ಆಧ್ಯಾತ್ಮ ಕೇವಲ ವಯಸ್ಸಾದವರಿಗೆ” ತಪ್ಪು ಅಭಿಪ್ರಾಯ. ಆದರೆ,ಮನುಷ್ಯನಲ್ಲಿ ಇರಲೇಬೇಕದ ವಸ್ತು ಆಧ್ಯಾತ್ಮ ಚಿಂತನೆ. ಅಷ್ಟಕ್ಕೂ ಏನಿದೆ ಈ ಬದುಕಿನಲ್ಲಿ..?

ಅಧಿಕಾರವಿರುವವರು ಹೇಳಬಹುದು, ಅಧಿಕಾರವಿದೆ. ಹಣವಿರುವವರು ಹೇಳಬಹುದು, ಹಣವಿದೆ. ನೂರು ಜನ ನೂರು ಕಾರಣಗಳನ್ನು ಹೇಳಬಹುದು. ನಿಜ..ಎಲ್ಲವೂ ಇದೆ. ಆದರೆ ಮನದಲ್ಲಿ ಅವ್ಯಕ್ತ ಆನಂದವಿಲ್ಲ. ಆ ಅವ್ಯಕ್ತ ಆನಂದವೆಲ್ಲಿ ಸಿಗಬಹುದು..? ಅಧಿಕಾರಕ್ಕೆ ಆಯಸ್ಸು ಕಮ್ಮಿ. ಇವತ್ತು ಇದ್ದ ಅಧಿಕಾರ ನಾಳೆ ಹೋಗುತ್ತದೆ. ನಿಮ್ಮ ಜಾಗಕ್ಕೆ ಬೇರೆ ಯಾರೋ ಬಂದು ಕುಳಿತುಕೊಳ್ಳುತ್ತಾನೆ. ನಿಮ್ಮ ಬಳಿ ಅಧಿಕಾರ ಇರುವಾಗ ಜನರಿಗೆ ಉಪಕಾರವಾಗುವಂತಹ ನಾಲ್ಕು ಕೆಲಸ ಮಾಡಿ. ಮುಂದಿನ ನಾಲ್ಕು ಶತಮಾನದ ಜನರು ನಿಮ್ಮನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಅಧಿಕಾರದ ಆಸೆಯಿಂದ, ಹಣದ ದುರಾಸೆಯಿಂದ ಕೆಲಸ ಮಾಡಿದರೆ ಅದು ಕ್ಷಣಿಕ. ಸಾಯುವಾಗ ಯಾರೂ ಹಣವನ್ನು, ಆಸ್ತಿಯನ್ನು ಕೊಂಡುಹೋಗಿಲ್ಲ. ಒಳ್ಳೆಯ ಮಾತು ಮತ್ತು ನಾವು ಮಾಡಿದ ಸತ್ಕಾರ್ಯಗಳು ಮಾತ್ರ ನಮ್ಮ ಜೊತೆ ಬರುತ್ತವೆ. 

ನಿಜ ಅದು ಕೇವಲ ಆಧ್ಯಾತ್ಮದಲ್ಲಿ. ನಮ್ಮ ದಾರ್ಶನಿಕರ ಪ್ರಕಾರ ಶರೀರ, ಪಂಚೇಂದ್ರಿಯಗಳು,ಮನಸ್ಸು ಪ್ರಮುಖವಲ್ಲ. ಹೆಚ್ಚಿನ ಪ್ರಾಮುಖ್ಯತೆ ಆತ್ಮಕ್ಕೇ.“ಆತ್ಮಾ ಏವ ಸತ್” ಆತ್ಮವನ್ನು ಸಮೀಪಿಸುವುದು ಆಧ್ಯಾತ್ಮ. ಆತ್ಮಕ್ಕೆ ಸುಖವಿಲ್ಲ, ಕಷ್ಟವಿಲ್ಲ, ಸಾವು, ನೋವುಗಳೂ ಇಲ್ಲ. ಆತ್ಮವನ್ನು ಅರಿತವನಿಗೂ ಸುಖದುಃಖಗಳಿಲ್ಲ. ಆತ್ಮವನ್ನು ಅರಿತವನು ಆತ್ಮತತ್ವಜ್ಞಾನಿ. ಆತ್ಮತತ್ವಜ್ಞಾನಿಗೆ ಭಯ,ದುಃಖ, ನೋವುಗಳಿಲ್ಲ. ಆತ ಸದಾನಂದ. ಅಂತವರಿಗೆ ಈ ಪ್ರಪಂಚ, ಚರಾಚರವಸ್ತುಗಳಲ್ಲಿ ಬೇಧವಿಲ್ಲವೆನಿಸುತ್ತದೆ. ಸಮಸ್ತ ವಿಶ್ವವೂ ನಮ್ಮದೆಂದೆನಿಸುತ್ತದೆ. ಅಂತಹ ಆತ್ಮತತ್ವಜ್ಞಾನವನ್ನರಿಯುವ ಪ್ರಯತ್ನ ನಮ್ಮದಾಗಿರಲಿ.

ನಮ್ಮ ಚಿಂತನೆಗಳು ಯಾವತ್ತೂ ಸಕಾರಾತ್ಮಕವಾಗಿರಲಿ. ಮತ್ತೊಬ್ಬರಿಗೆ ಉಪಕಾರ ಮಾಡಲು ಸಾಧ್ಯವಿಲ್ಲದಿದ್ದರೆ ಉಪದ್ರ ಮಾತ್ರ ಮಾಡುವುದು ಬೇಡ. ಹಲವಾರು ಸಮಯ ನಮಗೆ ಬೇರೆಯವರಿಗೆ ಸಹಾಯ ಮಾಡಬೇಕೆಂಬ ಮನಸ್ಸಿರುತ್ತದೆ. ಆದರೆ ನಮ್ಮ ಬಳಿ ಸಮಯದ ಅಭಾವವಿರುತ್ತದೆ, ಹಣಕಾಸಿನ ಸಮಸ್ಯೆ ಇರುತ್ತದೆ. ಆಗೆಲ್ಲಾ ನಾವು ನಮ್ಮ ಕಾರ್ಯಕ್ರಮಗಳನ್ನು ಜಾಗರೂಕತೆಯಿಂದ ಆಯೋಜಿಸಿಕೊಳ್ಳಬೇಕು. ಇಲ್ಲದ ಉಸಾಬರಿಗೆ ಹೋಗಿ ಎಲ್ಲವನ್ನೂ ಕಳೆದುಕೊಂಡ ಎಂದು ಹೇಳದಿರುವಂತೆ ಸಹಾಯ ಮಾಡುವ ಬಗ್ಗೆ ಯೋಚಿಸಬೇಕು. ಪುಟ್ಟ ಪುಟ್ಟ ಸಹಾಯ, ಸಹಕಾರವನ್ನು ಮಾಡಿದರೂ ಕಷ್ಟದಲ್ಲಿರುವವರಿಗೆ ಅದು ಮಹದುಪಕಾರವೇ ಆಗಿರುತ್ತದೆ.

ಲೋಕಾಃ ಸಮಸ್ತಾಃ ಸುಖಿನೋ ಭವಂತು...

(ಫೇಸ್ ಬುಕ್ ಜಾಲತಾಣದಿಂದ ಸಾರ ಸಂಗ್ರಹ)