‘ಮಯೂರ’ ಹಾಸ್ಯ- ಭಾಗ ೧೦

‘ಮಯೂರ’ ಹಾಸ್ಯ- ಭಾಗ ೧೦

ಉಪಚಾರದ ರಹಸ್ಯ

ಬೆಳಗಿನ ಕಾಫಿಯನ್ನು ಹೀರುತ್ತಾ ಕುಳಿತಿದ್ದಾಗ ನನ್ನ ಸ್ನೇಹಿತೆ ತಮ್ಮ ವಾಕಿಂಗ್ ಮುಗಿಸಿಕೊಂಡು ನಮ್ಮ ಮನೆಗೆ ಬಂದರು. ಬಂದವರೇ ನಮ್ಮ ಜೊತೆ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತರು. ತಕ್ಷಣ ಹಾಲ್ ನಲ್ಲಿ ಕುಳಿತಿದ್ದ ನಮ್ಮ ನಮ್ಮನೆಯವರು ಅಡುಗೆ ಮನೆಗೇ ಕುರ್ಚಿ ತಂದು ಹಾಕಿ ‘ಇಲ್ಲಿ ಕೂತ್ಕೊಳ್ಳಿ’ ಎಂದು ಉಪಚಾರ ಮಾಡಿದ್ರು. ನನ್ನ ಸ್ನೇಹಿತೆ ‘ಅಯ್ಯೋ ದಿನಾ ಬರ್ತೀನಿ ನಾನು, ನನಗ್ಯಾಕೆ ಉಪಚಾರ' ಎಂದು ಸಂಕೋಚದಿಂದ ಹೇಳಿದ್ರೆ, ನಮ್ಮನೆಯವರು ‘ಹಾಗೇನಿಲ್ಲ, ಮೊನ್ನೆ ತಾನೇ ಗೋಡೆಗೆ ಬಣ್ಣ ಬಳಿದಿದ್ದೇವೆ. ಒರಗಿ ಕೂತ್ರೆ ಎಣ್ಣೆ ಆಗುತ್ತೆ' ಎಂದು ಗಂಭೀರವಾಗಿ ಹೇಳಿ ಹೋದರು. ನನ್ನ ಸ್ನೇಹಿತೆ ಕೂರಲಾರದೆ ಚಡಪಡಿಸುತ್ತಾ ನನ್ನ ಮುಖ ನೋಡಿದಾಗ, ನಾನು ನಗುತ್ತಾ ಅವರಿಗೂ ಕಾಫಿ ಕೊಟ್ಟು ಸಂದರ್ಭವನ್ನು ತಿಳಿಗೊಳಿಸಿದೆ.

-ಸುಮಾ ಕಳಸಾಪುರ, ಶಿವಮೊಗ್ಗ

***

ಮೌನ ಬಂಗಾರ

ಉದ್ಘಾಟನಾ ಸಮಾರಂಭಕ್ಕೆ ಹಿರಿಯ ಪ್ರಸೂತಿ ವೈದ್ಯೆಯೊಬ್ಬರನ್ನು ಅಧ್ಯಕ್ಷರನ್ನಾಗಿ ಕರೆಸಲಾಗಿತ್ತು. ಬೆಳಿಗ್ಗೆ ೯ ಗಂಟೆಗೆ ಶುರುವಾದ ಕಾರ್ಯಕ್ರಮ ೧೧ ಆದರೂ ಮುಗಿಯಲಿಲ್ಲ. ವೇದಿಕೆಯ ಮೇಲೆ ಆಸನರಾದವರೆಲ್ಲಾ ಸರದಿ ಪ್ರಕಾರ ಎರಡು ಮಾತು ಎಂತ ಹೇಳಿ ಅರ್ಧ, ಮುಕ್ಕಾಲು ಗಂಟೆ ಕೊರೆಯುತ್ತಿದ್ದರು. ಕಡೆಗೂ ಅಧ್ಯಕ್ಷ ಭಾಷಣದ ಸರದಿ ಬಂತು. ಮೇಡಮ್ ಸಿಟ್ಟಿನಿಂದ ಕೆಂಪಾಗಿದ್ದರು. ಆದರೂ ಶುರು ಮಾಡಿದರು. ಅಧ್ಯಕ್ಷರಿಂದ ನಾಲ್ಕು ಹಿತವಚನ ಬಂತು.

“ಗಣ್ಯರೇ, ಮಹಿಳೆಯರೇ, ಮಹನೀಯರೇ, ನಿಮಗೆಲ್ಲಾ ಗೊತ್ತಿರುವಂತೆ ಮಾತು ಬೆಳ್ಳಿ, ಮೌನ ಬಂಗಾರ. ನಾನು ಹೆಂಗಸರ ಡಾಕ್ಟರ್. ನನಗೆ ಬಂಗಾರವೇ ಇಷ್ಟ.’ ಇಷ್ಟನ್ನು ಹೇಳಿ ಬುಸುಗುಡುತ್ತಾ ಹೊರಬಂದು ಕಾರು ಹತ್ತಿದರು.

-ಡಾ. ಎಂ.ಎಸ್.ಉರಾಳ, ಮಣಿಪಾಲ

***

ಯಾರೂ ಹೇಳಿಲ್ಲ

ಹಳ್ಳಿಯ ಹೋಟೇಲೊಂದರಲ್ಲಿ ತಿಂಡಿ ತಿನ್ನಲು ಹೋಗಿದ್ದೆವು. ಕೈತೊಳೆಯಲು ಹೊರಗೆ ಒಂದು ಸಣ್ಣ ಡ್ರಂನಲ್ಲಿ ನೀರು, ಚೊಂಬು ಇಟ್ಟು ಪಕ್ಕದಲ್ಲಿ ಕೈಒರೆಸಿಕೊಳ್ಳಲು ಒಂದು ಟವಲನ್ನು ಕಿಟಕಿಗೆ ಕಟ್ಟಿದ್ದರು.

ನಮ್ಮ ಡ್ರೈವರ್ ಕೈ ಒರೆಸಿಕೊಳ್ಳಲು ಹೋದವನು ಮುಖ ಹುಳ್ಳಗೆ ಮಾಡಿ ‘ ಏನ್ರೀ, ಸಾಕಾರೇ, ಆ ಟವಲ್ ಅಷ್ಟು ಗಲೀಜಾಗಿದೆ?' ಎಂದ. ಸಾಹುಕಾರ ಎಲೆ ಅಡಕೆ ಮೆಲ್ಲುತ್ತಾ ಸಾವಧಾನಚಿತ್ತವಾಗಿ ನುಡಿದ: ‘ಅಣ್ಣಾ, ಮೊನ್ನೆಯಿಂದ ನೂರಾರು ಜನ ಆ ಟವಲಿನಾಗೇ ಕೈ ಒರೆಸ್ಕೊಂಡಿದ್ದಾರೆ. ಯಾರೂ ಏನೂ ಹೇಳಿಲ್ಲ. ನೀನೊಬ್ನೇ ನೋಡು ಈಗ ಕಂಪ್ಲೇಂಟ್ ಹೇಳ್ತಾ ಇರೋದು!’

-ಕೆ.ಶ್ರೀನಿವಾಸ ರಾವ್, ಹರಪನಹಳ್ಳಿ

***

ದೂರು ಕೊಡಿ

ನಾನು ಅಂಚೆ ಕಚೇರಿಯಲ್ಲಿ ಅಂಚೆ ಪಾಲಕಿ. ಈ ಹಿಂದೆ ನಾನು ಸೇವೆ ಸಲ್ಲಿಸುತ್ತಿದ್ದ ಅಂಚೆ ಕಚೇರಿಯಲ್ಲಿ ನಡೆದ ಘಟನೆ. ಹಳ್ಳಿಯಿಂದ ಒಬ್ಬ ಬಂದು ‘ನಾನು ಕಳೆದ ತಿಂಗಳು ‘ಮಂದರ್ತಿ' ಗೆ ಕಳುಹಿಸಿದ್ದ ಮನಿಯಾರ್ಡರ್ ಎಂಡಾರ್ಸ್ ಮೆಂಟ್ (ಅಕ್ನಾಲೆಜ್ ಮೆಂಟ್) ಇನ್ನೂ ಬಂದಿಲ್ಲ' ಎಂದ. ಅದಕ್ಕೆ ಕೆಲ ದಿನ ಕಾಯುವಂತೆ ಹೇಳಿದೆ. ಸ್ವಲ್ಪ ದಿನದ ನಂತರ ಆತ ತಿರುಗಿ ಬಂದು ‘ಇನ್ನೂ ಸ್ವೀಕೃತಿ ಪತ್ರ ಬಂದಿಲ್ಲ' ಎಂದ. ಆಗ ನಾನು ‘ಸರಿ ಒಂದು ಕಂಪ್ಲೇಂಟ್ ಬರೆದುಕೊಡು' ಎಂದೆ. ಆತ ಹಾಗೆಯೇ ಹೊರಹೋದ. ಸ್ವಲ್ಪ ಹೊತ್ತಿನ ನಂತರ ಪೋಲೀಸ್ ಹೆಡ್ ಕಾನ್ಸ್ಟೇಬಲ್ ಒಬ್ಬರು ಬಂದು, ‘ಹಳ್ಳಿಯವನು ಏನು ಹೇಳಿದರೂ ಕೇಳುತ್ತಿಲ್ಲ. ಎಂ.ಒ. ತಲುಪದಿದ್ದ ಬಗ್ಗೆ ನಿಮ್ಮ ಮೇಲೆ ಕಂಪ್ಲೇಂಟ್ ಕೊಟ್ಟಿದ್ದಾನೆ'. ಎಂದು ನಗುತ್ತಾ ಹೇಳಿದರು. ನಾನು ಕಂಪ್ಲೆಂಟ್ ಕೊಡಲು ಹೇಳಿದ್ದು ಆ ಎಂ.ಒ. ಬಗ್ಗೆ ಅಂಚೆ ಇಲಾಖೆಗೆ. ಎಂದು ಹಳ್ಳಿಯವನಿಗೆ ತಿಳಿ ಹೇಳಿ ಸಾಗಹಾಕಬೇಕಾದರೆ ಸಾಕು ಸಾಕಾಗಿತ್ತು.

-ಹೇಮಲತ ಸುಬ್ರಹ್ಮಣ್ಯ, ಹಾಲ್ಮುತ್ತೂರು

***

(ಮಯೂರ ಜನವರಿ ೨೦೧೬ರ ಸಂಚಿಕೆಯಿಂದ ಸಂಗ್ರಹಿತ)