‘ಮಯೂರ’ ಹಾಸ್ಯ - ಭಾಗ ೯

‘ಮಯೂರ’ ಹಾಸ್ಯ - ಭಾಗ ೯

ವಾಪಾಸು ಕೊಡಲಿಲ್ಲ

ಪತ್ನಿ ಗಿರಿಜಳೊಂದಿಗೆ ಜಯನಗರ ಶಾಪಿಂಗ್ ಕಾಂಪ್ಲೆಕ್ಸ್ ನಲ್ಲಿ ಮಗಳು ಅಪೂರ್ವಳಿಗೆ ಉಲ್ಲನ್ ಟೋಪಿಯನ್ನು ಖರೀದಿಸುತ್ತಿದ್ದಾಗ ಆಂಟಿಯೊಬ್ಬರು ನಮ್ಮ ಎದುರು ಇದ್ದ ಅಂಗಡಿಯಲ್ಲಿ ತಮಗೆ ಬೇಕಾದ ವಸ್ತುವನ್ನು ಖರೀದಿಸಿ ಹೊರಗೆ ಬಂದರು. ಅವರನ್ನು ಕಂಡ ನನ್ನ ಪತ್ನಿ ‘ನಮಸ್ಕಾರ ಹೇಗಿದ್ದೀರಿ?’ ಎಂದು ಕೇಳಿದಾಗ ಆ ಆಂಟಿ ಏನೂ ಹೇಳದೆ ಹಾಗೇ ನಮ್ಮ ಮುಂದೆ ನಡೆದುಹೋದರು. ನನಗೆ ಆಶ್ಚರ್ಯವೆನಿಸಿ ‘ಯಾರು ಅವರು ನಿನ್ನ ನಮಸ್ಕಾರಕ್ಕೆ ಪ್ರತಿ ನಮಸ್ಕಾರ ಹೇಳದೆ ಹಾಗೇ ಹೋಗಿದ್ದಾರೆ' ಎಂದು ನನ್ನವಳನ್ನು ಕೇಳಿದೆ. ಅದಕ್ಕೆ ಉತ್ತರವಾಗಿ ‘ಹೋ ಅವರಾ, ನಾವು ಯಡಿಯೂರಿನಲ್ಲಿದ್ದಾಗ ನಮ್ಮ ಮನೆ ಪಕ್ಕದಲ್ಲಿದ್ದವರು. ನಮ್ಮಿಂದ ಪಡೆಯುತ್ತಿದ್ದ ಸಕ್ಕರೆ, ಕಾಫಿಪುಡಿಗಳನ್ನೇ ವಾಪಾಸ್ ಕೊಡುತ್ತಿರಲಿಲ್ಲ. ಇನ್ನು ನನ್ನ ನಮಸ್ಕಾರವನ್ನು ವಾಪಾಸ್ಸು ಕೊಡುತ್ತಾರಾ’ ಎಂದು ಹೇಳಿದಳು.

-ವಿ. ಹೇಮಂತಕುಮಾರ್, ಬೆಂಗಳೂರು

***

ಅತಿಥಿ ದೇವೋಭವ

ನಮ್ಮ ನಾದಿನಿಯ ಮಗ, ಏಳನೆಯ ತರಗತಿಯಲ್ಲಿ ಓದುತ್ತಿರುವ ಚಿನ್ಮಯ್ ಬಹಳ ಬುದ್ಧಿವಂತ. ಅವನ ಜಾಣ್ಮೆಯ ಮಾತಿಗೆ ಮರುಳಾಗದವರಿಲ್ಲ. ಕೆಲವು ದಿನಗಳ ಹಿಂದೆ ಮಂಗಳೂರಿಗೆ ನಾದಿನಿಯ ಮನೆಗೆ ಹೇಗಿದ್ದೆವು. ರಜಾದಿನವಾದ ಕಾರಣ ಚಿನ್ಮಯ್ ಟೀವಿ ನೋಡುತ್ತಾ ಕುಳಿತಿದ್ದ. ನಮ್ಮ ಮನೆಯವರು ‘ನ್ಯೂಸ್' ನೋಡೋಣ ಕಣೋ ಸ್ವಲ್ಪ ಹೊತ್ತು’ ಎಂದು ಅವನನ್ನು ಕೇಳಿದರು. ‘ಆಯ್ತು ಸತ್ಯಮಾಮ, ಅತಿಥಿ ದೇವೋಭವ, ನಿಮಗೆ ಯಾವ್ದು ಬೇಕೋ ನೋಡ್ಕೊಳ್ಳಿ’ ಎಂದು ಆಡಲು ಹೊರಗೆ ಹೋದ.

ಮರುದಿನ ಮತ್ತೆ ಅದೇ ರೀತಿ ನಮ್ಮ ಮನೆಯವರು ಕೇಳಿದರು. ಅದಕ್ಕೆ ಚಿನ್ಮಯ್ ‘ಮೊದಲ್ನೇ ದಿನ ನೀವು ಅತಿಥಿ, ಅದಕ್ಕೆ ಬಿಟ್ಟು ಕೊಟ್ಟೆ. ಇವತ್ತು ನೀವು ಅತಿಥಿ ಅಲ್ಲ, ಮನೆಯವರು. ಹಾಗಾಗಿ ನನಗೆ ಬೇಕಾದ ಚಾನಲ್ ನೋಡೋಕೆ ಬಿಟ್ಟುಕೊಟ್ಟು ನೀವು ಸುಮ್ಮನಿರಬೇಕು' ಎನ್ನುವುದೇ?!

-ಬಿ.ಎಸ್. ರಾಜಲಕ್ಷ್ಮಿ, ಹಾಸನ

***

ಸ್ವಾತಂತ್ರ್ಯ ದಿನಾಚರಣೆ

ನಾನು ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭಕ್ಕೆ ಕಾಲೇಜಿಗೆ ಹೊರಟಿದ್ದೆ. ಐದನೇ ಕ್ಲಾಸಿನ ನನ್ನ ಮೊಮ್ಮಗ ಚಿನ್ಮಯ ತಾನೂ ಬರುತ್ತೇನೆಂದು ರಚ್ಚೆ ಹಿಡಿದ. ನಾನೂ ಅವನನ್ನು ಕರೆದುಕೊಂಡು ಕಾಲೇಜಿಗೆ ಹೋದೆ. ಪ್ರಿನ್ಸಿಪಾಲರು ಧ್ವಜಾರೋಹಣ ಮಾಡಿ, ಭಾಷಣ ಪ್ರಾರಂಭಿಸಿದರು. ಹಿಂದಿನ ವರ್ಷದ ಭಾಷಣದ ಸುರುಳಿ ಬಿಚ್ಚಿ, ಅರ್ಧ ತಾಸು ಸಭಿಕರ ಕಿವಿ ಕೊರೆದರು. ಬಳಿಕ ನೆರೆದ ಸಭಿಕರಿಗೆ ಚಾಕಲೇಟು ವಿತರಣೆ ಮಾಡಿದರು.

‘ತಾತಾ ಬಂದೋರಿಗೆಲ್ಲಾ ಯಾಕೆ ಚಾಕಲೇಟ್ ಹಂಚಿದ್ರು ಗೊತ್ತಾ?’ ಆಹ್ವಾನಿಸದ ಅತಿಥಿಯಂತೆ ಬಂತು ನನ್ನ ಪಾಲಿಗೆ ಚಿನ್ಮಯನ ಪ್ರಶ್ನೆ.

‘ನಂಗೆ ಗೊತ್ತಿಲ್ಲಪ್ಪ' ನುಣುಚಿಕೊಳ್ಳುವ ಹೇಳಿಕೆ ನೀಡಿದೆ.

‘ಹಾಗಾದ್ರೆ ನಾನೇ ಹೇಳ್ತೀನಿ ಬಿಡು. ಯಾಕಪ್ಪಾ ಅಂದ ಸಿಹಿ ಹಂಚದಿದ್ರ ಜನ ಬರಾಕಿಲ್ಲ ಅನ್ನೋ ಭಯ’ ಎಂದ.

-ಡಾ. ರುದ್ರಯ್ಯ ವಿ., ಗದಗ

***

ಚಾನಲ್ ನಲ್ಲಿ ಕೆಲಸ

ನನ್ನ ಮಗಳ ಪದವಿ ಮುಗಿಯುತ್ತಿದ್ದಂತೆಯೇ ಟೀವಿ ಚಾನಲ್ ಒಂದರಲ್ಲಿ ಕೆಲಸ ಸಿಕ್ಕಿತ್ತು. ಸ್ವಲ್ಪ ಸಮಯದ ನಂತರ ನಾನು ನಮ್ಮೂರಿನ ಹಳ್ಳಿಗೆ ಹೋದಾಗ, ಮನೆ ಕೆಲಸದ ತಿಮ್ಮ ನಮ್ಮ ಕುಟುಂಬದ ಎಲ್ಲರನ್ನೂ ವಿಚಾರಿಸಿಕೊಂಡ. ಹಾಗೆಯೇ ಮಗಳೇನು ಮಾಡ್ತಾ ಇದ್ದಾಳೆ? ಎಂದು ಕೇಳಿದಾಗ ನಾನು ಚಾನೆಲ್ ನಲ್ಲಿ ಕೆಲಸ ಮಾಡ್ತಾ ಇದ್ದಾಳೆ ಎಂದಿದ್ದೆ. ಕೂಡಲೇ ಅವನು ಅಷ್ಟೆಲ್ಲಾ ಓದಿಕೊಂಡು ಚಾನಲ್ ನಲ್ಲಿ ಕೆಲಸಾನಾ? ಅದೂ ಅಲ್ಲದೆ ಹೆಂಗಸರಿಗೆ ಅಲ್ಲೇನು ಕೆಲಸ. ನಿಮ್ಮಂತೋರಿಗೆ ಅದು ಹೇಗೆ ಸರಿ ಬರುತ್ತೆ? ಎಂದೆಲ್ಲಾ ಕೇಳಿದಾಗ ನನಗೆ ಏನು ಹೇಳಬೇಕೋ ಗೊತ್ತಾಗಲಿಲ್ಲ.

ನಂತರ ನನಗೆ ತಿಳಿದದ್ದು ಅವನೊಮ್ಮೆ ನಮ್ಮೂರ ಪೇಟೆಗೆ ಬಂದಿದ್ದಾಗ ಅಲ್ಲಿನ ಕೊಳಕು ನೀರು ಹೋಗುವ ಗಟಾರ (ಚಾನಲ್) ನೋಡಿದ್ದನಂತೆ. ಅದಕ್ಕೆ ಅವನು ಹಾಗೆ ಮುಖ ಸಿಂಡರಿಸಿಕೊಂಡದ್ದು ಎಂದು ತಿಳಿದಾಗ ನಾನು ಟೀವಿ ಚಾನಲ್ ಅನ್ನೋ ಬದಲು ಬರೀ ಚಾನಲ್ ಅಂದಿದ್ದಕ್ಕೆ ನನಗೆ ನಗು ಬಂತು.

-ಜಲಜಾ ಬಿ.ಜಿ., ಶಿವಮೊಗ್ಗ

***

(ಮಾರ್ಚ್ ೨೦೧೬ರ ಮಯೂರ ಪತ್ರಿಕೆಯಿಂದ ಸಂಗ್ರಹಿತ)