‘ಮಯೂರ' ಹಾಸ್ಯ (ಭಾಗ ೧)

‘ಮಯೂರ' ಹಾಸ್ಯ (ಭಾಗ ೧)

ಕನ್ನಡದ ಹಳೆಯ ಪತ್ರಿಕೆಗಳಲ್ಲಿ ಒಂದಾದ ‘ಮಯೂರ’ ಪ್ರಾರಂಭವಾಗಿ ಐದು ದಶಕಗಳೇ ಸಂದಿವೆ. ಈ ದೂರದರ್ಶನ, ಕಂಪ್ಯೂಟರ್, ಮೊಬೈಲ್, ಇಂಟರ್ ನೆಟ್ ಗಳ ಹಾವಳಿ ಇಲ್ಲದಿರುವ ಸಮಯದಲ್ಲಿ ಜನರಿಗೆ ಪುಸ್ತಕಗಳನ್ನು ಓದುವುದೇ ನೆಚ್ಚಿನ ಹವ್ಯಾಸವಾಗಿತ್ತು. ಹಲವಾರು ಮಂದಿ ಓದುತ್ತಾ ಓದುತ್ತಾ ಲೇಖಕರಾದರು. ಹಲವಾರು ಮಂದಿಗೆ ಈ ಪುಸ್ತಕಗಳಲ್ಲಿ ಬರುತ್ತಿದ್ದ ಲೇಖನಗಳು ಏನಾದರೂ ಬರೆಯುವ ಎಂದು ಪ್ರೇರೇಪಿಸಿತು. ಕಸ್ತೂರಿ, ಉತ್ಥಾನ, ಮಯೂರ, ತುಷಾರ, ಸುಧಾ, ತರಂಗ ಮೊದಲಾದ ಪತ್ರಿಕೆಗಳನ್ನು ಓದಿಯೇ ಹಲವರು ದೊಡ್ಡವರಾಗಿದ್ದಾರೆ.

ಮಯೂರದಲ್ಲಿ ಬರುತ್ತಿದ್ದ ನಿಜ ಜೀವನದಲ್ಲಿ ಹಾಸ್ಯ ಪ್ರಸಂಗ ‘ಅಂಗೈಯಲ್ಲಿ ಅರಮನೆ' ಹಾಗೂ ಹಾಸ್ಯ ಚುಟುಕುಗಳ ಸಂಗ್ರಹ ‘ಬುತ್ತಿ ಚಿಗುರು' ಯಾವಾಗಲೂ ಓದುವ ಸರಕು. ಮೊದಲೆಲ್ಲಾ ಮಯೂರ ಬರುತ್ತಿದ್ದಂತೆಯೇ ನಾವು ಈ ಎರಡು ಅಂಕಣಗಳನ್ನು ಓದಲು ಹಾತೊರೆಯುತ್ತಿದ್ದೆವು. ಈಗಲೂ ಈ ಅಂಕಣಗಳು ಮಯೂರ ಮಾಸಿಕದಲ್ಲಿ ಪ್ರಕಟವಾಗುತ್ತಿವೆ. ನಾವು ಇಲ್ಲಿ ಹಳೆಯ ಮಯೂರ ಪತ್ರಿಕೆಯಲ್ಲಿ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗವಾದ ‘ಅಂಗೈಯಲ್ಲಿ ಅರಮನೆ'ಯ ಪ್ರಸಂಗಗಳನ್ನು ಆಯ್ದು 'ಸಂಪದ'ದಲ್ಲಿ ಪ್ರಕಟಿಸುತ್ತಿದ್ದೇವೆ. ಈ ಪ್ರಸಂಗಗಳು ನಿಮ್ಮ ಮುಖದಲ್ಲೂ ನಗೆಯುಕ್ಕಿಸಿದರೆ ನಮ್ಮ ಪ್ರಯತ್ನವೂ ಸಾರ್ಥಕ.

ಈ ಆಯ್ದ ಪ್ರಸಂಗಗಳ ಸಂಗ್ರಹವು ಪ್ರತೀ ಶನಿವಾರದಂದು ‘ಸಂಪದ'ದಲ್ಲಿ ಪ್ರಕಟವಾಗಲಿದೆ. ಆಯಾ ಬರಹದ ನೈಜ ಲೇಖಕರ ಹೆಸರಿನಲ್ಲೇ ಬರಹ ಮೂಡಿ ಬರಲಿದೆ. ಆ ಬರಹಗಾರರಿಗೆ ಹಾಗೂ ಮಯೂರ ಪತ್ರಿಕೆಗೆ ನಮ್ಮ ಧನ್ಯವಾದಗಳು ಸಲ್ಲುತ್ತವೆ. 

***

‘ಶೂ’ ಪ್ರಸಂಗ

ನಮ್ಮಣ್ಣನ ಮಗ ಮೂರುವರೆ ವರ್ಷದ ಹರ್ಷ ಆಗ ತಾನೇ ಎಲ್.ಕೆ.ಜಿ.ಸೇರಿದ್ದ. ಕೆಲ ವಾರ ತಂಟೆ-ತಕರಾರಿಲ್ಲದೇ ಶಾಲೆಗೆ ಹೋಗಿ ಬಂದವ, ಅದೊಂದು ದಿನ ಮುಂಜಾನೆ ಶಾಲೆಗೆ ಹೋಗಲು ನಿರಾಕರಿಸಿದ. ವಿಚಾರಿಸಿದರೆ ತಾನು ಶೂ ಹಾಕಿಕೊಂಡು ಹೋಗುತ್ತಿಲ್ಲವಾದುದರಿಂದ ಟೀಚರ್ ಪ್ರಾರ್ಥನೆಯ ಸಾಲಿಗೆ ಸೇರಿಸುತ್ತಿಲ್ಲವೆಂತಲೂ, ತರಗತಿಯಲ್ಲಿ ಜೋರು ಮಾಡುತ್ತಾರೆಂತಲೂ ತಿಳಿಸಿದ. ಸರಿ ಮಗುವಿಗೆ ಆ ಕೂಡಲೇ ಶೂ ತೆಗೆಸಿಕೊಟ್ಟೂ ಆಯಿತು. ಆ ನಂತರ ಕೆಲವೊಂದು ದಿನ ಆತ ‘ಶೂ’ ಹಾಕಿಕೊಳ್ಳದೇ ಶಾಲೆಗೆ ಹೋಗಿ ಬಂದಿದ್ದು ನಮ್ಮ ಗಮನಕ್ಕೆ ಬಂತು. ಈಗ ‘ಶೂ’ ಇಲ್ಲದೇ ಶಾಲೆಗೆ ಹೋದರೆ ಟೀಚರ್ ಬೈಯುವುದಿಲ್ಲವೇ ಎಂಬ ನನ್ನ ಅತ್ತಿಗೆಯ ಪ್ರಶ್ನೆಗೆ ಆ ಪೋರ ಏನಂದ ಗೊತ್ತಾ...! 'ಅಮ್ಮಾ.. ನನ್ನ ಹತ್ತಿರ ಈಗ ಶೂ ಇರೋದು ಟೀಚರ್ ಗೆ ಗೊತ್ತಮ್ಮ... ಶೂ ಹಾಕಿಕೊಳ್ಳದೇ ಹೋದ್ರೆ ಟೀಚರ್ ಈಗ ಏನೂ ಅನ್ನೋದಿಲ್ಲ' ಅಂತ ತನ್ನ ಪುಟ್ಟ ಕೈ ತಿರುಗಿಸುತ್ತಾ, ಮೈ ಬಳಕಿಸುತ್ತಾ ವರದಿ ಒಪ್ಪಿಸಿದ. ಆಗ ಮಾತು ಮರೆತ ಸ್ಥಿತಿ ನಮ್ಮದಾಯ್ತು.

-ಹೊಸ್ಮನೆ ಮುತ್ತು

***

ಸಾಮಯಿಕ ಸಮಜಾಯಿಷಿ

ನನ್ನ ಸ್ನೇಹಿತ ರಾಘವರ ಕೌಟುಂಬಿಕ ಸಮಾರಂಭಕ್ಕೆ ಕೆಲ ದಿನಗಳ ಹಿಂದೆ ಹಾಜರಾಗಿದ್ದೆ. ಆಗ ಹಲವು ಬಾರಿ ಸಲಹೆ ಸೂಚನೆ ನೀಡಲು ಮಡದಿ ಆಶಾಳನ್ನು ರಾಘವ ಕರೆಯಬೇಕಾಯಿತು. ಕೆಲವು ಬಾರಿ ಹೇಳಿ ಕಳುಹಿಸಿ ಮಡದಿಯನ್ನು ಕರೆಸಿಕೊಳ್ಳುತ್ತಿದ್ದರು. ಒಮ್ಮೆ ಅವರೇ ನೇರವಾಗಿ ಕರೆಯಬೇಕಾದಾಗ ‘ಏ ಆಶಾ’ ‘ಏ ಏ’ ಅಂತ ಕೆಲಸದ ಭರಾಟೆಯಿಂದಲೂ, ರೂಢಿಗತ ಅಭ್ಯಾಸದಿಂದಲೂ ಕರೆದರು. ಆಗ ತಕ್ಷಣ ಅಲ್ಲಿದ್ದ ಮಹಿಳೆಯೊಬ್ಬರು “ಏನ್ರೀ, ಅವರೇನು ದನಾನಾ ಇಲ್ಲಾ ಎಮ್ಮೇನಾ, ಹಾಗೆ ಕರೆಯೋಕೆ?” ಅಂತ ಖಾರವಾಗಿ ಪ್ರಶ್ನಿಸಿದರು.

ಅದಕ್ಕೆ ರಾಘವ “ಮೇಡಂ, ನಾನು ಕರೆದದ್ದು ಅವಳ ಇನಿಷಿಯಲ್ಸ್ ಅಕ್ಷರಗಳನ್ನು. ಅವಳ ಹೆಸರು ಆಶಾ. ಅದಕ್ಕೆ ‘ಏ’. ಅವಳ ತಂದೆಯ ಹೆಸರು ಅನಂತರಾಮ್. ಅದಕ್ಕೆ ‘ಏ ಏ’. ಅಂದರು. ಅಲ್ಲಿದ್ದವರಿಗೆಲ್ಲಾ ಅವರ ಅರ್ಥ ತಿರುಚುವಿಕೆ, ಸಮಯಸ್ಪೂರ್ತಿಗೆ, ಸಮಜಾಯಿಷಿಗೆ ಬೆರಗಾಗಿ ನಕ್ಕರು.

-ವಿ.ಮಲ್ಲಿಕಾರ್ಜುನಯ್ಯ

***

(ಮಾರ್ಚ್ ೨೦೧೪ರ ಮಯೂರ ಸಂಗ್ರಹ)