‘ಮಯೂರ' ಹಾಸ್ಯ - ಭಾಗ ೨೧

‘ಮಯೂರ' ಹಾಸ್ಯ - ಭಾಗ ೨೧

ಕೂಗುತ್ತಿದ್ದಾರೆ!

ಮಂಗಳೂರಿನಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದ ಸ್ನೇಹಿತರೊಬ್ಬರು ಬೆಂಗಳೂರಿಗೆ ವರ್ಗವಾಗಿ ಹೋದರು. ಕಚೇರಿಗೆ ಹಾಜರಾದ ಮೊದಲ ದಿನ ಪೇದೆ ಬಂದು ಅವರ ಬಳಿ ‘ಮ್ಯಾನೇಜರ್ ಸಾಹೇಬರು ಕೂಗುತ್ತಿದ್ದಾರೆ' ಎಂದ. 

ಗಾಬರಿಗೊಂಡ ಇವರು'ಅಯ್ಯೋ, ದೇವರೇ, ಅಂಥದ್ದೇನಾಯಿತು ಅವರಿಗೆ... ಬೆಳಿಗ್ಗೆ ಸರಿಯಾಗೇ ಇದ್ದರಲ್ಲ... ಮನೆಯಿಂದ ಕೆಟ್ಟ ಸುದ್ದಿಯೇನಾದರೂ ಬಂತೇ?” ಅನ್ನುತ್ತಾ ಪ್ರಶ್ನೆಗಳ ಸುರಿಮಳೆಗರೆದರು.

ಆಗ ಪೇದೆ ಸಾವಕಾಶವಾಗಿ, ‘ಅಂಥಾದ್ದೇನೂ ಆಗಿಲ್ಲ ಸರ್, ಅವರು ನಿಮ್ಮನ್ನು ಕೂಗುತ್ತಿದ್ದಾರೆ ಅಂದರೆ ಕರೆಯುತ್ತಿದ್ದಾರೆ..." ಎಂದಾಗ ಮಂಗಳೂರು ಭಾಷೆಯ ಪ್ರಕಾರ ಕೂಗುತ್ತಿದ್ದಾರೆ ಅಂದರೆ ಅಳುತ್ತಿದ್ದಾರೆ ಎಂದು ಭಾವಿಸಿದ್ದ ನನ್ನ ಸ್ನೇಹಿತರಿಗೆ ತಮ್ಮ ತಪ್ಪಿನ ಅರಿವಾಯಿತು. ಕ್ರಮೇಣ ಬೆಂಗಳೂರು ಕನ್ನಡದ ಪರಿಚಯವೂ ಆಯಿತು.

-ರಮಣ್ ಶೆಟ್ಟಿ ರೆಂಜಾಳ್

***

‘ವೆಡ್ಡಿಂಗ್ ಕಾರ್ಡ್'

ಮನೆಯಲ್ಲಿ ನಡೆದ ಸಮಾರಂಭವೊಂದಕ್ಕೆ ಮಿತ್ರರೆಲ್ಲ ಸೇರಿದ್ದರು. ಎಲ್ಲರೂ ಸೇರಿ ಲೋಕಾಭಿರಾಮವಾಗಿ ಮಾತನಾಡುತ್ತಿರುವಾಗ ‘ನೋಟ್ ಬ್ಯಾನ್' ವಿಷಯ ಬಂತು. ಹಣ ಪಡೆಯುವ ಬಗ್ಗೆ ಚರ್ಚೆಯಾಯಿತು. ಹಿರಿಯರೊಬ್ಬರು ನಗದು ಡ್ರಾ ಮಾಡುವ ಸಾಧನಗಳು ಯಾವುವು? ಎಂದು ಕೇಳಿದರು. ಆಗ ಮತ್ತೊಬ್ಬರು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಎಂದರು. ಸುಮ್ಮನಿರದ ಇನ್ನೊಬ್ಬ ಸ್ನೇಹಿತ ‘ಇವು ಎರಡೂ ಮಾತ್ರವಲ್ಲ. ವೆಡ್ಡಿಂಗ್ ಕಾರ್ಡ್ ನಿಂದಲೂ ಹಣ ಡ್ರಾ ಮಾಡಬಹುದು' ಎಂದಾಗ ನೆರೆದಿದ್ದವರೆಲ್ಲಾ ಜೋರಾಗಿ ನಕ್ಕರು. 

-ನರಸಿಂಹ ಪೈ

***

ದಾಲ್ ಹೊಂದಿಸುವುದೇ ಕಷ್ಟ!

ಕಳೆದ ಮೇ ತಿಂಗಳಲ್ಲಿ ನಮ್ಮ ಕುಟುಂಬ ಹಾಗೂ ಬಂಧು ಮಿತ್ರದೊಂದಿಗೆ ಉತ್ತರ ಭಾರತ ಪ್ರವಾಸ ಕೈಗೊಂಡಿದ್ದೆವು. ದೆಹಲಿ, ಕುರುಕ್ಷೇತ್ರ, ಚಂಡೀಘರ್, ವಾಘಾ ಬಾರ್ಡರ್, ಅಮೃತಸರ ಎಲ್ಲ ಸ್ಥಳಗಳನ್ನು ನೋಡಿಕೊಂಡು ಪ್ರವಾಸದ ಕೊನೆಯ ಸ್ಥಳವಾದ ಶ್ರೀನಗರಕ್ಕೆ ಬಂದಿದ್ದೆವು. ಅಲ್ಲಿನ ‘ದಾಲ್ ಲೇಕ್' ಅತ್ಯಂತ ಆಕರ್ಷಣೀಯ ಪ್ರವಾಸೀ ತಾಣ. ನಾವೆಲ್ಲರೂ ಮುಂಜಾನೆ ದಾಲ್ ಲೇಕ್ ಗೆ ಭೇಟಿ ನೀಡಿದಾಗ ಅಲ್ಲಿ ತಮ್ಮ ಬೋಟ್ ಗಳನ್ನು ಸಿದ್ಧ ಪಡಿಸಿಕೊಂಡ ನಾವಿಕರು ಪ್ರವಾಸಿಗರಿಗಾಗಿ ಕಾಯುತ್ತಿದ್ದರು. ಅವರು ನಮ್ಮನ್ನು ಬೋಟುಗಳಲ್ಲಿ ಕುಳ್ಳಿರಿಸಿ, ಕೆಲವೊಂದು ಫೋಟೋ ಶೂಟ್ ತಾಣಗಳಿಗೆ ಕರೆದುಕೊಂಡು ಹೋಗಿ, ಅಲ್ಲಿ ಕಾಶ್ಮೀರಿ ಡ್ರೆಸ್ ಹಾಕಿಸಿ ಫೋಟೋಗಳನ್ನು ವಿವಿಧ ಭಂಗಿಗಳಲ್ಲಿ ಕ್ಲಿಕ್ಕಿಸಿ ನಮಗೆ ನೀಡಿದರು. ನಂತರ ಆ ಫೋಟೋ ನೋಡುತ್ತಾ ವಿನೋದಪ್ರಿಯರಾದ ನಮ್ಮ ಸ್ನೇಹಿತರೊಬ್ಬರು ಎಲ್ಲರ ಛಾಯಾ ಚಿತ್ರಗಳ ಬಗ್ಗೆ ಕಮೆಂಟ್ ಮಾಡುತ್ತಾ, ‘ಇನ್ನೂ ಇಪ್ಪತ್ತು ವರ್ಷಗಳ ಹಿಂದೆಯೇ ನಾವಿಲ್ಲಿಗೆ ಬಂದಿದ್ರೆ ಎಲ್ಲರ ಜೋಡಿ ಇನ್ನೂ ಚೆನ್ನಾಗಿ ಬರ್ತಿತ್ತು.’ ಎಂದರು. ಆಗ ನಮ್ಮ ಅಣ್ಣ ಸತ್ಯನಾರಾಯಣ ‘ಅಯ್ಯೋ ಇಪ್ಪತ್ತು ವರ್ಷಗಳ ಹಿಂದೆ ದಾಲ್ (ಬೇಳೆ) ಹೊಂದಿಸೋಕೇ ಹೆಣಗಾಡಬೇಕಿತ್ತು. ಇನ್ನು ‘ಲೇಕ್' ಎಲ್ಲಿ ನೋಡೋದು?’ ಎಂದಾಗ ಅವರ ಮಾತಿಗೆ ಎಲ್ಲರೂ ಜೋರಾಗಿ ನಗಲಾರಂಭಿಸಿದರು !

-ಶಾಂತಾ ಕೆ.ಪಿ.

***

ಮತ್ತೆ ಹಾರಿರಬಹುದಲ್ವಾ?

ನಮ್ಮ ಹತ್ತಿರದ ಬಂಧುಗಳಿಗೊಬ್ಬರಿಗೆ ಹುಷಾರಿಲ್ಲದ ಕಾರಣ ಅವರನ್ನು ನೋಡಿಕೊಂಡು ಬರಲು ನಮ್ಮ ಸತ್ಯಮಾವನ ಜೊತೆಗೆ ಅವರ ಮನೆಗೆ ಹೋಗಿದ್ದೆ. ಆಗ ಅವರು ‘ಈಗ ಎಲ್ಲ ಕಡೆ ‘ಚಿಕನ್ ಗುನ್ಯಾ’, ವೈರಲ್ ಜ್ವರ' ಇರುವುದರಿಂದ ವೈದ್ಯರು ರಕ್ತಪರೀಕ್ಷೆ ಮಾಡಿಸಿ ನಂತರ ಚಿಕಿತ್ಸೆ ನೀಡುತ್ತೇವೆಂದು ಹೇಳಿದ್ದಾರೆ ಎಂದರು. ಅವರ ಮನೆ ಆಸ್ಪತ್ರೆಯ ಹಿಂಭಾಗವೇ ಇರುವುದರಿಂದ ‘ಅಲ್ಲಿಯ ಸೊಳ್ಳೆಗಳು ರೋಗಿಗಳಿಗೆ ಕಚ್ಚಿ ಇಲ್ಲಿಗೆ ಬಂದಿರಬಹುದೇನೋ’ ಎಂದು ಅವರ ಮಗ ಹೇಳುತ್ತಿದ್ದ. ಆಗ ನಮ್ಮ ದೊಡ್ಡಮ್ಮ ‘ಸೊಳ್ಳೆಗಳಿಗೆ ಹತ್ತು ಅಡಿಗಿಂತ ಮೇಲೆ ಹಾರಲು ಆಗುವುದಿಲ್ಲ. ಇಲ್ಲಿಗೆ ಹೇಗೆ ಬರುತ್ತದೆ?’ ಎಂದರು. ಆಗ ನಮ್ಮ ಮಾವ ‘ಈಗಿನ ಸೊಳ್ಳೆಗಳು ಮೊದಲು ಹತ್ತು ಅಡಿ ಹಾರಿ ಸ್ವಲ್ಪ ರೆಸ್ಟ್ ತಕೊಂಡು ಮತ್ತೆ ಹತ್ತು ಅಡಿ ಹಾರಿ ನಿಮ್ಮ ಮನೆಗೆ ಬಂದಿರಬಹುದಲ್ವಾ?’ ಎಂದಾಗ ಅವರ ಮಾತಿಗೆ ಜ್ವರದಿಂದ ನರಳುತ್ತಿದ್ದವರ ಮುಖದಲ್ಲೂ ಮಂದಾಹಾಸ ಮೂಡಿತು !

-ಬಿ.ಎನ್.ಸಿಂಧು

***

(ಮಯೂರ ಫೆಬ್ರವರಿ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)