‘ಮಯೂರ' ಹಾಸ್ಯ - ಭಾಗ ೨೨

‘ಮಯೂರ' ಹಾಸ್ಯ - ಭಾಗ ೨೨

ಯಾವ ಬುದ್ಧಿ?

ನನ್ನ ನಾದಿನಿ ಮಗ ಚಿನ್ಮಯ್ ದಸರಾ ರಜೆಯಲ್ಲಿ ನಮ್ಮ ಮನೆಗೆ ಬಂದಿದ್ದ. ತಿಂಡಿಯೇ ಆಗಲಿ, ಊಟವೇ ಆಗಲಿ ಅವನಿಗೆ ಇಷ್ಟವಾದುದನ್ನೇ ಮಾಡಿಕೊಡಬೇಕಿತ್ತು. ಅವನಿಗಿಷ್ಟವಾದ ದೋಸೆಗೆ ಒಂದೆಲಗದ ಚಟ್ನಿ ಮಾಡಿಕೊಟ್ಟೆ. ಅವನಿಗೆ ಏನನ್ನಾದರೂ ತಿನ್ನಲು ಕೊಟ್ಟರೆ, ಅದರಲ್ಲಿ ಇರುವ ವಿಟಮಿನ್, ಅದನ್ನು ತಿನ್ನುವುದರಿಂದ ಕೂದಲಿಗೆ, ಚರ್ಮಕ್ಕೆ, ಕಣ್ಣಿಗೆ ಆಗುವ ಪ್ರಯೋಜನದ ಬಗ್ಗೆ ವಿವರಣೆ ಕೊಡುತ್ತಿದ್ದೆವು.

‘ಒಂದೆಲಗ ತಿನ್ನುವುದು ಬುದ್ಧಿ ಬೆಳವಣಿಗೆಗೆ ಬಹಳ ಒಳ್ಳೆಯದು. ಪ್ರತಿನಿತ್ಯ ಒಂದೆಲಗ ತಿನ್ನಬೇಕು' ಅಂದೆ. ತಕ್ಷಣ ಅವನು ‘ಎಂಥಾ ಬುದ್ಧಿ ಬೆಳೆಯುತ್ತೆ. ಒಳ್ಳೆಯ ಬುದ್ಧಿಯೋ? ಕೆಟ್ಟ ಬುದ್ಧಿಯೋ? ಎಂದು ನನ್ನನ್ನೇ ಪ್ರಶ್ನೆ ಮಾಡಿದ! ಅದಕ್ಕೆ ನಗುವೇ ನನ್ನ ಉತ್ತರವಾಯಿತು.

-ಬಿ.ಎಸ್. ರಾಜಲಕ್ಷ್ಮಿ

***

ಎಬ್ಬಿಸಿ ಹೊಡೀತಾರೆ!

ಮೂರನೆಯ ತರಗತಿಯಲ್ಲಿ ಓದುತ್ತಿದ್ದ ನನ್ನ ಮೊಮ್ಮಗ ಧೀರಜ್ ಇದ್ದಕ್ಕಿದ್ದಂತೆ ಒಂದು ದಿನ ‘ನಾನು ಶಾಲೆಗೆ ಹೋಗೋಲ್ಲ!’ ಎಂದು ಅಳುತ್ತಾ ನಿಂತ. 'ಯಾಕೆ ? ಪುಟ್ಟಾ ಏನಾಯ್ತು? ‘ ಎಂದು ತಲೆ ನೇವರಿಸುತ್ತಾ ಕೇಳಿದೆ. ಅವನು ‘ಸ್ಕೂಲಿನಲ್ಲಿ ನನಗೆ ತುಂಬಾ ಹೊಡೀತಾರೆ!’ ಅಂದ. ‘ಯಾಕೆ ಹೋಡೀತಾರೆ? ನೀನೇನಾದ್ರೂ ಗಲಾಟೆ ಮಾಡಿದೆಯಾ?’ ‘ಇಲ್ಲಾ ಅಜ್ಜ, ನಾನು ಸುಮ್ಮನೇ ಮಲಗಿದ್ರೂ, ಎಬ್ಬಿಸಿ, ಎಬ್ಬಿಸಿ ಹೊಡೀತಾರೆ ! ಅಂದ.

-ಕೆ.ಜಿ.ಭದ್ರಣ್ಣವರ

***

ಕತ್ತೆ ಪ್ರಸಂಗ

ಸಾಮಾನ್ಯವಾಗಿ ತಿಪಟೂರು, ತುಮಕೂರು, ಚನ್ನರಾಯಪಟ್ಟಣ ತಾಲ್ಲೂಕುಗಳಲ್ಲಿ ತೆಂಗಿನ ತೋಟಕ್ಕೆ ಗೊಬ್ಬರಕ್ಕಾಗಿ ಕುರಿ ಮಂದೆ, ಕತ್ತೆ ಮಂದೆಯನ್ನ ಕಟ್ಟಿಸುತ್ತಾರೆ. ಹಾಗೆ ತಿಪಟೂರಿನ ನನ್ನ ತಂಗಿಯ ಮನೆಯಲ್ಲಿ ಅವರ ತೋಟಕ್ಕೆ ಕತ್ತೆ ಮಂದೆಯನ್ನು ಕಟ್ಟಿಸಲಾಗಿತ್ತು. ನೂರಾರು ಕತ್ತೆಗಳೊಂದಿಗೆ ಕತ್ತೆ ಮೇಯಿಸುವವರು ಕೂಡ ಬಂದಿದ್ದರು. ಹಾಗೆ ನನ್ನ ತಂಗಿಯ ಐದು ವರ್ಷದ ಮಗನಿಗೆ ಅವರನ್ನು ಊಟಕ್ಕೆ ಕರೆಯಲು ಹೇಳಿದೆವು. ಅವನು ಮನೆಯ ಬಾಗಿಲಲ್ಲೇ ನಿಂತುಕೊಂಡು ‘ರೀ ಮಾಮ ಊಟಕ್ಕೆ ಬನ್ನಿ, ರೀ ಮಾಮ ಊಟಕ್ಕೆ ಬನ್ನಿ' ಅಂತ ಎರಡು ಮೂರು ಸಾರಿ ಕೂಗಿದ. ಅವರು ತಿರುಗಿ ನೋಡದ ಕಾರಣ ಮತ್ತೆ ‘ರೀ ಮಾಮಾ, ಊಟಕ್ಕೆ ಬರಬೇಕಂತೆ' ಅಂತ ಹಲವಾರು ಬಾರಿ ಕೂಗಿ ಕೊನೆಗೆ ಅವನಿಗೇನನ್ನಿಸಿತೋ ಏನೋ. ರೀ..ಕತ್ತೆ ಮಾಮಾ, ರೀ ... ಕತ್ತೆ ಮಾಮಾ... ಊಟಕ್ಕೆ ಬರಬೇಕಂತೆ !. ಅನ್ನೋದೆ! ಪಾಪ ಅವನದೇನು ತಪ್ಪು. ತಾಯಂದಿರು ನಾವು, ಹಾಲು ತರುವವರು ‘ಹಾಲು ಮಾಮ’ ವ್ಯಾನಿನಲ್ಲಿ ಸ್ಕೂಲಿಗೆ ಕರೆದುಕೊಂಡು ಹೋಗುವವರು ‘ವ್ಯಾನ್ ಮಾಮಾ’ ಎಂದು ಹೇಳಿಕೊಟ್ಟದ್ದೇ ತಪ್ಪಾ ಅಂತ!...

-ರಾಜೇಶ್ವರಿ ಎಚ್.ಎಲ್. 

***

ಆಚೆ ಹೋಗಿ ಈಚೆ ಬಂದ್ರು

ಐದರ ನಮ್ಮ ಪುಟ್ಟಿ ಬಲು ಚೂಟಿ. ತನಗೆ ತೋಚಿದ್ದನ್ನು ಥಟ್ಟನೆ ಹಾಗೇ ಹೇಳಿಬಿಡುವಾಕೆ. ಅಪ್ಪ ಅವಳನ್ನು ಆಗಾಗ ತಿದ್ದುತ್ತ, ‘ಪುಟ್ಟೀ,,,ಯಾರಾದರೂ ಹೊರಗಿನವರು ಕೇಳಿದ್ರೆ ಟಾಯ್ಲೆಟ್ ಗೆ ಹೋಗಿದ್ದಾರೆ ಅಂತ ನೇರ ಹೇಳಬಾರದು... ಆಚೆ ಹೋಗಿದ್ದಾರೆ ಎನ್ನಬೇಕು ಆಯ್ತಾ?.. ಎಂದು ಹೇಳಿಕೊಡುತ್ತಿದ್ದ. ಆಗೆಲ್ಲ ಪುಟ್ಟಿ ‘ಆಯ್ತು.. ಆಯ್ತು.’ ಅಂತ ತಲೆ ಅಲುಗಿಸುತ್ತಿದ್ದಳು. 

ಒಂದು ಭಾನುವಾರ ಬೆಳಿಗ್ಗೆ ಪುಟ್ಟಿ ಅಂಗಳದಲ್ಲಿ ಆಡುತ್ತಿದ್ದಾಗ ಅಪ್ಪನ ಗೆಳೆಯರೊಬ್ಬರು ಹಾಜರ್. ಬಂದವರೇ ‘ಅಪ್ಪ ಎಲ್ಲಿ?’ ಎಂದು ಅವಳನ್ನು ಪ್ರಶ್ನಿಸಿದರು. ಪುಟ್ಟಿ ಥಟ್ಟನೆ, ‘ಅಂಕಲ್, ಅಪ್ಪ ಆಚೆ ಹೋಗಿ ಈಚೆ ಬಂದ್ರು ಈಗ.. ಎನ್ನಬೇಕೇ? ಗೆಳೆಯರಿಗೆ ತಬ್ಬಿಬ್ಬು. ! ಆಗಷ್ಟೇ ಹೊರಬಂದು ಕೇಳಿಸಿಕೊಂಡ ಅಪ್ಪನಿಗೂ ಏನು ಹೇಳಲು ತೋಚದೆ ಪೆಚ್ಚಾಗಿ ನಿಂತೇ ಇದ್ದ! 

-ಸುಶೀಲಾ ಆರ್. ರಾವ್

***

(‘ಮಯೂರ' ಎಪ್ರಿಲ್ ೨೦೧೭ರ ಸಂಗ್ರಹ)