‘ಮಯೂರ' ಹಾಸ್ಯ (ಭಾಗ - ೨೪)
ಆಗಲಿ, ಸಂತೋಷ…
ನಮ್ಮ ಊರಿನ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಅರ್ಚಕರಾದ ಸಾಮಾ ಭಟ್ಟರು ಎಲ್ಲರನ್ನೂ ಆಕರ್ಷಿಸುವುದರಲ್ಲಿ ಬಲು ಜಾಣರು. ಆದರೆ ಅವರದು ‘ಆಗಲಿ... ಆಗಲಿ... ಸಂತೋಷ... ಸಂತೋಷ... ಎಂಬ ವಾಡಿಕೆಯ ನುಡಿ ಇತ್ತು.
ಒಮ್ಮೆ ನನ್ನ ಸ್ನೇಹಿತ ದುಃಖದಲ್ಲಿದ್ದಾಗ ನಾನು ಅವನನ್ನು ಆ ದೇವಾಲಯಕ್ಕೆ ಕರೆದೊಯ್ದೆ. ‘ಏನಪ್ಪಾ ಈ ನಡುವೆ ಕಾಣಿಸಲೇ ಇಲ್ಲಾ... ಮನೇಲಿ ಎಲ್ಲರೂ ಸೌಖ್ಯವೋ?’ ಎಂದು ಈಗಾಗಲೇ ಪರಿಚಯ ಇದ್ದವರಂತೆ ಸಾಮಾ ಭಟ್ಟರು ಮಾತನಾಡಿದಾಗ ನನ್ನ ಸ್ನೇಹಿತನಿಗೆ ಒಂಥರಾ ಖುಷಿ. ಆದರೆ ಅವರು ತಮ್ಮ ದುಃಖದ ಸಂಗತಿಯನ್ನು ಹೇಳಿಕೊಂಡರು. ‘ಏನಿಲ್ಲಾ ಸ್ವಾಮಿ, ನಮ್ಮ ಶ್ರೀಮತಿ ಹೋಗಿ ಬಿಟ್ರು...' ಎಂದು ಅರ್ಧ ಹೇಳುವಷ್ಟರಲ್ಲೇ ‘ಆಗಲಿ.. ಆಗಲಿ... ಸಂತೋಷ... ಸಂತೋಷ...' ಎಂಬ ವಾಡಿಕೆಯ ಮಾತನ್ನು ಆಡಿಯೇ ಬಿಟ್ಟರು. ನನ್ನ ಸ್ನೇಹಿತನಿಗೆ ಪಿತ್ತ ನೆತ್ತಿಗೇರಿತ್ತು.
-ವಿ.ಎಸ್.ಸತ್ಯನಾರಾಯಣ ರಾವ್
***
ಸುವಾಸನೆ
ಅಂದು ಬೆಳಿಗ್ಗೆ ನನ್ನ ಸ್ನೇಹಿತ ತನ್ನ ಸ್ನೇಹಿತನೊಡನೆ ಆಫೀಸಿಗೆ ಬಂದ. ಅವನ ಜೊತೆಯಿದ್ದ ಹೊಸಬರನ್ನು ನಾನು ಕುತೂಹಲದಿಂದ ನೋಡುತ್ತಿದ್ದೆ. ನನ್ನ ಸ್ನೇಹಿತ ಅವರು ದೆಹಲಿಯಿಂದ ಬಂದಿದ್ದಾರೆಂದು, ಬೆಂಗಳೂರಿನಲ್ಲಿ ಹೊಸ ವ್ಯಾಪಾರ ಶುರು ಮಾಡುವ ಯೋಜನೆ ಹೊಂದಿದ್ದಾರೆಂದೂ ಹೇಳಿದ. ನಾನು ಆತನ ಕೈಕುಲುಕಿದೆ. ಆತ ತನ್ನ ಪರಿಚಯ ಚೀಟಿಯನ್ನು (ವಿಸಿಟಿಂಗ್ ಕಾರ್ಡ್) ನನಗೆ ಕೊಟ್ಟ. ಅದರಿಂದ ಹೊರಡುತ್ತಿದ್ದ ಸುವಾಸನೆಯನ್ನು ಆಘ್ರಾಣಿಸಿ ‘ಆಹ್, ಗಂಧ' ಎಂದು ಅದನ್ನು ಮೇಜಿನ ಮೇಲಿಟ್ಟೆ. ಆಗ ಅದೇಕೊ ಆತನ ಮುಖದಲ್ಲಿ ಮುಜುಗರದ ಭಾವನೆ ಕಂಡು ನನಗೆ ಕಸಿವಿಸಿಯಾಯಿತು. ಇದನ್ನರಿತ ನನ್ನ ಸ್ನೇಹಿತ ನಕ್ಕು ಹೇಳಿದ ‘ಓಹ್, ಈಗ ಅರ್ಥವಾಯಿತು ಅವರ ಭಾಷೆಯಲ್ಲಿ ಗಂಧ (ಗಂದಾ) ಎಂದರೆ ಕೊಳಕು, ಹೊಲಸು ಎಂದರ್ಥ. ‘ನೀನು ಗಂಧ ಎಂದು ಹೇಳಿದ್ದಕ್ಕೆ ಆತ ಬೇಸರಿಸಿಕೊಂಡ'.
-ಶ್ರೀನಾಥ್ ಕೊನೇಟಿ
***
ಯಾಕಿಷ್ಟ?
ನನ್ನ ಏಳು ವರ್ಷದ ಮಗಳು ಪ್ರತೀದಿನ ರಾತ್ರಿ ೧೦ ಗಂಟೆಯಾದರೂ ಮಲಗಲು ತಕರಾರು ಮಾಡುತ್ತಾಳೆ. ಆ ದಿನ ಕೆಲಸ ಮಾಡಿ ದಣಿದಿದ್ದ ನನಗೆ ಬೇಗ ಮಲಗಬೇಕಿತ್ತು. ಬೆಳಿಗ್ಗೆ ಬೇಗ ಏಳಬೇಕಿದ್ದರಿಂದ ಮಲಗಲು ತಕರಾರು ತೆಗೆಯುವ ಮಗಳ ಬಗ್ಗೆ ಕೋಪ ಬಂದಿತ್ತು.
ಒಂದಷ್ಟು ಬೈದು ಮಲಗುವಂತೆ ತಕೀತು ಮಾಡಿದೆ. ವಾಚಾಳಿ ಮಗಳು ಕೋಪ ಬಂದ ಅಮ್ಮನನ್ನು ರಮಿಸುವ ಆಟ ಶುರು ಮಾಡಿದಳು. ರೂಮಿನ ಲೈಟು ಆರಿಸಿದ್ದರಿಂದ ನನ್ನ ಮುಖದ ಮೇಲೆಲ್ಲ ಕೈಯಾಡಿಸಿ, ‘ಅಮ್ಮ, ನಿನ್ನ ಮೂಗನ್ನು ಕಂಡರೆ ನನಗೆ ತುಂಬಾ ಇಷ್ಟ' ಎಂದಳು. ‘ಹೌದಾ? ಆದರೆ ಯಾಕೆ ಅಂತ ಹೇಳಬೇಕು?’ ಅಂದೆ. ನನ್ನ ದಪ್ಪ ಮೂಗಿನ ಬಗ್ಗೆ ನನಗೇ ಮೆಚ್ಚುಗೆಯಿಲ್ಲ. ಅವಳ ಬಾಯಿಯಿಂದ ಏನು ಬರುತ್ತದೆ ಎನ್ನುವ ತವಕ ನನಗೆ.
ಇದನ್ನು ನಿರೀಕ್ಷಿಸದ ಅವಳು ಅರೆಕ್ಷಣ ಮೌನವಾಗಿ ಮರುಕ್ಷಣ ಕೈಯನ್ನು ನನ್ನ ಹುಬ್ಬಿನ ಮೇಲಿಟ್ಟು ‘ನಿನ್ನ ಹುಬ್ಬು ನನಗೆ ನಿನ್ನ ಮೂಗಿಗಿಂತಲೂ ಇಷ್ಟ' ಎಂದಳು. ‘ಹಾಗಾದರೆ ಅದ್ಯಾಕೆ ಅಂತಲಾದರೂ ಹೇಳು' ಎಂದೆ. ‘ಯಾಕಂದ್ರೆ ನಿನ್ನ ಹುಬ್ಬಿನಲ್ಲಿ ನಿನ್ನ ಮೂಗಿಗಿಂತಲೂ ಹೆಚ್ಚು ಕೂದಲಿದೆ...' ಅಂದಳು. ಅವಳಿಂದ ಈ ಉತ್ತರ ನಿರೀಕ್ಷಿಸಿರಲಿಲ್ಲ. ಈ ಬಾರಿ ಬಾಯಿ ಮುಚ್ಚಿ ಮಲಗುವ ಸರದಿ ನನ್ನದಾಯಿತು.
-ಪ್ರೇಮಲತಾ ಬಿ.
***
‘ವಡೀಬ್ಯಾಡ... '
ಒಮ್ಮೆ ನಮ್ಮ ಮನೆಗೆ ಅತಿಥಿಗಳು ಬಂದಿದ್ದರು. ಅವರದ್ದು ಪಕ್ಕಾ ಉತ್ತರ ಕರ್ನಾಟಕದ ಭಾಷೆ. ಮಂಡಕ್ಕಿ ಉಸುಳಿ. ಈರುಳ್ಳಿ ಭಜಿ ಮಾಡಿದ್ದೆ. ಎಲ್ಲರಿಗೂ ತಟ್ಟೆಯಲ್ಲಿ ಹಾಕಿಕೊಟ್ಟು ಟೀ ಮಾಡಲು ಅಡುಗೆ ಮನೆಗೆ ಬಂದೆ. ಅವರ ಜೊತೆಯಲ್ಲಿ ಬಂದಿದ್ದ ಚಿಕ್ಕ ಮಗು ‘ಮಮ್ಮೀ, ನಂಗ್ ವಡೀಬ್ಯಾಡ, ವಡೀಬ್ಯಾಡ' ಅಂತಾ ಒಂದೇ ಸಮ ಕೂಗುತ್ತಿದ್ದ. ಅವರಮ್ಮ ತಿನ್ನು ಅಂತಾ ಗದರುತ್ತಿದ್ದಳು. ಪಾಪ ! ಚಿಕ್ಕ ಮಗೂ ತಿನ್ನಲಿಲ್ಲದಕ್ಕೆ ಯಾಕೆ ಹೊಡಿತಾರೋ ಎಂದುಕೊಳ್ಳುತ್ತಾ ಹೊರಗೆ ಬಂದು. ‘ಮಗೂನ ಹೊಡೆಯಬೇಡಿ, ಅದಕ್ಕೇನು ಬೇಕೋ ಅದನ್ನೇ ತಿನ್ನಲಿ' ಎಂದಾಗ ಅಲ್ಲಿದ್ದವರೆಲ್ಲರೂ ನಗಾಡತೊಡಗಿದರು. ‘ಇಲ್ರೀ ಅಕ್ಕಾರ, ಅವ್ನಿಗೆ ಚುರುಮುರಿ ಸಾಕಂತೆ, ವಡೀ ತಿನ್ನೋವಲ್ಲಾ’ ಅಂತಾ ಅವನ ತಟ್ಟೆಯಲ್ಲಿದ್ದ ವಡೆಗಳನ್ನು ಒಳಗಿಟ್ಟು ಬಂದಾಗ ಭಾಷಾ ಅವಾಂತರಕ್ಕೆ ನಗುಬಂತು.
-ನಳಿನಿ ಟಿ.ಭೀಮಪ್ಪ
***
(ಜೂನ್ ೨೦೧೭ರ ‘ಮಯೂರ' ಪತ್ರಿಕೆಯಿಂದ ಆಯ್ದದ್ದು)