‘ಮಯೂರ' ಹಾಸ್ಯ (ಭಾಗ -೨೫)
೨ಜಿ, ೩ಜಿ ಸ್ಟೇಜ್ ಗೆ ಬನ್ನಿ
ನಮ್ಮ ದೊಡ್ಡಮ್ಮನ ಮಗಳ ಮದುವೆಯ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿತ್ತು. ನಮ್ಮ ದೊಡ್ಡಮ್ಮನ ಸೊಸೆಗೆ ಹೆಣ್ಣು ಮಗು ಜನಿಸಿದ್ದು, ನಮ್ಮ ಅಜ್ಜಿ, ಮುತ್ತಜ್ಜಿಯ ಪಟ್ಟಕ್ಕೇರಿದ್ದು ಸಡಗರವನ್ನು ಮತ್ತಷ್ಟು ಹೆಚ್ಚಿಸಿತ್ತು. ಕಾರ್ಯಕ್ರಮಗಳೆಲ್ಲಾ ನೆರವೇರಿದ ನಂತರ ನಮ್ಮ ಮಾವ ಸತ್ಯ ನಮ್ಮ ಅಜ್ಜಿಯೊಂದಿಗೆ ಕುಟುಂಬದ ಎಲ್ಲ ಸದಸ್ಯರನ್ನೂ ಸೇರಿಸಿ ಫೊಟೋ ತೆಗೆಸೋಣವೆಂದು ಹರಸಾಹಸ ನಡೆಸಿದ್ದರೂ ಯಾರೊಬ್ಬರೂ ಅವರ ಮಾತನ್ನು ಕೇಳಿಸಿಕೊಳ್ಳಲೇ ಇಲ್ಲ. ಕೂಡಲೇ ಅವರು ನಮ್ಮ ಅಜ್ಜಿಯನ್ನು ಸ್ಟೇಜ್ ಮೇಲೆ ಕೂರಿಸಿ, ‘ನಮ್ಮ ಕುಟುಂಬದ ೨ಜಿ, ೩ಜಿ ಹಾಗೂ ೪ಜಿಗಳು ಎಲ್ಲಿದ್ದರೂ ಸ್ಟೇಜ್ ಮೇಲೆ ಬಂದು ೧ಜಿ ಜೊತೆಗೆ ಗ್ರೂಪ್ ಫೊಟೋಗೆ ನಿಲ್ಲಬೇಕು' ಎಂದಾಗ ಅವರ ಹಾಸ್ಯ ಚಟಾಕಿಗೆ ಅಲ್ಲಿ ಸೇರಿದವರೆಲ್ಲಾ ಜೋರಾಗಿ ನಗಲಾರಂಭಿಸಿದರು.
-ಸಿಂಧು ಬಿ.ಎನ್.
***
ಸವಾಲ್ ಜವಾಬ್ !
ನನ್ನ ಮೊಮ್ಮಗಳು ಎರಡೂವರೆ ವರ್ಷದ ವೇದಾಂಶಿ ಹಾಗೂ ಏಳು ವರ್ಷದ ಮೊಮ್ಮಗ ವೇದಾಂತ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತಲೇ ಇರುತ್ತದೆ. ಒಮ್ಮೆ ಇಬ್ಬರಲ್ಲೂ ಮಾತಿಗೆ ಮಾತು ಬೆಳೆಯಿತು. ವೇದಾಂತ ಆಕೆಯನ್ನು ‘ಕತ್ತೆ' ಎಂದ. ವೇದಾಂಶಿ ‘ನೀನೇ ಕತ್ತೆ' ಎಂದಳು. ‘ನೀನು ಬೆಕ್ಕು' ಎಂದ. ‘ನೀನೇ ಬೆಕ್ಕು' ಅಂದಳು. ‘ನೀನು ಕೋಳಿ', ‘ನೀನೇ ಕೋಳಿ', ‘ನೀನು ಕಾಗೆ', ನೀನೇ ಕಾಗೆ'... ಕೊನೆಗೆ ಜಗಳ ಮುಗಿಸಲು ‘ನೀನು ಚಂದ' ಎಂದ. ‘ಹೌದು' ವೇದಾಂಶಿಯಿಂದ ಥಟ್ ಎಂದು ಉತ್ತರ ಬಂದಾಗ ವೇದಾಂತ ಪೆಚ್ಚು ಮೋರೆ ಹಾಕಿಕೊಂಡ. ಇದನ್ನು ದೂರದಿಂದ ನೋಡುತ್ತಿದ್ದ ನನಗೆ ನಗು ತಡೆಯಲಾಗಲಿಲ್ಲ.
-ರಾಜಲಕ್ಷ್ಮೀ ವಿ.ಶೆಣೈ
***
ನಿಮ್ಮ ಹಾಗೇ ಆಗ್ಬೇಕು
ನನ್ನದು ಸ್ವಲ್ಪ ಸ್ಥೂಲಕಾಯ. ಹೇಗಾದರೂ ಮಾಡಿ ತೂಕ ಇಳಿಸಿಕೊಳ್ಳಬೇಕೆಂದು ನನ್ನ ಸ್ನೇಹಿತರು, ಹಿತೈಷಿಗಳು ಹೇಳುವ ಬಿಟ್ಟಿ ಸಲಹೆಗಳನ್ನೆಲ್ಲಾ ಪಾಲಿಸುತ್ತಾ ನಾನಾ ಕಸರತ್ತುಗಳನ್ನು ನಡೆಸುತ್ತಲೇ ಇರುತ್ತೇನೆ. ನಿರೀಕ್ಷಿತ ಫಲಿತಾಂಶ ಸಿಕ್ಕಿಲ್ಲವಾದರೂ ಹಾಗಂತ ನನ್ನ ಉತ್ಸಾಹ ಮಾತ್ರ ಕುಗ್ಗಿಲ್ಲ. ಕಳೆದ ತಿಂಗಳು ನಮ್ಮ ಆಪ್ತ ಗೆಳತಿಯ ಸಲಹೆಯಂತೆ ಮನೆಗೆ ‘ಥ್ರೆಡ್ ಮಿಲ್' ತಂದು ಬೆಳಗೆ, ಸಂಜೆ ಅದರ ಮೇಲೆ ವ್ಯಾಯಾಮ ನಡೆಸಿದ್ದೆ. ನಮ್ಮ ಕೆಳಗಡೆ ಮನೆಯಲ್ಲಿ ವಾಸವಾಗಿರುವ ಪುಟ್ಟ ಲಲ್ಲೂ ನನ್ನ ಈ ಚಟುವಟಿಕೆಯನ್ನು ಕುತೂಹಲದಿಂದ ಗಮನಿಸುತ್ತಲೇ ಇದ್ದಳು. ಒಂದು ದಿನ ಬೆಳಿಗ್ಗೆ ನಾನು ‘ಥ್ರೆಡ್ ಮಿಲ್' ಮೇಲೆ ವಾಕಿಂಗ್ ಮಾಡ್ತಿದ್ದಾಗ ಅಲ್ಲಿಗೆ ಬಂದವಳೇ ‘ಆಂಟೀ ನಾನು ಇದರ ಮೇಲೆ ವಾಕಿಂಗ್ ಮಾಡಿದ್ರೆ ನಿಮ್ಮ ಹಾಗೇ ದಪ್ಪ ಆಗ್ತೀನಾ?’ ಎಂದು ಕುತೂಹಲದಿಂದ ಕೇಳಿದಾಗ ನಮ್ಮ ಯಜಮಾನರು ಮುಸಿಮುಸಿ ನಕ್ಕರು.
-ಶಾಂತಾ ನರಸಿಂಹ ಮೂರ್ತಿ
***
ಫೇಸ್ ಬುಕ್ ಹಾಕಿ
ಆ ದಿನ ನಮ್ಮ ಮನೆ ಕೆಲಸ ಮಾಡುವ ಗೌರಮ್ಮ ಎಂದಿಗಿಂತ ಮುಂಚೆಯೇ ಬಂದಾಗ ಖುಷಿಯಲ್ಲಿದ್ದಳು. ಅವಳ ಮಗಳಿಗೆ ಮದುವೆ ಗೊತ್ತಾಗಿದ್ದು, ವರ ಸರ್ಕಾರಿ ನೌಕರನಾಗಿರುವುದು. ಮದುವೆ ಖರ್ಚೆಲ್ಲಾ ಗಂಡಿನ ಕಡೆಯವರೇ ಭರಿಸುವುದು ಅವಳ ಸಂತೋಷಕ್ಕೆ ಕಾರಣ. ‘ಅಕ್ಕಾ, ಇನ್ನು ಹದಿನೈದು ದಿನದಲ್ಲೇ ಮಗಳ ಮದುವೆ. ಮದುವೆಗೆ ಇವಳ ಮುಖ ಹೊಳೆಯಬೇಕು ಹಾಗೆ ಫೇಸ್ ಬುಕ್ ಹಾಕಿ' ಎಂದಳು. ನಾನು ಆಶ್ಚರ್ಯದಿಂದ ‘ನಿನಗೂ ಫೇಸ್ಬುಕ್ ಹುಚ್ಚು ಹಿಡಿಯಿತೇನೇ?’ ಎಂದೆ. ‘ಅದೇ ಅದೇ ಕಣಕ್ಕಾ ನೀವು ಮುಖಕ್ಕೆಲ್ಲಾ ಹಣ್ಣಿನ ರಸ, ಕಡ್ಲೇ ಹಿಟ್ಟು ಏನೇನೋ ಮಾಡ್ಕೊಂಡು ಲಕ ಲಕ ಹೊಳೆಯೊ ಹಾಗೆ ಮಾಡ್ತೀರಲ್ಲ...' ಅಂದಳು. ಅವಳು ಹೇಳುತ್ತಿರುವುದು ‘ಫೇಸ್ ಪ್ಯಾಕ್' ಬಗ್ಗೆ ಎಂದು ತಿಳಿದಾಗ ನನಗೆ ನಗು ತಡೆಯಲಾಗಲಿಲ್ಲ.
-ಶೈಲಜ ಎನ್.ಪಿ.
***
(‘ಮಯೂರ' ಆಗಸ್ಟ್ ೨೦೧೭ರ ಸಂಚಿಕೆಯಿಂದ ಸಂಗ್ರಹಿತ)