‘ಮಯೂರ' ಹಾಸ್ಯ (ಭಾಗ ೨)

‘ಮಯೂರ' ಹಾಸ್ಯ (ಭಾಗ ೨)

‘ಸಂಪದ' ಜಾಲತಾಣದಲ್ಲಿ ಕಳೆದ ವಾರದಿಂದ ಪ್ರಾರಂಭಿಸಿರುವ ‘ಮಯೂರ' ಪತ್ರಿಕೆಯಲ್ಲಿ ಬಹಳ ಹಿಂದೆ ಪ್ರಕಟವಾದ ನಿಜ ಜೀವನದ ಹಾಸ್ಯ ಪ್ರಸಂಗಗಳು ಬಹಳಷ್ಟು ಓದುಗರಿಗೆ ಮೆಚ್ಚುಗೆಯಾಗಿವೆ. ಇದೇ ರೀತಿ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ಹಳೆಯ ಮಾಹಿತಿಗಳನ್ನೂ ಪ್ರಕಟಿಸಿ ಎಂದು ಕೇಳಿಕೊಂಡಿದ್ದಾರೆ. ಈ ವಾರವೂ ಎರಡು ಹಾಸ್ಯಗಳನ್ನು ನಿಮಗಾಗಿ ಸಂಗ್ರಹಿಸಿ ತಂದಿದ್ದೇವೆ. ಓದುವ ಖುಷಿ ನಿಮ್ಮದಾಗಲಿ. ಹಾಂ, ಪ್ರತಿಕ್ರಿಯೆಗೆ ಮರೆಯದಿರಿ…

ಚಿತ್ರಗೀತೆ ಹವ್ಯಾಸ

ತಲಾ ನಾಲ್ಕು ಮನೆಗಳಿರುವ ನಾವು ವಾಸವಿದ್ದ ಅಧಿಕಾರಿಗಳ ವಸತಿ ಗೃಹದಲ್ಲಿ ಎಲ್ಲಾ ಮನೆಗಳ ಮುಖ್ಯ ದ್ವಾರಗಳೂ ಎದುರು ಬದುರಾಗಿದ್ದವು. ನಮ್ಮ ಪಕ್ಕದ ಮನೆಯಲ್ಲಿ ಯುವ ದಂಪತಿ ಇದ್ದರು. ಅವರ ಮನೆಯಲ್ಲಿ ಬೆಳಿಗ್ಗೆ ಆರಂಭವಾದರೆ ಗಂಡ ಕೆಲಸಕ್ಕೆ ಹೋಗುವವರೆಗೂ ರೇಡಿಯೋವನ್ನು ದೊಡ್ದ ದ್ವನಿಯಲ್ಲಿ ಹಾಕುವ ಅಭ್ಯಾಸ. ಅದರಲ್ಲಿ ಬೆಳಿಗ್ಗೆ ಬರುವ ಚಿತ್ರಗೀತೆಗಳೊಂದಿಗೆ ತಾವೂ ಸಹ ಜೋರಾಗಿ ಹಾಡುವ ಹವ್ಯಾಸ ಆ ಮನೆಯೊಡತಿಗಿತ್ತು. ಅಕ್ಕ ಪಕ್ಕದ ನಮಗೆಲ್ಲಾ ಈ ಅಭ್ಯಾಸ ಕಿರಿಕಿರಿಯಾದರೂ ಸೌಜನ್ಯಕ್ಕಾಗಿ ಸುಮ್ಮನಿರುತ್ತಿದ್ದೆವು.

ಒಂದು ಬೆಳಿಗ್ಗೆ ಚಿತ್ರಗೀತೆಯ ಸಮಯದಲ್ಲಿ ‘ಮುದ್ದಿನ ಗಿಳಿಯೆ ಬಾರೋ...' ಎಂದು ಚಿತ್ರಗೀತೆಯ ತುಣುಕನ್ನು ಹಾಡುತ್ತಿರುವಾಗ ಹಾಲಿನವಳು ಬಂದಿದ್ದರಿಂದ ಆ ಹಾಡನ್ನು ಅಲ್ಲಿಗೇ ನಿಲ್ಲಿಸುತ್ತಾ ಆಕೆ ಪಾತ್ರೆ ತರಲು ಒಳಗೆ ಹೋದರು. ಎದುರು ಮನೆಯಲ್ಲಿದ್ದ ಅವಿವಾಹಿತ ಇಂಜಿನಿಯರ್ ಒಬ್ಬರು ಬೇಕಂದೇ ಹಾಡನ್ನು ಮುಂದುವರೆಸುತ್ತಾ ‘ಮುತ್ತನು ಕೊಡುವೆ ಬಾರೋ’ ಎನ್ನುತ್ತಾ ಸಾಲನ್ನು ಜೋರಾಗಿ ಹಾಡಿದರು. ಅನಿರೀಕ್ಷಿತವಾದರೂ ಹಾಡಿನ ರೂಪದಲ್ಲಿ ಬಂದ ಉತ್ತರ ಕಂಡು ನಾಚಿಕೆ ಹಾಗೂ ಮನೆಯವರ ಹಾಡುಗಾರಿಕೆಯ ಪರಿ ಕಂಡು ಒಳಗೊಳಗೇ ನಗು ಬಂತು. ಅಂದಿನಿಂದ ರೇಡಿಯೋ ಜೊತೆಗಿನ ಆಕೆಯ ಹಾಡುಗಾರಿಕೆ ನಿಂತಿದ್ದಲ್ಲದೆ ರೇಡಿಯೋವನ್ನು ಸಹ ತಮಗೆ ಮಾತ್ರ ಕೇಳಿಸುವಂತೆ ಹಿತವಾಗಿ ಹಾಕುತ್ತಿದ್ದರು.

-ಜಯಮಾಲ ಎನ್.ಪೈ

***

ಬಿಳಿ ಕೂದಲು

ನನ್ನ ಎಂಟು ವರ್ಷ ಮಗ ತುಂಬಾ ತುಂಟ. ಅಂತೆಯೇ ಬಲು ಚೂಟಿ. ಒಮ್ಮೆ ಮನೆಯಲ್ಲಿ ಎಲ್ಲರೂ ಕೂಡಿ ಹರಟೆ ಹೊಡೆಯುತ್ತಾ ಒಬ್ಬರನ್ನೊಬ್ಬರು ತಮಾಷೆ ಮಾಡುತ್ತಾ ನಗೆಗಡಲಲ್ಲಿ ತೇಲುತ್ತಿದ್ದಾಗ ಆತ ನನಗೆ ಕೇಳಿದ ‘ಅಪ್ಪಾ, ನಿಮ್ಮ ಕೆಲ ಕೂದಲುಗಳು ಏಕೆ ಬಿಳಿಯಾಗಿವೆ'?

‘ನೀನು ಆಗಾಗ ನನ್ನನ್ನು ತುಂಬಾ ಸತಾಯಿಸಿ ಬೇಜಾರು ಮಾಡುತ್ತೀಯಲ್ಲಾ. ಆಗ ಒಂದೊಂದೇ ಕೂದಲು ಬಿಳಿಯಾಗುತ್ತಾ ಹೋಗುತ್ತದೆ ತಿಳಿಯಿತಾ?’ ಎಂದೆ.

ಅದಕ್ಕೆ ಅವನು ‘ಈಗ ತಿಳಿಯಿತು ಬಿಡು. ಯಾಕೆ ಅಜ್ಜನ ಎಲ್ಲ ಕೂದಲು ಅಷ್ಟು ಬೇಗ ಬಿಳಿಯಾದದ್ದು ಅಂತ'. ಅನ್ನುವುದೇ!

-ಯು.ಎಸ್.ಶ್ರೀನಿವಾಸ ರಾವ್

***

(ಸಂಗ್ರಹ: ಮಯೂರ ಮಾರ್ಚ್ ೨೦೧೪)