‘ಮಯೂರ ಹಾಸ್ಯ' - ಭಾಗ ೬

‘ಮಯೂರ ಹಾಸ್ಯ' - ಭಾಗ ೬

ನನ್ನ ಮರೀತೀಯಾ?

ನನ್ನ ೬ ವರ್ಷದ ಮಗಳನ್ನು ಈಜು ತರಗತಿಯಿಂದ ಕಾರಿನಲ್ಲಿ ಮನೆಗೆ ಕರೆತರುತ್ತಿದ್ದೆ. ದಾರಿಯಲ್ಲಿ ಮಗಳು ಬಹಳ ಭಾವನಾಪೂರಿತವಾದ ದನಿಯಲ್ಲಿ ‘ಅಮ್ಮಾ ನೀನು ನನ್ನನ್ನು ಯಾವತ್ತಾದರೂ ಮರೆತು ಬಿಡಬಹುದಾ?’ ಎಂದಳು. ಈ ಯೋಚನೆ ಇದೆಲ್ಲಿಂದ ಇವಳ ತಲೆಗೆ ಬಂತು ಅಂತ ತಲೆ ಕೆಡಿಸಿಕೊಳ್ಳುತ್ತಲೇ ‘ಇಲ್ಲ ಪುಟ್ಟೀ, ಅದು ಹೇಗೆ ತಾನೇ ಸಾಧ್ಯ? ನಾನು ಬದುಕಿರುವವರೆಗೂ ನಿನ್ನನ್ನು ಮರೆಯಲು ಸಾಧ್ಯವೇ ಇಲ್ಲ' ಎಂದೆ.

ಸ್ವಲ್ಪ ಸಮಯದ ನಂತರ, ತನ್ನ ಹಳೆಯ ಆಟ ಶುರು ಮಾಡಿದಳು. ನಾಕ್, ನಾಕ್ (ಟಕ್, ಟಕ್ ಬಾಗಿಲು ಕುಟ್ಟಿದ ಶಬ್ದ) ಎಂದಳು. ಈ ಆಟವನ್ನು ಬಹು ಬಾರಿ ಆಡುತ್ತಿದ್ದರಿಂದ ನಾನು ಸಹಜವಾಗಿಯೇ ‘ಹೂ ಈಸ್ ದೇರ್?’ (ಯಾರಲ್ಲಿ?) ಎಂದೆ.

ಮರುಕ್ಷಣ ಹಿಂದಿನ ಸೀಟಿನಲ್ಲಿ ಗಂಗಾ -ಜಮುನಾರ ಪ್ರವಾಹ ಶುರುವಾಯ್ತು.

‘ಅಮ್ಮಾ, ನೀನು ನನ್ನ ಮರೆಯಲ್ಲ ಅಂತ ಈಗ ತಾನೇ ಹೇಳಿದೆ. ಈಗಾಗ್ಲೇ ಯಾರು ಅಂತ ಕೇಳ್ತಿದ್ದೀಯಾ ಹೂ… ಹೂ.. ಅಂತ ಅವ್ಳು ಹೇಳ್ತಿರುವಾಗಲೇ ಏನು ಹೇಳಲು ತೋಚದೆ, ನಗಲೂ ಆಗದೇ ಕಕ್ಕಾವಿಕ್ಕಿಯಾಗುವ ಸರದಿ ನನ್ನದ್ದಾಯ್ತು.!

-ಪ್ರೇಮಲತಾ ಬಿ, ತುಮಕೂರು

***

ಹೀಗೊಂದು ಭಾಷಾಂತರ

ಬ್ಯಾಂಕಿನ ಲೆಕ್ಕಪರಿಶೋಧಕನಾಗಿ ಕಾರ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಒಮ್ಮೆ ನನಗೆ ಶ್ರೀಶೈಲದ ಮಲ್ಲಿಕಾರ್ಜುನನನ್ನು ಕಾಣುವ ಯೋಗ ಕೂಡಿ ಬಂತು. ಶ್ರೀಶೈಲವಿರುವುದು ಈಗಿನ ವಿಭಜಿತ ಆಂಧ್ರಪ್ರದೇಶದಲ್ಲಿ.

ದೇವರ ದರ್ಶನಕ್ಕೆ ಹೋಗುವ ಹಾದಿಯಲ್ಲಿ ನಮ್ಮ ಪಾದರಕ್ಷೆಗಳನ್ನು ತೆಗೆದಿಡಲು ಒಂದು ಪ್ರತ್ಯೇಕ ಸ್ಥಳ (ಕೊಠಡಿ) ಎಲ್ಲ ದೇವಸ್ಥಾನಗಳಲ್ಲಿರುವಂತೆ ಅಲ್ಲಿಯೂ ಇತ್ತು. ಪಾದರಕ್ಷೆಗಳನ್ನು ಕಳಚುತ್ತಿದ್ದ ನಾನು ಮೇಲ್ಗಡೆ ತೆಲುಗಿನಲ್ಲಿ ಬರೆದ ‘ಇಕ್ಕಡ ಪಾದರಕ್ಷಲು ಭದ್ರಪರಚು ಸ್ಥಳಮು' ಎಂಬ ಬರಹವನ್ನು ಲೀಲಾಜಾಲವಾಗಿ ಓದಿದೆ. ಅಂದರೆ ಇಲ್ಲಿ ಪಾದರಕ್ಷೆಗಳನ್ನು ಭದ್ರವಾಗಿ ಇಡುವ ಸ್ಥಳ ಎಂದರ್ಥ. ಅದರ ಕೆಳಗೆ ಕನ್ನಡ ಭಾಷಾಂತರವೂ ಇತ್ತು. ನೋಡಿದ ನನಗೆ ರೋಮಾಂಚನವಾಯಿತು. ಆಂಧ್ರ ನೆಲದಲ್ಲಿ ಕನ್ನಡ ಬರಹ ಫಲಕ! ಅದು ಹೀಗಿತ್ತು.

‘ಇಲಿ ಪಾದರಕ್ಷೆ ಪರಚುವ ಸ್ಥಳ'

ಈ ಬರಹ ಓದಿ ಪಾದರಕ್ಷೆ ಬಿಡುವುದೋ ಬೇಡವೋ ಎನ್ನುವ ಗೊಂದಲದಲ್ಲಿ ಬಿದ್ದೆ. ! 

-ಧರ್ಮಾನಂದ ಶಿರ್ವ, ಬೆಂಗಳೂರು

***

ಯಾವುದು ಎಡಗಾಲು?

ನನ್ನ ಆಪ್ತಮಿತ್ರ ಮಲ್ಲೇಶಿ ಅಂದು ನನ್ನ ಜನ್ಮದಿನವೆಂದು ಹೇಗೋ ಪತ್ತೆ ಹಚ್ಚಿ ಸಂಜೆಯಾಗುತ್ತಲೇ ನನ್ನ ಬಳಿ ಬಂದ. ‘ನಡೆ! ಪಲ್ಲವಿ ಬಾರ್ ಗೆ ಹೋಗೋಣ. ನಿನ್ನ ಹುಟ್ಟು ಹಬ್ಬವನ್ನು  ನಾವಿಬ್ರೇ ಗ್ರಾಂಡಾಗಿ ಆಚರಿಸೋಣ' ಎಂದು ಆಗ್ರಹಿಸಿದ. ಅವನು ಉತ್ಸಾಹದಿಂದ ‘ಇವತ್ತು ಜಿನ್ ಟೇಸ್ಟ್ ನೋಡು! ಹ್ಯಾಗೆ ಕಿಕ್ ಕೊಡುತ್ತೆ!’ ಅಂದ. ಲಿಂಬೆ ರಸ, ಐಸ್ ಬೆರೆಸಿಕೊಂಡು ಒಂದು ಬಾಟಲ್ ನಿಧಾನವಾಗಿ ಒಬ್ಬನೇ ಖಾಲಿ ಮಾಡಿದ. ರಾತ್ರಿ ಹತ್ತು ಗಂಟೆಯಾಯಿತು. ‘ನಡೆ ಮನೆಗೆ ಹೋಗೋಣ' ಎಂದೆ. ಟೇಬಲ್ ಕೆಳಗೆ ಅಸ್ತ-ವ್ಯಸ್ತವಾಗಿ ಬಿದ್ದಿದ್ದ ಅವನ ಚಪ್ಪಲಿಗಳನ್ನು ಅವನ ಕಾಲ ಬಳಿ ತಳ್ಳಿದೆ. ಅವನು ಫುಲ್ ಟೈಟ್ ಆಗಿದ್ದ. ಎಡಗಾಲಿನ ಚಪ್ಪಲಿಯಲ್ಲಿ ಬಲಗಾಲನ್ನು ಸೇರಿಸಲಾರಂಭಿಸಿದ. ‘ಇದು ಎಡಗಾಲಿನದು!’ ಎಂದು ಅವನಿಗೆ ನೆನಪು ಮಾಡಿದೆ. ‘ಸರಿ! ಆದ್ರೆ ನನ್ನ ಎಡಗಾಲು ಯಾವುದು?!’ ಎಂದು ಅವನು ತೂರಾಡುತ್ತಾ ಕೇಳಿದಾಗ ನನ್ನ ನಶೆ ಪೂರಾ ಇಳಿದುಹೋಗಿತ್ತು!.

-ಕೆ.ಜಿ.ಭದ್ರಣ್ಣವರ, ಮುದ್ದೇಬಿಹಾಳ

***

-(ಮಯೂರ ಜುಲೈ ೨೦೧೬ರಿಂದ ಸಂಗ್ರಹಿತ)