‘ಮಯೂರ' ಹಾಸ್ಯ - ಭಾಗ ೮೩

‘ಮಯೂರ' ಹಾಸ್ಯ - ಭಾಗ ೮೩

ಕಾಕಾ ಕಿಕೀ

ಒಂದಿನ ನಾವು ನಮ್ಮ ನೆಂಟರ ಮನೆಗೆ ಹೋಗಿದ್ದೆವು. ಪ್ರೈಮರಿ ಶಾಲೆ ಓದುತ್ತಿರುವ ಅವರ ಮಗಳು ನವಮಿ. ಕ ಕಾ ಕಿ ಕೀ ಕು ಕೂ... ಓದು ಸಾಗಿತ್ತು. ನಮ್ಮನ್ನು ಕಂಡು ಪ್ರಶ್ನಾರ್ಥಕ ನೋಟ ಬೀರಿದಳು. ಅವರ ಅಮ್ಮ, ‘ಕಾಕ, ಕಾಕೀ (ಚಿಕ್ಕಪ್ಪ ಚಿಕ್ಕಮ್ಮ) ಬಂದಾರ ನೋಡು' ಎಂದು ಅವಳ ಬಳಿ ಹೇಳಿದರು. ಜೊತೆಗೆ ನನ್ನಾಕೆಯೂ ತಂಗಿಯೂ ನಮ್ಮೊಂದಿಗೆ ಇದ್ದರು. ಕಾಗುಣಿತದ ಗುಂಗಿನಲ್ಲಿದ್ದ ಚೂಟಿ ನವಮಿ, ‘ಹಾಗಾದ್ರೆ, ಇವರು ಕಿಕೀ ನಾ?’ ಎಂದು ನಾದಿನಿಯ ಕಡೆ ನೋಡಿದಳು. ಅವಳ ಕಾಗುಣಿತದ ಪ್ರಭಾವ ನಗು ತರಿಸಿತು !

-ನಗರ ಗುರುದೇವ್ ಭಂಡಾರ್ಕರ್

***

ಮರಣ ಪ್ರಮಾಣ ಪತ್ರ

ಸುಮಾರು ವರ್ಷಗಳ ಹಿಂದಿನ ಮಾತು. ನಮ್ಮ ತಾಯಿ ಮರಣಾನಂತರ ಅವರ ಮರಣ ಪ್ರಮಾಣ ಪತ್ರಕ್ಕೆ ಬೆಂಗಳೂರು ಮಹಾನಗರ ಪಾಲಿಕೆಗೆ ಅರ್ಜಿ ಸಲ್ಲಿಸಿದ್ದೆ. ಹತ್ತು ದಿನಗಳಾದ ಮೇಲೆ ವಿಚಾರಿಸಿದಾಗ, ಇನ್ನೂ ಸಿದ್ಧವಾಗಿಲ್ಲವೆಂದು ಉತ್ತರ ಬಂತು. ಬೇಸತ್ತು ಮೇಲ್ವಿಚಾರಕರಿಗೆ ವಿಷಯ ತಿಳಿಸಿದಾಗ, ಅವರು ಅನುಕಂಪ ತೋರಿ ಹೊಸ ಅರ್ಜಿಯನ್ನು ಪಡೆದು ಮರುದಿನ ಬಂದು ಪ್ರಮಾಣಪತ್ರವನ್ನು ಪಡೆಯಬಹುದು ಎಂದು ಹೇಳಿದರು. ಮಾರನೇ ದಿವಸ ನಾನು ಪಾಲಿಕೆ ಕಚೇರಿಗೆ ಹೋದಾಗ ಅವರು, 'ನಿಮ್ಮ ಮರಣ ಪ್ರಮಾಣ ಪತ್ರ ಸಿದ್ಧವಾಗಿದೆ. ನೋಡಿ, ಕಲೆಕ್ಟ್ ಮಾಡಿಕೊಳ್ಳಿ’ ಎಂದರು. ನನಗಷ್ಟೇ ಅಲ್ಲ, ಅಲ್ಲಿದ್ದ ಇತರರಿಗೂ ಸ್ವಲ್ಪ ಬೇಸರ, ಸ್ವಲ್ಪ ತಮಾಷೆ ಅನಿಸಿತು. ನಾನಿನ್ನೂ ಬರುಕಿರುವಾಗಲೇ ನನ್ನ ಮರಣ ಪ್ರಮಾಣ ಪತ್ರ ತಯಾರಾಯಿತೇ ಎಂದು.

-ಟಿ ಎಲ್ ರಾಮಕೃಷ್ಣ

***

ಹೊಸ ಮನೆ

ಮಗ ಸೊಸೆ ಭದ್ರಾವತಿಯಲ್ಲಿದ್ದಾಗ ನಾನು ಆಗಾಗ್ಗೆ ಭದ್ರಾವತಿಗೆ ಹೋಗಿ ಬರುತ್ತಿದ್ದೆ. ಒಮ್ಮೆ ಹೀಗೆ ಭದ್ರಾವತಿಗೆ ಹೋಗಿದ್ದಾಗ ಬಸ್ ನಿಲ್ದಾಣದಲ್ಲಿ ಅಪರೂಪದ ಗೆಳೆಯ ಸಿಕ್ಕು, ಅಲ್ಲಿಯೇ ಹೋಟೇಲ್ ಒಂದರಲ್ಲಿ ಚಹಾ ಕುಡಿಯಲು ಹೋದೆವು. ಆನಂತರ ಗೆಳೆಯ ಹೇಳಿದ ‘ನಾನು ಈಗ ಬೇರೆ ಕೆಲಸದ ನಿಮಿತ್ತ ಶಿವಮೊಗ್ಗಕ್ಕೆ ಹೋಗ್ತಾ ಇದ್ದೇನೆ' ಎರಡು ದಿನಗಳ ನಂತರ ಭೇಟಿಯಾಗೋಣ. ನಾನು ಬಂದ ಮೇಲೆ ಹೊಸಮನೆಗೆ ಬಂದು ಬಿಡು.’ ಎಂದು. ನಾನು ‘ಅರೆ, ಮತ್ತೆ ಹೊಸ ಮನೆ ತಗೊಂಡ್ಯಾ? ನಿನ್ನ ಹೊಸ ಮನೆ ನಾನು ನೋಡಿಲ್ಲ' ಎಂದೆ. ಗೆಳೆಯ ನಗಲಾರಂಭಿಸಿದ. ನಂತರ ತಿಳಿಯಿತು. ಭದ್ರಾವತಿಯಲ್ಲಿ ಹೊಸ ಮನೆ ಎಂಬುದು ಒಂದು ಏರಿಯಾ ಎಂದು. ಆಗ ‘ಆಯ್ತು ಹೊಸಮನೆಗೆ ಬಂದು ಫೋನ್ ಮಾಡೂತ್ತೇನೆ' ಎಂದು ಹೇಳಿ ಹೊರಟು ಬಂದೆ.

-ಪ್ರಶಾಂತ್ ಮಲ್ಕಿಒಡೆಯರ್

***

ಹೆಂಡತಿ ಸಿಟ್ಟಾದಾಗ

ಹೆಂಡತಿ ಇತೀಚಿನ ದಿನಗಳಲ್ಲಿ ತುಂಬಾ ರೇಗುತ್ತಿದ್ದಾಳೆ ಎಂದು ಅನ್ನಿಸತೊಡಗಿತ್ತು. ಸಣ್ಣ ಪುಟ್ಟ ವಿಷಯಗಳಿಗೆಲ್ಲ ಬಹುಬೇಗ ಸಿಟ್ಟು ಮಾಡಿಕೊಳ್ಳುತ್ತಿದ್ದಳು. ಮೊದಮೊದಲು ಅದನ್ನು ಸಹಿಸಿಕೊಂಡೆನಾದರೂ ಅವಳ ಅತಿಯಾದ ರೇಗಾಟ ಬರಬರುತ್ತಾ ಬೇಜಾರಾಗಿ ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕು ಎನಿಸಿತು. ತುಂಬಾ ಯೋಚನೆ ಮಾಡಿ ಒಂದು ದಿನ ಅವಳು ತುಂಬಾ ಜೋರಾಗಿ ರೇಗಾಡುತ್ತಿರುವಾಗ ‘ಸಾಮಾನ್ಯವಾಗಿ ವಯಸ್ಸು ಜಾಸ್ತಿಯಾದಂತೆಲ್ಲ ರೇಗಾಡುವಿಕೆ ಜಾಸ್ತಿಯಾಗುತ್ತದಂತೆ. ನೀನು ಹೀಗೆ  ಬಿಟ್ಟು ಬಿಡದೇ ಸಿಟ್ಟು ಮಾಡಿಕೊಳ್ಳುವುದು ನೋಡಿದರೆ ನಿನಗೂ ವಯಸ್ಸು ಜಾಸ್ತಿ ಆಯ್ತು ಅನಿಸುತ್ತಿದೆ' ಎಂದು ಹೇಳಿದೆ. ಅಂದಿನಿಂದ ಅವಳು ನನ್ನ ಜೊತೆ ಸಿಟ್ಟಿನಿಂದ ಮಾತನಾಡಲೇ ಇಲ್ಲ.

-ಭೋಜರಾಜ ಸೊಪ್ಪಿಮಠ

***

(‘ಮಯೂರ' ಜನವರಿ ೨೦೨೩ರ ಸಂಚಿಕೆಯಿಂದ ಆಯ್ದದ್ದು)