‘ಮಯೂರ' ಹಾಸ್ಯ - ಭಾಗ ೮೯
ಆಧಾರ್
ಅಕ್ಕ ಹೇಳಿದ ಘಟನೆ. ಶಿಕ್ಷಕಿಯಾದ ಅಕ್ಕ, ಒಮ್ಮೆ ಯಾವುದೋ ದಾಖಲೆ ಕೆಲಸಕ್ಕೆ ತರಗತಿಯ ವಿದ್ಯಾರ್ಥಿಗಳಿಗೆ, ‘ನಾಳೆ ಎಲ್ಲರೂ ಬ್ಯಾಗಲ್ಲಿ ಆಧಾರ್ ಇಟ್ಕೊಂಡು ಬನ್ನಿ.’ ಎಂದು ಹೇಳಿದರಂತೆ. ಮರುದಿನ ಎಲ್ಲರೂ ತಂತಮ್ಮ ಆಧಾರ್ ಕಾರ್ಡ್ ಕೊಟ್ಟರಂತೆ. ಒಬ್ಬ ಹುಡುಗಿ ಮಾತ್ರ ಸಣ್ಣ ಚಿಟ್ಟಿಯಲ್ಲಿ ಊದಿನಕದ್ದಿಯ ಬೂದಿ ಕಟ್ಟಿಕೊಂಡು ಬಂದಿದ್ದಳಂತೆ. ‘ತಗೋರಿ ಟೀಚರ್, ಆದಾರ ಹಚ್ಚಿಕೋರಿ' ಅಂದಳಂತೆ. ಉತ್ತರ ಕರ್ನಾಟಕದ ಕಡೆಗೆ ದೇವರ ಹತ್ತಿರ ಹಚ್ಚಿದ ಊದಿನಕಡ್ಡಿ ಬೂದಿಗೆ ಆದಾರ ಎನ್ನುತ್ತಾರೆ. ಹುಡುಗಿ ಅದನ್ನೇ ತಂದು ಟೀಚರ್ ಮುಂದೆ ಹಿಡಿದಾಗ ಅವರು ನಕ್ಕು, ಆ ಹುಡುಗಿಯ ಸಮಾಧಾನಕ್ಕೆ ಅದನ್ನು ಹಚ್ಚಿಕೊಂಡು, ‘ನಾಳೆ ಬರುವಾಗ ಆಧಾರ್ ಕಾರ್ಡ್ ತಗೊಂಡು ಬಾ...' ಎಂದು ಕಾರ್ಡ್ ತೋರಿಸಿ ಹೇಳಿದರಂತೆ.
-ನರಸಿಂಹಾರೆಡ್ಡಿ ಯಂಕಾಮೋಳ
***
ಹನುಮಾನ್... ಕಿ... ರಾಣಿ
ಪಕ್ಕದ ಮನೆಯ ಚಿಂಟುಗೆ ಕರೆದು, ಹನುಮಾನ್ ಕಿರಾಣಿ ಅಂಗಡಿಯಿಂದ ಶುಂಠಿ, ಲವಂಗ ತರಲು ಹೇಳಿದೆ. ಎರಡೇ ನಿಮಿಷದಲ್ಲಿ ಮನೆಯಿಂದ ಅಂಗಡಿ ಸಿಗುತ್ತದೆ. ಆದರೆ, ಇವನು ಹೋಗಿ ೨೦ ನಿಮಿಷ ಆದರೂ ಪತ್ತೆ ಇಲ್ಲಾ. ನನಗೆ ಸ್ವಲ್ಪ ಗಾಬರಿಯಾಗತೊಡಗಿತು. ಅಷ್ಟರಲ್ಲಿ ಅವನು ಎದುರುಸಿರು ಬಿಡುತ್ತಾ ಬಂದು, ‘ಆಂಟೀ, ರಸ್ತೆಯ ಆ ತುದಿಯಿಂದ ಈ ತುದಿಯ ತನಕ ಎರಡೆರಡು ಸಲ ನೋಡಿದೆ. ನೀವು ಹೇಳಿದ ಅಂಗಡಿ ಇರಲಿಲ್ಲ. ಆದರೆ ಹನುಮಾನ್ ಕಿ.. ರಾಣಿ ಅಂಗಡಿ ಇತ್ತು.’ ಎಂದ. ಅಚ್ಚರಿಯಾಯಿತು. ಕೊಂಚ ತಲೆ ಓಡಿಸಿದಾಗ ತಿಳಿಯಿತು. ಈಗ ತಾನೆ ಅಲ್ಪ ಸ್ವಲ್ಪ ಕನ್ನಡ ಓದಲು ಕಲಿತಿದ್ದ ಚಿಂಟುವಿನ ಬಾಯಿಯಲ್ಲಿ ‘ಹನುಮಾನ್ ಕಿರಾಣಿ ಅಂಗಡಿ' ‘ಹನುಮಾನ್ ಕಿ.. ರಾಣಿ... ‘ ಆಗಿತ್ತು.
-ಜಯಮಾಲಾ ಪೈ
***
ಅನಿವಾರ್ಯ
ನಮ್ಮ ಮನೆ ಪಕ್ಕದಲ್ಲಿ ಹೊಸ ಜೋಡಿ ಬಂದು ನೆಲೆಸಿತ್ತು. ಹೆಂಡತಿ ನಿತ್ಯವೂ ಗಂಡ ಮನೆಗೆ ಬಂದ ನಂತರವೇ ಊಟ ಮಾಡುತ್ತಾರೆ ಎನ್ನುವ ವಿಚಾರ ಬಹಳ ಬೇಗ ಸುತ್ತಮುತ್ತ ಹರಡಿತು. ಗಂಡ ಮನೆಗೆ ಬರಲು ಎಷ್ಟು ತಡವಾದರೂ ಅವಳು ಕಾಯುತ್ತಿದ್ದಳಂತೆ. ಒಮ್ಮೆ ಈ ಬೀದಿಯ ಕೆಲವು ಮಹಿಳಾ ಮಣಿಗಳು ಆಕೆಯ ಬಳಿ ‘ನೀವು ಎಷ್ಟು ಹೊತ್ತಾದರೂ ನಿಮ್ಮ ಯಜಮಾನರು ಬರುವವರೆಗೆ ಊಟ ಮಾಡೋಲ್ಲವಂತೆ... ಪ್ರತಿ ದಿನ ಕಾಯೋದು ಕಷ್ಟ ಅಲ್ವಾ? ಇಷ್ಟೊಂದು ಸಹನೆ ಹೇಗೆ ಬೆಳೆಸಿಕೊಂಡಿರಿ?’ ಎಂದು ಕೇಳಿದರು. ಆಕೆ ‘ಅವರು ಬರೋವರೆಗೂ ಕಾಯದೇ ಬೇರೆ ವಿಧಿ ಇಲ್ಲ. ನನಗದು ಅನಿವಾರ್ಯ. ಏಕೆಂದರೆ, ಅವರು ಮನೆಗೆ ಬಂದು ಅಡುಗೆ ಮಾಡಿಕೊಟ್ಟ ನಂತರವೇ ನಾನು ಊಟ ಮಾಡಬೇಕು.’ ಎಂದರಂತೆ. ಪ್ರಶ್ನೆ ಕೇಳಿದ ಮಹಿಳೆಯರು ಸುಸ್ತು !
-ಅರವಿಂದ ಜಿ.ಜೋಷಿ
***
ವಿಪರ್ಯಾಸ…
ನಮ್ಮ ಸಂಬಂಧಿ ದಂಪತಿಗೆ ಅನೇಕ ವರ್ಷಗಳಾದರೂ ಮಕ್ಕಳಾಗಿರಲಿಲ್ಲ. ಒಮ್ಮೆ ಅವರು ಖ್ಯಾತ ಸ್ತ್ರೀ ರೋಗ ತಜ್ಞರ ಬಳಿಗೆ ಹೋಗಿದ್ದರು. ಹೊರಗಡೆ ಎಷ್ಟು ಕಾಯ್ದರೂ ವೈದ್ಯರು ಬರದೇ ಹೋದಾಗ ಸಹಾಯಕಿಯ ಬಳಿಗೆ ಹೋಗಿ, ‘ಇನ್ನೂ ಎಷ್ಟು ಹೊತ್ತು ಡಾಕ್ಟರ್ ಬರಲು?’ ಎಂದು ಕೇಳಿದಾಗ ‘ನಮ್ಮ ಡಾಕ್ಟರ್ ಗೆ ಮದುವೆಯಾಗಿ ಹತ್ತು ವರ್ಷ ಆದ್ರೂ ಮಕ್ಕಳಾಗಿಲ್ಲವಲ್ಲ. ಒಂದು ದೇವಸ್ಥಾನ ಇದೆಯಂತೆ. ಅಲ್ಲಿ ವಿಶೇಷ ಸೇವೆ ಮಾಡಿಸಿದರೆ ಮಕ್ಕಳಾಗುತ್ತವೆ ಅಂತ ಯಾರೋ ಹೇಳಿದರು. ಆ ದೇವಸ್ಥಾನಕ್ಕೆ ಹೋಗಿದ್ದಾರೆ. ಇಷ್ಟೊತ್ತಿಗೆ ಬರಬೇಕಿತ್ತು. ಬಹುಷಃ ಬಹಳ ರಶ್ ಇರಬೇಕು ಅಲ್ಲಿ..' ಎಂದ ಸಹಾಯಕಿಯ ಮಾತು ಕೇಳಿ ಇವರು ಎದ್ದು ಬಂದರು.
-ವಾಣಿಶ್ರೀ ಕೊಂಚಾಡಿ
(‘ಮಯೂರ' ಎಪ್ರಿಲ್ ೨೦೦೩ರ ಸಂಚಿಕೆಯಿಂದ ಆಯ್ದ ಬರಹ'