‘ಮೂಕ’ ಹೆಬ್ಬಾವಿನ ಸಾವಿಗೆ ನಾವು ‘ಧ್ವನಿ’ ಎತ್ತೋಣವೇ?

‘ಮೂಕ’ ಹೆಬ್ಬಾವಿನ ಸಾವಿಗೆ ನಾವು ‘ಧ್ವನಿ’ ಎತ್ತೋಣವೇ?

ಬರಹ

ಹಳಿಯಾಳದಿಂದ ದಾಂಡೇಲಿ ಮಾರ್ಗವಾಗಿ ೧೫ ಕಿ.ಮೀ ದೂರದಲ್ಲಿ ಸಾವು ಬದುಕಿನ ಮಧ್ಯೆ ಹೋರಾಡುತ್ತ ಕೈಗೆ ಸಿಕ್ಕ ಹೆಬ್ಬಾವು.

‘ಹುಲಿಯ ಪ್ರಮುಖ ಸಾಮ್ರಾಜ್ಯ ಎನಿಸಿರುವ ಬಂಡೀಪುರ ಅಭಯಾರಣ್ಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಚಲಿಸಿ ಅಪಘಾತಕ್ಕೆ ಕಾರಣವಾಗುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಲು ೧೦೦ ಮೀಟರಗೆ ಒಂದರಂತೆ ರಸ್ತೆ ತಡೆ ಉಬ್ಬುಗಳನ್ನು ನಿರ್ಮಿಸಲು ಅರಣ್ಯ ಇಲಾಖೆ ‘ಚಿಂತನೆ’ ನಡೆಸಿದೆ’ - ಹೀಗೊಂದು ಸುದ್ದಿಯನ್ನು ರಾಜ್ಯದ ಪ್ರಮುಖ ಪತ್ರಿಕೆಯೊಂದು ತನ್ನ ಮುಖಪುಟದಲ್ಲಿ ನಿನ್ನೆ (ಏಪ್ರಿಲ್ ೩) ವರದಿ ಮಾಡಿತ್ತು. 

ಈ ಪರಿಯ ಚಿಂತನೆಯಿಂದ ವನ್ಯಜೀವಿಗಳಿಗೆ ಲಾಭವೋ? ಅಥವಾ ನಮಗೆ ‘ಅನುಕೂಲಸಿಂಧು’ವಾಗಿ ವರ್ತಿಸಲು ಅಘೋಷಿತ ಲೈಸೆನ್ಸೋ? ಎಂಬುದು ತಿಳಿಯಲಿಲ್ಲ. ಹಾಗೆ ಓದು ಮುಂದುವರೆಸಿದೆ...‘ರಾತ್ರಿಯ ಹೊತ್ತು ಅತಿ ವೇಗವಾಗಿ ಸಂಚರಿಸುವ ವಾಹನಗಳಿಂದ ವನ್ಯಜೀವಿಗಳು ಅಪಾಯಕ್ಕೆ ಸಿಲುಕಿಸುವ ಸಾಧ್ಯತೆ ಹೆಚ್ಚಿತ್ತು. ಅದಕ್ಕಾಗಿಯೇ ಈ ಹಿಂದೆ ರಾತ್ರಿ ಸಂಚಾರ ನಿಷೇಧಿಸಲಾಗಿತ್ತು. ಈಗ ಬೆಳಗಿನ ಜಾವದಲ್ಲಿಯೇ ಅಪಘಾತಕ್ಕೆ ಸಿಲುಕಿ ೨ ಜಿಂಕೆಗಳು ಮೃತಪಟ್ಟ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ’ - ಇದು ಸುದ್ದಿಯ ಮುಂದುವರೆದ ಭಾಗ.

ಸ್ಯಾಂಪಲ್ ಒಂದು: ಬಂಡೀಪುರ ಅರಣ್ಯದ ಪ್ರವೇಶದ್ವಾರ ಮೇಲುಕಾಮನಹಳ್ಳಿ ಬಳಿ ೨೦೧೦ ಜನೇವರಿ ೨೬ ರಂದು ಬಂಡೀಪುರದಿಂದ ಬಂದ ಪ್ರಭಾವಿ ವ್ಯಕ್ತಿಯೋರ್ವರಿಗೆ ಸೇರಿದ ಬಿಳಿ ಬಣ್ಣದ ಇನ್ನೋವಾ ಕಾರು ಡಿಕ್ಕಿ ಹೊಡೆದ ಪರಿಣಾಮವಾಗಿ ಜಿಂಕೆಯೊಂದು ಸ್ಥಳದಲ್ಲಿಯೇ ಮೃತಪಟ್ಟಿತು. ಕಾರು ಪ್ರಭಾವಿ ವ್ಯಕ್ತಿಯೋರ್ವರಿಗೆ ಸೇರಿದ್ದರಿಂದ ಈಗಾಗಲೇ ಕಾರನ್ನು ಗುಂಡ್ಲುಪೇಟೆಯ ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಹೋಗಲಾಗಿದೆ.

ಸ್ಯಾಂಪಲ್ ಎರಡು: ೨೦೧೦ ಎಪ್ರಿಲ್ ೧ ರಂದು ಸಹ ಬಂಡೀಪುರದ ಮೇಲುಕಾನಹಳ್ಳಿ ಗೇಟ್ ಬಳಿಯಲ್ಲಿಯೇ ಬಂಡೀಪುರ ಕಡೆಯಿಂದ ಬಂದ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಜಿಂಕೆಯೊಂದು ಸ್ಥಳದಲ್ಲಿಯೇ ಮೃತಪಟ್ಟಿತು. ಈ ಎರಡೂ ಘಟನೆಗಳು ನಡೆದಿದ್ದು ಹಗಲು ಹೊತ್ತಿನಲ್ಲಿ!

ಬಂಡೀಪುರ ಅರಣ್ಯದ ಮೂಲಕ ಹಾದು ಹೋಗುವ ಬೆಂಗಳೂರು-ಊಟಿ ರಾಷ್ಟ್ರೀಯ ಹೆದ್ದಾರಿ ೬೭ರಲ್ಲಿ ರಾತ್ರಿ ಸಂಚಾರ ನಿಷೇಧವಾದ ಮೇಲೆ ಬೆಳಗಿನ ಜಾವ ಮತ್ತು ಸಾಯಂಕಾಲದ ವೇಳೆಯಲ್ಲಿ ವಾಹನ ಸಂಚಾರ ದಟ್ಟಣೆಯಿಂದ ಕೂಡಿದ್ದು, ನಿಗದಿತ ಅವಧಿಯೊಳಗೆ ಬಂಡೀಪುರ ಅರಣ್ಯ ದಾಟುವ ಸಲುವಾಗಿ ವಾಹನಗಳು ಅತಿ ವೇಗವಾಗಿ ಚಲಿಸುವುದರಿಂದ ರಾತ್ರಿ ಸಂಚಾರ ನಿಷೇಧವಾದ ನಂತರ ಇದೀಗ ಎರಡು ತಿಂಗಳ ಅವಧಿಯಲ್ಲಿ ೨ ಜಿಂಕೆಗಳು ಸಾವನ್ನಪ್ಪಿರುವುದು ಸಾಕ್ಷಿ. ರಾತ್ರಿ ೯ ರಿಂದ ಬೆಳಿಗ್ಗೆ ೬ರ ವರೆಗೆ ರಾತ್ರಿ ಸಂಚಾರ ನಿಷೇಧವಿರುವುದರಿಂದ ಬೆಳಗಿನ ಜಾವ ೬ ರಿಂದ ೭ ಮತ್ತು ಸಂಜೆ ೬ ರಿಂದ ೯ ರ ವರೆಗೆ ವಾಹನಗಳು ಅರಣ್ಯವನ್ನು ದಾಟುವ ಭರದಲ್ಲಿ ಅತಿ ವೇಗವಾಗಿ ಚಲಿಸುತ್ತಿವೆ ಎಂಬುದು ಅರಣ್ಯ ಇಲಾಖೆಯ ದಾಖಲೆ. ವನ್ಯ ಜೀವಿಗಳ ಈ ಪರಿ ಅಮಾನವೀಯ ಸಾವು ನ್ಯಾಯವೇ? ಪ್ರಜ್ಞಾವಂತರು ಚಿಂತಿಸಬೇಕು.

ಇನ್ನು ಲೆಕ್ಕಕ್ಕೆ ಸಿಗದ ಪ್ರಾಣಿಗಳ ಮಾರಣಹೋಮದ ಲೆಕ್ಕ ಇಟ್ಟವರಾರು? ಆ ಲೆಕ್ಕ ಕೇಳುವವರಾರು? ‘ಪಟ್ಟಣವನ್ನೇ ಕೂಡಿಸುವ ರಸ್ತೆಗಳು ನಮ್ಮ ಹಳ್ಳಿಗಳ ತನಕ ಬಂದು, ಹಳ್ಳಿಗಳೇ ಹಾಳಾದ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣುಗಳ ಮುಂದಿಲ್ಲವೇ?’ ಇನ್ನು ನಾಡಪ್ರಭುಗಳು ಕಾಡಿನ ಹಾದಿ ತುಳಿದರೆ ಹುಲ್ಲಾದರೂ ಅಲ್ಲಿ ಬೆಳಿದೀತೇ? ಹುಲ್ಲೆಯಾದರೂ ಉಳಿದಾವೇ?

ಸ್ಯಾಂಪಲ್ ಮೂರು: ೨೦೧೦ ಮಾರ್ಚ್ ೨೪ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಿಂದ ದಾಂಡೇಲಿಗೆ ಹೋಗುವ ಮಾರ್ಗದಲ್ಲಿ ಸುಮಾರು ೧೫ ಕಿ.ಮೀ ದೂರದಲ್ಲಿ ಮುಸ್ಸಂಜೆಯ ಹೊತ್ತಿನಲ್ಲಿ (೬.೪೫ ರ ಸುಮಾರು) ಸರಕು ಸಾಗಣೆ ಲಾರಿಯೊಂದರ ಚಕ್ರಕ್ಕೆ ಸಿಲುಕಿ, ಸುಮಾರು ೩ ತಾಸು ಕಾರಿನ ಹಿಂಬದಿಯ ಸೀಟಿನಲ್ಲಿ ಜೀವನ್ಮರಣದ ಹೋರಾಟ ನಡೆಸಿ, ಮಾರ್ಗ ಮಧ್ಯೆ ಅಸುನೀಗಿದ ಹೆಬ್ಬಾವು `python' ಕಥೆ-ವ್ಯಥೆ ಕೇಳಿ. ಆ ಮೂಕ ಪ್ರಾಣಿ ಪಟ್ಟ ವೇದನೆಯ ಒಂದು ಮನಕಲಕುವ ಚಿತ್ರ ಮೇಲಿದೆ ನೋಡಿ. ಕ್ಲಿಕ್ಕಿಸಿದ್ದು ಪರಿಸರಪ್ರೇಮಿ ‘ಮಿಂಚು’ - ಚೈತನ್ಯ ಷರೀಫ್ ಕುಲಕರ್ಣಿ.  

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪಶು ವೈದ್ಯಕೀಯ ವಿಭಾಗದಲ್ಲಿ ಸಾವಿನ ಕಾರಣ ತಿಳಿಯಲು ಹೆಬ್ಬಾವಿನ ಶವ ಪರೀಕ್ಷೆ ನಡೆಸಿದಾಗ ಕಂಡುಬಂದ ದೃಷ್ಯ.

ಧಾರವಾಡ ಜಿಲ್ಲೆಯ ವೈಲ್ಡ್ ಲೈಫ್ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ ಹಾಗೂ ವೃತ್ತಿಯಿಂದ ದಂತ ವೈದ್ಯರಾಗಿರುವ ಡಾ. ಮಹಾಂತೇಶ ಸರದೇಸಾಯಿ ಉತ್ತರ ಕನ್ನಡ ಜಿಲ್ಲೆಯ ಕೆಲ ಪ್ರವಾಸಿ ತಾಣಗಳಿಗೆ ಕಳೆದ ವಾರ ಭೇಟಿ ನೀಡಿ ಹಿಂದಿರುಗುವಾಗ ಈ ದೃಷ್ಯ ಕಣ್ಣಿಗೆ ಬಿತ್ತು. ಸಂಜೆ ೭ ಗಂಟೆಯ ಸುಮಾರಿನ ಮಬ್ಬುಗತ್ತಲಿನಲ್ಲಿ ಸರಕು ಸಾಗಿಸುವ ಲಾರಿಯವನೊಬ್ಬ ಅತಿ ವೇಗದ ಕಾರಣ ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗದೇ ಹೆಬ್ಬಾವಿನ ಮೇಲೆ ಹಾಯಿಸಿಕೊಂಡು ಪರಾರಿಯಾಗಿದ್ದ. ಅರಣ್ಯದ ಹಾದಿಯಲ್ಲಿ ಅತ್ಯಂತ ಜಾಗರೂಕವಾಗಿ ಚಲಿಸುತ್ತಿದ್ದ ಈ ಇಬ್ಬರು ಪರಿಸರ ಪ್ರಿಯರಿಗೆ ಹೆಬ್ಬಾವು ರಸ್ತೆಯ ಮಧ್ಯೆ ಸುರುಳಿ ಸುತ್ತಿಕೊಂಡು ಮೇಲ್ನೋಟಕ್ಕೆ ಕಾಣದ, ಆದರೆ ಒಳಭಾಗದಲ್ಲಿ ತೀವ್ರ ರಕ್ತಸ್ರಾವಕ್ಕೆ ಕಾರಣವಾದ ತನ್ನ ದೇಹದ ಭಾಗವನ್ನೇ ಕಡಿದು, ಕಿತ್ತೆಸೆಯಲು ಹವಣಿಸುತ್ತ, ಒದ್ದಾಡುತ್ತ ಬಿದ್ದ ಹೆಬ್ಬಾವು ಕಾಣಿಸಿತು. ತಡ ಮಾಡದೇ ಇನ್ನೋರ್ವ ಲಾರಿ ಡ್ರೈವರ್ ಸಹಾಯದಿಂದ ಸುಮಾರು ೨೫ ಕಿಲೋ ತೂಕದ ಹೆಬ್ಬಾವನ್ನು ಎತ್ತಿ ಕಾರಿನ ಹಿಂದಿನ ಸೀಟಿಗೆ ಒರಗಿಸಿದ್ದಾಯಿತು. ೯ ಅಡಿ ಉದ್ದದ ಬೃಹತ್ ಹೆಬ್ಬಾವು ಬದುಕಲಿ ಎಂದು ಹಾರೈಸುತ್ತ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಪಶು ಚಿಕಿತ್ಸಾಲಯದ ವೈದ್ಯರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿ ಶಸ್ತ್ರ ಚಿಕಿತ್ಸೆಗೆ ಸಜ್ಜಾಗಿರಲು ತಿಳಿಸಿದರು. ಆದರೆ, ವಿಧಿ ಲಿಖಿತ ಬೇರೆಯೇ ಇತ್ತು. ಧಾರವಾಡ ೧೫ ಕಿ.ಮೀ ದೂರವಿದ್ದಗಲೇ ನಿಗದಿಯ ಹತ್ತಿರ ನಿಟ್ಟುಸಿರು ಬಿಟ್ಟ ಹೆಬ್ಬಾವು ಅಸುನೀಗಿತು.  

ವೈಲ್ಡ್ ಲೈಫ್ ವಾರ್ಡನ್ ಪ್ರೊ. ಗಂಗಾಧರ ಕಲ್ಲೂರ್ ಜೋಪಾನವಾಗಿ ಹೆಬ್ಬಾವನ್ನು ಬದುಕಿಸುವ ಆಸೆಯಿಂದ ತಂದಾಗ.

ಉಪಾಯ ಗಾಣದೇ ಪ್ರೊ. ಕಲ್ಲೂರ ಹಾಗೂ ಡಾ. ಸರದೇಸಾಯಿ ಭಾರವಾದ ಮನಸ್ಸಿನಿಂದ ಹೊತ್ತು ತಂದು ಪಶು ಚಿಕಿತ್ಸಾಲಯದ ಕಲ್ಲಿನ ಮೇಲೆ ಎತ್ತಿ ಹಾಕಿದರು. ಅಲ್ಲಿನ ಪಶು ವೈದ್ಯಾಧಿಕಾರಿ ಅತ್ಯಂತ ಜಾಗರೂಕತೆಯಿಂದ ಪರಿಶೀಲಿಸಿ ನೋಡಿ, ಶವ ಪರೀಕ್ಷೆಗೆ ಅಣಿಯಾದರು. ನಾಲ್ಕಾರು ಜನ ಸಹಾಯ ಮಾಡುತ್ತಿದ್ದಂತೆ ತಲೆ ಹೊರತು ಪಡಿಸಿ ಉಳಿದ ಇಡೀ ದೇಹವನ್ನು ಅರ್ಧ ಸೀಳಲಾಯಿತು. ಹೆಬ್ಬಾವಿನ ಹೃದಯದ ಬಳಿ ಸುಮಾರು ಒಂದು ಮೊಳದಷ್ಟು ಆಂತರಿಕ ಗಾಯವಾಗಿ, ಹೃದಯಕೂಡ ಅಪ್ಪಚ್ಚಿಯಾಗಿ ಹೋಗಿತ್ತು. ಆಂತರಿಕ ರಕ್ತಸ್ರಾವದಿಂದ ಬದುಕಿಕೊಳಲಾಗದೇ ಅದು ಸತ್ತಿತ್ತು ಎಂದು ವೈದ್ಯರು ಘೋಷಿಸಿದರು. ಸದ್ಯ `Taxidermist' ಓರ್ವರ ಸಹಕಾರದಿಂದ ಹೆಬ್ಬಾವಿನ ದೇಹದೊಳಗೆ ಹುಲ್ಲು ತುಂಬಿ, ಬಾಟಲಿಯಲ್ಲಿ ಸಂಸ್ಕರಣೆಗಾಗಿ ತೆಗೆದಿರಿಸಲಾಗಿದೆ. ಡಾ. ಮಹಾಂತೇಶ ಸರದೇಸಾಯಿ ಅವರು ತಮ್ಮ ಈ ಅನುಭವ ನನಗೆ ಹೇಳುವಾಗ ಅವರ ಕಳಕಳಿ, ಹತಾಶೆ, ಸಿಟ್ಟು ಎಲ್ಲ ಗದ್ಗದಿತ ಕಂಠದಲ್ಲಿ ವ್ಯಕ್ತವಾಗುತ್ತಿತ್ತು.

ಚಲನಾಂಗಗಳಿಲ್ಲದೇ ಹೊಟ್ಟೆಯ ಮೂಲಕ ತೆವಳುವ ಉರಗಗಳು ಪರಿಸರದ ವಿಶೇಷ ಆಕರ್ಷಣೆ. ಹೆಬ್ಬಾವಿಗೆ ಮಾತ್ರ ಗುದದ್ವಾರದ ಪಕದಲ್ಲಿಯೇ ಕಾಲುಗಳ ಅವಶೇಷಗಳಿರುತ್ತವೆ. ಈ ಕಾಲುಗಳು ಉಗುರಿನ ರೂಪದಲ್ಲಿರುತ್ತವೆ. ಈ ಅವಶೇಷಗಳ ಆಧಾರದಿಂದಲೇ ಹಾವುಗಳು ಹಲ್ಲಿಗಳಂತಹ ಪ್ರಾಣಿಗಳಿಂದ ಕಾಲಾನುಕ್ರಮದಲ್ಲಿ ವಿಕಾಸಹೊಂದಿ ಉದ್ಭವಿಸಿರಬಹುದು ಎಂಬ ಸಿದ್ಧಾಂತವನ್ನು ಲೆಮಾರ್ಕ್ ಎಂಬ ವಿಜ್ಞಾನಿ ವರ್ಣಿಸಿದ್ದಾನೆ. ಹೆಬ್ಬಾವಿಗೆ ಸಾಮಾನ್ಯವಾಗಿ ಉಣ್ಣೆಗಳು ಅಂಟಿಕೊಂಡಿರುವುದು `Ticks' ಸಾಮಾನ್ಯ. ಕಾಲುಗಳಿದ್ದರೂ ಚಲನೆಯಲ್ಲಿ ಅವುಗಳ ಪಾತ್ರವಿಲ್ಲ. ಹಾಗಾಗಿ ಟಾರ್ ರಸ್ತೆಯ ಮೇಲೆ ವೇಗವಾಗಿ ಚಲಿಸಲಾಗದೇ ಇವು ಮೋಟಾರು ವಾಹನಗಳ ಅಡಿಗೆ ಸಿಲುಕಿ ಸಾಯುವುದು. ಹಾಗಂತ ಪ್ರಸಂಗಾವಧಾನವಿಲ್ಲದ ಚಾಲಕರನ್ನು ಮನ್ನಿಸಬೇಕು ಎಂದು ಅರ್ಥವಲ್ಲ.

ಹೆಬ್ಬಾವಿಗೆ ಪಕ್ಕೆಲುಬುಗಳು Ribs' (-ಈ ಹೆಬ್ಬಾವಿಗೆ ಆಳವಾದ ಗಾಯವಾದ ಕಾರಣ ಹತ್ತಾರು ಪಕ್ಕೆಲುಬುಗಳು ಮುರಿದು ಹೋಗಿದ್ದವು.) ಉದರ ಫಲಕಗಳು `Belly Plates' ಮತ್ತು ಪಕ್ಕೆಲುಬುಗಳಿಗೆ ಹೊಂದಿದ ಮಾಂಸಖಂಡಗಳು ಚಲನೆಗೆ ನೆರವಾಗುತ್ತವೆ. ದೇಹದ ಮೇಲೆಲ್ಲಾ ಹುರುಪೆ ‘Scale' ಗಳಿಂದಾದ ಪೊರೆ ಇರುವುದು. ಈ ಹುರುಪೆಗಳು ಅಳತೆಯಲ್ಲಿ ದೊಡ್ಡ ಪ್ರಮಾಣದಲ್ಲಿದ್ದರೆ ಅವುಗಳಿಗೆ ಫಲಕ ‘Shields' ಎನ್ನುತ್ತಾರೆ. ಎರಡು ಮೂಗಿನ ಹೊರಳೆಗಳು ‘Nostrils' ಮತ್ತು ಪಾರದರ್ಶಕವಾದ ರೆಪ್ಪೆಗಳಿಂದ ಆವರಿಸಲ್ಪಟ್ಟ ಎರಡು ಕಣ್ಣುಗಳು ಯಾವಾಗಲೂ ತೆರೆದುಕೊಂಡೇ ಇರುತ್ತವೆ. ಹೊರಕಿವಿಗಳು ಮತ್ತು ತಮಟೆಗಳು ಇರುವುದಿಲ್ಲ. ಕಣ್ಣಿನ ಹಿಂದುಗಡೆ ಒಳಕಿವಿಗಳಿರುತ್ತವೆ. ಸೀಳಿದ ನಾಲಿಗೆ ಈ ಜಾತಿಯ ಹಾವಿನ ವಿಶೇಷ ಲಕ್ಷಣ.

ಹೆಬ್ಬಾವುಗಳು ಬಾಯಿ ಮುಚ್ಚಿಕೊಂಡೇ ನಾಲಿಗೆಯನ್ನು ಮೇಲಿಂದ ಮೇಲೆ ಹೊರ ಚಾಚುತ್ತವೆ. ನಾಲಿಗೆ ಇವುಗಳಿಗೆ ರುಚಿಯನ್ನು ಗ್ರಹಿಸುವ ಅಂಗವಲ್ಲ! ಒಂದು ಬಗೆಯ ಜ್ಞಾನಾಂಗ. ನಾಲಿಗೆಯ ಸಹಾಯದಿಂದ ತಮ್ಮ ಸುತ್ತಮುತ್ತಲಿನ ವಸ್ತುಸ್ಥಿತಿಯನ್ನು ಅರಿತುಕೊಳ್ಳುತ್ತವೆ. ಇವುಗಳ ಚರ್ಮ ಅತ್ಯಂತ ಸೂಕ್ಷ್ಮ ಗ್ರಾಹಿಯಾಗಿದ್ದು, ಭೂಮಿಯ ಮೇಲಿನ ಅತಿಸೂಕ್ಷ್ಮ ಕಂಪನಗಳನ್ನು ಗುರುತಿಸಬಲ್ಲುವು. ಶಬ್ದ ತರಂಗಗಳು ಭೂಮಿಯನ್ನು ಅನುಸರಿಸಿ ತ್ವಚೆಯ ಮುಖಾಂತರ ಒಳಕಿವಿಯನ್ನು ಸೇರುವುದರಿಂದ ಮಾತ್ರ ಹಾವುಗಳಿಗೆ ಶಬ್ದದ ಅರಿವಾಗುತ್ತದೆ. ಆದರೆ ಟಾರ್ ರಸ್ತೆ ಚಲಿಸದಂತೆ ಅವುಗಳ ಹುರುಪೆಗಳಿಗೆ ಅಂಟಿಕೊಳ್ಳುವುದರಿಂದ ತೆವಳಿ, ತೆವಳಿ ಅಡ್ಡವಾಗಿ ಒರಗುತ್ತ ಪ್ರಯಾಸಪಟ್ಟು ಸಾಗುವಾಗ ಮೋಟಾರ ವಾಹನಗಳ ಚಕ್ರಕ್ಕೆ ಸಿಲುಕಿ ಅಸುನೀಗುತ್ತವೆ.

ಅಂತಿಮವಾಗಿ ತನ್ನ ನಿರ್ಲಿಪ್ತ ಮುಖ ತೋರಿದ ಹೆಬ್ಬಾವು.