‘ಮೈಸೂರು ಮಲ್ಲಿಗೆ’ ಹುಟ್ಟಿದ ಕಥೆ
‘ಮಲ್ಲಿಗೆ ಕವಿ’ ಎಂದೇ ಖ್ಯಾತರಾಗಿದ್ದ ಕೆ.ಎಸ್. ನರಸಿಂಹಸ್ವಾಮಿ ಅವರಿಗೆ ಬಹಳ ಹೆಸರು ಕೊಟ್ಟ ಕೃತಿ ‘ಮೈಸೂರು ಮಲ್ಲಿಗೆ' ಈ ಕೃತಿಯ ಹುಟ್ಟಿಗೆ ಕಾರಣವಾದ ವಿವರಗಳನ್ನು ಖುದ್ದಾಗಿ ನರಸಿಂಹಸ್ವಾಮಿಯವರೇ ತಮ್ಮ ಮಾತುಗಳಲ್ಲಿ ವಿವರಿಸಿದ್ದಾರೆ. ಬನ್ನಿ, ಓದೋಣ…
ನನ್ನ ಮದುವೆ ನಡೆದದ್ದು ೧೯೩೬ರಲ್ಲಿ, ಅದರ ಪೂರ್ವಾರ್ಧದಲ್ಲಿ ‘ಮೈಸೂರು ಮಲ್ಲಿಗೆ' ಬಿಡುಗಡೆಯಾದದ್ದು ೧೯೪೨ರ ಜನವರಿ ತಿಂಗಳಲ್ಲಿ. ಈ ನಡುವಣ ೬ ವರ್ಷಗಳಲ್ಲಿ ನಾನು ಸುಮಾರು ೬೦ ಪದ್ಯಗಳನ್ನು ಬರೆದಿದ್ದೆ. ಈ ಪದ್ಯಗಳನ್ನು ಬರೆದದ್ದು ನಾನು ಮಾವನ ಮನೆಯಲ್ಲಿದ್ದಾಗ ಮತ್ತು ಮೈಸೂರು ಪೌರಸಭಾ ಕಚೇರಿಯಲ್ಲಿ ೨೫ರೂ. ಸಂಬಳದ ಗುಮಾಸ್ತೆಯಾಗಿದ್ದಾಗ. ಇವುಗಳನ್ನು ಪ್ರೇಮಗೀತೆ ಅನ್ನುವುದಕ್ಕಿಂತ ದಾಂಪತ್ಯಗೀತೆ ಅನ್ನುವುದು ಹೆಚ್ಚು ಸೂಕ್ತ. ಪದ್ಯಗಳನ್ನು ಬರೆಯುವುದು, ಬರೆದ ಪದ್ಯಗಳನ್ನು ತೀನಂಶ್ರೀಯವರಿಗೆ ಕಳಿಸುವುದು, ಅವರು ಒಪ್ಪಿದ ಪದ್ಯಗಳನ್ನು ‘ಪ್ರಬುದ್ಧ ಕರ್ನಾಟಕ’ಕ್ಕೆ ಕಳಿಸುವುದು ಇದು ನನ್ನ ರೂಢಿಯಾಗಿತ್ತು. ವೆಂಕಣ್ಣನವರು ಆ ಪದ್ಯಗಳನ್ನು ಆ ಪತ್ರಿಕೆಯಲ್ಲಿ ಸೇರಿಸುತ್ತಿದ್ದರು. ಪ್ರಬುದ್ಧ ಕರ್ನಾಟಕದಲ್ಲಿ ಪದ್ಯ ಅಚ್ಚಾಯಿತೆಂದರೆ ನನಗೆ ಹಿಡಿಸಲಾರದ ಹಿಗ್ಗು.
ಒಂದು ದಿನ ತೀನಂಶ್ರೀ ನನ್ನನ್ನು ಬರಮಾಡಿಕೊಂಡು, ಮಹಾರಾಜ ಕಾಲೇಜಿನ ಕರ್ನಾಟಕ ಸಂಘ ನನ್ನ ಪದ್ಯಗಳನ್ನು ಪುಸ್ತಕ ರೂಪದಲ್ಲಿ ತರಲು ನಿರ್ಣಯಿಸಿದೆ ಎಂದೂ, ನನಗೆ ಒಂದು ನೂರು ರುಪಾಯಿ ಸಂಭಾವನೆ ಕೊಡಲಿದೆ ಎಂದೂ ತಿಳಿಸಿದರು. ನಾನು ಅದರ ಅಧ್ಯಕ್ಷರಾದ ಎ ಆರ್.ಕೃಷ್ಣಶಾಸ್ತ್ರಿಗಳನ್ನು ಕಂಡು, ಅವರಿಗೆ ನನ್ನ ಕವನಗಳನ್ನು ಒಪ್ಪಿಸಿದೆ. ಅವರು ‘ನಾನು ನೋಡಿ ತೀನಂಶ್ರೀಗೆ ಕಳಿಸುತ್ತೇನೆ ; ನೀವಿಬ್ಬರೂ ಕುಳಿತು ಪದ್ಯಗಳನ್ನು ಆಯ್ಕೆ ಮಾಡಿ ಹಸ್ತಪ್ರತಿಯನ್ನು ತಯಾರಿಸಿ ಕಳಿಸಿಕೊಡಿ' ಎಂದರು. ಎ.ಆರ್.ಕೃ. ಈ ಕವನ ಸಂಗ್ರಹದಲ್ಲಿ ಸೇರಿಸಬೇಕಾದ ಚಿತ್ರಗಳನ್ನು ಬರೆಸಿದರು ; ಮತ್ತು ನನ್ನ ಸಂಭಾವನೆಯ ಹಣವನ್ನೂ ನನಗೆ ಕೊಟ್ಟರು. ನಾನು ತೀನಂಶ್ರೀ ಒಂದು ವಾರ ಒಟ್ಟಿಗೆ ಕುಳಿತು ೫೦ ಪದ್ಯಗಳನ್ನು ಆಯ್ಕೆ ಮಾಡಿದೆವು. ತಿರಸ್ಕೃತ ಪದ್ಯಗಳನ್ನು ಒಂದು ಕಡೆ ಇಟ್ಟೆವು. ನಾನು ಅದಕ್ಕಾಗಿ ವ್ಯಥೆ ಪಡಲಿಲ್ಲ. ತೀನಂಶ್ರೀ ಅವರ ಆಯ್ಕೆ ನನ್ನನ್ನು ಬೆರಗುಗೊಳಿಸಿತು. ಅದೇ ಸಮಯದಲ್ಲಿ ಮಾಸ್ತಿಯವರೂ ನನ್ನ ಕವನ ಸಂಗ್ರಹವನ್ನು ಪ್ರಕಟಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಕೃಷ್ಣಶಾಸ್ತ್ರಿಗಳ ಸಲಹೆಯಂತೆ ಪುಸ್ತಕಕ್ಕೆ ಮುನ್ನುಡಿ ತರಲು ನಾನು ಬೆಂಗಳೂರಿಗೆ ಹೋಗಿ ಡಿವಿಜಿಯವರನ್ನು ಕಂಡೆ. ಅವರು ಮುನ್ನುಡಿಗೆ ಬದಲಾಗಿ ಒಂದು ಪತ್ರವನ್ನು ನನಗೆ ಕೊಟ್ಟರು. ಅದೇ ದಿನ ಸಂಜೆ ನಾನು ಮಾಸ್ತಿಯವರನ್ನು ಕಂಡು ಅವರ ಔದಾರ್ಯವನ್ನು ಪ್ರಶಂಸಿಸಿದೆ; ನನ್ನ ಕವನ ಸಂಗ್ರಹವನ್ನು ಮಹಾರಾಜ ಕಾಲೇಜ್ ಕರ್ನಾಟಕ ಸಂಘ ಪ್ರಕಟಿಸುತ್ತಿದೆ ಎಂದು ತಿಳಿಸಿದೆ. ಅವರೂ ಶುಭಮಸ್ತು ಎಂದರು.
ಮೈಸೂರಿಗೆ ಹಿಂದಿರುಗಿ ತೀನಂಶ್ರೀಯವರನ್ನು ಕಂಡೆ. ಡಿವಿಜಿಯವರು ನನಗೆ ಕೊಟ್ಟ ಪತ್ರವನ್ನೇ ಮುನ್ನುಡಿಗೆ ಬದಲು ಹಾಕಿ ಬಿಡೋಣ ಎಂದು ಎ.ಆರ್.ಕೃ. ಅವರೂ ತೀನಂಶ್ರೀ ಅವರು ನಿರ್ಧರಿಸಿದರು. ಅದನ್ನು ವೆಸ್ಲಿ ಪ್ರೆಸ್ಸಿಗೆ ಮುದ್ರಣಕ್ಕಾಗಿ ಕಳಿಸುವ ಮುನ್ನ ಕವನ ಸಂಕಲನಕ್ಕೆ ಏನು ಹೆಸರಿಡೋಣ ಎಂದು ಆಲೋಚಿಸಿ ನಾನು ಮೈಸೂರು ಮಲ್ಲಿಗೆ ಇಡೋಣ ಎಂದೆ. ‘ಸರಿಯಾದ ಹೆಸರು' ಎಂದು ಗುರುಗಳಿಬ್ಬರೂ ಒಪ್ಪಿದರು.
೧೮೪೨ರ ಜನವರಿಯಲ್ಲಿ ಒಂದು ಸಂಜೆ ಮಹಾರಾಜ ಕಾಲೇಜಿನಲ್ಲಿ ನಡೆದ ಒಂದು ಸಂಭ್ರಮದ ಸಮಾರಂಭದಲ್ಲಿ ‘ಮೈಸೂರು ಮಲ್ಲಿಗೆ’ ಬಿಡುಗಡೆ ಆಯಿತು. ಹಿರಿಯರು ಅಕ್ಷತೆ ಹಾಕಿದರು. ‘ಮೈಸೂರು ಮಲ್ಲಿಗೆ' ಹುಟ್ಟಿದ್ದು ಹೀಗೆ.
(ಗಾಂಧಿ ಬಜಾರ್ ಪತ್ರಿಕೆಯ ಕೃಪೆಯಿಂದ)
ಚಿತ್ರ ಕೃಪೆ: ಅಂತರ್ಜಾಲ ತಾಣ