‘ವಡಾ ಪಾವ್’ ಹುಟ್ಟಿದ ಕಥೆ !


ನಾವೆಲ್ಲಾ ಸಣ್ಣವರಿದ್ದಾಗ ಮನೆ ಮನೆಗೆ ‘ಬೊಂಬಾಯಿ ಮಿಠಾಯಿ’ ಮಾರಿಕೊಂಡು ಬರುತ್ತಿದ್ದರು. ಈಗ ಶುಗರ್ ಕ್ಯಾಂಡಿ ಅಥವಾ ಕಾಟನ್ ಕ್ಯಾಂಡಿ ಎಂದು ಕರೆಯಲ್ಪಡುವ ಆ ಬೊಂಬಾಯಿ ಮಿಠಾಯಿ ಸಿಗುವುದು ಬಹಳ ಅಪರೂಪವಾಗಿದ್ದ ಕಾರಣ ನಮಗೆಲ್ಲಾ ಅದು ಬಹಳ ದೊಡ್ಡ ಸಿಹಿ ತಿಂಡಿಯಾಗಿತ್ತು. ಆಗೆಲ್ಲಾ ಅದು ಅಂಗಡಿಗಳಲ್ಲಿ ಸಿಗುತ್ತಿರಲಿಲ್ಲ. ಮನೆ ಮನೆಗೆ ಮಾರಿಕೊಂಡು ಬರುವವರೇ ಅದನ್ನು ತರಬೇಕು. ತಿಳಿ ಗುಲಾಬಿ ಬಣ್ಣದ ಹತ್ತಿಯಂತಹ ಸಣ್ಣ ತುಂಡನ್ನು ಪ್ಲಾಸ್ಟಿಕ್ ಕವರಿನ ಒಳಗೆ ಹಾಕಿ, ವಿಚಿತ್ರ ಶಬ್ಧ ಹೊರಡಿಸುವ ಗಂಟೆ ಬಾರಿಸಿಕೊಂಡು ಬರುತ್ತಿದ್ದ ಆ ವ್ಯಕ್ತಿಗಾಗಿ ನಾವೆಲ್ಲಾ ಕಾಯುತ್ತಾ ಇರುತ್ತಿದ್ದೆವು. ಕ್ರಮೇಣ ನಾವು ದೊಡ್ಡವರಾದೆವು. ಈಗ ಶುಗರ್ ಕ್ಯಾಂಡಿ ಎಲ್ಲೆಡೆ ಸಿಗುತ್ತದೆ. ಅದಕ್ಕೆ ಬಳಕೆಯಾಗುತ್ತಿದ್ದ ಬಣ್ಣ ರಾಸಾಯನಿಕ ಮಿಶ್ರಿತವಾದ ಕಾರಣ ಬಣ್ಣವನ್ನು ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಬಿಳಿ ಬಣ್ಣದ ಕಾಟನ್ ಕ್ಯಾಂಡಿಗಳು ಮಕ್ಕಳನ್ನು ಆಕರ್ಷಿಸುತ್ತಿಲ್ಲ.
ನಾವು ಸಣ್ಣವರಿದ್ದಾಗ ಈ ತಿಂಡಿ ಬೊಂಬಾಯಿ (ಈಗಿನ ಮುಂಬೈ) ಯಲ್ಲಿ ಮಾತ್ರ ಸಿಗುತ್ತಿತ್ತು. ಅದಕ್ಕೆ ಆ ಹೆಸರು ಬಂದಿತ್ತು. ಅದೇ ರೀತಿ ವಡಾ ಪಾವ್, ಫಲೂದಾ, ವಿವಿಧ ನಮೂನೆಯ ಚಾಟ್ ಗಳು, ಐಸ್ ಹಲ್ವಾ ಎನ್ನುವ ಸಿಹಿ ತಿಂಡಿ ಮುಂಬಯಿಯಲ್ಲಿ ಮಾತ್ರ ಸಿಗುತ್ತಿತ್ತು. ಅಪರೂಪಕ್ಕೊಮ್ಮೆ ನೆಂಟರ ಮನೆಗೆ ಮುಂಬಯಿಗೆ ಹೋದಾಗ ಅಲ್ಲಿ ಇವನ್ನೆಲ್ಲಾ ತಿಂದು ಸ್ವಲ್ಪ ಪಾರ್ಸೆಲ್ ತೆಗೆದುಕೊಂಡು ಮಂಗಳೂರಿಗೆ ಬರುತ್ತಿದ್ದೆವು. ಚಪ್ಪಟೆಯಾಗಿ ಪೇಪರ್ ಹಾಳೆಗಳಂತಹ ‘ಐಸ್ ಹಲ್ವಾ’ ನನ್ನ ಅಮ್ಮನ ಅಚ್ಚುಮೆಚ್ಚಿನ ತಿಂಡಿಯಾಗಿತ್ತು. ಈಗ ಎಲ್ಲವೂ ಮಂಗಳೂರಿನಲ್ಲಿ ಸಿಗುತ್ತಿದೆ.
ಆಗೆಲ್ಲಾ ತಮ್ಮ ಮನೆಯಲ್ಲಿನ ಕಷ್ಟ ಕಂಡು ವಿದ್ಯಾಭ್ಯಾಸವನ್ನು ಅರ್ಧಕ್ಕೇ ಮೊಟಕುಗೊಳಿಸಿ ಬಹಳಷ್ಟು ಮಂದಿ ಮುಂಬಯಿಗೆ ಕೆಲಸವನ್ನು ಅರಸಿ ಹೋಗುತ್ತಿದ್ದರು. ಆಗ ಸುಲಭದಲ್ಲಿ ಸಿಗುತ್ತಿದ್ದ ಕೆಲಸವೆಂದರೆ ಹೋಟೇಲ್ ನಲ್ಲಿ ಕ್ಲೀನರ್, ವೈಟರ್ ಉದ್ಯೋಗ. ಊರಿನ ಅನೇಕರ ಹೋಟೇಲ್ ಗಳು ಮುಂಬಯಿನಲ್ಲಿದ್ದವು. ಹಾಗೆ ಹೋಟೇಲ್ ಗಳಲ್ಲಿ ದುಡಿದು ಅಲ್ಲಿಯ ಒಳ ಹೊರಗು ವಿಷಯವನ್ನು ಅರಿತು ತಮ್ಮದೇ ಆದ ಹೋಟೇಲ್ ಉದ್ದಿಮೆಯನ್ನು ಪ್ರಾರಂಭಿಸಿದವರ ಸಂಖ್ಯೆ ಕಡಿಮೆಯೇನಿಲ್ಲ. ಸಂಬಳ ಕಡಿಮೆ ಇದ್ದ ಕಾರಣ ಎಲ್ಲರಿಗೂ ಊಟಕ್ಕೆ ಹಣ ಹೊಂದಿಸಲು ಆಗುತ್ತಿರಲಿಲ್ಲ. ಆಗ ಅವರ ಹೊಟ್ಟೆ ತುಂಬಿಸುತ್ತಿದ್ದುದೇ ‘ವಡಾ ಪಾವ್’ ಎನ್ನುವ ಅದ್ಭುತ ತಿಂಡಿ. ೮೦-೯೦ರ ದಶಕದಲ್ಲಿ ಮುಂಬಯಿಯಲ್ಲಿ ದುಡಿಯುತ್ತಿದ್ದವರಿಗೆ ಬಹಳ ಅಗ್ಗದಲ್ಲಿ ಸಿಗುತ್ತಿದ್ದ ತಿಂಡಿ ಇದೊಂದೇ. ವಡಾ ಪಾವ್ ತಿಂದೇ ವರ್ಷಾನುಗಟ್ಟಲೆ ಮುಂಬಯಿಯಲ್ಲಿ ವಾಸ ಮಾಡಿದವರಿದ್ದಾರೆ.
‘ವಡಾ ಪಾವ್’ ನ ಆವಿಷ್ಕಾರ ಹೇಗಾಯಿತು ಎನ್ನುವ ಕುತೂಹಲ ನಿಮಗೆ ಇರಬಹುದು ಅಲ್ಲವೇ? ವಡಾ ಪಾವ್ ಹುಟ್ಟಿದ್ದು ಮುಂಬಯಿಯಲ್ಲೇ. ಈಗಲೂ ತನ್ನದೇ ಆದ ಛಾಪನ್ನು ಹೊಂದಿರುವ ವಡಾ ಪಾವ್ ವಲಸಿಗರ ಕಣ್ಮಣಿಯೇ ಆಗಿ ಉಳಿದಿದೆ. ೧೯೬೦ರ ದಶಕದಲ್ಲಿ ಅಶೋಕ ವೈದ್ಯ ಎನ್ನುವ ಮರಾಠಿ ವ್ಯಕ್ತಿಯಿಂದ ದಾದರ್ ರೈಲು ನಿಲ್ದಾಣದ ಸಣ್ಣ ಅಂಗಡಿಯಲ್ಲಿ ತಯಾರಾದ ಬಟಾಟೆ ಅಂಬಡೆ ಅಥವಾ ವಡೆ, ಇರಾನಿ ಹೋಟೇಲಿನ ಬೆಣ್ಣೆ ಪಾವ್ ನಡುವೆ ಸಿಲುಕಿಕೊಂಡಾಗ ತಯಾರಾದದ್ದೇ ‘ವಡಾ ಪಾವ್’ ಎಂಬ ತಿಂಡಿ. ಪಾವ್ ಎಂದರೆ ಬ್ರೆಡ್ ನ ಮತ್ತೊಂದು ರೂಪ. ಚೌಕಾಕೃತಿಯಲ್ಲಿರುವ ಈ ಪಾವ್ ನಂತರದ ದಿನಗಳಲ್ಲಿ ಪಾವ್ ಭಾಜಿ, ಮಿಸಲ್ ಪಾವ್, ಪಾವ್ ಉಸಲಿ, ಪಾವ್ ಮಸಾಲಾ, ಸೂಖಾ ಪಾವ್ ಮೊದಲಾದ ತಿಂಡಿಗಳಿಗೆ ಮೂಲ ವಸ್ತುವಾಯಿತು. ಈಗಲೂ ಮಹಾರಾಷ್ಟ್ರ, ಗೋವಾ ಮುಂತಾದ ರಾಜ್ಯಗಳಲ್ಲಿ ಬೆಳಿಗ್ಗೆ ಪಾವ್ ಒಳಗೊಂಡ ತಿಂಡಿ ತಿನ್ನದೇ ಅವರ ದಿನ ಪ್ರಾರಂಭವಾಗುವುದೇ ಇಲ್ಲ.
ಹೀಗೆ ಅಶೋಕ್ ವೈದ್ಯರಿಂದ ಪ್ರಾರಂಭವಾದ ‘ವಡಾ ಪಾವ್’ ಎನ್ನುವ ತಿಂಡಿ ದಶಕಗಳ ಕಾಲ ಬಟ್ಟೆ ಗಿರಣಿಗಳ, ಕಾರ್ಖಾನೆಗಳ ಕಾರ್ಮಿಕರ ಹೊಟ್ಟೆ ತುಂಬಿಸುವ ಪ್ರಮುಖ ಆಹಾರವಾಗಿ ರೂಪುಗೊಂಡಿತು. ೭೦ರ ದಶಕದಲ್ಲಿ ಬಟ್ಟೆಯ ಗಿರಣಿಗಳು ಒಂದೊಂದಾಗಿ ಬಾಗಿಲು ಹಾಕಿಕೊಂಡು ಕಾರ್ಮಿಕರು ಬೀದಿಗೆ ಬಿದ್ದಾಗ ಅವರ ಕೈಹಿಡಿದದ್ದೇ ಈ ‘ವಡಾ ಪಾವ್’. ಕೆಲಸ ಕಳೆದುಕೊಂಡ ಬಹಳಷ್ಟು ಕಾರ್ಮಿಕರು ತಮ್ಮದೇ ಆದ ವಡಾ ಪಾವ್ ನ ಅಂಗಡಿಗಳನ್ನು ತೆರೆದು ವ್ಯಾಪಾರ ಪ್ರಾರಂಭಿಸಿದರು. ಇದು ಅವರಿಗೆ ದಿನದೂಡುವಲ್ಲಿ ಸಹಾಯವಾಯಿತು. ಮುಂಬಯಿ ಪ್ರಯಾಣಿಕರ ಜೀವನಾಡಿಯಾದ ಲೋಕಲ್ ರೈಲು ಇವರಿಗೆ ಉತ್ತಮ ವ್ಯಾಪಾರವನ್ನೂ ಒದಗಿಸಿತು. ಲೋಕಲ್ ರೈಲುಗಳಲ್ಲಿ ಪ್ರಯಾಣಿಸುತ್ತಿದ್ದವರನ್ನೇ ಇವರು ತಮ್ಮ ಪ್ರಮುಖ ಗಿರಾಕಿಗಳನ್ನಾಗಿ ಮಾಡಿಕೊಂಡರು. ಇದರಿಂದ ವ್ಯಾಪಾರವೂ ವೃದ್ಧಿಸಿತು. ಕ್ರಮೇಣ ರೈಲು ನಿಲ್ದಾಣ, ಬೀದಿ ಬದಿ ಅಂಗಡಿಗಳಿಂದ ಮೇಲೆದ್ದು ವಡಾ ಪಾವ್ ಪಂಚತಾರಾ ಹೋಟೇಲ್ ನ ಮೆನ್ಯೂನಲ್ಲೂ ಸ್ಥಾನ ಪಡೆದುಕೊಂಡಿತು ಎಂದರೆ ಅಚ್ಚರಿಯ ಸಂಗತಿಯೇ ಅಲ್ಲವೇ?
ಈಗಂತೂ ನಾನಾ ಬಗೆಯ ವಡಾ ಪಾವ್ ಗಳು ಮಾರುಕಟ್ಟೆಯಲ್ಲಿ ಲಭ್ಯ. ಮುಂಬಯಿ ಮಾತ್ರವಲ್ಲದೇ ದೇಶಾದ್ಯಂತ ವಡಾ ಪಾವ್ ಸಿಗುತ್ತದೆ. ಬಟಾಟೆ ಅಂಬಡೆ (ವಡಾ) ಯನ್ನು ಅರ್ಧ ತುಂಡರಿಸಿದ ಪಾವ್ ನೊಳಗೆ ತುರುಕಿ, ಅದಕ್ಕೊಂದು ಹಸಿರು ಚಟ್ನಿ, ತುಂಬಾ ಖಾರ ಬೇಕಾದಲ್ಲಿ ಹಸಿಮೆಣಸನ್ನು ಹಾಗೆಯೇ ಬಿಸಿ ಎಣ್ಣೆಯಲ್ಲಿ ಹುರಿದು ಕೊಟ್ಟರೆ ‘ವಡಾ ಪಾವ್’ ತಯಾರು. ಇದನ್ನು ಒಂದು ರೀತಿಯ ದೇಶೀ ಬರ್ಗರ್ ಎನ್ನಬಹುದೇನೋ? ವಡಾ ಪಾವ್ ಕೈಯಲ್ಲಿ ಹಿಡಿದುಕೊಂಡು ಬಾಯಿಯಿಂದಲೇ ನೇರವಾಗಿ ತಿನ್ನಬೇಕು. ಆಗಲೇ ರುಚಿಕರ. ಕೈ ಬೆರಳುಗಳಿಂದ ತುಂಡರಿಸಿ ತಿಂದರೆ ಸೊಗಡಿಲ್ಲ ಎನ್ನುತ್ತಾರೆ ವಡಾ ಪಾವ್ ಅಭಿಮಾನಿಗಳು. ಈಗಂತೂ ವಡಾ ಪಾವ್ ಜೊತೆ ಮಿರ್ಚಿ ಪಾವ್, ಸಮೋಸಾ ಪಾವ್, ಬಜ್ಜಿ ಪಾವ್ ಎಲ್ಲವೂ ಲಭ್ಯ. ಸಿಹಿ ಖಾರವಿರುವ ಬಟಾಟೆ ಬಾಜಿಯನ್ನು ಚೆನ್ನಾಗಿ ಲೇಪಿಸಿ ರುಚಿ ಹೆಚ್ಚಿಸಲು ಹುರಿಗಡಲೆ, ಸೇವ್, ನೀರುಳ್ಳಿ ಇತ್ಯಾದಿಗಳನ್ನು ಸೇರಿಸಿಕೊಟ್ಟರೆ ಅದರ ಹೆಸರು ‘ದಬೇಲಿ’ ಎಂದಾಗುತ್ತದೆ.
ಮುಂಬಯಿ, ಬೆಂಗಳೂರು ಮೊದಲಾದ ದೊಡ್ಡ ನಗರಗಳಲ್ಲಿ ಈಗ ಸಿನೆಮಾ ತಾರೆಯರು, ಕ್ರೀಡಾ ಪಟುಗಳು, ದೊಡ್ಡ ದೊಡ್ಡ ಉದ್ಯೋಗಪತಿಗಳು ರಾತ್ರಿಯ ಹೊತ್ತಲ್ಲಿ ಕಾರ್ ನಲ್ಲಿ ರಸ್ತೆ ಬದಿಯ ಅಂಗಡಿಗಳ ಬಳಿ ಬಂದು ಕಾರಿನಿಂದ ಇಳಿಯದೇ ಅಲ್ಲಿಗೇ ವಡಾ ಪಾವ್ ತರಿಸಿಕೊಂಡು ಚಪ್ಪರಿಸಿ ತಿನ್ನುತ್ತಾರೆ. ಕ್ರಿಕೆಟ್ ದಂತಕತೆಯಾಗಿರುವ ಸಚಿನ್ ತೆಂಡೂಲ್ಕರ್ ಸಹಾ ಈ ವಿಷಯವನ್ನು ತಮ್ಮ ಆತ್ಮಕಥೆಯಲ್ಲಿ ಪ್ರಸ್ತಾಪ ಮಾಡಿದ್ದಾರೆ.
ವಡಾ ಪಾವ್ ಜೊತೆ ‘ಕಟ್ಟಿಂಗ್’ ಚಹಾ ಇದ್ದರೆ ಮುಂಬಯಿಯಲ್ಲಿ ಹೇಗೂ ದಿನ ಕಳೆಯಬಹುದು ಎಂಬುದು ಒಂದು ಸಮಯದ ಪ್ರಸಿದ್ಧ ಮಾತಾಗಿತ್ತು. ಅದು ನಿಜವೂ ಆಗಿತ್ತು. ಈಗಲೂ ವಡಾ ಪಾವ್ ಅಭಿಮಾನಿಗಳು ಕಡಿಮೆಯಾಗಿಲ್ಲ. ಬೀದಿ ಬದಿಯ ವ್ಯಾಪಾರಿಗಳೇ ಮಾಡಿದ ಈ ‘ವಡಾ ಪಾವ್’ ಕ್ರಾಂತಿ ಈಗ ಎಲ್ಲೆಡೆ ಹಬ್ಬಿದೆ. ಬಡವರು, ಶ್ರೀಮಂತರು, ವಿದೇಶಿಯರು ಎಲ್ಲರಿಗೂ ಅಚ್ಚುಮೆಚ್ಚಾದ ಈ ವಡಾ ಪಾವ್ ತಿಂದು ನೀವೂ ‘ವಾವ್ ವಾವ್’ ಹೇಳಿ !
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ