‘ಸಂಪದ’ ನಗೆಬುಗ್ಗೆ - ಭಾಗ ೧೦೫

‘ಸಂಪದ’ ನಗೆಬುಗ್ಗೆ - ಭಾಗ ೧೦೫

ಜೀವನಾಂಶ

ಸೂರಿ ಮತ್ತು ಶ್ರೀಮತಿ ಮಧ್ಯೆ ದಿನಾ ಜಗಳ ಆಗ್ತಾ ಇತ್ತು. ಒಂದ್ ದಿನ ಸರಿ ಇದ್ರೆ ಒಂದ್ ತಿಂಗಳು ಜಗಳ, ಕೊನೆಗೆ ಹಿಂಗೆ ದಿನಾ ಜಗಳ ಆಡ್ಕೊಂಡು ಬದುಕೋಕಾಗಲ್ಲ ಅಂತ ಇಬ್ಬರಿಗೂ ಅನ್ನಿಸಿತು. ಅದ್ಕೆ ಇಬ್ರೂ ಕೋರ್ಟ್ ಮೆಟ್ಟಿಲು ಹತ್ತಿ ಡೈವೋರ್ಸ್ ಗೆ ಅಪ್ಲೈ ಮಾಡೋದು ಅಂತ ತೀರ್ಮಾನ ಮಾಡಿದರು. ಹಂಗೇ ಮಾಡಿದ್ರು. ಕೋರ್ಟ್ ನಲ್ಲಿ ಜಡ್ಜ್ ತುಂಬಾ ಸಂಭಾವಿತರು. ಹಾಗಾಗಿ ಇಬ್ಬರಿಗೂ ಒಳ್ಳೇ ಮಾತಿನಲ್ಲಿ ಜತೆಯಾಗಿ ಬದುಕೋಕೆ ಸಲಹೆ ನೀಡಿದ್ರು. ನೋ ಯೂಸ್ ಸೂರಿ-ಶ್ರೀಮತಿ ಇಬ್ಬರೂ ಸುತರಾಂ ಒಪ್ಪಲಿಲ್ಲ. ಅಂತೂ ಇಂತೂ ಎಲ್ಲ ಪ್ರಯತ್ನಗಳ ನಂತರ ಜಡ್ಜ್ ಇವರಿಬ್ಬರಿಗೂ ಡೈವೊರ್ಸ್ ಕೊಡೋಕೆ ಅನುಮತಿ ಕೊಟ್ಟರು. ಆಗ ವಿಷಯ ಜೀವನಾಂಶಕ್ಕೆ ಬಂತು. ಶ್ರೀಮತಿ ‘ನಂಗೆ ತಿಂಗಳಿಗೆ ೨೦ ಸಾವಿರ ರೂಪಾಯಿ ಜೀವನಾಂಶ ಬೇಕು ‘ ಅಂತ ಪಟ್ಟು ಹಿಡಿದು ಕೂತಳು. ‘ಸೂರಿ ‘ನನ್ನ ಕೈಯಲ್ಲಿ ಸಾಧ್ಯಾನೇ ಇಲ್ಲ’ ಅಂತ ಕೂತ. ಕೊನೆಗೆ ಸೂರಿಯ ಒಟ್ಟಾರೆ ಸಂಬಳ, ಶ್ರೀಮತಿಯ ಅವಶ್ಯಕತೆ ಎಲ್ಲವನ್ನೂ ಪರಿಶೀಲಿಸಿದ ಜಡ್ಜ್ ತೀರ್ಪು ಕೊಟ್ಟರು. ‘ಎಲ್ಲ ದಾಖಲೆಗಳನ್ನು ನೋಡಿ, ಶ್ರೀಮತಿಯ ಪರಿಸ್ಥಿತಿಯನ್ನು ಗಮನಿಸಿ ಆಕೆಗೆ ಪ್ರತಿ ತಿಂಗಳು ೨೦ ಸಾವಿರ ರೂಪಾಯಿಗಳ ಜೀವನಾಂಶ ಕೊಡಬೇಕೆಂದು ನಾನು ತೀರ್ಮಾನ ಮಾಡಿದ್ಡೇನೆ.’ ಎಂದರು. ಅದನ್ನು ಕೇಳಿದ ಸೂರಿ ಫುಲ್ ಖುಷಿಯಾಗಿ ಹೇಳಿದ -ನಿಮ್ಮದು ಭಾಳಾ ದೊಡ್ಡ ಮನಸ್ಸು ಸ್ವಾಮೀ, ಸಾಧ್ಯ ಆದ್ರೆ ಅವಳಿಗೆ ನಾನೂ ಆವಾಗಾವಾಗ ಅಲ್ಪ ಸ್ವಲ್ಪ ದುಡ್ ಕೊಡೋಕೆ ಟ್ರೈ ಮಾಡ್ತೀನಿ’.

***

ಹಾಲು - ನೀರು

ಒಂದಷ್ಟು ಸಾಹಿತ್ಯವನ್ನು ಓದಿಕೊಂಡಿದ್ದ ಕನ್ಯಾಮಣಿ ಶ್ರೀಮತಿಯನ್ನು ನೋಡಲು ಬಂದಿದ್ದ ವರನ ತಂದೆ (ಯಜಮಾನ) ಹೀಗಂದ…

ಯಜಮಾನ: ನಮ್ಮ ಮನೆಗೆ ಸೊಸೆಯಾಗಿ ಬಂದ ಮೇಲೆ ನೀನು ಹೇಗಿರ್ತೀಯಾ?

ಶ್ರೀಮತಿ: ಹಾಲು ತರುವ ಮನೆಗೆ ಬರಿ ನೀರು ತಾರೆನು.

ಯಜಮಾನ: ಮೊದಲು ನೀರು ತರಬೇಕು, ನಂತರ ಹಾಲೂ ತರಬೇಕು.

***

ಯೋಗ

ಸೂರಿ: ಏನ್ ಸ್ವಾಮಿ, ಪ್ರತಿನಿತ್ಯ ಚಾಚೂ ತಪ್ಪದೆ ಸೂರ್ಯ ನಮಸ್ಕಾರ ಮಾಡಿ ಯೋಗ ಬರ್ತದೆ ಅಂತ ಹೇಳಿದ್ರಿ. ಒಂದು ತಿಂಗಳಿಂದ ಚಳಿ ಅಂತಾನೂ ನೋಡದೆ ಬೆಳ್ಳಂಬೆಳಗ್ಗೆ ಸೂರ್ಯ ನಮಸ್ಕಾರ ಮಾಡ್ತಾ ಇದ್ದೀನಿ. ಯಾವ ಯೋಗಾನೂ ಬರಲಿಲ್ಲ.

ಜ್ಯೋತಿಷಿ : ಸೂರ್ಯ ನಮಸ್ಕಾರ ಮಾಡೋದೇ ಒಂದು ಯೋಗ.

***

ಊಟ

ಅಮ್ಮ: ಕೂತ್ಕೊಂಡು ಊಟ ಮಾಡೋ. ನಿತ್ಕೊಂಡೇ ಊಟ ಮಾಡುವಂತಹ ಅವಸರ ಏನಿದೆ?

ಸೂರಿ: ನಿನ್ನೆ ಏನೋ ಡೈಲಾಗ್ ಹೇಳ್ತಿದ್ದೆ…’ಕೂರು ಉಣ್ಣೋರಿಗೆ ಕುಡಿಕೆ ಹೊನ್ನು ಸಾಲಲ್ಲ’ ಅಂತ. ನಾನ್ ಕೂತ್ಕೊಂಡ್ ಊಟ ಮಾಡೋದು ಬೇಡ. ನೀನ್ ಡೈಲಾಗ್ ಹೊಡೆಯೋದು ಬೇಡ. ನಾನ್ ಹೀಗೇ ಊಟ ಮಾಡ್ತೀನಿ.

***

ಸಮಸ್ಯೆ

ಸೂರಿ: ರಾತ್ರಿ ನಾನು ಮೂತ್ರ ಮಾಡಲು ಎದ್ದಾಗ ಏನಾಯಿತು ಗೊತ್ತೇನಮ್ಮ?

ಅಮ್ಮ: ಮೂತ್ರ ಮಾಡಲು ಎದ್ದಿರುವೇನೋ ಸೂರಿ? ನನಗೆ ಗೊತ್ತೇ ಇರಲಿಲ್ಲ, ಸರಿ, ಏನಾಯಿತು ಹೇಳು?

ಸೂರಿ: ಕಣ್ಣುಜ್ಜಿಕೊಳ್ಳುತ್ತಾ ನಾನು ನಿಧಾನವಾಗಿ ಬಾತ್ ರೂಂ ಬಾಗಿಲು ತೆರೆಯುತ್ತಿದ್ದಂತೆ ಲೈಟ್ ತನ್ನಿಂತಾನೇ ಆನ್ ಆಯಿತು ಮತ್ತು ತಣ್ಣನೆ ಗಾಳಿ ಹಿತವಾಗಿ ಬೀಸಲಾರಂಬಿಸಿತು. ನಾನು ಹಾಗೇ ಕಣ್ಮುಚ್ಚಿ ಉಚ್ಚೆ ಹೊಯ್ದು ಬಿಟ್ಟೇನಮ್ಮಾ…

ಅಮ್ಮ: ಥತ್, ಇವತ್ತೂ ಫ್ರಿಜ್ ಒಳಗೆ ಮೂತ್ರ ಮಾಡಿ ಬಿಟ್ಯಲ್ಲೋ…?

***

ಸಂದೇಶ

ಸೂರಿ ಸಪತ್ನೀಕನಾಗಿ ಹಾಲ್ ನಲ್ಲಿ ಕುಳಿತು ಲೋಕಾಭಿರಾಮದ ಮಾತಲ್ಲಿ ತೊಡಗಿದ್ದ. ಬೇಸಗೆಯಾದ್ದರಿಂದ ಶ್ರೀಮತಿ ಮುಳ್ಳು ಸೌತೇಕಾಯಿ ಸಿಪ್ಪೆ ಸುಲಿಯುತ್ತಿದ್ದಳು. ಗುಂಡನ ಮೊಬೈಲ್ ಅಡುಗೆ ಮನೆಯಲ್ಲಿ ಚಾರ್ಜಿಂಗ್ ಗೆ ಇಡಲಾಗಿದ್ದು ವಾಟ್ಸಾಪ್ ಸಂದೇಶದ ಕರೆ ಕೇಳಿಸಿತು. ಗುಂಡ ಅಡುಗೆ ಕೋಣೆಗೆ ಹೋಗಿ ನೋಡಿದರೆ ಪತ್ನಿಯ ಸಂದೇಶ…’ಅಲ್ಲಿಂದ ಬರುವಾಗ ಉಪ್ಪಿನ ಬಾಟಲಿ ತೆಗೆದುಕೊಂಡು ಬನ್ನಿ’!

***

ಅಪಾಯಕಾರಿ ಗುಣಗಳು

ಪತ್ನಿಯದ್ದು:

ಅವಳು ಅರ್ಧ ಕೇಳುತ್ತಾಳೆ

ಅದರರ್ಧ ಅರ್ಥೈಸುತ್ತಾಳೆ.

ಶೂನ್ಯ ಯೋಚಿಸುತ್ತಾಳೆ

ದುಪ್ಪಟ್ಟು ಪ್ರತಿಕ್ರಿಯಿಸುತ್ತಾಳೆ,

ಮತ್ತು ನೂರು ಪ್ರತಿಶತ ನೆನಪಿಟ್ಟುಕೊಳ್ಳುತ್ತಾಳೆ

ಗಂಡನದ್ದು:

ಅವನು ಏನೂ ಕೇಳಿಸಿಕೊಳ್ಳುವುದಿಲ್ಲ,

ಎಲ್ಲವನ್ನೂ ಅರ್ಥೈಸಿಕೊಳ್ಳುತ್ತಾನೆ,

ದುಪ್ಪಟ್ಟು ಯೋಚಿಸುತ್ತಾನೆ

ಒಂದು ಪಟ್ಟು ಪ್ರತಿಕ್ರಿಯಿಸುತ್ತಾನೆ

ಮತ್ತು ಪ್ರತಿಶತ ಶೂನ್ಯ ನೆನಪಿನಲ್ಲಿಟ್ಟುಕೊಳ್ಳುತ್ತಾನೆ !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ