‘ಸಂಪದ’ ನಗೆಬುಗ್ಗೆ - ಭಾಗ ೧೧೨

ಸೇರಿಗೆ ಸವ್ವಾಸೇರು
ಜನನಿಬಿಡವಾಗಿದ್ದ ಗ್ರಂಥಾಲಯದಲ್ಲಿ ಒಬ್ಬ ಯುವತಿ ಏನನ್ನೋ ಓದುತ್ತಾ ಕುಳಿತಿದ್ದಳು. ಆಗ ಅಲ್ಲಿಗೆ ಬಂದ ಒಬ್ಬ ಸಂಭಾವಿತ ಯುವಕ ಬಹುತೇಕ ಕುರ್ಚಿಯು ಭರ್ತಿಯಾಗಿದ್ದರಿಂದ, ಆ ಯುವತಿಯ ಪಕ್ಕದಲ್ಲಿದ್ದ ಒಂದೇ ಒಂದು ಕುರ್ಚಿಯಲ್ಲಿ ಕೂರಲು ಬಂದು ಆ ಯುವತಿಯ ಬಳಿ -ನಾನು ಇಲ್ಲಿ ಕೂರಬಹುದೇ ಎಂದು ಕೇಳಿದ. ಅವಳು ಅವನನ್ನು ಕೂಲಂಕುಷವಾಗಿ ನೋಡಿ, ಸಮ್ಮತಿಸಿದಾಗ, ಅವನು ಮೆಲ್ಲನೆ ಅಲ್ಲಿ ಕುಳಿತನು. ಸ್ವಲ್ಪ ಸಮಯದ ನಂತರ…
ಆ ಯುವತಿ ಜೋರಾದ ಧ್ವನಿಯಲ್ಲಿ ಎಲ್ಲರಿಗೂ ಕೇಳುವಂತೆ - ‘ಏನ್ರೀ, ನೀವು ಈ ರಾತ್ರಿ ಬಿಡುವಾಗಿದ್ದೀರಾ, ನನ್ನ ಜೊತೆಗೆ ಬರುವಿರಾ? ಎಂದು ಕೇಳುತ್ತೀರಲ್ಲಾ?’ ಎಂದು ಅಬ್ಬರಿಸಿದಾಗ, ಅವನು ಸಪ್ಪೆ ಮುಖ ಮಾಡಿಕೊಂಡು, ಮುಂದೆ ಸ್ವಲ್ಪ ದೂರದಲ್ಲಿ ಆಗ ತಾನೇ ಖಾಲಿಯಾಗಿದ್ದ ಒಂದು ಕುರ್ಚಿಯಲ್ಲಿ ಹೋಗಿ ಕುಳಿತನು.
ಸ್ವಲ್ಪ ಹೊತ್ತಿನ ನಂತರ, ಆ ಯುವತಿ ಅವನನ್ನು ಹುಡುಕಿಕೊಂಡು ಬಂದು ಅವನ ಬಳಿ ಕುಳಿತಳು. ಅವನ ಬಳಿ - ‘ನಾನು ಮನಃಶಾಸ್ತ್ರದ ವಿದ್ಯಾರ್ಥಿ, ನನ್ನ ದೂರುವಿಕೆಯಿಂದ ನಿಮ್ಮ ಮನಸ್ಸು ಹೇಗೆ ವಿಚಲಿತವಾಗಿ, ನಿಮ್ಮ ನಡವಳಿಕೆ ಹೇಗಿರಬಹುದೆಂದು ಅಧ್ಯಯನ ಮಾಡಲು ಹಾಗೆ ಮಾಡಿದೆ’ ಎಂದು ಹೇಳಿದಳು. ಆಗ, ಅವನು ಎತ್ತರದ ಧ್ವನಿಯಲ್ಲಿ -’ಏನು ಒಂದು ರಾತ್ರಿಗೆ ಇಪ್ಪತ್ತು ಸಾವಿರ ಬೇಕಾ, ಇದು ನಿಮ್ಮ ಮುಖಕ್ಕೆ ನಿಮಗೆ ಜಾಸ್ತಿ ಅನಿಸಲ್ವಾ?’ ಎಂದು ಕೇಳಿದಾಗ, ಅವಳು ಅಪಮಾನದಿಂದ ಕುಗ್ಗಿ ಹೋಗಿದ್ದನ್ನು ಎಲ್ಲರೂ ನೋಡ ತೊಡಗಿದರು. ಆಗ ಅವನು ಅವಳಿಗೆ ಹೇಳಿದ -ನಾನೊಬ್ಬ ಕಾನೂನು ಪದವೀಧರ. ನನಗೆ ಯಾರನ್ನು ಹೇಗೆ ಅಪರಾಧಿ ಮಾಡಬಹುದು ಎಂಬುದನ್ನು ಅಭ್ಯಾಸ ಮಾಡುತ್ತಿದ್ದೆ ಎಂದನು. ಆಕೆ, ಅವನ ಹತ್ತಿರ ಕ್ಷಮೆ ಬೇಡಿದಾಗ, ಸರಿ, ಇನ್ಮೇಲೆ ಹೀಗೆ ಸಾರ್ವಜನಿಕವಾಗಿ ನಡೆದುಕೊಳ್ಳಬೇಡಿ ಎಂದು ಬುದ್ಧಿವಾದ ಹೇಳಿ ಕಳಿಸಿದನು.
***
ಗುರುತ್ವಾಕರ್ಷಣೆ
ವಿಜ್ಞಾನ ತರಗತಿ ನಡೆಯುತ್ತಿತ್ತು. ಸೂರಿ ಡೆಸ್ಕ್ ಮೇಲೆ ತಲೆಯಿಟ್ಟು ನಿದ್ದೆ ಮಾಡುತ್ತಿದ್ದ.
ಟೀಚರ್: ಸೂರಿ, ಏನು ನಡೆಯುತ್ತಿದೆ ಅಲ್ಲಿ?
ಸೂರಿ: ಏನಿಲ್ಲ ಟೀಚರ್
ಟೀಚರ್: ತರಗತಿಯಲ್ಲಿ ನಿದ್ದೆ ಮಾಡುತ್ತಿರುವೆಯಾ?
ಸೂರಿ: ಇಲ್ಲ ಟೀಚರ್, ಗುರುತ್ವಾಕರ್ಷಣೆಯಿಂದ ತಲೆ ಕೆಳಗೆ ಬೀಳುತ್ತಿದೆ, ಅಷ್ಟೇ!
***
ಸುಂದರ ಯುವತಿ
ಸೂರಿ: ನಿನಗಿಂತ ಸುಂದರ ಹುಡುಗಿಯನ್ನು ಇದುವರೆಗೂ ನೋಡಿಯೇ ಇಲ್ಲ.
ಶ್ರೀಮತಿ: ಥ್ಯಾಂಕ್ಸ್, ಇದಕ್ಕೆ ಏನು ಹೇಳಬೇಕು ಅಂತ ಗೊತ್ತಾಗ್ತಿಲ್ಲ.
ಸೂರಿ: ನನ್ನ ಹಾಗೆ ನೀನು ಏನೋ ಒಂದು ಹೇಳಿದರಾಯ್ತು.
***
ವ್ಯತ್ಯಾಸ
ಶ್ರೀಮತಿ: ರಾತ್ರಿ ನನ್ನ ಉದ್ದ ಕೂದಲು ಕಂಡು ಕೇಶರಾಣಿ, ನಾಗವೇಣಿ ಎಂದೆಲ್ಲಾ ಹೊಗಳುತ್ತೀರಿ…
ಸೂರಿ: ಹೌದು ಏನೀಗ?
ಶ್ರೀಮತಿ: ಅದೇ ಕೂದಲು ಊಟದಲ್ಲಿ ಸಿಕ್ಕರೆ, ‘ಥೂ ದರಿದ್ರ ಕೂದಲು’ ಅಂತ ಸಿಡಿಮಿಡಿಗೊಳ್ಳುತ್ತೀರಿ.
ಸೂರಿ: ಸಿನೆಮಾ ನೋಡುವುದಕ್ಕೂ ಜೀವನ ನಡೆಸುವುದಕ್ಕೂ ವ್ಯತ್ಯಾಸ ಇರೋದಿಲ್ಲವೇನು?
***
ಬೆರಳು ಬೆಚ್ಚಗೆ
ಹೋಟೇಲ್ ನಲ್ಲಿ ಗ್ರಾಹಕನಿಗೆ ಮಾಣಿ ಚಹಾ ತರುವಾಗ ಕಪ್ ನಲ್ಲಿ ಬೆರಳು ಇಟ್ಟುಕೊಂಡೇ ಬಂದಿದ್ದ.
ಗ್ರಾಹಕ: (ಸಿಟ್ಟಿನಿಂದ) ಏನೋ ಕಪ್ ನಲ್ಲಿ ಬೆರಳು ಇಟ್ಟುಕೊಂಡು ಬಂದಿದ್ದೆಯಲ್ಲ.
ಮಾಣಿ: (ಸಮಾಧಾನದಿಂದ) ಹೌದು ಸರ್, ಕೈಗೆ ಗಾಯವಾಗಿತ್ತು. ಡಾಕ್ಟರ್ ಯಾವಾಗಲೂ ಬೆಚ್ಚಗೆ ಇಡಬೇಕು ಅಂತ ಹೇಳಿದ್ರು.
ಗ್ರಾಹಕ: (ಇನ್ನಷ್ಟು ಸಿಟ್ಟಿನಿಂದ) ಬಾಯೊಳಗೆ ಇಟ್ಟುಕೊಳ್ಳಬೇಕಾಗಿತ್ತು.
ಮಾಣಿ: (ಇನ್ನಷ್ಟು ಸಮಾಧಾನದಿಂದ) ಇಷ್ಟೊತ್ತು ಬಾಯೊಳಗೇ ಇತ್ತು. ಈಗ ಕಪ್ ನಲ್ಲಿ ಇಟ್ಟುಕೊಂಡು ಬಂದೆ.
***
ಲಾಜಿಕ್ ಅಂದ್ರೆ…
ಪರೀಕ್ಷೆಯಲ್ಲಿ ಒಂದು ಪ್ರಶ್ನೆ : ಜಗನ್ನಾಥ ದೇವಾಲಯ ಎಲ್ಲಿದೆ?
ಒಬ್ಬ ವಿದ್ಯಾರ್ಥಿಯ ಉತ್ತರ: ಪೂರಿ.
ಅವನ ಹಿಂದೆ ಕೂತವನು ನಕಲು ಮಾಡುತ್ತಾ ಇಬ್ಬರೂ ಒಂದೇ ಉತ್ತರ ಬರೆದ್ರೆ ಸಿಕ್ಕಿ ಹಾಕ್ಕೊತೀವಿ ಅಂತ -ಚಪಾತಿ ಎಂದು ಬರೆದ.
ನಿಜವಾದ ಹೈಲೈಟ್ ಏನಂದ್ರೆ - ಶಿಕ್ಷಕಿ ಇಬ್ಬರಿಗೂ ರೈಟ್ ಹಾಕಿದ್ದರಂತೆ. ಅದೇನಮ್ಮಾ ಎಂದು ಪ್ರಿನ್ಸಿಪಾಲ್ ಕೇಳಿದ್ರೆ ಎರಡಕ್ಕೂ ಒಂದೇ ಹಿಟ್ಟಲ್ವಾ ಸಾರ್ ಅಂದಳಂತೆ !
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ