‘ಸಂಪದ’ ನಗೆಬುಗ್ಗೆ - ಭಾಗ ೧೧೪

ರಕ್ತದಾನ
ಸುಂದರವಾದ ನರ್ಸ್ ಬಳಿಗೆ ಬಂದ ಸೂರಿ, ‘ನಾನು ಬೀದಿಯಲ್ಲಿ ಒಂದು ಫಲಕ ನೋಡಿದೆ. ಅದರಲ್ಲಿ ೨೫೦ ಸಿಸಿ ರಕ್ತ ನೀಡಿದರೆ ಬ್ರೆಡ್ ಮತ್ತು ಹಣ್ಣು ಉಚಿತವಾಗಿ ಕೊಡುತ್ತೇವೆ. ೫೦೦ ಸಿಸಿ ನೀಡಿದರೆ ಗಡಿಯಾರ ಕೊಡುತ್ತೇವೆ ಎಂದು ಬರೆದಿತ್ತು. ನಾನೀಗ ನಿಮ್ಮಲ್ಲಿ ಸಾವಿರ ಸಿಸಿ ರಕ್ತ ಕೊಡಲು ಬಂದಿದ್ದೇನೆ. ಇದಕ್ಕಾಗಿ ನನಗೆ ನೀವು ಕೊಡುವ ಉಡುಗೊರೆ ಏನಿರಬಹುದು?’ ಕೇಳಿದ.
‘ಮರುಕ್ಷಣವೇ ನಿನ್ನನ್ನು ತೀವ್ರ ನಿಗಾ ಘಟಕಕ್ಕೆ ಕರೆದೊಯ್ಯುತ್ತೇವೆ. ಅದೇ ದೊಡ್ಡ ಕೊಡುಗೆ’ ಎಂದಳು ನರ್ಸ್. ‘ಅಂದರೆ?’ ಯುವಕ ಅರ್ಥವಾಗದೆ ಅವಳ ಮುಖ ನೋಡಿದ. ‘ಹೌದು, ಅದಾದ ಮೇಲೆ ನಿನಗೇ ೨೫೦ ಸಿಸಿ ರಕ್ತದ ಅಗತ್ಯವಿರುತ್ತದೆ’ ಎಂದಳು ನರ್ಸ್.
***
ಪ್ಯಾಂಟ್ ಗಾಗಿ
ಸೂರಿ ಕಾತುರದಿಂದ ಕಾಯುತ್ತ ಕುಳಿತಿದ್ದ. “ಏನಾಯಿತೋ?’ ಗಾಂಪ ಕೇಳಿದ. ‘ನಿನ್ನೆ ರಾತ್ರಿ ಒಂದು ಬಿರುಗಾಳಿ ಬೀಸಿತು ನೋಡು. ಆಗ ಎಲ್ಲಿಂದಲೋ ಬೆಲೆಬಾಳುವ ಅಂಗಿಯೊಂದು ಗಾಳಿಗೆ ಹಾರಿ ಬಂದು ನನ್ನ ಕಾರಿನ ಬಳಿ ಬಿದ್ದಿತು. ಎತ್ತಿಕೊಂಡು ನೋಡಿದೆ. ಯಾರದೋ ಕೋಟ್ಯಾಧೀಶರದ್ದೇ ಇರಬೇಕು. ಚಿನ್ನದ ನೂಲಿನಿಂದ ಹೊಲಿದಿದ್ದರು. ವಜ್ರದ ಗುಂಡಿಗಳಿದ್ದವು.’ ಸೂರಿ ಹೇಳಿದ.
ಗಾಂಪ ನಕ್ಕ. ‘ಅಯ್ಯೋ ಮಂಕೇ, ಇಂತಹ ಅಂಗಿ ಸಿಕ್ಕಿದುದಕ್ಕೆ ಸಂತೋಷ ಪಡುವ ಬದಲು ಮುಖ ಚಿಕ್ಕದು ಮಾಡಿಕೊಂಡು ಕುಳಿತಿದ್ದೀಯಲ್ಲ ಯಾಕೆ?’ ಕೇಳಿದ.
‘ಇದಕ್ಕೆ ಹೊಂದುವ ಒಂದು ಪ್ಯಾಂಟೂ ಇದ್ದರೆ ಒಳ್ಳೆಯದಲ್ಲವೇ? ಹಾಗಾಗಿ ಇನ್ನೊಂದು ಬಿರುಗಾಳಿ ಯಾವಾಗ ಬರುತ್ತದೋ ಅಂತ ಕಾಯುತ್ತಿದ್ದೇನಪ್ಪ’ ಎಂದ ಸೂರಿ.
***
ಬಂದ್ ಮಾಡಿಲ್ಲ !
ಸೂರಿ ಮತ್ತು ಶ್ರೀಮತಿ ಸಮಾರಂಭವೊಂದಕ್ಕೆ ಅವಸರದಿಂದ ಹೊರಟರು. ತುಂಬಾ ದೂರ ಬಂದಾಗ ಸೂರಿಗೆ ವಿದ್ಯುತ್ತಿನ ಮೈನ್ ಸ್ವಿಚ್ ತೆಗೆಯದೆ ಬಂದಿರುವುದು ನೆನಪಾಯಿತು. ‘ಎಡವಟ್ಟಾಯಿತು ಕಣೇ. ಮೈನ್ ಸ್ವಿಚ್ ತೆಗೆಯಲು ಮರೆತುಬಿಟ್ಟೆ. ಏನಾದರೂ ಅಗ್ನಿ ಅನಾಹುತವಾದರೆ ಅಂತ ತುಂಬ ಭಯವಾಗುತ್ತಿದೆ.’ ಎಂದ ಗಾಬರಿಯಿಂದ.
‘ಅದಕ್ಕೇಕೆ ಚಿಂತೆ ಮಾಡ್ತೀರಿ? ಶ್ರೀಮತಿ ನಗುತ್ತಾ ಹೇಳಿದಳು. ‘ಏನೂ ಆಗುವುದಿಲ್ಲ. ನಾನು ಕೂಡ ನೀರಿನ ಪೈಪ್ ಬಂದ್ ಮಾಡದೇ ಹಾಗೆಯೇ ಬಂದಿದ್ದೇನೆ. ಧೈರ್ಯವಾಗಿರಿ’!
***
ಭಗವದ್ಗೀತೆ
ತಾತ: ಸೂರಿ, ನಿನಗೆ ಕೊಟ್ಟ ಭಗವದ್ಗೀತೆಯಲ್ಲಿ ಏನಿದೆ ಅಂತ ಗೊತ್ತಾಯ್ತಾ?
ಸೂರಿ: ಗೊತ್ತಾಯ್ತು ತಾತ, ಅಜ್ಜಿಯ ಫೊಟೋ ಇದೆ. ಮಧ್ಯದಲ್ಲಿ ನವಿಲುಗರಿ ಇದೆ. ಕೊನೆಯ ಪುಟದಲ್ಲಿ ಸಾಮಾನಿನ ಚೀಟಿ ಮತ್ತು ನೂರು ರೂಪಾಯಿ ಕೂಡಾ ಇದೆ.
***
ಪುನರ್ಜನ್ಮ
ಸೂರಿ: ಸಾರ್, ನಿಮಗೆ ಪುನರ್ಜನ್ಮದಲ್ಲಿ ನಂಬಿಕೆ ಇದೆಯಾ?
ಗಾಂಪ: ಖಂಡಿತ ಇದೆ.
ಸೂರಿ: ಅದನ್ನು ಹೇಗೆ ಹೇಳುತ್ತೀರಿ?
ಗಾಂಪ: ಹೋದ ತಿಂಗಳು ನೀನು ನಮ್ಮ ತಾತ ತೀರಿಹೋಗಿದ್ದಾರೆ ಅಂತ ರಜಾ ತೆಗೆದುಕೊಂಡಿದ್ದೆ. ಮೊನ್ನೆ ನಿಮ್ಮ ತಾತ ನನ್ನನ್ನು ಕಂಡು ಮಾತಾಡಿಸಿದರು. ಇದಕ್ಕಿಂತಲೂ ಉದಾಹರಣೆ ಬೇಕಾ?
***
ಬೈಗಳು
ಸೂರಿ: ಗಾಂಪ, ನಿನಗೆ ಹೆಂಡತಿ ಅಥವಾ ಪ್ರಿಯತಮೆ ಇವರಿಬ್ಬರಲ್ಲಿ ಯಾರಿಂದ ಬೈಸಿಕೊಳ್ಳುವುದಕ್ಕೆ ಇಷ್ಟಪಡುತ್ತೀಯ?
ಗಾಂಪ: ಹೆಂಡತಿಯಿಂದ.
ಸೂರಿ: ಯಾಕೆ ಈ ಆಯ್ಕೆ?
ಗಾಂಪ: ಪ್ರಿಯತಮೆ ಬೀದಿಯಲ್ಲಿ ನಿಂತು ಬೈಯಲು ಶುರು ಮಾಡ್ತಾಳೆ. ಹೆಂಡತಿ ಮನೆಯೊಳಗೆ ಬೈತಾಳೆ.
***
ಮನೋವ್ಯಾಧಿ
ಶ್ರೀಮತಿ ಮನಃಶಾಸ್ತ್ರಜ್ಞನ ಬಳಿಗೆ ಒಂದು ಕತ್ತೆಯನ್ನು ಎಳೆದುಕೊಂಡು ಬಂದಳು. ‘ಅಯ್ಯೋ, ಈ ಕತ್ತೆಯನ್ನೇಕೆ ಇಲ್ಲಿಗೆ ಕರೆತಂದಿರಿ? ಇದು ಮನುಷ್ಯರ ಚಿಕಿತ್ಸಾ ಕೇಂದ್ರ’ ಮನಃ ಶಾಸ್ತ್ರಜ್ಞ ಅಸಹನೆಯಿಂದ ಗೊಣಗಿದ.
‘ಅದು ಗೊತ್ತಿದೆ. ತುಂಬ ದಿನಗಳಿಂದ ನನ್ನ ಗಂಡನಿಗೆ ತಾನೊಂದು ಕತ್ತೆಯಾಗಿದ್ದೇನೆ ಎಂಬ ಭ್ರಾಂತಿ ಮನಸ್ಸಿಗೆ ಆವರಿಸಿಕೊಂಡಿದೆ. ಅದಕ್ಕೆ ಸೂಕ್ತ ಚಿಕಿತ್ಸೆ ಮಾಡಲು ಅವನನ್ನು ಕರೆದುಕೊಂಡು ಬಂದಿದ್ದೇನೆ’ ಎಂದಳು ಶ್ರೀಮತಿ.
***
ನನ್ನಿಂದಾಗದು
ವೈದ್ಯನಿಗೆ ಕರೆ ಮಾಡಿದ ಶ್ರೀಮತಿ ಗಾಬರಿಯಿಂದ, ‘ನನ್ನ ಗಂಡನಿಗೆ ವಿಪರೀತ ಜ್ವರ ಬಂದುಬಿಟ್ಟಿದೆ. ಮೈ ಬೆಂಕಿಯ ಹಾಗೆ ಸುಡುತ್ತಿದೆ. ಮನೆಗೆ ಬಂದು ಚಿಕಿತ್ಸೆ ಮಾಡಿ.’ ಎಂದು ಕೋರಿದಳು. ‘ಜ್ವರ ಎಷ್ಟು ಡಿಗ್ರಿ ಇದೆ? ಥರ್ಮಾ ಮೀಟರ್ ಇಟ್ಟು ನೋಡಿದಿರಾ?’ ವೈದ್ಯ ಕೇಳಿದ. ‘ನೋಡಿದೆ ವೈದ್ಯರೇ, ಮುನ್ನೂರು ಡಿಗ್ರಿ ದಾಟಿದ ಹಾಗೆ ಕಾಣಿಸುತ್ತಿದೆ.’ ಎಂದಳು ಶ್ರೀಮತಿ.
‘ಏನು? ಮುನ್ನೂರು ಡಿಗ್ರಿಯೇ?’ ವೈದ್ಯ ಹೇಳಿದ. ‘ಹಾಗಿದ್ದರೆ ಇದರ ಉಪಶಮನ ನನ್ನಿಂದ ಆಗುವಂಥದ್ದಲ್ಲ. ನೀವು ಅಗ್ನಿಶಾಮಕ ದಳಕ್ಕೆ ಕರೆ ಮಾಡುವುದು ಒಳ್ಳೆಯದು’
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ