‘ಸಂಪದ’ ನಗೆಬುಗ್ಗೆ - ಭಾಗ ೧೧೮

ಹಣದಾಸೆ
ಸೂರಿ ಮತ್ತು ಶ್ರೀಮತಿ ಅಮ್ಯೂಸ್ ಮೆಂಟ್ ಪಾರ್ಕ್ಗೆ ಹೋದ್ರು. ಅಲ್ಲಿನ ಜಯಂಟ್ ವೀಲ್ ನೋಡಿ ಸೂರಿಗೆ ಅದರಲ್ಲಿ ಕೂರಬೇಕು ಅಂತ ಆಸೆಯಾಯ್ತು. ಹಾಗಂತ ಶ್ರೀಮತಿಗೆ ಹೇಳಿದ. ಅದಕ್ಕೆ ಶ್ರೀಮತಿ, 'ಅಲ್ಲಿ ಹಾಕಿರೋ ಬೋರ್ಡ್ ನೋಡಿ, ಒಂದ್ ರೈಡ್ಗೆ ೫೦೦ ರುಪಾಯಿ, ೫೦೦ ರುಪಾಯಿ ಏನು ಸುಮ್ಮೆ ಬರುತ್ತಾ?' ಅಂದ್ರು. ಸೂರಿ ಸುಮ್ಮನಾದ. ಮುಂದಿನ ವರ್ಷ ಅದೇ ಸಮಯಕ್ಕೆ ಅಲ್ಲಿಗೆ ಹೋದ್ರು. ಸೂರಿಗೆ ಮತ್ತೆ ಜಯಂಟ್ ವೀಲ್ನಲ್ಲಿ ಕೂರೋ ಆಸೆಯಾಗಿ ಹೆಂಡತಿಗೆ ಹೇಳಿದ. ಶ್ರೀಮತಿಯಿಂದ ಅದೇ ಉತ್ತರ ಬಂತು- '೫೦೦ ರುಪಾಯಿ ಏನು ಸುಮ್ಮೆ ಬರುತ್ತಾ' ಅಂತ. ಸರಿ ಹೀಗೇ ವರುಷಗಳು ಕಳೆದು ಸೂರಿ ಮುದುಕ ಆದ. ಮತ್ತೆ ಇಬ್ಬರೂ ಅಲ್ಲಿಗೆ ಹೋದ್ರು. 'ನಂಗೆ ವಯಸ್ಸು ೭೦ ಆಯ್ತು, ಈ ಸಲನಾದ್ರೂ ಅದರಲ್ಲಿ ಕೂಡ್ಕೊತೀನಿ ಕಣೇ. ಇಲ್ಲಾಂದ್ರೆ ನನ್ನ ಆಸೆ ಯಾವತ್ತೂ ಈಡೇರಲ್ಲ' ಅಂದ ಸೂರಿ. ಅದಕ್ಕೆ ಶ್ರೀಮತಿ ಮತ್ತದೇ ಮಾತು ಹೇಳಿದ್ದು- '೫೦೦ ರುಪಾಯಿ ಏನು ಸುಮ್ಮೆ ಬರುತ್ತಾ'. ಇದನ್ನ ಆ ಜಯಂಟ್ ವೀಲ್ ರೈಡರ್ ಕೇಳಿಸಿಕೊಂಡು, 'ನೋಡಿ, ನಾನು ನಿಮ್ಮನ್ನ ಫ್ರೀ ಆಗಿ ಜಯಂಟ್ ವೀಲ್ನಲ್ಲಿ ಕರ್ಕೊಂಡ್ ಹೋಗ್ತಿನಿ. ಆದ್ರೆ, ಒಂದ್ ಕಂಡೀಷನ್. ನಾನು ರೈಡ್ ಮಾಡುವಾಗ, ನೀವು ಹೆದರಿಕೊಂಡು ಬಾಯಲ್ಲಿ ಒಂದ್ ಪದ ಉಚ್ಚರಿಸಿದರೂ ನಿಮಗೆ ೫೦೦ ರುಪಾಯಿ ಫೈನ್ ಆಗುತ್ತೆ' ಅಂತ ಸೂರಿ ದಂಪತಿಗೆ ಹೇಳಿದ. ಸರಿ ಅಂತ ಇಬ್ಬರೂ ಒಪ್ಪಿಕೊಂಡು ವೀಲ್ ಹತ್ತಿದರು. ಆ ರೈಡರ್, ಇವರನ್ನು ಹೆದರಿಸೋಕೆ ಅಂತ ಏನೆಲ್ಲಾ ಸರ್ಕಸ್ ಮಾಡಿದ, ಪಲ್ಟಿ ಹೊಡೆಸಿದ. ಆದರೆ ಇಬ್ಬರೂ ಕಮಕ್-ಕಿಮಕ್ ಅನ್ನಲಿಲ್ಲ. ಕೊನೆಗೆ, ಸಾಕಾಗಿ ವೀಲನ್ನು ಕೆಳಗೆ ಇಳಿಸುತ್ತಾ ರೈಡರ್ ಹೇಳಿದ, 'ಮೆಚ್ಚಬೇಕು ಕಣ್ರೀ, ನಾನು ಏನೇ ಸರ್ಕಸ್ ಮಾಡಿದ್ರೂ ನಿಮ್ಮನ್ನ ಹೆದರಿಸೋಕೆ ಆಗ್ಲಿಲ್ಲ. ಗುಡ್ ಜಾಬ್''. ಅದಕ್ಕೆ ಹಿಂದೆ ಕೂತಿದ್ದ ಸೂರಿ ಮೆಲ್ಲಗೆ ಹೇಳಿದ- 'ಹಂಗೇನಿಲ್ಲ ಸರ್, ನೀವು ಮೊದಲ ಸಲ ಪಲ್ಟಿ ಹೊಡೆಸಿದಾಗಲೇ, ನನ್ನ ಹೆಂಡ್ತಿ ಕೆಳಗೆ ಬಿದ್ದುಹೋದಳು. ಆದ್ರೂ ಸುಮ್ಮನೆ ಕೂತಿದ್ದೆ, ಯಾಕಂದ್ರೆ ೫೦೦ ರುಪಾಯಿ ಏನು ಸುಮ್ಮೆ ಬರುತ್ತಾ?'".
***
ಅದು ಹೇಗೆ?
ಅಂದು ಸಂಬಂಧಿಕರೊಬ್ಬರ ಮದುವೆಗೆ ಹೋಗಬೇಕಾಗಿದ್ದ ಸೂರಿ ಎದುರಿಗೆ ಬಂದ ಆಟೋ ನಿಲ್ಲಿಸಿ, ‘ಏನಪ್ಪಾ, ಜಯನಗರಕ್ಕೆ ಬರುತ್ತೀಯಾ?’ ಎಂದು ಕೇಳಿದ.
ಚಾಲಕ ‘ಓ ಬನ್ನಿ ಸ್ವಾಮಿ! ಬರ್ತೇನೆ ಎಂದಾಗ ಸೂರಿ ‘ಎಷ್ಟು ಕೊಡಬೇಕಪ್ಪಾ?’ ಎಂದು ಕೇಳಿದ. ಚಾಲಕ ‘೩೫೦ ರೂಪಾಯಿ ಕೊಡಿ’ ಎಂದ.
ಸೂರಿ -’ಏನಪ್ಪಾ, ಮೀಟರ್ ಹಾಕಿದರೆ ೩೦೦ ರೂಪಾಯಿ ಆಗುತ್ತದೆ. ನೀನು ಜಾಸ್ತಿ ಕೇಳ್ತಾ ಇದ್ದೀಯಲ್ಲ. ನಾನು ಬೇಕಾದರೆ ನಿನ್ನನ್ನು ಫ್ರೀಯಾಗಿ ಕರೆದುಕೊಂಡು ಹೋಗುತ್ತೇನೆ’ ಎಂದ.
ಚಾಲಕ ಚಕಿತನಾಗಿ ‘ಏನು ಫ್ರೀಯಾಗಿ ಕರೆದುಕೊಂಡು ಹೋಗ್ತೀರಾ? ಅದು ಹೇಗೆ?’ ಎಂದು ಕೇಳಿದ. ಅದಕ್ಕೆ ಸೂರಿ ‘ನೀನು ಹಿಂದಿನ ಸೀಟಿನಲ್ಲಿ ಕುಳಿತುಕೋ ಗೊತ್ತಾಗುತ್ತೆ’ ಎಂದ !
***
ಗುಂಡಿ
ವೈದ್ಯ: ನಿಮ್ಮ ರೋಗ ಗುಣ ಪಡಿಸಿದರೆ ನನಗೆ ಏನು ಕೊಡುತ್ತೀರಿ?
ಸೂರಿ: ಸ್ವಾಮಿ, ನಾನು ಬಡವ. ಸ್ಮಶಾನದಲ್ಲಿ ಹೆಣಕ್ಕೆ ಗುಂಡಿ ತೋಡುವವನು. ನಿಮಗೆ ಬೇಕಾದರೆ ಉಚಿತವಾಗಿ ಒಂದು ಗುಂಡಿ ತೋಡಿ ಕೊಡುತ್ತೇನೆ.
***
ಹೆಂಡತಿ
ಕಾವಲುಗಾರ: ಅಮ್ಮಾ, ಈಗ ಸಂಪಾದಕರನ್ನು ನೋಡುವುದಕ್ಕಾಗುವುದಿಲ್ಲ.
ಆಕೆ: ರೀ, ನಾನು ಅವರ ಹೆಂಡತಿ.
ಕಾವಲುಗಾರ: ಈಗ ಸ್ವಲ್ಪ ಹೊತ್ತಿನ ಮುಂಚೆ ಒಳಗೆ ಹೋದ ಹೆಂಗಸು ಕೂಡ ತಾನು ಅವರ ಹೆಂಡತಿ ಎಂದು ಹೇಳಿದ್ದಾಳೆ.
***
ಡೈರಿ
ಸೂರಿ: ಗಾಂಪ, ಆ ಸಿನೆಮಾ ನಟಿ ಶ್ರೀಮತಿಯನ್ನು ಮದುವೆಯಾದ ಬಳಿಕ ಬಹಳಷ್ಟು ಪ್ರೇಮಕಥೆಗಳನ್ನು ಬರೆದೆಯಲ್ಲ. ಅದು ಹೇಗೆ ಸಾಧ್ಯವಾಯಿತು?
ಗಾಂಪ: ನನಗೆ ಆಕೆಯ ಹಳೆಯ ಡೈರಿ ಸಿಕ್ತು. ಅದನ್ನು ಓದಿದ ಬಳಿಕ ಪ್ರೇಮಕಥೆಗಳು ತಂತಾನೆ ಹೊರಬಂದವು.
***
ಜಗಳ
ಸೂರಿ: ನಿನ್ನ ಹೆಂಡತಿ ಈಗಲಾದರೂ ಜಗಳ ಆಡುವುದನ್ನು ನಿಲ್ಲಿಸಿರುವಳೇ?
ಗಾಂಪ: ಹೌದು. ಈಗ ಜಗಳವೇ ಇಲ್ಲ.
ಸೂರಿ: ಅದು ಹೇಗೆ ಸಾಧ್ಯವಾಯಿತು?
ಗಾಂಪ: ಅವಳು ಸತ್ತು ಆರು ತಿಂಗಳಾಯಿತು.
***
ಡೈವೋರ್ಸ್
ಗಾಂಪ: ಸೂರಿ, ನಾನು ನನ್ನ ಹೆಂಡತಿಯಿಂದ ಡೈವೋರ್ಸ್ ಪಡೆದೆ ಕಣೋ.
ಸೂರಿ: ಇದನ್ನು ಬಹಳ ಖುಷಿಯಿಂದ ಹೇಳ್ತಾ ಇದ್ದಿಯಲ್ಲೋ?
ಗಾಂಪ: ಹೌದು ಕಣೋ. ಇನ್ಮೇಲೆ ನನಗೂ ನನ್ನ ಸಂಬಳದ ಅರ್ಧ ಭಾಗ ಸಿಗುತ್ತದಲ್ಲ. ಅದಕ್ಕೆ. !
***
ನಾಗರಪಂಚಮಿ
ಅತ್ತೆ: ಇವತ್ತೇನಮ್ಮ ಎಂದೂ ಇಲ್ಲದ ಆರೈಕೆ? ನನ್ ಮುಂದೆ ಹಾಲು ತಂದಿಟ್ಟಿದ್ದೀಯಲ್ಲ?
ಸೊಸೆ: ಅಂತಹದ್ದೇನಿಲ್ಲ ಅತ್ತೆ, ಇವತ್ತು ನಾಗರಪಂಚಮಿ. ಹೊರಗೆ ಹೋಗಿ ಹಾಲೆರೆಯುವ ಬದಲು ನಿಮಗೆ ತಂದುಕೊಟ್ಟೆ ಅಷ್ಟೆ.
***
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ