‘ಸಂಪದ’ ನಗೆ ಬುಗ್ಗೆ - ಭಾಗ ೮೮

‘ಸಂಪದ’ ನಗೆ ಬುಗ್ಗೆ - ಭಾಗ ೮೮

ಸಕಾರಣ

ಮ್ಯಾನೇಜರ್: ಗಾಂಪ, ಇವತ್ತು ಸೂರಿ ಏಕೆ ಆಫೀಸಿಗೆ ಬಂದಿಲ್ಲ?

ಗಾಂಪ: ಸರ್, ಅವನಿಗೆ ವಿಪರೀತ ಗಾಯಗಳಾಗಿವೆ. ಆಸ್ಪತ್ರೆ ಸೇರಿಸಿದ್ದಾರೆ.

ಮ್ಯಾನೇಜರ್: ಸುಳ್ಳು ಹೇಳಬೇಡಿ. ನಿನ್ನೆ ರಾತ್ರಿ ಲೇಟ್ ನೈಟ್ ಪಾರ್ಟಿಯಲ್ಲಿ ಒಂದು ಹುಡುಗಿ ಜೊತೆ ಕುಣಿತಾ ಇದ್ದುದ್ದನ್ನು ನಾನೇ ನನ್ನ ಕಣ್ಣಾರೆ ನೋಡಿದ್ದೀನಿ.

ಗಾಂಪ: ಹೌದು ಸರ್, ಅವನು ಆ ಹುಡುಗಿ ಜೊತೆ ಡ್ಯಾನ್ಸ್ ಮಾಡುವುದನ್ನು ಅವನ ಹೆಂಡತಿಯೂ ನೋಡಿದ್ದಳು.

***

ಮುನ್ನೂರು ಹೆಚ್ಚೇನಲ್ಲ !

ಕ್ಲಿನಿಕ್ ಗೆ ಬಂದ ಗಾಂಪ ವೈದ್ಯನಿಗೆ, ‘ಸರ್, ಮನೆಗೆ ಬರಲು ಎಷ್ಟು ಫೀಸು ಚಾರ್ಜ್ ಮಾಡ್ತೀರಿ?” ಎಂದು ಕೇಳಿದ. ಆಗ ಡಾಕ್ಟರ್ ಸಾಹೇಬ್ರು “ಏನಿಲ್ಲ, ಬರೀ ಮುನ್ನೂರು ರೂಪಾಯಿ" ಎಂದರು. “ಸರಿ ಬನ್ನಿ" ಎಂದ ಗಾಂಪನ ಜೊತೆಗೆ ಡಾಕ್ಟರ್ ತಮ್ಮ ಕಾರಿನಲ್ಲಿ ಆತನ ಮನೆಗೆ ಬಂದಾಗ ಯಾವ ರೋಗಿಯೂ ಕಾಣಲಿಲ್ಲ. “ಪೇಷೆಂಟ್ ಎಲ್ಲಿ?” ಎಂದು ಕೇಳಿದಾಗ ಗಾಂಪ, “ಯಾವ ಪೇಷೆಂಟೂ ಇಲ್ಲ.. ಆ ಹಾಳಾದ ಟ್ಯಾಕ್ಸಿಯವನು ಇಲ್ಲಿಗೆ ಬರೋಕೆ ಆರುನೂರು ರೂಪಾಯಿ ಕೇಳ್ದ. ತಾವು ಮುನ್ನೂರು ರೂಪಾಯಿಯಲ್ಲಿ ಕರ್ಕೋಂಡು ಬಂದ್ರೀ. ತುಂಬಾ ಥ್ಯಾಂಕ್ಸ್. ಎಂದಾಗ ಡಾಕ್ಟರ್ ಮುಖ ಇಂಗು ತಿಂದ ಮಂಗನಂತಾಗಿತ್ತು. 

***

ರಂಧ್ರ ಎಷ್ಟಿದೆ?

ಶಾಲಾ ಮಕ್ಕಳಿಗೆ ಬ್ಯಾಡ್ಮಿಂಟನ್ ಕೋಚ್ ಆಟದ ಬಗೆಗೆ ಹಲವಾರು ವಿವರಗಳನ್ನು ನೀಡುತ್ತಾ “ಒಬ್ಬ ತರಬೇತುದಾರನಿಗೆ ಆಟದ ಬಗೆಗೆ ಎಲ್ಲ ವಿಚಾರಗಳೂ ತಿಳಿದಿರುತ್ತವೆ. ನಿಮಗೆ ಏನೇ ಅನುಮಾನ ಇದ್ದರೂ ನನ್ನಲ್ಲಿ ಕೇಳಿ. ಫಟ್ ಫಟಾಂತ ಉತ್ತರ ಕೊಡ್ತೇನೆ" ಎಂದ. ಮರಿ ಗಾಂಪ ತನ್ನ ಜಾರುತ್ತಿರುವ ಚಡ್ಡಿಯನ್ನು ಮೇಲೆಳೆದುಕೊಳ್ಳುತ್ತಾ ಎದ್ದು ನಿಂತು “ಸರ್, ಬ್ಯಾಡ್ಮಿಂಟನ್ ನೆಟ್ ಉಂಟಲ್ಲಾ, ಅದರಲ್ಲಿ ಎಷ್ಟು ರಂಧ್ರಗಳಿವೆ ಅಂತ ಹೇಳಬಹುದಾ?” ಎಂದ.

***

ಬಾಯಿ ಬಿಡಿಸುವುದು !

ಮಹಾಯುದ್ಧದ ಕಾಲ. ಬೀದಿಯಲ್ಲಿ ಬೆನ್ನು ಮೇಲಾಗಿ ಮಲಗಿದ್ದವ ಶತ್ರು ಪಕ್ಷದ ಗೂಢಾಚಾರನೆಂದು ಭಾವಿಸಿ ಅಮೇರಿಕನ್ ಸೈನಿಕರು ಎತ್ತಿಕೊಂಡು ಹೋಗಿ ಕುರ್ಚಿಗೆ ಕಟ್ಟಿ ಹಾಕಿದರು. ಅವನಿಗೆ ಚಿತ್ರಹಿಂಸೆ ನೀಡಿ ನಾನಾ ರೀತಿಯಿಂದ ವಿಚಾರಣೆ ಮಾಡಿದರೂ ಅವನು ಬಾಯಿ ಬಿಡಲಿಲ್ಲ. ಬಳಿಕ ಫ್ರೆಂಚ್ ಸೈನಿಕರು ಬಂದರು. ಅವನಿಗೆ ನೂರೆಂಟು ಬಗೆಯಿಂದ ಹಿಂಸಿಸಿ ತನಿಖೆ ಮಾಡಿದಾಗಲೂ ಅವನು ಉಸಿರೆತ್ತಲಿಲ್ಲ. ಜರ್ಮನರು, ಇಂಗ್ಲೀಷರು ಹೀಗೆ ಬೇರೆ ಬೇರೆ ದೇಶದವರು ಹಿಂಸೆ ಕೊಟ್ಟರೂ ಅವನ ಬಾಯಿ ಬಿಡಿಸಲು ಆಗಲಿಲ್ಲ. 

ಕಡೆಗೆ ಮನೋವೈದ್ಯರನ್ನು ಕರೆಸಿ ಶಂಕಿತ ವ್ಯಕ್ತಿಯ ಸತ್ಯ ತಿಳಿದುಕೊಳ್ಳಲು ಹೇಳಿದರು. ವೈದ್ಯರು ಅವನನ್ನು ಪರೀಕ್ಷಿಸಿ “ಇವನ ಸತ್ಯವನ್ನು ತಿಳಿದುಕೊಳ್ಳಲು ನನಗೂ ಸಾಧ್ಯವಾಗುತ್ತಿಲ್ಲ" ಎಂದರು. ಸೇನಾಧಿಕಾರಿಗಳಿಗೆ ಸಿಟ್ಟು ಬಂತು. “ಮಿಲಿಟರಿ ವೈದ್ಯರಾಗಿದ್ದುಕೊಂಡು ಸೇನಾಧಿಕಾರಿಗಳ ಆಜ್ಞೆಯನ್ನು ನಡೆಸಿಕೊಡದಿರುವುದು ಶಿಕ್ಷಾರ್ಹ ಅಪರಾಧವೆಂದು ತಮಗೆ ತಿಳಿದಿರಬೇಕಲ್ಲವೇ?” ಎಂದು ಕೇಳಿದರು.

“ತಿಳಿದಿದೆ. ಆದರೆ ಮೃತನಾಗಿ ನಲವತ್ತೆಂಟು ಗಂಟೆ ದಾಟಿದ ವ್ಯಕ್ತಿಯೊಬ್ಬನ ಬಾಯಿಂದ ನಿಜ ಹೇಳಿಸಲು ಮಾತ್ರ ನನಗೆ ತಿಳಿದಿಲ್ಲ" ಎಂದರು ವೈದ್ಯರು.

***

ಉಪಾಯ !

ಪೋಲೀಸನೊಬ್ಬ ಕಳ್ಳನಾದ ಗಾಂಪನನ್ನು ಹಿಡಿದುಕೊಂಡು ಹೋಗುವಾಗ ಗಾಂಪ, “ನಾನು ಇಂದು ಸಲ ಶೌಚಾಲಯಕ್ಕೆ ಹೋಗಿ ಬರ್ತೇನೆ, ಹೊಟ್ಟೆನೋವು ತಡೆದುಕೊಳ್ಳೋಕೆ ಆಗ್ತಾ ಇಲ್ಲ.” ಎಂದು ಅಂಗಲಾಚಿದ. ಅವನ ಮಾತನ್ನು ನಂಬಿ ಪೋಲೀಸ್ ಶೌಚಾಲಯಕ್ಕೆ ಬಿಟ್ಟ. ಕೂಡಲೇ ಗಾಂಪ ಶೌಚಾಲಯದ ಕಿಟಕಿ ಹತ್ತಿ ಎಸ್ಕೇಪ್ ಆದ.

ಆದರೂ ಪೋಲೀಸಪ್ಪ ಬಿಡಲಿಲ್ಲ. ಕೆಲವು ದಿನಗಳ ಕಾಲ ಹುಡುಕಾಡಿ ಅದೇ ಕಳ್ಳನನ್ನು ಮತ್ತೆ ಬಂಧಿಸಿಕೊಂಡು ಹೊರಟ. ಮಾರ್ಗ ಮಧ್ಯೆ ಗಾಂಪ ಹಿಂದಿನ ಸಲದ ಹಾಗೆಯೇ ಶೌಚಾಲಯಕ್ಕೆ ಹೋಗಿಬರಲು ಬಿಡಬೇಕಾಗಿ ಕೇಳಿಕೊಂಡ. ಪೋಲೀಸಪ್ಪ ಈ ಬಾರಿ ಗರಂ ಆದ. “ಎಲ್ಲ ಸಲವೂ ಈ ಜಾಣತನ ಕೆಲಸ ಮಾಡುತ್ತದೆ ಅಂತ ಭಾವಿಸಬೇಡ. ನೀನು ಇಲ್ಲೇ ನಿಂತಿರು. ನಾನು ಶೌಚಾಲಯಕ್ಕೆ ಹೋಗಿ ಬರುತ್ತೇನೆ.”  

***

ಕೆಲಸದವಳು

ಶ್ರೀಮತಿ: ಯಾಕ್ರೀ.. ತಾರಾ ನೀವೇ ಪಾತ್ರೆ ತೊಳೆಯುತ್ತಿದ್ದೀರಾ? ನಿಮ್ಮ ಮನೆಕೆಲಸದವಳು ಇಲ್ಲವೇ?

ತಾರಾ: ಇಲ್ಲಾರೀ, ನಾನೇ ಬೇಡಾಂತ ಬಿಡಿಸಿಬಿಟ್ಟೆ

ಶ್ರೀಮತಿ: ಯಾಕೆ, ಚೆನ್ನಾಗೇ ಇದ್ದಳಲ್ಲ?

ತಾರಾ: ನಮ್ಮೆಜಮಾನರೂ ಇದೇ ಮಾತನ್ನು ಹೇಳಲಿಕ್ಕೆ ಶುರು ಮಾಡಿದ್ಲು ಅದಕ್ಕೆ.

***

ಕಂಜೂಸ್!

ಮರಿ ಗಾಂಪ: ಅಪ್ಪ, ನಾವು ಯಾರದ್ದಾದರೂ ಮನೆಗೆ ಹೋದಾಗ ನಮಗೆ ಕುಡಿಯೋಕೆ ಸೇಬು ಹಣ್ಣಿನ ರಸ ಕೊಡ್ತಾರೆ ಅಂತಿಟ್ಕೋ. ಅದಕ್ಕೆ ನಾವು ಏನಂತ ಹೇಳಬೇಕು?

ಗಾಂಪ: ಆಪಲ್ ಜ್ಯೂಸ್ ಅಂತ ಹೇಳಬೇಕು.

ಮರಿ ಗಾಂಪ: ಕಿತ್ತಳೆ ಹಣ್ಣಿನ ರಸ ಕೊಟ್ಟರೆ?

ಗಾಂಪ: ಆರೆಂಜ್ ಜ್ಯೂಸ್

ಮರಿ ಗಾಂಪ: ನಿಂಬೆ ಹಣ್ಣಿನ ರಸ ಕೊಟ್ಟರೆ?

ಗಾಂಪ: ಲೆಮನ್ ಜ್ಯೂಸ್

ಮರಿ ಗಾಂಪ: ಅಪ್ಪ, ಬರೀ ನೀರು ಕೊಟ್ರೆ?

ಗಾಂಪ: ಕಂಜೂಸ್!

***

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ