‘ಸಂಪದ' ನಗೆ ಬುಗ್ಗೆ - ಭಾಗ ೩೨

‘ಸಂಪದ' ನಗೆ ಬುಗ್ಗೆ - ಭಾಗ ೩೨

ಚಿಪ್ಸ್

ಶ್ರೀಮತಿ: ಅಯ್ಯೋ ನಿಮಗೇನು ಬಂತು ಕೇಡು, ಇಷ್ಟೊತ್ತಿನಲ್ಲಿ ಅದೂ ರಾತ್ರಿ ೧೧.೫೦ರ ಹೊತ್ತಿಗೆ ಮೂರು ಪಾಕೆಟ್ ಚಿಪ್ಸ್ ನ ಗಬಗಬನೆ ತಿನ್ನುತ್ತಿದ್ದೀರಿ?

ಗಾಂಪ: ಈ ಪಾಕೆಟ್ ಗಳ ಮೇಲೆ ಎಕ್ಸ್ ಪೈಯರಿ ದಿನಾಂಕ ಇವತ್ತೇ ಇದೆ. ಇನ್ನೇನು ಹತ್ತು ನಿಮಿಷಕ್ಕೆ ಇವು ಎಕ್ಸ್ ಪೈಯರಿ ಆಗ್ತವೆ. ಅದಕ್ಕೇ ಈಗಲೇ ತಿಂದು ಬಿಟ್ಟೆ.

***

ಚೆಕಿಂಗ್

ಸೂರಿ: ನಮ್ಮ ಅಪ್ಪ ಒಂದು ಸಣ್ಣ ಬೆಂಕಿಪೊಟ್ಟಣ ಖರೀದಿ ಮಾಡಿದ್ರೂ, ಅದರಲ್ಲಿ ಸರಿಯಾಗಿ ೧೦೦ ಕಡ್ಡಿಗಳು ಇದೆಯೇ ಅಂತ ಚೆಕ್ ಮಾಡ್ಕೊಂಡು ಬರ್ತಾರೆ.

ಗಾಂಪ: ಅಷ್ಟೇನಾ? ಅದೇ ನಮ್ಮ ಅಪ್ಪ ಆಗಿದ್ರೆ, ಬೆಂಕಿಪೊಟ್ಟಣದಲ್ಲಿದ್ದ ಅಷ್ಟೂ ಕಡ್ಡಿಗಳು ಸರಿಯಾಗಿ ಉರಿಯುತ್ತವೆಯೋ ಇಲ್ಲವೋ ಅಂತ ಚೆಕ್ ಮಾಡ್ತಿದ್ರು.

***

ಚಿಕಿತ್ಸೆ

ಗಾಂಪ: ನನ್ನ ಹೆಂಡತಿ ಶ್ರೀಮತಿ ದಿನಾ ಬೆಳಿಗ್ಗೆ ಎದ್ದ ಕೂಡಲೇ ಏನಾದ್ರೂ ಕಾಟ ಕೊಡ್ತಾನೇ ಇರ್ತಾಳೆ ಸರ್. ಇದ್ರಿಂದ ತಲೆ ಕುಲಗೆಟ್ಟು ಹೋಗಿದೆ. ಅದ್ರಿಂದ ಹೊರಬರೋಕೆ ಯಾವುದಾದ್ರೂ ಚಿಕಿತ್ಸೆ ಇದ್ರೆ ಕೊಡಿ ಸರ್?

ಡಾಕ್ಟರ್: ಅಯ್ಯೋ ಗಾಂಪ, ಅಂತಹ ಚಿಕಿತ್ಸೆ ಇದ್ದಿದ್ದರೆ ನಾನ್ಯಾಕೆ ರಾತ್ರಿ ಹನ್ನೊಂದು ಗಂಟೆಯವರೆಗೂ ಮನೆಗೆ ಹೋಗದೆ ಕ್ಲಿನಿಕ್ ಓಪನ್ ಮಾಡಿಕೊಂಡು ಸುಮ್ಮನೆ ಕೂರ್ತಿದ್ದೆ !

***

ಸಂದರ್ಶನ

ಸಂಗೀತ ಶಿಕ್ಷಕ ಹುದ್ದೆಯ ಸಂದರ್ಶನಕ್ಕೆ ಗಾಂಪ ಹೋಗಿದ್ದ.

ಸಂದರ್ಶಕರು: ಏನ್ರೀ, ನಿಮಗೆ ಸಂಗೀತ, ಲಯ, ತಾಳದ ಬಗ್ಗೆ ಗೊತ್ತೇ?

ಗಾಂಪ: ಚೆನ್ನಾಗಿ ಗೊತ್ತು ಸರ್, ಸಂಗೀತಳನ್ನ ನಾನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ಆದ್ರೆ ಅವಳು ನನಗೆ ಕೈಕೊಟ್ಟು ಹೋದಳು. ಆಮೇಲೆ ಲಯಾ ಹೊಸ ಗರ್ಲ್ ಫ್ರೆಂಡ್ ಆಗಿ ಬಂದಿದ್ದಾಳೆ. ಅವ್ಳ ಬಗ್ಗೆನೂ ತುಂಬಾನೇ ತಿಳಿದುಕೊಂಡಿದ್ದೇನೆ.

ಸಂದರ್ಶಕರು (ಕೋಪದಿಂದ): ಹೇ ... ಸಾಕು ಮಾಡಿ ನಿಮ್ ಪುರಾಣ. ಹೋಗ್ಲಿ ಯಾವ ತಾಳ ಗೊತ್ತು? ಅದನ್ನಾದರೂ ಹೇಳಿ?

ಗಾಂಪ: ಹರತಾಳ ಸರ್ ! ಅದರಲ್ಲಿ ನನ್ನಷ್ಟು ಎಕ್ಸ್ ಪರ್ಟ್ ಯಾರೂ ಇಲ್ಲ. ಯಾವಾಗ, ಎಲ್ಲಿ ಹರತಾಳ ಆದ್ರೂ ಅದಕ್ಕೆ ನಾನೇ ಲೀಡರ್ !

(ಸುಧಾ ಪತ್ರಿಕೆಯಿಂದ ಸಂಗ್ರಹಿತ)

***

ಸಿಟ್ಟು

ಗಾಂಪ ಮತ್ತು ಆತನ ಶ್ರೀಮತಿ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ, ದೊಡ್ಡ ಜಗಳ ಆಗಿತ್ತು. ಗಾಂಪ ಕೂಡಾ ಅವತ್ತು ತುಂಬಾ ಸಿಟ್ಟಿನಲ್ಲಿದ್ದ. ಹಾಗಾಗಿ ಶ್ರೀಮತಿಯನ್ನು ಬಾಯಿಗೆ ಬಂದ ಹಾಗೆ ಬೈದ. ಶ್ರೀಮತಿಯೂ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಗಾಂಪಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಶ್ರೀಮತಿ ಸುಮ್ಮನಾದಳು. ಆದರೆ, ಎಷ್ಟೋತ್ತಾದರೂ ಗಾಂಪ ವಾಪಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕುಳಿತಿದ್ದ ಶ್ರೀಮತಿಗೆ ಕೊಂಚ ಗಾಬರಿ ಆಯ್ತು. ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು. ಮೊದಲೆರಡು ಸಲ, ಗಾಂಪ ಕಾಲ್ ರಿಸೀವ್ ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೇಲೆ ಕಾಲ್ ತೆಗೆದು ಗಾಂಪ ಏನು? ಅಂದ. ಸದ್ಯ ಅಂತ ಸಮಾಧಾನ ಪಟ್ಟುಕೊಂಡ ಶ್ರೀಮತಿ, ಎಲ್ಲಿದ್ದೀರಾ? ಅಂತ ಕೇಳಿದಳು. ಅದಕ್ಕೆ ಗಾಂಪ ಸ್ವಲ್ಪ ಎಮೋಷನಲ್ ಆಗಿ ಮಾತನಾಡಲು ಪ್ರಾರಂಭಿಸಿದ. 'ಡಾರ್ಲಿಂಗ್, ನಿಂಗೆ ನೆನಪಿದೆಯಾ ಐದು ವರ್ಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯುವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ. ಅಲ್ಲಿ ನಿಂಗೊಂದು ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು.' ಶ್ರೀಮತಿ ಎಕ್ಷೈಟ್ ಆಗಿ ಹೌದು ಹೌದು ಅಂದ್ಳು. ಗಾಂಪ ಮುಂದುವರೆಸಿದ ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ. ಮುಂದೊಂದಿನ ಏನೇ ಆಗ್ಲಿ ಆ ನೆಕ್ಲೇಸ್ ನ ನಾನು ನಿಂಗೆ ಕೊಡಿಸೇ ಕೊಡಿಸ್ತೇನೆ ಅಂದ ಹೇಳಿದ್ದೆ. ಶ್ರೀಮತಿ ಇನ್ನೂ ಎಕ್ಷೈಟ್ ಆಗಿ'ಹೌದು, ನಿಜ, ತುಂಬಾ ಚೆನ್ನಾಗಿ ನೆನಪಿದೆ. ಅಂದ್ಳು. ಅದಕ್ಕೆ ಗಾಂಪ 'ಆ ಜ್ಯೂವೆಲ್ಲರಿಯ ಮುಂದಿರೋ ಬಾರಲ್ಲಿ ಕುಂತು ಕುಡೀತಾ ಇದ್ದೀನಿ. ಏನ್ ಕಾಲ್ ಮಾಡಿದ್ದು?' ಅಂತ ರೇಗಿದ.

('ವಿಶ್ವವಾಣಿ' ಕೃಪೆ)

***

ಚಿತ್ರ ಕೃಪೆ: ಅಂತರ್ಜಾಲ ತಾಣ