‘ಸಂಪದ' ನಗೆ ಬುಗ್ಗೆ - ಭಾಗ ೩೮
ಸಾಹಸ
ಒಂದು ಕಾರ್ಖಾನೆಗೆ ಒಂದು ರಾತ್ರಿ ಬೆಂಕಿ ಬಿತ್ತು. ಕೂಡಲೇ ಅಗ್ನಿಶಾಮಕದಳಕ್ಕೆ ಸುದ್ದಿ ಹೋಯಿತು. ಕಾರ್ಖಾನೆಯ ಮಾಲೀಕರು ಓಡೋಡಿ ಬಂದರು. ಬೆಂಕಿ ನಿರಾತಂಕವಾಗಿ ಉರಿಯುತ್ತಿತ್ತು. ಕಾರ್ಖಾನೆಯ ಕಚೇರಿಯಲ್ಲಿ ಅತ್ಯಮೂಲ್ಯ ಕಾಗದ ಪತ್ರಗಳು, ದಾಖಲೆಪತ್ರಗಳು ಇದ್ದುದನ್ನು ನೆನೆದು ತಲೆಬಿಸಿ ಮಾಡಿಕೊಂಡ ಮಾಲೀಕರು ಬೆಂಕಿಯ ಜ್ವಾಲೆಗಳನ್ನೇ ನೋಡುತ್ತಿದ್ದ ಜನರನ್ನುದ್ದೇಶಿಸಿ-
'ಕಾರ್ಖಾನೆಯ ಮಧ್ಯದ ಕೊನೆಯ ಲಾಕರ್ ನಲ್ಲಿ ಅಮೂಲ್ಯ ಪತ್ರಗಳಿವೆ, ಫೈಲ್ ಗಳಿವೆ. ಅದನ್ನು ಕೂಡಲೇ ಯಾರು ತಂದುಕೊಡುತ್ತಾರೋ ಅವರಿಗೆ ೫೦ ಸಾವಿರ ರೂಪಾಯಿ ಬಹುಮಾನ ಕೊಡುತ್ತೇನೆ.' ಎಂದು ಘೋಷಿಸಿದರು. ಹಣಕ್ಕಾಗಿ ಪ್ರಾಣ ಕೊಡಲು ಯಾರೂ ಮುಂದಾಗಲಿಲ್ಲ..' ಆ ಲೋಕರ್ ಅನ್ನು ತಂದು ಕೊಡುವವರಿಗೆ ೧ ಲಕ್ಷ ಬಹುಮಾನ ಕೊಡುತ್ತೇನೆ' ಮಾಲೀಕರು ಬಹುಮಾನದ ಮೊತ್ತ ಹೆಚ್ಚಿಸಿದರು. ಆಗಲೂ ಜನ ಮುಂದಾಗಲಿಲ್ಲ.
ಮಾಲೀಕರು ಮತ್ತೆ ಹೇಳಿದರು,' ಈ ಕೆಲಸ ಮಾಡಿದವರಿಗೆ ೫ ಲಕ್ಷ ಕೊಡುತ್ತೇನೆ, ಅವರ ಅಷ್ಟು ಹೇಳಿದ್ದೇ ತಡ ಅವರ ಹಿಂದಿನಿಂದ ಕಾರೊಂದು ವೇಗವಾಗಿ ಬಂದು ಕಾರ್ಖಾನೆಯೊಳಗೆ ನುಗ್ಗಿತು. ಜನ ನಿಬ್ಬೆರಗಾಗಿ ನೋಡುತ್ತಿರುವಂತೆ ಆಚೆ ಬದಿಯಿಂದ ಕಾರು ಹೊರಬಂದು ಅಲ್ಲಿದ್ದ ಮರಕ್ಕೆ ಢಿಕ್ಕಿ ಹೊಡೆದು ನಿಂತಿತು. ಕಾರಿನಲ್ಲಿ ಲಾಕರ್ ಇತ್ತು.
ಸಂತೋಷಗೊಂಡ ಮಾಲೀಕರು ಅಲ್ಲಿಯೇ ೫ ಲಕ್ಷ ರೂಪಾಯಿಗಳ ಚೆಕ್ ಬರೆದುಕೊಡುತ್ತಾ " ಅಭಿನಂದನೆಗಳು. ಈ ಹಣದಿಂದ ನೀವೇನು ಮಾಡಲಿದ್ದೀರಿ ಎಂದು ಕೇಳಬಹುದೇ? ಇದು ಬರೀ ಕುತೂಹಲಕ್ಕಾಗಿ ಅಷ್ಟೇ...
" ಮೊತ್ತಮೊದಲು ಈ ಕಾರಿನ ಬ್ರೇಕ್ ಸರಿ ಮಾಡಿಸುತ್ತೇನೆ" ಎಂದು ಕಾರಿನ ಚಾಲಕ ಉತ್ತರಿಸಿದ.
***
ನೆನಪಿನ ಸಮಸ್ಯೆ
ವೃದ್ಧ ದಂಪತಿಗಳಿಗೆ ಮರೆವು ಹೆಚ್ಚಿತ್ತು. ಅವರು ಡಾಕ್ಟರ್ ಬಳಿ ಹೋಗಿ ತಮ್ಮ ತೊಂದರೆ ಹೇಳಿಕೊಂಡರು. ಡಾಕ್ಟರ್ ಎಲ್ಲಾ ಪರೀಕ್ಷೆಗಳನ್ನೂ ನಡೆಸಿ' ನೀವು ಆರೋಗ್ಯವಾಗಿದ್ದೀರಿ. ಈ ವಯಸ್ಸಿನಲ್ಲಿ ನೆನಪಿನ ಶಕ್ತಿ ಕುಂಠಿತಗೊಳ್ಳುವುದು ಸಹಜ.. ಆದುದರಿಂದ ನೀವು ಆಯಾ ದಿನ ಏನು ಮಾಡಬೇಕು, ಏನು ಹೇಳಬೇಕು ಎಂಬುದನ್ನು ಬರೆದಿಟ್ಟುಕೊಳ್ಳಿ. ಇದರಿಂದ ಈ ಸಮಸ್ಯೆಗೆ ಪರಿಹಾರ ಒದಗುವುದು.' ಎಂದರು.
ಮರುದಿನ ರಾತ್ರಿ ಟಿವಿ ನೋಡುತ್ತಿದ್ದ ಗಂಡ ಕುರ್ಚಿಯಿಂದ ಎದ್ದು ಹೊರಟ. 'ಎಲ್ಲಿಗೆ ಹೋಗುತ್ತಿದ್ದೀರಿ?' ಕೇಳಿದಳು ಹೆಂಡತಿ.
'ಅಡುಗೆಮನೆಗೆ'
'ಹಾಗಾದರೆ ನನಗೊಂದು ಕಪ್ ಐಸ್ ಕ್ರೀಮ್ ತೆಗೆದುಕೊಂಡು ಬನ್ನಿ. ಅದು ರೆಫ್ರಿಜರೇಟರ್ ನಲ್ಲಿದೆ’ ಭಿನ್ನವಿಸಿದಳು ಪತ್ನಿ.
'ತರ್ತೀನಿ' ಗಂಡನೆಂದ.
'ಮರೆತು ಬಿಟ್ಟಿರಿ. ನಾನು ಹೇಳಿದ್ದನ್ನು ಒಂದು ಚೀಟಿಯಲ್ಲಿ ಬರೆದುಕೊಳ್ಳಿ.' ಅಂದಳು ಪತ್ನಿ.
'ಏನೂ ಬೇಕಾಗಿಲ್ಲ, ನನಗೆ ನೆನಪಿರುತ್ತದೆ. ನೀನೇ ಹೆಚ್ಚು ಮರೆಯೋದು.' ಗಂಡ ವಾದಿಸಿದ.
'ಇದನ್ನು ಬರೆದುಕೊಳ್ಳಿ. ನನಗೆ ವೆನಿಲ್ಲಾ ಐಸ್ ಕ್ರೀಮ್ ಬೇಕು. ಅದು ಡೀಪ್ ಫ್ರಿಜ್ ನಲ್ಲಿದೆ'.
'ನಿನಗೆ ಒಂದು ಕಪ್ ವೆನಿಲ್ಲಾ ಐಸ್ ಕ್ರೀಮ್ ಬೇಕು, ಅಷ್ಟೇ ತಾನೇ? ತಂದೆ ಬಿಡು' ಎಂದು ಹೊರಟ.
ಇಪ್ಪತ್ತು ನಿಮಿಷಗಳ ನಂತರ ಅಡುಗೆಮನೆಯಿಂದ ಬಂದು, ಎರಡು ಬೇಯಿಸಿದ ಮೊಟ್ಟೆಯನ್ನು ಹೆಂಡತಿ ಕೈಯಲ್ಲಿಟ್ಟ! ಹೆಂಡತಿ ಗದರಿದಳು' ನಾನು ಹೇಳಿದ್ದು ಆಮ್ಲೆಟ್, ನಿಮಗೆ ಮರೆವು ಜಾಸ್ತಿ ಅದಕ್ಕೆ ನಾನು ಮೊದಲೇ ಹೇಳಿದ್ದು ಬರೆದುಕೊಳ್ಳಿ' ಎಂದು.
***
ಕುರುಡನ ಗುರಿ
ಒಬ್ಬ ಕುರುಡ ತನ್ನನ್ನು ಹೊರಗೆ ಕರೆದೊಯ್ಯಲು ತರಬೇತಿ ಪಡೆದ ನಾಯಿಯೊಂದನ್ನು ಸಾಕಿಕೊಂಡಿದ್ದ. ಅದಿಲ್ಲದೆ ಅವನು ಎಲ್ಲಿಗೂ ಹೋಗುತ್ತಿರಲಿಲ್ಲ. ಹೀಗೊಮ್ಮೆ ಆತ ನಾಯಿಯೊಂದಿಗೆ ಹೋಗುತ್ತಿರುವಾಗ ನಾಯಿ ತುಂಬಾ ತರಲೆ ಮಾಡಿತು. ದಾರಿ ತಪ್ಪಿಸಿತು. ಹಾಗೂ-ಹೀಗೂ ಕಡೆಗೊಮ್ಮೆ ಅವರು ತಲುಪಬೇಕಾದ ಸ್ಥಳ ತಲುಪಿದರು.
ಆಗ ಕುರುಡ ಜೇಬಿನಿಂದ ಬಿಸ್ಕೆಟ್ ಒಂದು ತೆಗೆದು ' ಟಾಮಿ, ಬಾ ಇಲ್ಲಿ, ಬಿಸ್ಕತ್ ತಿನ್ನು' ಎಂದು ಕರೆದ.
ನಾಯಿ ಉಂಟುಮಾಡಿದ್ದ ಅವಾಂತರವನ್ನು ನೋಡಿದ್ದ ವ್ಯಕ್ತಿಯೊಬ್ಬ ಕುರುಡನಿಗೆ ಎಂದ ' ಅದು ಅಷ್ಟೊಂದು ತರಲೆ ಮಾಡಿದೆ ಹಾಗಿದ್ದರೂ ನೀವು ಅದಕ್ಕೆ ಬಿಸ್ಕೆಟ್ ಏಕೆ ಕೊಡುತ್ತಿದ್ದೀರಿ?'
'ಬಿಸ್ಕೆಟ್ ಕೊಡದಿದ್ದರೆ ಅದನ್ನು ಒದೆಯೋಕೆ ಅದರ ಮೂತಿ ಎಲ್ಲಿದೆ ಎಂದು ತಿಳಿಯುವುದು ಹೇಗೆ?' ಕುರುಡ ಮರು ಪ್ರಶ್ನಿಸಿದ.
***
ನಡಿಗೆ
ಇಬ್ಬರು ಚಿಕ್ಕ ಮಕ್ಕಳು ಮಾತಾಡಿಕೊಳ್ಳುತ್ತಿದ್ದರು. ‘ನಮ್ಮ ಅಜ್ಜ ದಿನಾಲೂ ಬೆಳಿಗ್ಗೆ ಬೇಗ ಏಳ್ತಾರೆ ಮತ್ತು ಎಂಟು ಕಿಲೋಮೀಟರ್ ಜಾಗಿಂಗ್ ಮಾಡ್ತಾರೆ.’
‘ವೆರಿ ಗುಡ್. ಮಧ್ಯಾಹ್ನದ ಹೊತ್ತಿಗೆ ಏನು ಮಾಡ್ತಾರೆ?’
‘ಕೊನೆಯ ಕಿಲೋಮೀಟರ್ ನಡಿಗೆ ಮುಗಿಸಿರ್ತಾರೆ.’
***
ಜಾಗ್ರತೆ !
ವಿವಾಹಿತ ಮಹಿಳೆಯೊಬ್ಬಳು ಅಪಘಾತಗೊಂಡು ಕೋಮಾಕ್ಕೆ ಹೋದಳು. ಜನ ಅವಳು ಸತ್ತಳೆಂದು ತಿಳಿದು ಅಂತಿಮ ಕಾರ್ಯಕ್ಕಾಗಿ ಸ್ಮಶಾನಕ್ಕೆ ತೆಗೆದುಕೊಂಡು ಹೋಗುತ್ತಿದ್ದರು.
ದಾರಿ ಮಧ್ಯೆ ಸಾಗುವಾಗ ಕಂಬವೊಂದಕ್ಕೆ ಅವಳ ದೇಹ ತಾಗಿ ಆಕೆಗೆ ಪ್ರಜ್ಞೆ ಬಂದು ಎದ್ದು ಬಿಟ್ಟಳು. ಜನರಿಗೆ ನಂತರ ನಿಜ ವಿಷಯ ತಿಳಿಯಿತು. ಆದರೆ ಕೆಲ ವರ್ಷದ ನಂತರ ಅವಳು ನಿಜವಾಗಿಯೂ ಸತ್ತು ಹೋದಳು.
ಎಲ್ಲರೂ ರಾಮ ನಾಮ ಸತ್ಯ ಹೇ ಎಂದು ಹೇಳಿಕೊಂಡು ಸ್ಮಶಾನಕ್ಕೆ ಹೋಗುತ್ತಿದ್ದರು.
ಆದರೆ ಆಕೆಯ ಗಂಡ ಮಾತ್ರ “ಕಂಬ..ಕಂಬ..ಜಾಗ್ರತೆ... ಕಂಬ ನೋಡಿಕೊಳ್ಳಿ, ಕಂಬ ಇದೆ ಜಾಗ್ರತೆ ಕಂಬದಿಂದ ದೂರ ನಡೆಯಿರಿ" ಅನ್ನುತ್ತಿದ್ದ.
(ಸಂಗ್ರಹ)
ಚಿತ್ರ ಕೃಪೆ: ಅಂತರ್ಜಾಲ ತಾಣ