‘ಸಂಪದ' ನಗೆ ಬುಗ್ಗೆ - ಭಾಗ ೪೧

‘ಸಂಪದ' ನಗೆ ಬುಗ್ಗೆ - ಭಾಗ ೪೧

ಗುಂಡಿನ ಗಮ್ಮತ್ತು

ಮೂವರು ಗೆಳೆಯರು ಮೂಗಿನ ಮಟ್ಟಕ್ಕೆ ಕುಡಿದು ರೈಲ್ವೇ ಸ್ಟೇಷನ್ ಗೆ ಬಂದರು. ಯಾರೂ ಸರಿಯಾಗಿ ನಿಲ್ಲುವಷ್ಟು ಶಕ್ತರಾಗಿರಲಿಲ್ಲ. ಒಬ್ಬ ಸ್ಟೇಷನ್ ಮಾಸ್ಟರ್ ನನ್ನು ಕೇಳಿದ “ಡೆಲ್ಲಿಗೆ ಹೋಗುವ ರೈಲು ಯಾವಾಗ ಬರುತ್ತದೆ?”

“ಇನ್ನು ಒಂದು ಗಂಟೆ ನಂತರ,” ಸ್ಟೇಷನ್ ಮಾಸ್ಟರ್ ಅಂದರು.

ಒಂದು ಗಂಟೆ ಕಾಲ ಇಲ್ಲಿ ನಿಂತು ಸಮಯ ವ್ಯರ್ಥ ಮಾಡುವುದೇಕೆ ಎಂದು ಭಾವಿಸಿದ ಮೂವರೂ ಮತ್ತೆ ಬಾರೊಂದಕ್ಕೆ ನುಗ್ಗಿದರು. ಒಂದು ಗಂಟೆಯ ನಂತರ ಅವರು ಹೊರ ಬಂದಾಗ ಆ ರೈಲು ಹೊರಟುಹೋಗಿತ್ತು. ಮುಂದಿನ ರೈಲು ಬರಲು ಅರ್ಧ ಗಂಟೆ ಎಂದರು ಸ್ಟೇಷನ್ ಮಾಸ್ಟರ್.

ಮೂವರೂ ಇನ್ನೊಂದು ಬಾರ್ ಗೆ ನುಗ್ಗಿ ಮತ್ತೆ ಕುಡಿದರು. ಸರಿಯಾದ ಸಮಯಕ್ಕೆ ರೈಲು ನಿಲ್ದಾಣಕ್ಕೆ ಬಂದರು. ರೈಲು ಇನ್ನೇನು ಹೊರಡುವುದರಲ್ಲಿತ್ತು. ಓಡಿ ಬಂದ ಮೂವರಲ್ಲಿ ಇಬ್ಬರಿಗೆ ರೈಲು ಏರಲು ಸಾಧ್ಯವಾಯಿತು. ಮೂರನೆಯವನನ್ನು ಬಿಟ್ಟು ರೈಲು ಹೊರಟೇ ಹೋಯಿತು. 

ಫ್ಲಾಟ್ ಫಾರಂ ಮೇಲೆ ನಿಂತ ವ್ಯಕ್ತಿ ಜೋರಾಗಿ ನಗಲು ಆರಂಭಿಸಿದ. ಸ್ಟೇಷನ್ ಮಾಸ್ಟರ್ ಅವನನ್ನು ನೋಡಿ ವಿಷಯವೇನೆಂದು ಕೇಳಿದರು.

“ಏನು ಅಂತ ಹೇಳಲಿ? ನಿಜವಾಗಿ ನಾನು ರೈಲು ಹತ್ತಿ ಹೋಗಬೇಕಿತ್ತು. ಅವರಿಬ್ಬರೂ ನನ್ನನ್ನು ಬೀಳ್ಕೊಡಲು ಬಂದವರು. ಆದರೆ ನಾನು ಇಲ್ಲಿ ಉಳಿದೆ. ಅವರು ರೈಲೇರಿದರು.”

***

ಜನ್ಮರಹಸ್ಯ!

ಉಪಾಧ್ಯಾಯರು ಮಕ್ಕಳಿಗೆ ಪ್ರಬಂಧ ಬರೆದುಕೊಂಡು ಬರಲು ಹೇಳಿದರು. ವಿಷಯ : ಮಗುವಿನ ಜನನ.

ಹತ್ತು ವರ್ಷದ ಗಾಂಪ ಮನೆಗೆ ಬಂದವನೇ ಅಪ್ಪನನ್ನು ಕೇಳಿದ. ಅಪ್ಪಾ, ನಾನು ಹುಟ್ಟಿದ್ದು ಹೇಗೆ?

ಮಗ ಗಾಂಪನ ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ಹೊಳೆಯದೆ ಅಪ್ಪ ಹೀಗೆಂದ : ಮಗೂ, ಆವತ್ತೊಂದು ದಿನ ಜೋರಾಗಿ ಮಳೆ ಬಂತು. ನೀನು ಅದರಲ್ಲಿ ತೇಲಿ ಹೋಗುತ್ತಿದ್ದೆ. ನಾನು ಹಿಡಿದು ತಂದು ಸಾಕಿದೆ.

‘ಸರಿ ಅಪ್ಪಾ, ನೀನು ಹ್ಯಾಗೆ ಹುಟ್ಟಿದೆ?’

ಅಪ್ಪನಿಗೆ ಈ ಪ್ರಶ್ನೆಯಿಂದ ತಪ್ಪಿಸಿಕೊಂಡರೆ ಸಾಕಿತ್ತು. ‘ನನ್ನ ಕತೆಯೂ ಹಾಗೆಯೇ’ ಅವನೆಂದ. ‘ನನ್ನ ಅಪ್ಪ ಅಂದರೆ ನಿನ್ನ ಅಜ್ಜ ನನ್ನನ್ನು ಹೊಳೆಯಿಂದ ಎತ್ತಿ ತಂದರು.'

‘ಹಾಗಾದರೆ ನನ್ನಜ್ಜನೂ ಹೊಳೆಯಲ್ಲಿಯೇ ತೇಲಿ ಬಂದವರೇನು?’ ಗಾಂಪ ಮತ್ತೆ ಪ್ರಶ್ನೆ ಹಾಕಿದ.

“ಹೌದಂತೆ, ಹಾಗೆ ಹೇಳುತ್ತಿದ್ದರು.’ ಎಂದ ಅಪ್ಪ. 

ಮರುದಿನ ಪ್ರಬಂಧದಲ್ಲಿ ರಾಜು ಬರೆದ, ‘ನನ್ನ ಗಮನಕ್ಕೆ ಬಂದ ಹಾಗೆ ನಮ್ಮ ವಂಶಸ್ಥರಾರೂ ಇತರರಂತೆ ಸರಿಯಾದ ಕ್ರಮದಲ್ಲಿ ಹುಟ್ಟೇ ಇಲ್ಲ.’

***

ಹಾರುವ ತಟ್ಟೆಗಳು

ಶಿಕ್ಷಕ: ಗಾಂಪ, ಹಾರುವ ತಟ್ಟೆಗಳು ಮೊದಲು ಯಾರಿಗೆ ಕಾಣಿಸಿದ್ದು?

ಗಾಂಪ: ನಮ್ಮ ತಾತನಿಗೆ ಕಾಣಿಸಿದ್ದಿರಬೇಕು, ಅಜ್ಜಿಗೆ ಹಬ್ಬಕ್ಕೆ ಸೀರೆ ಕೊಡಿಸದೆ ಹೋದಾಗ ಅಡುಗೆ ಮನೆಯಿಂದ ತಟ್ಟೆಗಳು ಹಾರಿ ಬರುತ್ತಿದ್ದವು ಸರ್ !

 ***

ಕಪಾಟು !

ಗಾಂಪ: ಸೂರಿ, ನಿನ್ನ ಪುಸ್ತಕಗಳ ಸಂಗ್ರಹ ಬಹಳ ಅದ್ಭುತವಾಗಿದೆ. ಆದರೆ ಇನ್ನಷ್ಟು ಉತ್ತಮವಾಗಿ ಪುಸ್ತಕಗಳನ್ನು ಜೋಡಿಸಲು ಇನ್ನೂ ಕೆಲವು ಕಪಾಟುಗಳ ಅಗತ್ಯತೆ ನಿನಗಿದೆ.

ಸೂರಿ: ನಿಜ ಗಾಂಪ, ಆದರೆ ಕಪಾಟುಗಳನ್ನು ಯಾರೂ ಎರವಲು ಕೊಡುವುದಿಲ್ಲವಲ್ಲ !

***

ಹುಚ್ಚ

ಗಾಂಪ: ಶ್ರೀಮತಿ, ನಾನು ನಿನ್ನ ಪ್ರೀತಿಸೋ ವಿಚಾರ ಯಾರ ಹತ್ತಿರನೂ ಹೇಳಬೇಡ.

ಶ್ರೀಮತಿ: ನನ್ನ ಅಮ್ಮನ ಬಳಿ ಹೇಳಲೇಬೇಕು.

ಗಾಂಪ: ಏಕೆ?

ಶ್ರೀಮತಿ: ಅಮ್ಮ ಯಾವಾಗಲೂ ನಿನ್ನ ಯಾವ ಹುಚ್ಚ ಪ್ರೀತಿಸುತ್ತಾನೆ ನಾನು ನೋಡ್ತೀನಿ ಅಂತ ಹೇಳ್ತಾ ಇರ್ತಾಳೆ. ಅದಕ್ಕೆ…

***

ನಿಷೇಧ

ಕಾವಲುಗಾರ ಗಾಂಪ: ಕ್ಷಮಿಸಿ ಮೇಡಂ ಈ ಕೊಳದಲ್ಲಿ ಈಜುವುದನ್ನು ನಿಷೇಧಿಸಲಾಗಿದೆ.

ಹುಡುಗಿ: ಈ ವಿಷಯವನ್ನು ನೀನು ನಾನು ಬಟ್ಟೆಗಳನ್ನು ತೆಗೆಯುವಾಗಲೇ ಏಕೆ ಹೇಳಲಿಲ್ಲ?

ಗಾಂಪ: ಬಟ್ಟೆ ತೆಗೆಯುವುದಕ್ಕೆ ನಿಷೇಧ ಇಲ್ಲ ಮೇಡಂ!

***

ರಾಣಿಯ ಹಾಗೆ

ಶ್ರೀಮತಿ: ರೀ... ನಿಮಗೆ ರಾಣಿ ಎಂಬ ಮೊದಲನೆಯ ಹೆಂಡತಿ ಇರೋದನ್ನು ಮದುವೆಗೆ ಮುಂಚೆ ಏಕೆ ಹೇಳಲಿಲ್ಲ?

ಗಾಂಪ: ಹೇಳಿದ್ದೆ, ನೀನೆಲ್ಲೋ ಮರೆತಿದ್ದೀಯಾ.

ಶ್ರೀಮತಿ: ಯಾವಾಗ ಹೇಳಿದ್ದು?

ಗಾಂಪ: ಚಿಂತೆ ಬಿಡು, ನಿನ್ನನ್ನು ರಾಣಿಯ ಹಾಗೆ ನೋಡಿಕೊಳ್ತೀನಿ ಅಂತ ಹೇಳಿದ್ದೆ. ಮರೆತುಬಿಟ್ಟೆಯಾ?

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ