‘ಸಂಪದ' ನಗೆ ಬುಗ್ಗೆ - ಭಾಗ ೬೦

‘ಸಂಪದ' ನಗೆ ಬುಗ್ಗೆ - ಭಾಗ ೬೦

ಜಿಪುಣ

ಆ ಊರಿನಲ್ಲಿ ಗಾಂಪನೆಂಬ ಪರಮ ಜಿಪುಣನಿದ್ದ. ಹೊಳೆಯ ಸುಳಿಯಲ್ಲಿ ನೋಟು ಕಾಣಿಸಿದರೂ ಜೀವದ ಹಂಗು ತೊರೆದು ಹಾರಿಬಿಡುವಾತ. ಅಂತವನಿಗೊಮ್ಮೆ ಕಾಯಿಲೆ ಬಂತು. ಮನೆಮದ್ದು ಮಾಡಿ ನೋಡಿದ್ದಾಯಿತು. ಅವರಿವರ ಬಳಿ ಬಿಟ್ಟಿಯಾಗಿ ಸಲಹೆಯನ್ನು ಪಡೆದದ್ದಾಯಿತು. ಕಾಯಿಲೆ ಜಗ್ಗುವುದಿರಲಿ ಮತ್ತಷ್ಟು ಉಲ್ಬಣಿಸುತ್ತಾ ಹೋಯಿತು. ಹೀಗೇ ಉಳಿದರೆ ಜೀವಕ್ಕೆ ಸಂಚಕಾರ ಬರಲಿದೆ ಎಂಬ ಭಯ ಕಾಡಿದಾಗ ಗಾಂಪ ಊರಿನ ಪ್ರಸಿದ್ಧ ವೈದ್ಯರ ಬಳಿ ಹೋಗಲು ನಿರ್ಧರಿಸಿದ.

ಆ ವೈದ್ಯರದೊಂದು ಪದ್ಧತಿ. ಯಾವುದಾದರೂ ರೋಗಿ ಮೊದಲ ಬಾರಿಗೆ ಅವರ ಬಳಿ ಬರುತ್ತಿದ್ದರೆ ಐದು ನೂರು ರೂಪಾಯಿ ಫೀಸು ಪಡೆದುಕೊಳ್ಳುತ್ತಿದ್ದರು. ನಂತರ ಯಾವ ಭೇಟಿಗೂ ಅವರ ಶುಲ್ಕ ನೂರು ರೂಪಾಯಿ ಅಷ್ಟೇ. ಜಿಪುಣ ಗಾಂಪ ಅವರ ಕ್ಲಿನಿಕ್ಕಿಗೆ ಹೋಗಿ ವೈದ್ಯರನ್ನು ನೋಡಿ ದೇಶಾವರಿ ನಕ್ಕು “ಅಗೋ, ಮತ್ತೆ ನಿಮ್ಮ ಬಳಿಗೆ ಬರಬೇಕಾಯಿತು ನೋಡಿ!” ಎಂದು ಹೇಳಿದ. ಹಾಗೆ ಹೇಳುವಾಗ “ಮತ್ತೆ" ಎಂಬ ಪದಕ್ಕೆ ಹೆಚ್ಚಿನ ಒತ್ತು ಹಾಕುವುದನ್ನು ಮರೆಯಲಿಲ್ಲ. ವೈದ್ಯರು ಆತನನ್ನು ಅಮೂಲಾಗ್ರ ಪರಿಶೀಲಿಸಿದರು. ನಾಡಿ ಹಿಡಿದರು. ಕಣ್ಣು ಪರೀಕ್ಷಿಸಿದರು. ನಂತರ ಹೇಳಿದರು. “ಕಳೆದ ಬಾರಿ ಕೊಟ್ಟಿದ್ದ ಮಾತ್ರೆಗಳನ್ನೇ ಇನ್ನೂ ಒಂದು ವಾರ ಮುಂದುವರೆಸಿ. ಗುಣವಾಗುತ್ತೆ"

***

ನಿರೀಕ್ಷೆ

ಗಾಂಪ ಬಹಳ ದುಃಖದಲ್ಲಿ ಕೂತಿದ್ದ. “ಏನಾಯ್ತು ಗೆಳೆಯಾ?” ಸೂರಿ ವಿಚಾರಿಸಿದ.

“ಏನು ಹೇಳಲಿ ಸೂರಿ, ಕಳೆದ ತಿಂಗಳು ತನ್ನ ಅತ್ತಿಗೆ ತೀರಿಕೊಂಡಳು ಗೊತ್ತಲ್ಲ? ಸಾಯುವಾಗ ನನಗೆ ಇಪ್ಪತ್ತು ಸಾವಿರ ರೂಪಾಯಿ ಬರೆದಿಟ್ಟು ಹೋದಳು.”

“ಹೌದಾ?”

“ಅದರ ಹಿಂದಿನ ತಿಂಗಳು ನನ್ನ ಮಾವ ತೀರಿಕೊಂಡರು. ಸಾಯುವ ಸಮಯದಲ್ಲಿ ನನಗೆ ಐವತ್ತು ಸಾವಿರ ರೂಪಾಯಿ ಕೊಟ್ಟು ಹೋದರು.”

“ಹೌದಾ, ಬಹಳ ಸಂತೋಷ, ಆದ್ರೆ ಈಗ ಏಕೆ ಬೇಸರದಲ್ಲಿದ್ದೀಯಾ?”

“ಈ ತಿಂಗಳು ಮುಗೀತಾ ಬಂತು. ಇನ್ನೂ ಯಾವ ಸುದ್ದೀನೂ ಬಂದಿಲ್ವಲ್ಲಾ?”

***

ಖುಷಿ ಪಡಿಸಬೇಕು !

ಗಾಂಪ ಮತ್ತು ಸೂರಿ ಮಾತಾಡ್ತಾ ಕೂತಿದ್ರು. ಗಾಂಪ ಹೇಳಿದ ‘ಸೂರಿ, ಯಾಕೋ ಲೈಫು ಬೇಜಾರಾಗ್ತಿದೆ ಮಾರಾಯ, ದಿನಾ ಅದೇ ಕೆಲಸ, ಅದೇ ಹೆಂಡ್ತಿ, ಮಕ್ಕಳು, ಅದೇ ರೊಟೀನ್, ಏನಾದ್ರೂ ಹೊಸಾದ್ ಮಾಡಬೇಕು ಅನಿಸ್ತಿದೆ ಮಾರಾಯಾ, ಲೈಫಲ್ಲಿ ಥ್ರಿಲ್ ಬೇಕು.’ ಅದಕ್ಕೆ ಸೂರಿ ‘ಸರಿ, ನಾನು ನಿನ್ನ ಒಂದ್ ಹೊಸಾ ಜಾಗಕ್ಕೆ ಕರಕೊಂಡು ಹೋಗ್ತೀನಿ' ಅಂದ. ‘ಎಲ್ಲಿಗೆ?’ ಅಂತ ಬೇಕು ಕುತೂಹಲದಿಂದ ಕೇಳಿದ ಗಾಂಪ. ‘ಈ ಡ್ಯಾನ್ಸ್ ಬಾರ್ ಗಳು ಅಂತಾ ಇರುತ್ವೆ. ನಿನಗೆ ಗೊತ್ತಾ?’ ಅಂದ ಸೂರಿ. ಗಾಂಪಗೆ ಅದೆಲ್ಲಾ ಗೊತ್ತಿರಲಿಲ್ಲ. ಸರಿ, ಸೂರಿ ಹೇಳಿದ ‘ಅಲ್ಲಿ ಚೆಂದದ ಹುಡುಗೀರು ಡ್ಯಾನ್ಸ್ ಮಾಡ್ತಾರೆ ಕಣೋ’ ಅಂದ. ‘ಹೌದಾ, ಹಂಗಾದ್ರೆ, ಯಾವಾಗ ಹೋಗೋಣ?’ ಅಂತ ಗಾಂಪ ರೆಡಿ ಆದ. ಅವನ ಅವಸರ ನೋಡಿ ಈತ ಭಲೇ ರಸಿಕ ಅಂದ್ಕೊಂಡ ಸೂರಿ.

ಗಾಂಪನನ್ನು ಮರುದಿನವೇ ಒಂದು ಖ್ಯಾತ ಡ್ಯಾನ್ಸ್ ಬಾರ್ ಗೆ ಕರೆದುಕೊಂಡು ಹೋದ. ಅಲ್ಲಿ ಇವರನ್ನು ಒಳಗೆ ಆಮಂತ್ರಿಸಿ, ಕೈಗೊಂಡು ಮದ್ಯದ ಬಾಟಲಿ ಕೊಟ್ಟು ಖಾಲಿಯಿದ್ದ ಟೇಬಲ್ ನಲ್ಲಿ ಕೂರುವಂತೆ ಹೇಳಿದಳು ಒಬ್ಬಳು ಸುಂದರಾಂಗಿ. ಮತ್ತೊಬ್ಬಳು ಚಂದದ ಹುಡುಗಿ ಬಂದು ‘ಡ್ಯಾನ್ಸ್ ಮಾಡೋಕೆ ಶುರು ಮಾಡಲೇ ಸರ್?’ ಎಂದಳು. ಸರಿ, ಶುರು ಮಾಡು ಅಂದ ಗಾಂಪ. ಸುಮಾರು ಒಂದು ಗಂಟೆ ಕಾಲ ಸತತವಾಗಿ ಆ ಹುಡುಗಿ ಗಾಂಪ, ಸೂರಿ ಮುಂದೆ ಡ್ಯಾನ್ಸ್ ಮಾಡಿದಳು. ಗಾಂಪನಿಗೆ ಸಖತ್ ಖುಷಿ ಆಯ್ತು. ಅದನ್ನು ಗಮನಿಸಿದ ಆ ಹುಡುಗಿ ಡ್ಯಾನ್ಸ್ ಮುಗಿದ ನಂತರ ಮೆಲ್ಲನೆ ಬಳುಕುತ್ತಾ ಗಾಂಪನ ಹತ್ತಿರ ಬಂದು ‘ಸರ್, ಇಷ್ಟು ಹೊತ್ತು ನಾನು ನಿಮ್ಮನ್ನು ಖುಷಿ ಪಡಿಸಿದೆ. ಈಗ ನೀವು ನನ್ನನ್ನು ಖುಷಿ ಪಡಿಸಬೇಕು !’ ಎಂದು ನಾಜೂಕಾಗಿ ಕೇಳಿದಳು. ಅದಕ್ಕೆ ಗಾಂಪ ಹೇಳಿದ ‘ಅಯ್ಯೋ, ಅದರಲ್ಲೇನೈತೆ ಬಿಡು ತಂಗಿ, ಈವಾಗ್ ನೀನು ಕೂತ್ಕೊಂಡು ನೋಡು, ನಾನ್ ಡ್ಯಾನ್ಸ್ ಮಾಡ್ತೀನಿ !’

***

ನಂಬಿಕೆ

ಗಾಂಪ: ಸೂರಿ, ದೇವರ ಬಗ್ಗೆ ನಿನಗೆ ನಂಬಿಕೆ ಇದೆಯಾ?

ಸೂರಿ: ಖಂಡಿತಾ ಇದೆ. ನನ್ನ ಆಸೆಯನ್ನು ನೆರವೇರಿಸಿದ್ದಾನೆ ಕೂಡ!

ಗಾಂಪ: ಯಾವುದನ್ನು ನೆರವೇರಿಸಿದ?

ಸೂರಿ: ನೋಡಯ್ಯಾ, ಪ್ರತಿ ತಿಂಗಳು ಸಂಬಳವನ್ನು ಹೆಂಡತಿ ಕೈಗೆ ಕೊಡಬೇಕಾಗಿತ್ತು. ಹೇಗಾದರೂ ತಪ್ಪಿಸು ಅಂತ ದೇವರನ್ನು ಬೇಡಿಕೊಂಡೆ. ಮುಂದಿನ ತಿಂಗಳು ನನ್ನ ಕೆಲಸವೇ ಹೋಯಿತು !

***

ನಿದ್ರೆ

ಗಾಂಪ: ಸರ್, ನಾನು ಬಸ್ಸಿನಲ್ಲಿ ಕುಳಿತ ಸ್ವಲ್ಪ ಸಮಯದಲ್ಲಿಯೇ ನಿದ್ರೆ ಬರುತ್ತೆ!

ವೈದ್ಯ: ಅದರಲ್ಲೇನು? ಚೆನ್ನಾಗಿ ನಿದ್ರೆ ಮಾಡಿ.

ಗಾಂಪ: ಸರ್, ನಾನೇ ಆ ಬಸ್ಸಿನ ಡ್ರೈವರ್ !

(ಸಂಗ್ರಹ)

ಚಿತ್ರ ಕೃಪೆ: ಅಂತರ್ಜಾಲ ತಾಣ